ಪುಟ:ಭಾರತ ದರ್ಶನ.djvu/೨೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೯೬

ಭಾರತ ದರ್ಶನ

ವಲ್ಲಭಿ ವಿಶ್ವವಿದ್ಯಾನಿಲಯವೂ ಇದ್ದವು. ಗುಪ್ತರ ಕಾಲದಲ್ಲಿ ಉಜ್ಜಯಿನಿ ವಿಶ್ವವಿದ್ಯಾನಿಲಯವು ಬಹು ಪ್ರಾಮುಖ್ಯತೆಗೆ ಬಂದಿತು. ದಕ್ಷಿಣದಲ್ಲಿ ಅಮರಾವತಿ ವಿಶ್ವವಿದ್ಯಾನಿಲಯವಿತ್ತು.

ಆದರೆ ಈ ಯುಗಕ್ಕೂ ಅಸ್ತ ಕಾಲವು ಸಮೀಪಿಸಿದ್ದ೦ತೆ ಇದೆಲ್ಲವೂ ಅನಾಗರಿಕತೆಯ ಅಪರಾಹ್ನದಂತೆ ತೋರುತ್ತದೆ. ಪ್ರಾತಸ್ಸಮಯದ ಹೊಂಗನಸು ಮಾಯವಾಗಿ, ಮಧ್ಯಾನ್ಹದ ತೀಕ್ಷ್ಣತೆಯೂ ಕಳೆದಿತ್ತು. ದಕ್ಷಿಣದಲ್ಲಿ ಅಂತಶಕ್ತಿಯೂ, ಕಾರ್ಯಪಟುತ್ವವೂ ಇನ್ನೂ ಉಳಿದಿತ್ತು. ಇದೂ ಕೆಲವು ಶತಮಾನಗಳ ಕಾಲ ಬಾಳಿತು. ಭಾರತೀಯ ವಲಸೆರಾಜ್ಯಗಳಲ್ಲಿನ ಶಕ್ತಿ ಪೂರ್ಣ ತುಂಬು ಜೀವನದಿಂದ ಇನ್ನೂ ಐದುನೂರು ವರ್ಷಗಳು ಈ ಸಂಸ್ಕೃತಿ ಜೀವಂತವಿತ್ತು. ಆದರೆ ಹೃದ್ರೋಗವು ಆರಂಭವಾಗಿ ತಾಡನ ನಿದಾನವಾಗಿತ್ತು. ಕ್ರಮೇಣ ಹೃದಯ ಸ್ತಂಭನೆಯಾಗಿ ಅಂಗಾಂಗಗಳೂ ನಿರ್ಜಿವವಾದವು. ಎಂಟನೆಯ ಶತಮಾನದಿಂದೀಚೆಗೆ ಶಂಕರನ ತರುವಾಯ ತತ್ತ್ವ ಶಾಸ್ತ್ರದಲ್ಲಿ ವಿಭೂತಿ ಪುರುಷರು ಯಾರೂ ಬಂದಿಲ್ಲ. ಅನೇಕ ಟೀಕಾಕಾರರು ಮತ್ತು ನೈಯಾಯಿಕರು ಮಾತ್ರ ಬಂದಿದ್ದಾರೆ. ಶಂಕರನೂ ದಕ್ಷಿಣ ಭಾರತದವನು. ಆತನಲ್ಲಿ ಕಂಡ ಅನ್ವೇಷಣ ಕುತೂಹಲ ಮಾನಸಿಕ ಸಾಹಸದ ಭಾವನೆಗಳಿಗೆ ಬದಲು ಕಠಿಣ, ಆಡಂಬರದ ತರ್ಕ ಮತ್ತು ಟೀಕೆಗಳಿಗೆ ಪ್ರಾಧಾನ್ಯತೆ ದೊರೆಯುತ್ತವೆ. ಬ್ರಾಹ್ಮಣ ಮತ್ತು ಬೌದ್ದ ಮತಗಳೆರಡೂ ಅವನತಿಗಿಳಿದು ಹೀನ ಪೂಜಾ ಪದ್ಧತಿಗೆ ಎಡೆಕೊಡುತ್ತವೆ. ಅದರಲ್ಲೂ ತಂತ್ರ ಪೂಜೆ ಮತ್ತು ಯೋಗಶಾಸ್ತ್ರದ ದುರುಪಯೋಗ ಹೆಚ್ಚುತ್ತಿದೆ.

