ಪುಟ:ಭಾರತ ದರ್ಶನ.djvu/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೨೦

ಭಾರತ ದರ್ಶನ

ಪ್ರಾಯಶಃ ಅದರ ಉಪಯುಕ್ತತೆ ಅನೇಕ ವರ್ಷಗಳ ಹಿಂದೆಯೇ ಕ್ಷೀಣಿಸಿರಬೇಕು ಮತ್ತು ಅಂದಿನಿಂದಲೂ ಒಂದು ಹೊರೆಯಾಗಿ, ಆತಂಕವಾಗಿರಬೇಕು. ಅಥವ ಈಚಿನ ಶತಮಾನಗಳ ಕಿಟ್ಟವು ಪದರುಗಟ್ಟಿ, ಸತ್ವವನ್ನೆಲ್ಲ ಹೀರಿ ಬರೀ ಕರಟವನ್ನು ಮಾತ್ರ ಬಿಟ್ಟಿರಬೇಕು.

ಪ್ರಾಯಶಃ ಪ್ರಗತಿಯ ಭಾವನೆಗೂ ಭದ್ರತೆ ಮತ್ತು ಸುರಕ್ಷತೆಯ ಭಾವನೆಗೂ ಸದಾ ಘರ್ಷಣೆ ನಡೆಯುತ್ತಲೇ ಇರುತ್ತದೆ. ಎರಡಕ್ಕೂ ಎಂದೂ ಸರಿ ಹೋಗುವುದಿಲ್ಲ. ಒಂದಕ್ಕೆ ಬದಲಾವಣೆಯಾಗುವುದು ಬೇಕು ; ಇನ್ನೊಂದಕ್ಕೆ ಬದಲಾವಣೆ ಇಲ್ಲದೆ, ಇದ್ದಂತೆ ಇರುವ ಸುರಕ್ಷಿತ ಸ್ಥಳಬೇಕು. ಪ್ರಗತಿ ಭಾವನೆ ಬಹಳ ಇತ್ತೀಚಿನದು. ಪಾಶ್ಚಿಮಾತ್ಯರಿಗೆ ಸಹ ತೀರ ಹೊಸದು. ಪ್ರಾಚೀನ ಮತ್ತು ಮಧ್ಯಯುಗದ ಸಂಸ್ಕೃತಿಗಳು ತಮ್ಮ ಹಿಂದಿನದನ್ನೆ ಸ್ವರ್ಣಯುಗವೆಂದು ಭಾವಿಸಿ ಅಲ್ಲಿಂದ ಅವನತಿ ಯಾಗುತ್ತ ಬಂದಿದೆ ಎಂದು ಭಾವಿಸಿದ್ದರು. ಭಾರತದಲ್ಲಿ ಸಹ ಪ್ರಾಚೀನ ಕಾಲಕ್ಕೆ ಪುರಸ್ಕಾರ. ಇಲ್ಲಿ ಬೆಳೆದ ಸಂಸ್ಕೃತಿಗೂ ತಳಹದಿ ಸುರಕ್ಷತೆ ಮತ್ತು ಭದ್ರತೆ. ಈ ದೃಷ್ಟಿಯಿಂದ ಪಾಶ್ಚಿಮಾತ್ಯರಲ್ಲಿ ಉದಯಿಸಿದ ಎಲ್ಲ ಸಂಸ್ಕೃತಿಗಳಿಗಿಂತ ಭಾರತ ಸಂಸ್ಕೃತಿ ತುಂಬ ಯಶಸ್ವಿಯಾಗಿತ್ತು. ಜಾತಿ ಪದ್ದತಿ ಮತ್ತು ಅವಿಭಕ್ತ ಕುಟುಂಬದ ಆಧಾರದ ಮೇಲೆ ಕಟ್ಟಿದ ಸಮಾಜ ರಚನೆ ಅದಕ್ಕೆ ಸಹಾಯಕವಾಯಿತು ; ಮತ್ತು ಆ ಪಂಗಡಕ್ಕೊಂದು ಸಮಾಜಭದ್ರತೆಯನ್ನು ಕೊಟ್ಟ ತಲ್ಲದೆ ವಯಸ್ಸು, ಅಂಗವಿಕಲತೆ ಅಥವ ಬೇರಾವ ಕಾರಣದಿಂದಲಾದರೂ ತನ್ನ ರಕ್ಷಣೆಗೆ ವ್ಯವಸ್ಥೆ ಮಾಡಿಕೊಳ್ಳಲಾರದ ವ್ಯಕ್ತಿಗೆ ಒಂದು ವಿಧವಾದ ಭದ್ರತೆಯನ್ನು ಒದಗಿಸಿತು. ಈ ವ್ಯವಸ್ಥೆಯಿಂದ ದುರ್ಬಲರಿಗೆ ಸಹಾಯವಾದರೂ ಸ್ವಲ್ಪ ಮಟ್ಟಿಗೆ ಸಬಲರಿಗೆ ಅಡ್ಡಿಯಾಗುತ್ತದೆ. ಅಸಾಧಾರಣ, ಅಥವ ಪ್ರತಿಭಾಶಾಲಿಯ ವೆಚ್ಚದಲ್ಲಿ ಸಾಮಾನ್ಯರಿಗೆ ಪ್ರೋತ್ಸಾಹಿಸಿದಂತಾಗುತ್ತದೆ. ಎಲ್ಲವನ್ನೂ ಮೇಲ್ಮಟ್ಟಕ್ಕೂ ಕೆಳಮಟ್ಟ ಕ್ರೋ ಅಂತೂ ಸಮಮಾಡುತ್ತದೆ ; ವ್ಯಕ್ತಿತ್ವಕ್ಕೆ ಅವಕಾಶ ಕಡಮೆ. ಭಾರತೀಯ ತತ್ವಶಾಸ್ತ್ರ ಅತ್ಯಂತ ವ್ಯಕ್ತಿ ವೈಲಕ್ಷಣ್ಯಯುತವಾಗಿದ್ದು, ಒಂದು ವಿಧವಾದ ವೈಯಕ್ತಿಕ ಆತ್ಮ ವಿಕಾಸಕ್ಕೆ ಸಂಪೂರ್ಣ ಅವಕಾಶ ಕೊಟ್ಟರೂ ಭಾರತೀಯ ಸಮಾಜ ರಚನೆ ಮಾತ್ರ ಜಾತಿವಾರು ಇದ್ದು ಆ ಜಾತಿ ಪಂಗಡಗಳಿಗೇ ಪ್ರಾಮುಖ್ಯತೆ ಕೊಟ್ಟಿತ್ತು. ತನಗೆ ತೋರಿದಂತೆ ಚಿ೦ತಿಸಿ ನ೦ಬಲು ವ್ಯಕ್ತಿಗೆ ಸಂಪೂರ್ಣ ಸ್ವಾತಂತ್ರವಿತ್ತು ; ಆದರೆ ಸಾಮಾಜಿಕ ಮತ್ತು ಮತ ಸಂಪ್ರದಾಯಗಳನ್ನು ಮಾತ್ರ ಚಾಚೂತಪ್ಪದೆ ನಡೆಸ ಬೇಕು.


