ಪುಟ:ಭಾರತ ದರ್ಶನ.djvu/೨೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
ಅಹಮದ್ ನಗರದ ಕೋಟೆ

ಸರಕಾರವಾಗಲಿ, ಲಂಡನ್‌ನಿಂದ ಇಂಡಿಯಾ ಕಚೇರಿಯಾಗಲಿ ಪ್ರಾಂತ್ಯಾಡಳಿತಗಳಲ್ಲಿ ಕೈ ಹಾಕುವಂ ತಿಲ್ಲ ಎಂದು ಹೇಳಲಾಯಿತು. ಅದೇ ರಾಜ್ಯಾಂಗಶಾಸನವನ್ನು ವೈಸರಾಯ್ ತನ್ನ ಏಕಾಧಿಪತ್ಯದ ಅಮಿತ ಅಧಿಕಾರದಿಂದ ಹೊರಡಿಸುತ್ತಿದ್ದ ನೂರಾರು ವಿಶೇಷ ಶಾಸನಗಳಿ೦ದ, ತೀರ್ಪುಗಳಿಂದ ನಿತ್ಯವೂ ತಳ್ಳಿಹಾಕಿಯೋ, ಮೀರಿಯೋ, ಅಲಕ್ಷ ಮಾಡಿಯೋ ಮಾರ್ಪಡಿಸಿಯೋ ರಾಜ್ಯಭಾರ ಮಾಡುತ್ತಿದ್ದನು. ಅಂತ್ಯದಲ್ಲಿ ಆ ರಾಜ್ಯಾಂಗ ಶಾಸನವೆಂದರೆ ಇಂಡಿಯಾ ದೇಶದಲ್ಲಿ ಯಾರಿಗೂ ಜವಾಬ್ದಾರನಲ್ಲದ ಮತ್ತು ಪ್ರಪಂಚದ ಎಲ್ಲ ಸರ್ವಾಧಿಕಾರಿಗಳಿಗೂ ಮೀರಿದ ವಿಶೇಷ ಅಧಿಕಾರವುಳ್ಳ ಏಕಮಾತ್ರ ವ್ಯಕ್ತಿಯ ನಿರಂಕುಶ ಸರ್ವಾಧಿಕಾರ. ಅದನ್ನು ನಡೆಸುವವರು ಖಾಯಂ ನೌಕರರು, ಮುಖ್ಯವಾಗಿ ಐ.ಸಿ, ಎಸ್, ಮತ್ತು ಪೋಲಿಸ್ ಅಧಿಕಾರಿಗಳು ; ಅವರೆಲ್ಲ ವೈಸರಾಯ್ ಕಾರ್ಯಭಾರಿಗಳಾದ ಗವರ್ನರುಗಳ ಅಧೀನ; ಮಂತ್ರಿಮಂಡಲಗಳಿದ್ದರೂ, ಗವರ್ನರ್ ಅಂತಹ ಮಂತ್ರಿಮಂಡಲಗಳನ್ನು ಮೂಲೆಗೊತ್ತುತ್ತಿದ್ದರು. ಮಂತ್ರಿಗಳು ಒಳ್ಳೆಯವರಾಗಲಿ ಕೆಟ್ಟವರಾಗಲಿ ಅಧಿಕಾರಿಗಳ ಇಷ್ಟದಂತೆ ಇರಬೇಕು ; ಮೇಲಿಂದ ಬರುವ ಆಜ್ಞೆಗಳನ್ನು ವಿರೋಧಿಸಬಾರದು ; ಅಥವ ತಮ್ಮ ಅಧೀನವೆನ್ನುವ ಅಧಿಕಾರಿಗಳ ವಿವೇಚನೆಯನ್ನು ಪ್ರಶ್ನಿಸಲೂ ಬಾರದು.

ಕೊನೆಯಲ್ಲಿ ಸ್ವಲ್ಪ ಕಣ್ಣು ಒರಸಿದ್ದಾಯಿತು. ಸ್ವಲ್ಪ ಪರಿಹಾರ ದೊರೆಯಿತು. ಆದರೆ ಹತ್ತೊ, ಇಪ್ಪತ್ತೊ, ಮೂವತ್ತೊ ಲಕ್ಷ ಜನ ಸತ್ತರು. ಆ ಭಯಾನಕ ತಿಂಗಳುಗಳಲ್ಲಿ ರೋಗಕ್ಕೆ ತುತ್ತಾದವರು ಎಷ್ಟು ಜನ, ಹಸಿವಿನಿಂದ ಸತ್ತವರು ಎಷ್ಟು ಜನ ಯಾರಿಗೂ ತಿಳಿಯದು. ಅದಕ್ಕೂ ಹೆಚ್ಚಾಗಿ, ಸಾವಿನಿಂದ ಪಾರಾದರೂ ಎಷ್ಟು ಲಕ್ಷಜನ ಹುಡುಗ ಹುಡುಗಿಯರು ದೈಹಿಕ ಮಾನಸಿಕ ಬೆಳವಣಿಗೆಯಲ್ಲಿ ಕುಂಠಿತರಾಗಿದ್ದಾರೆಂಬುದೂ ತಿಳಿಯದು. ಕ್ಷಾಮಡಾಮರದ ಭಯ ಇನ್ನೂ ದೇಶವನ್ನೆಲ್ಲಾ ಆವರಿಸಿಕೊಂಡಿದೆ.

