ಪುಟ:ಭಾರತ ದರ್ಶನ.djvu/೨೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
ಅಹಮದ್ ನಗರದ ಕೋಟೆ

ಈಗ ಫ್ಯಾಸಿಸಂ ಮತ್ತು ನಾಜಿಸಂ ವಿರುದ್ದ ಘೋರ ಯುದ್ಧ ನಡೆಯುತ್ತಿರುವಾಗ ನಾನು ಮತ್ತು ನನ್ನಂತೆ ಅಭಿಪ್ರಾಯವಿದ್ದವರು ಸೆರೆಮನೆಯಲ್ಲಿ ಕೊಳೆಯುತ್ತಿರುವುದೂ, ಹಿಟ್ಲರ್ ಮುಸ್ಟೋಲಿನಿಗಳನ್ನು ಪುರಸ್ಕರಿಸಿ ಚೀನದ ಮೇಲಿನ ಜಪಾನ್ ದಾಳಿಯನ್ನು ಮೆಚ್ಚಿದವರು ಸ್ವಾತಂತ್ರ್ಯ, ಪ್ರಜಾಸತ್ತೆ ಮತ್ತು ಫ್ಯಾಸಿಸಂ ವಿರುದ್ಧ ತತ್ವಗಳ ಪತಾಕೆಯನ್ನು ಎತ್ತಿ ಹಿಡಿದಿರುವುದೂ ಒಂದು ವಿಧಿಯ ವೈಚಿತ್ರ,

ಇಂಡಿಯಾ ದೇಶದಲ್ಲೂ ಈ ಒ೦ದು ಅಸಾಧ್ಯ ಬದಲಾವಣೆಯನ್ನು ನೋಡಬಹುದು. ಸದಾ ಒಂದಲ್ಲ ಒಂದು ಅನುಗ್ರಹಕ್ಕೆ ಕಾದಿದ್ದು ಅಧಿಕಾರಿಗಳು ಹೇಳುವುದೆಲ್ಲ ವೇದವಾಕ್ಯ ಎಂದು ಪ್ರತಿಧ್ವನಿ ಗೈಯುವ ಸರಕಾರದ ಬಾಲಹಿಡಿಯುವವರು ಅನೇಕರಿದ್ದಾರೆ. ಎಲ್ಲೆಡೆಯಂತೆ ಇಲ್ಲಿಯೂ ಸಹ, ಸ್ವಲ್ಪ ದಿನ ಗಳ ಹಿಂದೆ ಹಿಟ್ಲರ್ ಮುಸೋಲಿನಿಗಳನ್ನು ಆದರ್ಶಪುರುಷರೆಂದು ಬಾಯಿತುಂಬ ಹೊಗಳುತ್ತಿದ್ದರು ; ಸೋವಿಯಟ್ ಸಂಯುಕ್ತ ರಾಷ್ಟ್ರವನ್ನು ಬಹಿಷ್ಕೃತವೆಂಬಂತೆ ದೂರುತ್ತಿದ್ದರು. ಈಗ ಅದೆಲ್ಲ ಇಲ್ಲ ; ಕಾಲ ಬದಲಾವಣೆಯಾಗಿದೆ. ಆಡಳಿತ ವರ್ಗದ, ರಾಜ್ಯದ ಉನ್ನತ ಅಧಿಕಾರಿಗಳೇ ಈಗ ನಾಜಿಸಂ, ಫ್ಯಾಸಿಸಂ ವಿರುದ್ಧ ಪ್ರಚಾರಮಾಡುತ್ತಿದಾರೆ ; ಉಸಿರು ಹಿಡಿದು ಪ್ರಜಾಸತ್ತೆಯ ವಿಷಯ ಸಹ ನಿದಾನವಾಗಿ ಏನೋ ಆದರೂ ಆಗಬೇಕಾದ್ದೆ ಎಂದು ಮಾತನಾಡುತ್ತಾರೆ. ಕಾಲಗತಿ ವ್ಯತ್ಯಸ್ತವಾಗಿ ಪರಿಸ್ಥಿತಿ ಬದಲಾಯಿಸಿದ್ದರೆ ಏನುಮಾಡುತ್ತಿದ್ದರೋ ? ಊಹೆಗೆ ಅವಕಾಶವೇ ಇಲ್ಲ. ಅಧಿಕಾರ ಯಾರ ಕೈಲಿದ್ದರೂ ಸರಿ ಹೂವು, ಹಾರ, ಬಿನ್ನವತ್ತಳೆಗಳಿಂದ, ಯಾರೇ ಬರಲಿ, ಸ್ವಾಗತಿಸುತ್ತಿದ್ದರು.

