ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಭಾರತ ಸಂಶೋಧನೆ
೯೧

ಜಾತಕ ಕಥೆಗಳಿಂದ ಇನ್ನೊಂದು ಮುಖ್ಯವಾ ಅಂಶದ ವ್ಯಕ್ತ ಪಡುತ್ತದೆ. ಒಂದೇ ಉದ್ಯೋಗದಲ್ಲಿ ನಿರತರಾದ ಜನರಿಗೆಲ್ಲ ಪ್ರತ್ಯೇಕ ಅಗ್ರಹಾರಗಳನ್ನೂ ಗ್ರಾಮಗಳನ್ನೊ ಏರ್ಪಡಿಸುವುದು. ಈ ರೀತಿ ಸಾವಿರಾರು ಸಂಸಾರಗಳ ಬಡಗಿಯರ ಗ್ರಾಮಗಳು, ಕಮ್ಮಾರರ ಗ್ರಾಮಗಳು, ಮುಂತಾಗಿ ಇದ್ದವು. ಇಂತಹ ವೈಶಿಷ್ಟ್ಯವುಳ್ಳ ಗ್ರಾಮಗಳು ನಗರಗಳ ಸಮೀಪ ಇರುತ್ತಿದ್ದವು. ಆ ಗ್ರಾಮಗಳಲ್ಲಿ ತಯಾರಾದ ವಸ್ತುಗಳನ್ನು ನಗರಗಳು ಕೊಂಡು ಅವರಿಗೆ ಜೀವನೋಪಾಯವನ್ನು ಒದಗಿಸುತ್ತಿದ್ದವು. ಇಡೀಗ್ರಾಮವೇ ಒಂದು ಸಹಕಾರ ತತ್ವದಿಂದ ಕೆಲಸಮಾಡಿ ದೊಡ್ಡ ದೊಡ್ಡ ಬೇಡಿಕೆಗಳನ್ನು ಪೂರೈಸುತ್ತಿದ್ದವು. ಪ್ರಾಯಶಃ ಈ ರೀತಿ ಪ್ರತ್ಯೇಕ ವಾಸ ಮತ್ತು ವ್ಯವಸ್ಥೆಯಿಂದ ಜಾತಿ ಪದ್ಧತಿ ಹುಟ್ಟಿ ಹರಡಿರಬೇಕು. ಬ್ರಾಹ್ಮಣರು ಮತ್ತು ಶ್ರೀಮಂತರ ಮಾರ್ಗವನ್ನೇ ಉದ್ಯೋಗಿ ಮತ್ತು ವ್ಯಾಪಾರಿ ಸಂಘಗಳವರೂ ಅನುಸರಿಸಿದರು.

ಅಲ್ಲಲ್ಲಿ ಪ್ರಯಾಣಿಕರ ವಿಶ್ರಾಂತಿ ಗೃಹಗಳೂ ಆಸ್ಪತ್ರೆಗಳೂ ಇದ್ದ ದೊಡ್ಡ ರಾಜಮಾರ್ಗಗಳು ಉತ್ತರ ಹಿಂದೂಸ್ಥಾನದಿಂದ ಹೊರಟು ದೇಶದ ಮೂಲೆ ಮೂಲೆಗೂ ಹರಡಿದ್ದವು. ದೇಶದ ಒಳವ್ಯಾಪಾರ ಮಾತ್ರವಲ್ಲದೆ ಪರದೇಶಗಳೊಂದಿನ ವ್ಯಾಪಾರವು ಸಹ ಬಹಳ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಕ್ರಿಸ್ತಪೂರ್ವ ಐದನೆ ಶತಮಾನದಲ್ಲಿ ಈಜಿಪ್ಟ್ ದೇಶದ ಮೆಂಫಿಸ್ ನಲ್ಲಿ ಭಾರತೀಯ ವರ್ತಕರ ಒಂದು ಅಗ್ರಹಾರವಿತ್ತು. ಭಾರತೀಯರ ಮುಖವಾಡಗಳು ಅಲ್ಲಿ ದೊರೆತಿರುವುದೇ ಅದಕ್ಕೆ ಸಾಕ್ಷಿ. ಪ್ರಾಯಶಃ ಏಷ್ಯದ ಆಗ್ನೇಯ(SE) ಮೂಲೆಯ ದ್ವೀಪಗಳಿಗೂ ಭಾರತಕ್ಕೂ ವ್ಯಾಪಾರ ಸಂಬಂಧವಿದ್ದಿರಬೇಕು. ಪರದೇಶಗಳೊಡನೆ ವ್ಯಾಪಾರವೆಂದರೆ ಹಡಗಿನ ವ್ಯಾಪಾರ, ಒಳನಾಡಿನ ವ್ಯಾಪಾರಕ್ಕೂ, ಸಮುದ್ರಯಾನಕ್ಕೂ ಉಪಯುಕ್ತವಾದ ಹಡಗುಗಳನ್ನು ಭಾರತದಲ್ಲಿ ಕಟ್ಟುತ್ತಿದ್ದರೆಂಬುದು ನಿರ್ವಿವಾದ. ದೂರದಿಂದ ಬಂದ ವರ್ತಕರು ಯಾನತೆರಿಗೆ ಕೊಡುತ್ತಿದ್ದರೆಂದು ಮಹಾಕಾವ್ಯಗಳಲ್ಲಿ ಉಲ್ಲೇಖವಿದೆ.