ಅಧ್ಯಕ್ಷ ರೂಸ್ವೆಲ್ಟನ ಚತುಸ್ವಾತಂತ್ರ್ಯಗಳು, ಹಸಿವಿನಿಂದ ಮುಕ್ತಿ. ಆದರೆ ಇಂಡಿಯಾ ದೇಶದ ಜನಕೋಟಿಯನ್ನೇ ದಹಿಸುತ್ತಿರುವ ಸ್ವಾತಂತ್ರದ ದಾವಾನಲವನ್ನು ಹೇಗೆ ನಿರ್ಲಕ್ಷಿಸಿದರೆ ಹಾಗೆಯೇ ಲಕ್ಷಾಂತರ ಜನರ ದಹಿಸಿದ ಹೊಟ್ಟೆಯ ಹಸಿವಿಗೂ ಅದೇ ಅಲಕ್ಷವನ್ನೇ ಸಂಪದ್ಯುಕ್ತ ಇಂಗ್ಲೆಂಡ್ ಮತ್ತು ಇನ್ನೂ ಹೆಚ್ಚಿನ ಶ್ರೀಮಂತಿಕೆಯ ಅಮೆರಿಕವೂ ತೋರಿದವು. ಬೇಕಾದ್ದು ಹಣ ಅಲ್ಲವೆಂದೂ, ಯುದ್ದಕಾಲದ ಅವಶ್ಯಕತೆಗಳಿಂದ ಆಹಾರ ಒಯ್ಯಲು ಹಡಗುಗಳಲ್ಲಿ ಸ್ಥಳ ಇಲ್ಲವೆಂದೂ ಸಾರಿದರು, ಬಂಗಾಳದ ಈ ಘೋರ ದುರಂತವನ್ನು ಮರೆಮಾಚಲು ಯತ್ನಿಸಿ, ಸರಕಾರವು ಎಷ್ಟೇ ಅಡ್ಡ ಬಂದರೂ ಇಂಗ್ಲೆಂಡ್ ಮತ್ತು ಅಮೆರಿಕ ದೇಶದ ಮಾನವ ಪ್ರೇಮಿಗಳೂ ಕರುಣಿಗಳೂ ಆದ ಅನೇಕ ಸ್ತ್ರೀ ಪುರುಷರು ನಮ್ಮ ಸಹಾಯಕ್ಕೆ ಬಂದರು. ಎಲ್ಲಕ್ಕೂ ಹೆಚ್ಚಾಗಿ ಚೀನ ಮತ್ತು ಐರ್ಲೆಂಡ್ ಸರಕಾರಗಳು ತಮ್ಮದೇ ಅನೇಕ ತೊಂದರೆಗಳಿದ್ದಾಗ್ಯೂ, ಕ್ಷಾಮದ ಸೀಡೆಯ ಕಹಿ ಅನುಭವ ಏನೆಂಬುದು ಸ್ವತಃ ಅನುಭವವಿದ್ದುದರಿಂದ ಮತ್ತು ಇಂಡಿಯಾ ದೇಶದ ಜನರ ದೈಹಿಕ ಮಾನಸಿಕ ಕ್ಷೇಶಕ್ಕೆ ಕಾರಣ ವನ್ನು ಅರಿತಿದ್ದರಿ೦ದ ಉದಾರವಾಗಿ ಸಹಾಯ ನೀಡಿದವು. ಭಾರತೀಯರ ಜ್ಞಾಪಕಶಕ್ತಿ. ಬಹಳ ಪುರಾತನವಾದುದು. ಆದರೆ ಯಾವುದನ್ನೆ ಮರೆಯಲಿ, ಜ್ಞಾಪಕದಲ್ಲಿಟ್ಟಿರಲಿ, ಈ ಔದಾರವನ್ನು ಸ್ನೇಹ ಹಸ್ತವನ್ನು ಎಂದೂ ಮರೆಯುವುದಿಲ್ಲ.

೩. ಪ್ರಜಾಸತ್ತೆಗಾಗಿ ಯುದ್ಧ

ಏಷ್ಯ, ಯೂರೋಪ್ ಮತ್ತು ಆಫ್ರಿಕ ಖಂಡಗಳಲ್ಲಿ, ಪೆಸಿಫಿಕ್, ಅಟ್ಲಾಂಟಿಕ್ ಮತ್ತು ಹಿಂದೂ ಸಾಗರಗಳಲ್ಲಿ ಯುದ್ದವು ತನ್ನ ಎಲ್ಲ ಭಯಂಕರ ರೂಪದಲ್ಲಿ ಮುಂದುವರಿದಿದೆ: ಚೀನದಲ್ಲಿ ಸುಮಾರು ಏಳುವರ್ಷ, ಯೂರೋಪ್ ಆಫ್ರಿಕಗಳಲ್ಲಿ ನಾಲ್ಕು ವರ್ಷ ಆರು ತಿಂಗಳು, ಮತ್ತು ಎರಡು ವರ್ಷ ನಾಲ್ಕು ತಿಂಗಳ ಪ್ರಪಂಚ ಯುದ್ಧ; ಫ್ಯಾಸಿಸಂ, ನಾಜಿಸಂ ವಿರುದ್ಧ ಯುದ್ಧ; ಪ್ರಪಂಚದ ಸರ್ವಾಧಿಕಾರ ಪಡೆಯಲು ಯುದ್ಧ. ಈ ಯುದ್ದ ವರ್ಷಗಳಲ್ಲಿ ಇಲ್ಲಿ ಮತ್ತು ಇಂಡಿಯಾ ದೇಶದ ಬೇರೆ ಕಡೆಗಳಲ್ಲಿ ಮೂರು ವರ್ಷ ನಾನು ಸೆರೆಮನೆಯಲ್ಲಿ ಕಳೆದಿದ್ದೇನೆ.