ಯುದ್ದಕ್ಕೆ ಪೂರ್ವ ಅನೇಕವರ್ಷಗಳಿಂದ, ನನ್ನ ಮನಸ್ಸಿನಲ್ಲಿ, ಮುಂಬರುವ ಯುದ್ದದ ವಿಷಯವೇ ತುಂಬಿತ್ತು. ಅದರ ವಿಷಯ ಚಿಂತಿಸಿ, ಮಾತನಾಡಿ, ಬರೆದು, ನನ್ನ ಮನಸ್ಸನ್ನು ಅಣಿಮಾಡಿದೆ. ಆ ಯುದ್ದದಲ್ಲಿ ಉನ್ನತ ಆದರ್ಶಗಳು ಪಣಗಳಾಗುತ್ತವೆ ; ಆ ಮಹಾಪ್ರಳಯದಿಂದ ಇ೦ಡಿಯದಲ್ಲಿ ಪ್ರಪಂಚದಲ್ಲಿ ಮಹಾಕ್ರಾಂತಿಕಾರಕ ವ್ಯತ್ಯಾಸಗಳಾಗುತ್ತವೆ ; ಆದ್ದರಿಂದ ಆ ಘೋರಯುದ್ದದಲ್ಲಿ ಇಂಡಿಯ ಮನಸ್ಸಿಟ್ಟು ಪ್ರತ್ಯಕ್ಷಭಾಗಿಯಾಗಬೇಕು ಎಂದು ತೀರ್ಮಾನಿಸಿದ್ದೆ. ಆದರೆ ಆಗ ಇಂಡಿಯಾ ದೇಶಕ್ಕೆ ನೇರವಾದ ಅಪಾಯವನ್ನಾಗಲಿ, ಪ್ರತ್ಯಕ್ಷ ಮುತ್ತಿಗೆಯ ಸಂಭವವನ್ನಾಗಲಿ ಎಣಿಸಿರಲಿಲ್ಲ. ಆದರೂ ಇಂಡಿಯ ತನ್ನ ಪೂರ್ಣ ಪಾತ್ರ ವಹಿಸಬೇಕೆಂದಿದ್ದು, ಆದರೆ ಆ ರೀತಿ ಭಾಗವಹಿಸಬೇಕಾದರೆ ಅದು ಪೂರ್ಣಸ್ವತಂತ್ರ ರಾಷ್ಟ್ರವಾಗಿ ಸರಿಸಮಾನತೆಯಿಂದ ಎಂದೂ ಮನಗಂಡಿದ್ದೆ.

ಈ ಎಲ್ಲ ವರ್ಷಗಳಲ್ಲಿ ಸಾಮ್ರಾಜ್ಯ ನೀತಿಯನ್ನು ವಿರೋಧಿಸಿದಂತೆ ಫ್ಯಾಸಿಸಂ, ನಾಜಿಸಂ ವಿರೋಧಿಸಿದ ಇ೦ಡಿಯಾದೇಶದ ಏಕಮಾತ್ರ ಮಹಾಸಂಸ್ಥೆ ಯಾದ ರಾಷ್ಟ್ರೀಯ ಮಹಾಸಭೆಯ ಅಭಿಪ್ರಾಯವೂ ಅದೇ ಆಗಿತ್ತು.

ಈಗ ಎರಡು ವರ್ಷಗಳಿಂದ ಅಂತಹ ಕಾಂಗ್ರೆಸ್‌ ನ್ಯಾಯಬಾಹಿರ, ಪುಂಡು ಸಂಸ್ಥೆ ಯೆಂದು ಸಾರಲ್ಪಟ್ಟು ಅದು ಯಾವ ರೀತಿ ಕೆಲಸಮಾಡಲೂ ಅವಕಾಶವಿಲ್ಲವಾಗಿದೆ. ರಾಷ್ಟಮಹಾಸಭೆ ಎಲ್ಲ ಈಗ ಸೆರೆಮನೆಯಲ್ಲಿದೆ. ಅದರ ಪ್ರಾಂತ್ಯ ಶಾಸನ ಸಭೆಗಳ ಅಧ್ಯಕ್ಷರುಗಳು, ಅದರ ಹಿಂದಿನ ಮಂತ್ರಿಗಳು, ಮುನ್ಸಿಪಾಲಿಟಿಗಳ ಕಾಂಗ್ರೆಸ್ ಮೇಯರುಗಳು ಮತ್ತು ಅಧ್ಯಕ್ಷರುಗಳು ಎಲ್ಲ ಸೆರೆಮನೆಯಲ್ಲಿ.

ಈ ಮಧ್ಯೆ ಪ್ರಜಾಸತ್ತೆಗಾಗಿ, ಅಟ್ಲಾಂಟಿಕ್ ಶಾಸನಕ್ಕಾಗಿ, ಚತುಸ್ಸಾತಂತ್ರ್ಯಕ್ಕಾಗಿ ಯುದ್ದ ನಡೆಯುತ್ತಲೇ ಇದೆ.

೪ ಸೆರೆಮನೆಯ ಕಾಲಕ್ಷೇಪ-ಕಾರ್ಯೋನ್ಮುಖತೆ

ಸೆರೆಮನೆಯಲ್ಲಿ ಕಾಲವು ತನ್ನ ಸ್ವಭಾವವನ್ನೇ ಪರಿವರ್ತಿಸುವಂತಿದೆ. ವರ್ತಮಾನ ಕಾಲವೇ ನಮಗೆ ಇಲ್ಲವಾಗಿದೆ; ಏಕೆಂದರೆ ನಿರ್ಜಿವ ಗತಕಾಲದಿಂದ ಪ್ರತ್ಯೇಕಿಸುವ ಅನುಭವಗಳು ಮತ್ತು ಆಸಕ್ತಿಯೇ ಅಭಾವವಾಗಿವೆ. ಸಚೇತನವಾಗಿ, ಸಜೀವವಾಗಿ, ಸಾವಿಗೆ ತುತ್ತಾಗಿರುವ ಬಾಹ್ಯ ಪ್ರಪಂಚದ ವಾರ್ತೆ ಸಹ ಗತಕಾಲದ ನಿಶ್ಚಲತೆಯಂತೆ, ಏನೋ ಒಂದು ಕನಸಿನ ಕಲ್ಪನೆಯಂತಿದೆ.