ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೨೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
೨೧೬
ಭಾರತ ದರ್ಶನ

ಗುರು ನಾನಕ್ ಜನ್ಮತಾಳಿದನು. ಈ ಸುಧಾರಕರ ಪ್ರತಿಭೆಯು ಅವರ ನಂತರ ಹುಟ್ಟಿದ ಅವರ ಮತಗಳ ಪ್ರಭಾವವನ್ನೂ ಮೀರಿತ್ತು. ಈ ಹೊಸ ಭಾವನೆಗಳ ಸಂಘರ್ಷಣೆಯಿಂದ ಹಿಂದೂಮತದ ಮೇಲೆ ವಿಶೇಷ ಪರಿಣಾಮವಾಯಿತು. ಇಂಡಿಯದಲ್ಲಿ ಇಸ್ಲಾಂ ಧರ್ಮವು ಸಹ ಇತರ ದೇಶಗಳ ಇಸ್ಲಾಂ ಧರ್ಮಕ್ಕಿಂತ ಭಿನ್ನ ವಾಯಿತು. ಇಸ್ಲಾಂ ಧರ್ಮದ ಏಕದೇವತ್ವವಾದವು ಹಿಂದೂ ಧರ್ಮದ ಮೇಲೆ ಬಹಳ ಪರಿಣಾಮ ಮಾಡಿತು. ಹಿಂದೂಗಳ ಅಸ್ಪಷ್ಟ ಬಹುದೇವತ್ವವಾದವೂ ಭಾರತೀಯ ಮುಸ್ಲಿಮರ ಮೇಲೆ ಪರಿಣಾಮಮಾಡಿತು. ಈ ಭಾರತೀಯ ಮುಸ್ಲಿಮರು ಅನೇಕರು ಸನಾತನ ಸಂಪ್ರದಾಯದಲ್ಲಿ ಹುಟ್ಟಿ ಬೆಳೆದು ಮತಾಂತರವಾದವರು. ಅವರಲ್ಲಿ ಬಹಳ ಸ್ವಲ್ಪ ಜನರು ಹೊರಗಿ ನಿಂದ ಬಂದವರು. ನೂತನ ಪ್ಲೇಟೋ ಮತದಿಂದ ಆರಂಭವಾದ ಮುಸ್ಲಿಂ ಭಕ್ತಿ ಪಂಥವೂ ಮತ್ತು ಸೂಫಿ ಧರ್ಮಗಳೂ ಭಾರತದಲ್ಲಿ ಬೆಳೆದವು.

ಪರ್ಷಿಯ್ರ ಭಾಷೆಯೇ ರಾಜಭಾಷೆಯಾಗಿ ಉಳಿದರೂ ವಿದೇಶೀಯರು ಜನಸಾಮಾನ್ಯದ ದೇಶೀಯ ಭಾಷೆಯನ್ನು ಬೆಳೆಸುತ್ತ ಬಂದು ಕ್ರಮೇಣ ಭಾರತೀಯರಾಗಿ ದೇಶೀಯರಲ್ಲಿ ಐಕ್ಯವಾದರು. ಪ್ರಾಚೀನ ಮುಸ್ಲಿಮರು ಹಿಂದಿಯಲ್ಲಿ ಅನೇಕ ಉತ್ಕೃಷ್ಟ ಗ್ರಂಥಗಳನ್ನು ಬರೆದಿದ್ದಾರೆ. ಹದಿನಾಲ್ಕನೆಯ ಶತಮಾನದಲ್ಲಿ ಆನ್ಲೈನ್ ಸುಲ್ತಾನರುಗಳ ಕಾಲದಲ್ಲಿ ಸಂಯುಕ್ತ ಪ್ರಾಂತ್ಯಕ್ಕೆ ಬಂದು, ಎರಡು ಮೂರು ತಲೆಮಾರುಗಳ ಕಾಲ ನೆಲಸಿದ ತುರ್ಕಿ ವಂಶಸ್ಥನಾದ ಅಮೀರ್ ಖುಸ್ರು ಅವರಲ್ಲಿ ಅತಿಮುಖ್ಯ ನಾದವನು. ಪಾರಸಿ ಭಾಷೆಯಲ್ಲಿ ಆತನೊಬ್ಬ ವರಕವಿ, ಸಂಸ್ಕೃತದ ಪರಿಚಯವೂ ಆತನಿಗಿತ್ತು. ಸಂಗೀತದಲ್ಲಿ ಆತನ ಪಾಂಡಿತ್ಯವು ಅನುಪಮವಿತ್ತು. ಭಾರತೀಯ ಸಂಗೀತದಲ್ಲಿ ಅನೇಕ ಹೊಸ ಮಾರ್ಪಾಟುಗಳನ್ನು ಮಾಡಿದನು. ಭಾರತೀಯರಲ್ಲಿ ಬಹಳ ಪ್ರಿಯವಾದ ಸಿತಾರ್ ಆತನೇ ಕಂಡು ಹಿಡಿದಿದ್ದಂತೆ ಅವನು ಅನೇಕ ವಿಷಯಗಳ ಮೇಲೆ ಗ್ರ೦ಥರಚನೆ ಮಾಡಿದನು. ಭಾರತದ ಮತ್ತು ಭಾರತೀಯ ವಸ್ತುಗಳ ಶ್ರೇಷ್ಠತೆಯನ್ನೂ ಮುಖ್ಯವಾಗಿ ಭಾರತೀಯ ಧರ್ಮ, ತತ್ವಶಾಸ್ತ್ರ, ತರ್ಕಶಾಸ್ತ್ರ, ಭಾಷೆ, ವ್ಯಾಕರಣ, ಸಂಗೀತ, ಗಣಿತ ಮತ್ತು ಮಾವಿನಹಣ್ಣು ಗಳನ್ನು ವರ್ಣಿಸುವುದರಲ್ಲಿ ಆತನು ಅದ್ವಿತೀಯನು.

