ಪುಟ:ಭಾರತ ದರ್ಶನ.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೧೪

ಭಾರತ ದರ್ಶನ

ಒಂದು ಶಾಶ್ವತ ಪರಿಹಾರವನ್ನು ಕಲ್ಪಿಸಿತ್ತು. ಅದೇ ರೀತಿ ಬೇರೆ ವಿದೇಶೀಯರು ಬಂದಾಗ ಅವರನ್ನೂ ಭಾರತೀಯರನ್ನಾಗಿ ಸೇರಿಸಿಕೊಂಡರು. ಅದರಿಂದ ಯಾವ ವ್ಯತ್ಯಾಸವೂ ಕಾಣಲಿಲ್ಲ. ವ್ಯಾಪಾರ ಮತ್ತು ಇತರ ಕಾರಣಗಳಿಂದ ಭಾರತಕ್ಕೂ ಇತರ ದೇಶಗಳಿಗೂ ಅನೇಕ ವ್ಯವಹಾರ ವಿದ್ದರೂ ಭಾರತವು ತನ್ನ ಪಾಡನ್ನು ತಾನು ನೋಡಿಕೊಳ್ಳುತ್ತ ಇತ್ತು ; ಬೇರೆ ಕಡೆಗಳಲ್ಲಿ ಏನಾಯಿ ತೆಂಬುದಕ್ಕೆ ವಿಶೇಷ ಗಮನ ಕೊಡುತ್ತಿರಲಿಲ್ಲ. ಆದರೆ ಭಿನ್ನ ರೀತಿಯ ಭಿನ್ನ ದೇಶೀಯರಿಂದ ಪದೇ ಪದೇ ದಂಡಯಾತ್ರೆಗಳೊದಗಿ ಜನರು ತಲ್ಲಣಿಸಿದ್ದರು. ತನ್ನ ರಾಜಕೀಯ ಆಡಳಿತ ಮಾತ್ರವಲ್ಲದೆ ತನ್ನ ಸಂಸ್ಕೃತಿಯ ಆದರ್ಶಗಳು ಮತ್ತು ಸಾಮಾಜಿಕ ರಚನೆಯು ಸಹ ಕಳಚಿ ಬೀಳುವ ಸ್ಥಿತಿಗೆ ತರುತ್ತಿದ್ದ ಈ ಸ್ಫೋಟಕಗಳನ್ನು ಅಲಕ್ಷ ಮಾಡುವಂತೆ ಇರಲಿಲ್ಲ. ಮುಖ್ಯವಾಗಿ ಈ ಪ್ರತಿಕ್ರಿಯೆ ರಾಷ್ಟ್ರೀಯ ಭಾವನೆಯದಾಗಿತ್ತು ; ಅದರಲ್ಲಿ ರಾಷ್ಟ್ರೀಯ ಭಾವನೆಯ ಶಕ್ತಿ ಮತ್ತು ಸಂಕುಚಿತ ದೃಷ್ಟಿ ಯೂ ಇತ್ತು. ಧರ್ಮ, ತತ್ತ್ವ ಶಾಸ್ತ್ರ, ಇತಿಹಾಸ, ಸಂಪ್ರದಾಯ, ಸಾಮಾಜಿಕ ರಚನೆ, ಇವು ಗಳೆಲ್ಲವನ್ನೂ ಅಂದಿನ ಹಿಂದೂ ಅಥವ ಬ್ರಾಹ್ಮಣಧರ್ಮ ಭಾರತೀಯ ಜೀವನದಲ್ಲಿ ಸಮನ್ವಯ ಮಾಡಿತು. ಈ ಸಮಗ್ರ ದೃಷ್ಟಿಯು ಆ ರಾಷ್ಟ್ರೀಯ ಭಾವನೆಯ ಸಂಕೇತವಾಯಿತು. ಇಂದಿನ ಎಲ್ಲ ರಾಷ್ಟ್ರೀಯ ಭಾವನೆಗಳ ಮೂಲ ಆದರ್ಶಗಳಂತೆ ಆ ಧರ್ಮವು ಜನಾಂಗ ಮತ್ತು ಸಂಸ್ಕೃತಿಯ ಭಾವನೆಗಳಿಂದ ಆಳವಾದ ಅಲೆಗಳನ್ನೆಬ್ಬಿಸುವ ಒಂದು ಪ್ರಬಲವಾದ ರಾಷ್ಟ್ರೀಯ ಧರ್ಮವಾಯಿತು. ಭಾರತೀಯ ಭಾವನೆಯ ಶಿಶುವಾದ ಬೌದ್ಧ ಧರ್ಮದಲ್ಲಿ ಅದರದೇ ಒಂದು ರಾಷ್ಟ್ರೀಯ ಹಿನ್ನೆಲೆ ಇತ್ತು. ಭಾರತವು ಬುದ್ಧನು ಜೀವಿಸಿ, ಉಪದೇಶಮಾಡಿ, ನಿರ್ಯಾಣ ಹೊಂದಿದ ಮತ್ತು ಮಹಾ ಜ್ಞಾನಿಗಳೂ ಸಂತರೂ ಧರ್ಮ ಪ್ರಚಾರ ಮಾಡಿದ ಪುಣ್ಯ ಭೂಮಿ. ಆದರೆ ಬೌದ್ಧ ಧರ್ಮವು ಮುಖ್ಯವಾಗಿ ಅಂತರ ರಾಷ್ಟ್ರೀಯ ಧರ್ಮ ; ಒಂದು ವಿಶ್ವ ಧರ್ಮ ಮತ್ತು ಅದು ದೂರ ದೇಶಗಳಿಗೆ ವ್ಯಾಪಿಸಿ ಬೆಳೆದಂತೆಲ್ಲ ಇನ್ನೂ ಹೆಚ್ಚು ಅಂತರ ರಾಷ್ಟ್ರೀಯವಾಯಿತು. ಆದ್ದರಿಂದ ಪುನಃ ಪುನಃ ರಾಷ್ಟ್ರೀಯ ಪುನರುಜ್ಜಿವನ ಕಾಲಗಳಲ್ಲಿ ಸನಾತನ ಬ್ರಾಹ್ಮಣ ಮತವೇ ರಾಷ್ಟ್ರೀಯತೆಯ ಸಂಕೇತ ವಾಗುವುದು ಸ್ವಾಭಾವಿಕವಾಯಿತು.