ಸಾಹಿತ್ಯದಲ್ಲಿ ಎಂಟನೆಯ ಶತಮಾನದ ಭವಭೂತಿಯೇ ಕೊನೆಯವನು. ಅನೇಕ ಗ್ರಂಥಗಳು ಹುಟ್ಟಿದರೂ ಶೈಲಿಯು ಹೆಚ್ಚು ಜಟಿಲವೂ, ಕಠಿಣವೂ ಆಗುತ್ತದೆ. ವಿಷಯಭಾವನೆಯಲ್ಲಾಗಲಿ, ನಿರೂಪಣೆಯಲ್ಲಾಗಲಿ ಯಾವ ನವೀನತೆಯೂ ಇಲ್ಲ. ಗಣಿತ ಶಾಸ್ತ್ರದಲ್ಲಿ ೧೨ ನೆಯ ಶತಮಾನದಲ್ಲಿದ್ದ ಎರಡನೆಯ ಭಾಸ್ಕರನೆ ಕೊನೆಯವನು. ಕಲೆಯಲ್ಲಿ, ಇ. ಬಿ. ಹ್ಯಾವೆಲ್ ಇನ್ನೂ ಸ್ವಲ್ಪ ಹೆಚ್ಚು ಕಾಲಾವಕಾಶವನ್ನು ಕೊಟ್ಟಿದ್ದಾನೆ.ಆತನ ಅಭಿಪ್ರಾಯದಂತೆ ಏಳು ಮತ್ತು ಎಂಟನೆಯ ಶತಮಾನಗಳಲ್ಲಿ ಭಾರತದಲ್ಲಿ ಉನ್ನತ ಶಿಲ್ಪ ಕಲೆ ಮತ್ತು ಚಿತ್ರಕಲೆ ರೂಪುಗೊಳ್ಳುವವರೆಗೂ ಕಲೆಯು ಭಾವ ವಿನ್ಯಾಸದ ಸಂಪೂರ್ಣತೆ ಪಡೆಯಲಿಲ್ಲ. ಯೂರೋಪಿನಲ್ಲಿ ಏಳು ಅಥವ ಎಂಟನೆಯ ಶತಮಾನದಿಂದ ಹದಿನಾಲ್ಕನೆಯ ಶತಮಾನದವರೆಗೆ ಗಾಢಿಕ್ಕಿ ಅತ್ಯುನ್ನತ ಮಟ್ಟಕ್ಕೇರಿದಂತೆ ಭಾರತದಲ್ಲಿ ಸಹ ಅದೇ ಕಾಲ ಭಾರತೀಯ ಕಲೆಗೆ ಮಹೋನ್ನತಿಯ ಕಾಲವಾಗಿತ್ತು. ಹದಿನಾರನೆಯ ಶತಮಾನದಿಂದ ಪ್ರಾಚೀನ ಭಾರತೀಯ ಸೃಷ್ಟಿ ಕೌಶಲ್ಯ ಕ್ಷೀಣಿಸುತ್ತ ಬಂದಿತು. ಈ ಅಭಿಪ್ರಾಯ ಎಷ್ಟು ಸಾಧುವೋ ನಾನರಿಯೆ. ಆದರೆ ಕಲಾ ಪ್ರಪಂಚದಲ್ಲಿ ಸಹ ಉತ್ತರ ಭಾರತಕ್ಕಿಂತ ಹೆಚ್ಚು ಕಾಲ ದಕ್ಷಿಣ ಭಾರತ ತನ್ನ ಕಲಾಪ್ರೌಢಿಮೆಯನ್ನೂ ಕಾಯ್ದು ಕೊಂಡು ಬಂದಿತು.

ಕೊನೆಯ ಬಾರಿ ದೊಡ್ಡ ವಲಸೆಗಾರರ ತಂಡ ಸೀಮೋಲ್ಲಂಘನಕ್ಕಾಗಿ ಹೊರಟಿದ್ದು ದಕ್ಷಿಣ ಇ೦ಡಿಯದಿಂದ ಒಂಭತ್ತನೆಯ ಶತಮಾನದಲ್ಲಿ. ಆದರೆ ಚೋಳರಾಜರು ಹನ್ನೊಂದನೆಯ ಶತಮಾನದಲ್ಲಿ ಶ್ರೀವಿಜಯನನ್ನು ಸೋಲಿಸಿ ಗೆಲ್ಲುವವರೆಗೂ ದೊಡ್ಡ ನೌಕಾ ಬಲವುಳ್ಳ ರಾಜರಾಗಿದ್ದರು.

ಈ ರೀತಿ ಭಾರತ ಬಲಹೀನವಾಗುತ್ತ ತನ್ನ ಸೃಷ್ಟಿ ಸಾಮರ್ಥವನ್ನೂ, ಜೀವ ಸತ್ವವನ್ನೂ ಕಳೆದುಕೊಳ್ಳುತ್ತ ಬಂದಿತು. ಆದರೆ ಈ ಹೃದ್ರೋಗ ಬಹಳ ಹಿಂದೆಯೇ ಮೊದಲು ಉತ್ತರದಲ್ಲಿ ಆರಂಭವಾಗಿ ಕ್ರಮೇಣ ದಕ್ಷಿಣಕ್ಕೂ ಹರಡಿ ಆರಂಭವಾಗಿ ಅನೇಕ ಶತಮಾನಗಳ ಕಾಲ ನರಳಿ ಕೊನೆಗೆ ಕ್ಷೀಣದೆಶೆಗೆ ಬಂದಿತು, ಈ ರಾಜಕೀಯ ಅವನತಿಗೆ, ಸಾಂಸ್ಕೃತಿಕ ಜಡತ್ವಕ್ಕೆ ಕಾರಣಗಳೇನು ? ವ್ಯಕ್ತಿಗಳ ವಿನಾಶಕ್ಕೆ ಕಾರಣವಾದಂತೆ ನಾಗರಿಕತೆಗಳ ವಿನಾಶಕ್ಕೂ ಕಾಲಮಹಿಮೆಯೇ ಕಾರಣವೇ ಅಥವ ಅದೊಂದು ಅಲೆಯ ಉಬ್ಬರವಿಳಿತವೇ ? ಅಥವ ಬಾಹ್ಯ ಕಾರಣಗಳ ಮತ್ತು ಪರಧಾಳಿಗಳ ಪರಿಣಾಮವೆ ? ರಾಜಕೀಯ ಸ್ವಾತಂತ್ರವು ಹೋದ ಮರುಕ್ಷಣದಲ್ಲಿಯೇ ಭಾರತೀಯ ತತ್ತ್ವಶಾಸ್ತ್ರದ ಪಟುತ್ವವೂ ಕುಂದಿತು ಎಂದು ರಾಧಾಕೃಷ್ಣ೯ರ ಅಭಿಪ್ರಾಯವಿದೆ; ಸಿರ್ಲ್ವೆ ಲೆವಿಯ ಅಭಿಪ್ರಾಯವೂ ಅದೇ ಇದೆ.