ಈ ಎಲ್ಲ ನಿಯಮಾನುಚರಣೆಯಿದ್ದರೂ ಆ ಒಂದು ಪಂಗಡದ ಒಳಗೆ ಬಹುಮಟ್ಟಿನ ಸ್ವಾತಂತ್ರವಿತ್ತು. ಸಂಪ್ರದಾಯದಿಂದ ವ್ಯತ್ಯಾಸವಾಗದೆ ಯಾವ ಶಾಸನ, ಸಾಮಾಜಿಕ ಕಟ್ಟಳೆಯು ಇರಲಿಲ್ಲ. ಹೊಸ ಪಂಗಡಗಳು ತಮ್ಮದೇ ಪದ್ದತಿಗಳು, ನಂಬಿಕೆಗಳು, ಅನುಷ್ಠಾನಗಳನ್ನು ಇಟ್ಟು ಕೊಂಡಿದ್ದರು. ಎಲ್ಲರೂ ಒಂದು ದೊಡ್ಡ ಅವರಣದಲ್ಲಿರಲು ಅವಕಾಶವಿತ್ತು. ಈ ಒಂದು ಮೃದುಸ್ವಭಾವ, ಹೊಂದಿ ಕೊಳ್ಳುವ ಗುಣ ಇದ್ದುದರಿಂದಲೇ ಪರದೇಶದ ಜನರು ಸಮಾಜದಲ್ಲಿ ಅಡಕವಾಗಲು ಸಹಾಯವಾ ಯಿತು. ಇದೆಲ್ಲದರ ಹಿಂದೆ ಕೆಲವು ಮೂಲ ನೀತಿಧರ್ಮಗಳು, .ಜೀವನದಲ್ಲಿ ಒಂದು ತಾತ್ವಿಕ ಭಾವನೆ, ಮತ್ತು ಇತರರ ನಡೆನುಡಿಗಳಲ್ಲಿ ಸಹನೆ ಇದ್ದವು.


ಎಂದಿನವರೆಗೆ ಭದ್ರತೆ ಮತ್ತು ರಕ್ಷಣೆಯೇ ಮುಖ್ಯ ಗುರಿಯಾಗಿತ್ತೋ ಅಲ್ಲಿಯವರೆಗೆ ಈ ಒಂದು ರಚನೆಯು ಯಶಸ್ವಿಯಾಗಿ ಕೆಲಸ ಮಾಡಿತು ; ಆರ್ಥಿಕ ವಿಪ್ಲವಗಳು ಒದಗಿದಾಗ ಸಹ ಕಾಲಕ್ಕನು ಗುಣವಾಗಿ ಹೊಂದಿಕೊಂಡು ನಡೆದು ಬಂದಿತು. ಹಳೆಯ ಜಡಭಾವನೆಗಳಿಗೆ ಪ್ರತಿಯಾಗಿ ಸಾಮಾಜಿಕ ಪುರೋಭಿವೃದ್ಧಿಯ ಹೊಸ ಪ್ರಗತಿ ಭಾವನೆಗಳು ಹುಟ್ಟಿದಾಗ ಈ ರಚನೆಗೆ ನಿಜವಾದ ಪೆಟ್ಟು ಬಿದ್ದಿತು. ಪಾಶ್ಚಾತ್ಯ ದೇಶಗಳಂತೆ ಪೌರ್ವಾತ್ಯದಲ್ಲಿ ಸಹ ಈ ಪ್ರಗತಿ ಭಾವನೆಯು ರೂಢಮೂಲವಾದ ಪುರಾತನ ಪದ್ಧತಿಗಳನ್ನು ಬುಡ ಮೇಲುಮಾಡುತ್ತಿದೆ. ಪಾಶ್ಚಾತ್ಯರಲ್ಲಿ ಮುಖ್ಯ ಧೈಯವು ಪ್ರಗತಿಯಾಗಿದ್ದರೂ ರಕ್ಷಣೆಯ ಅವಶ್ಯಕತೆಯ ಕೂಗು ಕೇಳಹತ್ತಿದೆ. ಭಾರತದಲ್ಲಿ ರಕ್ಷಣೆಯ ಅಭಾವದಿಂದಲೇ ಜನರು ತಮ್ಮ ಹಳೆಯ ಜಾಡನ್ನು ಬಿಟ್ಟು ಹೊರಹೊರಟಿದ್ದಾರೆ ; ಮತ್ತು ತಮಗೆ ನಿಜವಾದ ರಕ್ಷಣೆ ದೊರೆಯ ಬೇಕಾದರೆ ಪ್ರಗತಿಯೊಂದೇ ಪರಮಸಾಧನ ಎಂದು ನಂಬಿದ್ದಾರೆ.