ವರ್ತಕರ ಸಮುದ್ರಯಾನ ವರ್ಣನೆ ಜಾತಕಗಳಲ್ಲಿ ಬೇಕಾದಷ್ಟಿದೆ. ಪಶ್ಚಿಮ ತೀರದ ಬ್ರೋಚ್ ಬಂದರಿಗೆ, ಉತ್ತರಕ್ಕೆ ಗಾಂಧಾರ ಮತ್ತು ಮಧ್ಯ ಏಷ್ಯಕ್ಕೆ ಮರಳುಗಾಡುಗಳ ಮೂಲಕ ಒಂಟೆಗಳ ಮೇಲೆ ಪ್ರಯಾಣ ಹೋಗುತ್ತಿದ್ದರು. ಬ್ರೋಚ್ ನಿಂದ ಪರ್ಷಿಯಾ ಕೊಲ್ಲಿಯ ಟ್ಯಾಬಿಲಾನ್ (ಬಾವೇರು) ನಗರಕ್ಕೆ ಹಡಗುಗಳು ಹೋಗುತ್ತಿದ್ದವು. ಜಾತಕಗಳ ಪ್ರಕಾರ ನದೀಪ್ರಯಾಣ ತುಂಬ ಇತ್ತು. ಕಾಶಿಯಿಂದ ಪಾಟ್ನ, ಚ೦ಪ (ಭಾಗಲ್ಪುರ) ಮುಂತಾದ ನಗರಗಳಿಗೆ ಹೋಗಿ ಸಮುದ್ರ ತೀರ ಸೇರಿ ಅಲ್ಲಿಂದ ದಕ್ಷಿಣದ ಬಂದರುಗಳು, ಸಿಂಹಳ ಮತ್ತು ಮಲಯಾಕ್ಕೆ ಹೋಗುತ್ತಿದ್ದವು. ಕಾವೇರಿ ತೀರದ ಕಾವೇರಿ ಪಟ್ಟಣ ಒಂದು ಪ್ರಖ್ಯಾತ ಅಂತರ ರಾಷ್ಟ್ರೀಯ ವ್ಯಾಪಾರದ ಬಂದರು ಆಗಿತ್ತೆಂದು ಪ್ರಾಚೀನ ತಮಿಳುಕಾವ್ಯಗಳು ತಿಳಿಸುತ್ತವೆ. ನೂರಾರು ವರ್ತಕರು ಮತ್ತು ವಲಸೆಗಾರರು ಹಡಗನ್ನೇರಿದರೆಂದು ಜಾತಕಗಳಲ್ಲಿರುವುದರಿಂದ ಈ ಹಡಗುಗಳು ಗಾತ್ರದಲ್ಲಿ ದೊಡ್ಡವೂ ಇರಬೇಕು.

ಮಿಲಿಂದ ಪ್ರಶ್ನೆಯಲ್ಲಿ (ಮಿಲಿಂದ ಕ್ರಿಸ್ತಶಕ ಒಂದನೆಯ ಶತಮಾನದಲ್ಲಿ ಉತ್ತರ ಹಿಂದೂಸ್ಥಾನದಲ್ಲಿದ್ದ ಒಬ್ಬ ಬ್ಯಾಕ್ಟ್ರಿಯ ರಾಜ ; ಪ್ರಸಿದ್ಧನಾದ ಬೌದ್ದ ಮತಾನುಯಾಯಿ) “ಸಮುದ್ರ ತೀರ ಪಟ್ಟಣದಲ್ಲಿ ಪದೇ ಪದೇ ಹಡಗಿನ ಹೇರುಗಳ ಬಾಡಿಗೆಯನ್ನು ತೆಗೆದುಕೊಂಡು ಶ್ರೀಮಂತನಾದ ಹಡಗುಗಳ ಯಜಮಾನ ಸಮುದ್ರಯಾನಮಾಡಿ ವಂಗ (ಬಂಗಾಳ) ದೇಶ, ತಕ್ಕೋಲ, ಚೀನ, ಸುವೀರ, ಸೂರತ್ ಅಲೆಕ್ಸಾಂಡ್ರಿಯ, ಚೋರಮಂಡಳ, ವಿಶಾಲಭಾರತ ಅಥವ ಹಡಗುಗಳು ತಂಗುವ ಇತರ ಯಾವುದಾದರೂ ಸ್ಥಳಗಳಿಗೆ ಹೋಗುವಂತೆ” ಎಂದು ಇದೆ.*

ಇಂಡಿಯಾದೇಶದಿಂದ ರೇಷ್ಮೆ, ಮಲ್ಲು, ನಯವಾದ ಬಟ್ಟೆಗಳು, ಚಾಕು, ಕತ್ತರಿ ಮುಂತಾದ ಹರಿತವಾದ ಸಾಮಾನುಗಳು, ಕವಚಗಳು, ಕಿನ್ನಾಪು, ಕಸೂತಿ ಸಾಮಾನು, ರತ್ನ ಗಂಬಳಿಗಳು, ಸುಗಂಧದ್ರವ್ಯಗಳು, ಔಷಧಗಳು, ದಂತ ಮತ್ತು ದಂತದ ಸಾಮಾನುಗಳು, ಒಡವೆಗಳು, ಚಿನ್ನ ಇವೇ

ಶ್ರೀಮತಿ ಸಿ.ಎ. ಎಫ್. ರೈಸ್ ಡೇವಿಡ್ಸ್ ಕೇಂಬ್ರಿಡ್ಜ್ ಇಂಡಿಯ ಚರಿತ್ರೆಯಲ್ಲಿ ಉಲ್ಲೇಖಿಸಿದ್ದಾರೆ.