೬. ಭಾರತೀಯ ಸಮಾಜರಚನೆ-ಜಾತಿಯ ಪ್ರಾಮುಖ್ಯತೆ.
ಭಾರತದ ವಿಷಯ ಬಲ್ಲವರಿಗೆಲ್ಲ ಜಾತಿ ಪದ್ಧತಿಯ ವಿಷಯ ತಿಳಿದಿದೆ. ಪ್ರತಿಯೊಬ್ಬ ವಿದೇಶೀಯನೂ ಮತ್ತು ಅನೇಕ ಭಾರತೀಯರೂ ಅದನ್ನು ಅಲ್ಲಗಳೆದು ಖಂಡಿಸಿದ್ದಾರೆ. ಅನೇಕರು ಅದರ ಮೂಲತತ್ವವನ್ನು ಒಪ್ಪಿ, ಬಹುಜನ ಹಿಂದೂಗಳು ಈಗಲೂ ಅದಕ್ಕೆ ಅಂಟಿಕೊಂಡಿದ್ದರೂ ಇಂದಿನ ಅಸಂಖ್ಯಾತ ಜಾತೀಯ ಜಟಿಲತೆಯನ್ನು ಯಾವ ಭಾರತೀಯನೂ ಅನುಮೋದಿಸುವುದಿಲ್ಲ, 'ಜಾತಿ' ಶಬ್ದಕ್ಕೆ ಅನೇಕರು ಅನೇಕ ಅರ್ಥಗಳನ್ನು ಕೊಡುವುದರಿಂದ ಆ ಶಬ್ದದ ಉಪಯೋಗದಲ್ಲೇ ಸ್ವಲ್ಪ ಗೊಂದಲವೆದ್ದಿದೆ. ಸಾಮಾನ್ಯ ಯೂರೋಪಿಯನ್ ಅಥವ ಅದೇ ಭಾವನೆಯ ಭಾರತೀಯನಿಗೆ ಜಾತಿ ಎಂದರೆ ಜನತೆಯನ್ನು ವಿಂಗಡಿಸುವ ಯತ್ನ, ಕೆಲವು ಪಂಗಡಗಳ ಶ್ರೇಷ್ಠತೆಯನ್ನು ಕಾಪಾಡಿಕೊಳ್ಳುವ ಕುತಂತ್ರ, ಉಚ್ಚ ನೀಚಭಾವನೆಯನ್ನು ಶಾಶ್ವತಗೊಳಿಸುವ ಯತ್ನ ಎನ್ನುವ ಭಾವನೆ ಇದೆ. ಇದರಲ್ಲಿ ಸತ್ಯವಿದೆ ; ಪ್ರಾಯಶಃ ಆರರು ಭಾರತವನ್ನು ಆಕ್ರಮಿಸಿದಾಗ ಮೂಲನಿವಾಸಿಗಳಿಂದ ಆರರು ಪ್ರತ್ಯೇಕವಿರಬೇಕೆಂದು ಆರಂಭದಲ್ಲಿ ಮಾಡಿದ ಏರ್ಪಾಟು ಇದ್ದರೂ ಇರಬಹುದು. ಮೊದಲು ಸ್ವಲ್ಪ ಹಿಗ್ಗಿಸಲು ಸಾಧ್ಯವಿದ್ದರೂ ಕ್ರಮೇಣ ಬೆಳೆಯುತ್ತ ಬೆಳೆಯುತ್ತ ಬಹಳ ಕಠಿನವಾಗಿದೆ. ಆದರೂ ಅದು ಸತ್ಯದ ಒಂದು ಮುಖಮಾತ್ರ. ಅದರ ಶಕ್ತಿ, ಸಂಘಟನೆ ಮತ್ತು ಇಷ್ಟು ಕಾಲ ಬಾಳಿ ಬಂದುದಕ್ಕೆ ಕಾರಣ ಅದರಿಂದ ತಿಳಿಯುವುದಿಲ್ಲ. ಬೌದ್ಧ ಮತದ ಧಾಳಿಯನ್ನು ಎದುರಿಸಿತು, ಆನ್ಲೈನರ ಮೊಗಲರ ಆಳ್ವಿಕೆಗಳನ್ನೂ ಮತ್ತು ಇಸ್ಲಾಂ ಧರ್ಮದ ಧಾಳಿಯನ್ನೂ ಎದುರಿಸಿತು. ಅಲ್ಲದೆ ಹಿಂದೂಧರ್ಮದಲ್ಲೇ ಅನೇಕ ಸಮಾಜಸುಧಾರಕರ ವಿರೋಧವನ್ನೂ ಎದುರಿಸಿ ಉಳಿಯಿತು. ಅದರ ಮೂಲಕ್ಕೆ ಪೆಟ್ಟು ಬಿದ್ದು ಅಸ್ಥಿಭಾರ ಸಡಿಲವಿರುವುದು ಈಗಮಾತ್ರ. ಅದಕ್ಕೆ ಕಾರಣವು ಹಿಂದೂಧರ್ಮದಲ್ಲೇ ಹುಟ್ಟಿರುವ ಸಮಾಜಸುಧಾರಣೆಯ ಮನೋಭಾವವಲ್ಲ, ಪಾಶ್ಚಿಮಾತ್ಯ ಸಂಸ್ಕೃತಿಯ ಸಂಪರ್ಕವೂ ಅಲ್ಲ. ಇವೆರಡೂ ತಕ್ಕಮಟ್ಟಿಗೆ ತಮ್ಮ ಪ್ರಭಾವ ಬೀರಿದ್ದರೂ ಮುಖ್ಯ ಕಾರಣವು ನಮ್ಮ ಕಣ್ಣೆದುರಿಗೇನೆ ಭಾರತೀಯ ಸಮಾಜವನ್ನೇ ಬುಡಮೇಲು ಮಾಡುತ್ತಿರುವ ಆರ್ಥಿಕ ಆಂದೋಲನ, ಅತಿವೇಗದಿಂದ ವ್ಯತ್ಯಸ್ತವಾಗುತ್ತಿರುವ ಜೀವನ ರೀತಿ ಮತ್ತು ಭಾವನಾ ರೀತಿಯನ್ನು ನೋಡಿದರೆ ಪ್ರಾಯಶಃ ಜಾತಿ ಪದ್ದತಿಯು ಉಳಿಯುವುದು ಕಷ್ಟವೆಂದು ತೋರುತ್ತದೆ. ಅದಕ್ಕೆ ಬದಲು ಏನು ಬರುತ್ತದೆ ಎಂದು ಹೇಳುವುದು ಕಷ್ಟ. ಏಕೆಂದರೆ ಅದಕ್ಕೆ ಸಿಕ್ಕಿರುವ ಈಡು ಜಾತಿ ಪದ್ಧತಿಗೂ ಹಿರಿದು, ಒಂದಕ್ಕೊಂದು ವಿರುದ್ಧವಾದ ಎರಡು ಸಮಾಜರಚನಾ ದೃಷ್ಟಿಕೋನಗಳಿಗೆ ಈಗ ತುಮುಲಯುದ್ಧ ನಡೆಯುತ್ತಿದೆ ಸಮಾಜರಚನೆಗೆ ಪಂಗಡವೇ ಮೂಲವೆಂಬ ಹಿಂದೂಭಾವನೆಗೆ ಮತ್ತು ಪಂಗಡಕ್ಕಿಂತ ವ್ಯಕ್ತಿಯೇ ಶ್ರೇಷ್ಠ ಎಂಬ ಪಾಶ್ಚಿಮಾತ್ಯ ಭಾವನೆಗೆ.
ಈ ಘರ್ಷಣೆ ನಡೆಯುತ್ತಿರುವುದು ಭಾರತದಲ್ಲಿ ಮಾತ್ರವಲ್ಲ. ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ರೂಪದಲ್ಲಿದ್ದರೂ ಪಾಶ್ಚಿಮಾತ್ಯರಲ್ಲಿಯೂ, ಇಡೀ ಪ್ರಪಂಚದಲ್ಲಿ ಎಲ್ಲ ಕಡೆಗಳಲ್ಲಿಯೂ ನಡೆಯುತ್ತಿದೆ, ಪ್ರಜಾಸತ್ತಾತ್ಮಕ ಉದಾರ ನೀತಿ, ಅದನ್ನ ವಲ೦ಬಿಸಿದ ಆರ್ಥಿಕ ಮತ್ತು ಸಾಮಾಜಿಕ ನೀತಿಯಮೇಲೆ ಮುಂದುವರಿದ ೧೯ನೆಯ ಶತಮಾನದ ಯೂರೋಪಿರ್ಯ ನಾಗರಿಕತೆಯಲ್ಲಿ ವ್ಯಕ್ತಿವಾದದ ಪರಮಾ ವಧಿಯನ್ನು ಕಾಣುತ್ತೇವೆ. ಹತ್ತೊಂಭತ್ತನೆಯ ಶತಮಾನದ ಸಾಮಾಜಿಕ ರಾಜಕೀಯ ನೀತಿಯು ಇಪ್ಪತ್ತನೆಯ ಶತಮಾನಕ್ಕೂ ಬೆಳೆದುಬಂದಿತು ಆದರೆ ಯುದ್ಧ ಮತ್ತು ಇತರ ಕಠಿಣ ಸಮಸ್ಯೆಗಳ ಎದುರಿನಲ್ಲಿ ಆ ನಾಗರಿಕತೆಯು ಶಿಥಿಲವಾಗಿ ನುಚ್ಚು ನೂರಾಗುವಂತೆ ಕಾಣುತ್ತದೆ. ಪಂಗಡಕ್ಕೆ ಮತ್ತು ಸಮಾಜಕ್ಕೆ ಹೆಚ್ಚು ಪ್ರಾಮುಖ್ಯತೆ ದೊರೆಯುತ್ತಿದೆ. ವ್ಯಕ್ತಿ ಮತ್ತು ಸಮಾಜದ ಪರಸ್ಪರ ಹಕ್ಕು ಬಾಧ್ಯತೆಗಳನ್ನು ಸಮನ್ವಯಗೊಳಿಸುವುದೇ ಸಮಸ್ಯೆಯಾಗಿದೆ. ಈ ಪರಿಹಾರಮಾರ್ಗವು ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ರೂಪ ತಾಳಬಹುದು. ಆದರೆ ಎಲ್ಲರಿಗೂ ಅನ್ವಯಿಸುವ ಒಂದು ಮೂಲತತ್ವ ವನ್ನು ಕಂಡುಹಿಡಿಯುವ ಪ್ರಯತ್ನವು ನಡೆಯಲೇಬೇಕಾಗುತ್ತದೆ.