ಆದರೆ ಈಗಲೂ ಅವನ ಹೆಸರು ಭಾರತದಲ್ಲಿ ಮನೆಮಾತಾಗಿರುವುದಕ್ಕೆ ಅವನು ಜನಸಾಮಾನ್ಯರ ಭಾಷೆಯಾದ ಹಿಂದಿಯಲ್ಲಿ ರಚಿಸಿರುವ ಗೀತೆಗಳೇ ಕಾರಣ. ಹಲಕೆಲವು ವಿದ್ವಾಂಸರಿಗೆ ಮಾತ್ರ ತಿಳಿಯಬಹುದಾದ ಗ್ರಂಥಸ್ಥ ಭಾಷೆಯನ್ನು ಉಪಯೋಗಿಸದೆ ಹಿಂದಿಯನ್ನೆ ಉಪಯೋಗಿಸಿದ್ದು ಆತನ ದೊಂದು ವೈಶಿಷ್ಟ್ಯ. ಜನತಾಭಾಷೆಯಲ್ಲಿ ಬರೆದುದು ಮಾತ್ರವಲ್ಲದೆ, ಹಳ್ಳಿಗಾಡಿನ ಜನಜೀವನ, ಜನರ ಆಚಾರವ್ಯವಹಾರಗಳನ್ನೇ ತನ್ನ ಕಾವ್ಯವಸ್ತುವನ್ನಾಗಿ ಮಾಡಿಕೊಂಡನು. ಋತುಗಳ ವರ್ಣನೆ ಯನ್ನು ಮಾಡಿದನು. ಪ್ರಾಚೀನ ಸಂಪ್ರದಾಯ ಶೈಲಿಗನುಗುಣವಾಗಿ ಪ್ರತಿಯೊಂದು ಋತುವಿಗೂ ಸಮಂಜಸವಾದ ಪದವಿನ್ಯಾಸವನ್ನೂ ರಾಗಜೋಡಣೆಯನ್ನೂ ಮಾಡಿದನು. ನವವಧುವಿನ ಸಮಾ ಗಮ, ವಿರಹವ್ಯಥೆ, ಬಾಯಾರಿ ಬೆಂಡಾದ ಭೂಮಿಗೊಂದು ನವಚೈತನ್ಯ ತುಂಬುವ ವರ್ಷಾಕಾರಿ ಮುಂತಾಗಿ ಜೀವನದ ವಿವಿಧ ರೂಪುರೇಖೆಗಳನ್ನು ಚಿತ್ರಿಸಿದನು, ಉತ್ತರ ಮತ್ತು ಮಧ್ಯ ಭಾರತದ ಗ್ರಾಮಾಂತರಗಳಲ್ಲಿ ಈ ಗೀತೆಗಳು ಇನ್ನೂ ಜನಜನಿತವಿವೆ. ಮಳೆಗಾಲ ಆರಂಭವಾದೊಡನೆ ಪ್ರತಿ ಹಳ್ಳಿಯ ಹುಡುಗಹುಡುಗಿಯರು ಅರಳಿಮರ ಮಾವಿನಮರಗಳಿಗೆ ಉಯ್ಯಾಲೆಗಳನ್ನು ಕಟ್ಟಿ ಹಾಡು ಗಳನ್ನು ಹಾಡುತ್ತ ವರ್ಷಾಗಮವನ್ನು ಸಂಭ್ರಮದಿಂದ ಸ್ವಾಗತಿಸಿ ಆಚರಿಸುತ್ತಾರೆ.

ಹುಡುಗರೂ ದೊಡ್ಡವರೂ ಆದಿಯಾಗಿ ಎಲ್ಲರ ಬಾಯಲ್ಲೂ ಇರುವ ಅಸಂಖ್ಯಾತ ಒಗಟಿಗಳನ್ನು ರಚಿಸಿದವನೂ ಅಮೀರ್ ಖುಸ್ರನೇ, ಅವನ ಗೀತೆಗಳು ಮತ್ತು ಒಗಟೆಗಳಿಂದ ಆತನು ಜೀವಂತ ನಿರುವಾಗಲೇ ಅವನ ಖ್ಯಾತಿಯು ಹಬ್ಬಿತ್ತು. ಆ ಖ್ಯಾತಿಯು ಇನ್ನೂ ಉಳಿದು ಬೆಳೆದಿದೆ. ಈ ರೀತಿ ಆರುನೂರು ವರ್ಷಗಳಾದಾಗ್ಯೂ, ಒಂದು ಅಕ್ಷರವನ್ನೂ ಬದಲಿಸದೆ, ಲೋಕಪ್ರಿಯವಾಗಿ ಜನತೆಯ ಹೃದಯವನ್ನು ಸೂರೆಗೊಂಡ ಗೀತೆಗಳು ಇನ್ನೆಲ್ಲಾದರೂ ಇವೆಯೋ ಇಲ್ಲವೋ ನಾನರಿಯ.