ಇನ್ನೆಷ್ಟೋ ವಿಷಯಗಳು ನನ್ನ ಮನಸ್ಸಿಗೆ ಮೆಚ್ಚಿಗೆಯಾದವು. ಕೆಲವು ವಿಚಾರಗಳಲ್ಲಿ ಅವಕ್ಕೆ ಸೇರಿದ ಶಾಲೆಗಳಲ್ಲಿ ಶಾಂತಿಯುತ ಅಧ್ಯಯನ ಮತ್ತು ಧ್ಯಾನದ ವಾತಾವರಣವಿತ್ತು. ಅನೇಕ ಸಂನ್ಯಾಸಿ ಗಳ ಮುಖದ ಮೇಲೆ ಶಾಂತಿ ಮತ್ತು ತುಷ್ಟಿ ಯ ಮುದ್ರೆ ಇತ್ತು, ಒಂದು ವಿಧವಾದ ಗಾಂಭೀರ್, ಮೃದು ಸ್ವಭಾವ, ನಿರ್ಲಿಪ್ತ ಮನೋಭಾವನೆ ಮತ್ತು ಪ್ರಪಂಚವ್ಯಸನಗಳಿಂದ ದೂರವಾದ ಸ್ವಾತಂತ್ರ್ಯ ಅವರಲ್ಲಿ ಕಾಣುತ್ತಿತ್ತು. ಇದೆಲ್ಲ ಇಂದಿನ ಜೀವನಕ್ಕೆ ಹೊಂದಿಕೊಂಡಿದೆಯೇ ? ಅಥವ ಅದಕ್ಕೆ ಹೆದರಿ ಓಡಿಹೋಗುವ ಮನೋವೃತ್ತಿಯೆ ? ಇದನ್ನೆಲ್ಲ ಜೀವನದ ಅನಂತ ಹೋರಾಟದೊಡನೆ ಸಮನ್ವಯ ಗೊಳಿಸಿ ನಮ್ಮನ್ನು ಪೀಡಿಸುತ್ತಿರುವ ಪಾಶವೀ ವೃತ್ತಿ, ದುರಾಕ್ರಮಣ ಮತ್ತು ಹಿಂಸೆಯನ್ನು ಹತೋಟಿಯಲ್ಲಿಡಲು ಸಾಧ್ಯವಿಲ್ಲವೆ ?
ಬೌದ್ಧ ಮತದ ನಿರಾಶಾವಾದವು ನನ್ನ ಜೀವನ ದೃಷ್ಟಿಗೆ ಸರಿ ಹೋಗಲಿಲ್ಲ; ಜೀವನ ಮತ್ತು ಅದರ ಸಮಸ್ಯೆಗಳಿಗೆ ಹಿಮ್ಮುಖವಾಗಿ ಹಿಂದೇಟು ಹಾಕುವುದೂ ಒಪ್ಪಿಗೆಯಾಗಲಿಲ್ಲ. ಎಲ್ಲಿಯೋ, ನನ್ನ ಮನಸ್ಸಿನ ಹಿನ್ನೆಲೆಯಲ್ಲಿ, ದೈವಭಕ್ತಿಯಿಲ್ಲದ ನಾನು ಮನುಷ್ಯನಂತೆ, ಪ್ರಕೃತಿ ಮತ್ತು ಜೀವನದ ಪೂರ್ಣತೆಯನ್ನು ಬಯಸುವ ಮತ್ತು ಜೀವನ ಸಹಜವಾದ ಹೋರಾಟಗಳಿಗೆ ಹೆದರಿಕೊಳ್ಳದ ಒಬ್ಬ ಅಮತೀಯನಾಗಿದ್ದೆ. ನನ್ನ ಅನುಭವಗಳು, ನನ್ನ ಸುತ್ತಮುತ್ತಲಿನ ನೋವು ಮತ್ತು ಸಂಕಟಗಳು ಆ ಮನೋಭಾವನೆಯನ್ನು ನಾಶಮಾಡಿರಲಿಲ್ಲ.
ಬೌದ್ಧ ಧರ್ಮವು ನಿಷ್ಕ್ರಿಯೆ ಮತ್ತು ನಿರಾಶಾವಾದವನ್ನು ಬೋಧಿಸುವುದೆ ? ಅದರ ಅನುವಾದ ಕರು ಆ ರೀತಿ ಹೇಳಬಹುದು. ಅದರ ಅನುಯಾಯಿಗಳೇ ಅನೇಕರು ಆ ರೀತಿ ಅಭಿಪ್ರಾಯ ಪಡಬಹುದು. ಅದರ ಸೂಕವಿಚಾರಗಳನ್ನು, ಅನಂತರದ ಜಟಿಲತೆಯನ್ನು ಮತ್ತು ತಾತ್ವಿಕ ಬೆಳೆವಣಿಗೆಯನ್ನು ತೀರ್ಮಾನಮಾಡಲು ನನಗೆ ಸಾಧ್ಯವಿಲ್ಲ ; ಆದರೆ ಬುದ್ಧನ ವಿಷಯ ಯೋಚನೆಮಾಡಿದಾಗ ನನ್ನ ಎದೆಯಲ್ಲಿ ಒಂದು ಬಿರುಗಾಳಿಯೇ ಏಳುತ್ತದೆ. ನಿಷ್ಕ್ರಿಯ ಮತ್ತು ನಿರಾಶೆಯನ್ನು ಬೋಧಿಸಿದ ಈ ಧರ್ಮ ಅಷ್ಟು ಅಸಂಖ್ಯಾತ ಜನಸ್ತೋಮದ ಮೇಲೆ--ಅವರಲ್ಲಿ ಕೆಲವರು ಮಹಾಮೇಧಾವಿಗಳು--ಅಂತಹ ಒಂದು ಪ್ರಬಲವಾದ ಪ್ರಭಾವ ಬೀರಿತ್ತೆಂದು ಊಹಿಸುವುದೂ ಸಾಧ್ಯವಿಲ್ಲ.