ಆ ಧರ್ಮ ಮತ್ತು ತತ್ವ ಶಾಸ್ತ್ರವು ಭಾರತದ ಇತರ ಅನೇಕ ಧರ್ಮಗಳಿಗೆ ಮತ್ತು ಜನಾಂಗಗಳಿಗೆ ಸಹನೆಯನ್ನು ತೋರಿದವು ಮತ್ತು ಆಶ್ರಯ ಕೊಟ್ಟವು. ತಮ್ಮ ವಿಶಾಲವಾದ ಚೌಕಟ್ಟಿನಲ್ಲಿ ಅವುಗಳನ್ನೂ ಸೇರಿಸಿಕೊಳ್ಳುತ್ತಲೇ ಮುಂದುವರಿದವು. ಆದರೆ ವಿದೇಶೀಯರಿಗೆ ಮಾತ್ರ ಅವಕಾಶ ಕೊಡಲು ಪ್ರಬಲವಾಗಿ ವಿರೋಧಿಸುತ್ತಿದ್ದವು ಮತ್ತು ಅವುಗಳ ಪ್ರಭಾವಕ್ಕೆ ಬಲಿಬೀಳದಂತೆ ಆತ್ಮ ರಕ್ಷಣೆ ಮಾಡಿಕೊಳ್ಳುತ್ತಿದ್ದವು. ಆ ರೀತಿ ಮಾಡುವಾಗ ರಾಷ್ಟ್ರೀಯ ಭಾವನೆಯ ಶಕ್ತಿ, ಹೆಚ್ಚಿದಾಗ ಅನೇಕ ಸಂದರ್ಭಗಳಲ್ಲಿ ಆಗುವಂತೆ ಸಾಮ್ರಾಜ್ಯ ಭಾವನೆಯಾಗಿ ಬಿಡುತ್ತಿತ್ತು. ಗುಪ್ತರ ಕಾಲವು ಪ್ರತಿಭಾಯುಕ್ತವೂ ಚಟುವಟಿಕೆಯುಳ್ಳದ್ದೂ, ಸುಸಂಸ್ಕೃತವೂ, ಪೂರ್ಣಜೀವಂತವೂ ಆದಾಗ್ಯೂ ಶೀಘ್ರದಲ್ಲೇ ಸಾಮ್ರಾಜ್ಯ ಸ್ವರೂಪವನ್ನು ತಾಳಿತು. ಅವರಲ್ಲಿ ವಿಶೇಷ ಪ್ರಖ್ಯಾತನಾದ ಸಮುದ್ರ ಗುಪ್ತನನ್ನು ಇಂಡಿಯಾದ ನೆಪೋಲಿಯನ್ ಎಂದು ಕರೆದಿದ್ದಾರೆ. ಸಾಹಿತ್ಯ ಮತ್ತು ಕಲೆಯ ದೃಷ್ಟಿಯಿಂದ ಅದು ಒಂದು ಸ್ವರ್ಣಯುಗ.

ನಾಲ್ಕನೆಯ ಶತಮಾನದ ಆರಂಭದಿಂದ ಸುಮಾರು ಒಂದೂವರೆ ಶತಮಾನದವರೆಗೆ ಉತ್ತರ ಹಿಂದೂಸ್ಥಾನದಲ್ಲಿ ಒಂದು ಶಕ್ತಿಯುತ ಪ್ರಗತಿಪೂರ್ಣರಾಜ್ಯದ ಮೇಲೆ ಗುಪ್ತರು ರಾಜ್ಯವಾಳಿದರು. ಆಲ್ಲಿಂದ ಮುಂದೆ ಇನ್ನೊಂದು ನೂರೈವತ್ತು ವರ್ಷ, ಅವರ ಸಂತತಿಯವರು ರಾಜರಾಗಿದ್ದರು. ಆದರೆ ಈಗ ಅವರು ಆತ್ಮರಕ್ಷಣೆಯಲ್ಲಿದ್ದರು ಮತ್ತು ರಾಜ್ಯವು ಕ್ರಮೇಣ ಸಣ್ಣದಾಗುತ್ತ ಬಂದಿತು. ಮಧ್ಯ ಏಷ್ಯದಿಂದ ಹೊಸ ಜನರು ದಂಡೆತ್ತಿ ಬರಲಾರಂಭಿಸಿದರು. ಇವರನ್ನು ಶ್ವೇತಹೂಣರೆಂದು ಕರೆಯು ತಿದ್ದರು, ಅವರೇ ಅಲನ ಕೈಕೆಳಗೆ ಯುರೋಪನ್ನು ಕೊಳ್ಳೆ ಹೊಡೆದಂತೆ ಭಾರತವನ್ನು ಕೊಳ್ಳೆ ಹೊಡೆಯಲಾರಂಭಿಸಿದರು. ಅವರ ಪಾಶವೀವೃತ್ತಿ, ಪೈಶಾಚಿಕ ಕ್ರೌರ್ಯ ಜನರನ್ನು ರೊಚ್ಚಿಗೆಬ್ಬಿಸಿತು.