ಅಸಂಖ್ಯಾತ ಪ್ರೇಮಪೂರ್ಣ ಹಸ್ತಗಳು ಕಲ್ಲಿನಲ್ಲಿ, ಅಮೃತಶಿಲೆಯಲ್ಲಿ, ಕಂಚಿನಲ್ಲಿ ಕೆತ್ತಿದ ಬುದ್ಧನ ಕಲ್ಪ ನಾಚಿತ್ರಗಳು ಭಾರತೀಯ ಭಾವನೆಯ ಪೂರ್ಣ ಆದರ್ಶದ ಅಥವ ಅದರ ಒಂದು ಮುಖ್ಯ ದೃಷ್ಟಿಯು ಸಂಕೇತ. ಕಮಲದ ಹೂವಿನ ಮೇಲೆ ಶಾಂತ ನಿಶ್ಚಲ ಮುಖಮುದ್ರೆಯಿಂದ, ಕಾಮರಹಿತನಾಗಿ, ಮೋಹಾತೀತನಾಗಿ, ಪ್ರಪಂಚದ ಪ್ರಚಂಡ ಬಿರುಗಾಳಿ ಮತ್ತು ಹೋರಾಟದಿಂದ ದೂರನಾಗಿ, ಕುಳಿತ ಬುದ್ದನು ನಮ್ಮ ನಿಲುವಿಗೆ ಬಹುದೂರವಿದ್ದಂತೆ, ದೃಷ್ಟಿಗೆ ಎಟುಕದಂತೆ ಕಾಣುತ್ತಾನೆ. ಪುನಃ ಇನ್ನೊಮ್ಮೆ ನೋಡಿದರೆ ಆ ಪ್ರಶಾಂತ, ನಿಶ್ಚಲ ಮುಖಮುದ್ರೆಯ ಹಿಂದೆ ನಮ್ಮ ಅನುಭವದ ರಾಗ ಭಾವೋದ್ವೇಗಗಳಿಗಿಂತ ಅತ್ಯಾಶ್ಚರ್ಯವೂ, ಅತಿ ತೀಕವೂ ಆದ ರಾಗ ಮತ್ತು ಭಾವೋನ್ಮಾದವಿರು ವಂತೆ ತೋರುತ್ತದೆ. ಆತನ ಕಣ್ಣುಗಳು ಮುಚ್ಚಿವೆ, ಆದರೆ ಯಾವುದೋ ಒಂದು ಆತ್ಮಶಕ್ತಿ ಒಡೆದು ನೋಡುವಂತಿದೆ. ದೇಹಾದ್ಯಂತ ಒಂದು ಜೀವಶಕ್ತಿ ಪ್ರವಹಿಸುತ್ತದೆ. ಯುಗಯುಗಗಳು ಉರುಳು ಇವೆ. ಬುದ್ದನು ನಿಜವಾಗಿ ಬಹುದೂರವಿದ್ದಂತೆ ತೋರುವುದಿಲ್ಲ. ಅವನ ವಾಣಿಯು ನನ್ನ ಕಿವಿ ಯಲ್ಲಿ ಮಾತನಾಡುತ್ತದೆ, “ ಹೋರಾಟಕ್ಕೆ ಹೆದರಿ ಓಡಬೇಡ ; ಶಾಂತಚಿತ್ತನಾಗಿ ಎದುರಿಸು. ಜೀವನದಲ್ಲಿ ಸದಾ ಪ್ರವೃದ್ಧಿ ಯ ಪ್ರಗತಿಯ ಮಹದವಕಾಶಗಳನ್ನು ನೋಡು” ಎಂದು ಹೇಳುತ್ತದೆ.
ಇಂದಿಗೂ ಎಂದಿನಂತೆ ವ್ಯಕ್ತಿತ್ವಕ್ಕೆ ಮಹತ್ವವಿದೆ, ಅದರಲ್ಲೂ ಮಾನವ ಮನಸ್ಸಿನ ಮೇಲೆ ಅದ್ಭುತ ಪರಿಣಾಮ ಮಾಡಿದ, ಹೆಸರು ಕೇಳಿದೊಡನೆ ಇಂದಿಗೂ ರೋಮಾಂಚವನ್ನುಂಟುಮಾಡುವ ಮಹಾ ಪುರುಷ ಬುದ್ದನು ಬಾರ್ತ್ ಹೇಳುವಂತೆ “ ಪ್ರಶಾಂತಮುದ್ರೆಯ ಸುಂದರ ಗಾಂಭೀರದ, ಸಕಲ ಪ್ರಾಣಿಗಳಲ್ಲೂ ಅಪಾರ ದಯೆಯ, ಎಲ್ಲ ಆರ್ತರ ಮಾತಿಗೆ ಕಿವಿಗೊಡುವ ದೈನ್ಯತೆಯ, ಸಂಪೂರ್ಣ ನೈತಿಕ ಸ್ವಾತಂತ್ರ ಮತ್ತು ಎಲ್ಲ ವಿರೋಧ ಭಾವನೆಯಿಂದ ದೂರನಾದ ವ್ಯಕ್ತಿಯ ಮೂರ್ತಸ್ವರೂಪ”