ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೪
ಭಾರತ ದರ್ಶನ

ಅವರಿಂದಾಗಿರುವ ಮಹದುಪಕಾರಗಳಲ್ಲಿ ಈ ಒತ್ತಾಯವೇ ಅತಿಮುಖ್ಯವಾದುದು. ಈ ಭಾವನೆ ಹೊಸತೇನೂ ಅಲ್ಲ. ಆದರೆ ಆ ನೈತಿಕ ಧರ್ಮವನ್ನು ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕ ಜೀವನಕ್ಕೆ ಅಳವಡಿಸಿದ್ದು ನಿಜವಾಗಿ ಹೊಸತು. ಅದು ತುಂಬ ಕಷ್ಟವೇನೋ ನಿಜ; ಮತ್ತು ಪ್ರಾಯಶಃ ಗುರಿ ಮತ್ತು ದಾರಿಗಳೆರಡನ್ನು ಬೇರ್ಪಡಿಸಲು ನಿಜವಾಗಿ ಸಾಧ್ಯವಿಲ್ಲ; ನೈಸರ್ಗಿಕ ಪೂರ್ಣತೆಯಲ್ಲಿ ಎರಡೂ ಸೇರಿವೆ. ಗುರಿ ಯನ್ನು ಮಾತ್ರ ಗಮನದಲ್ಲಿಟ್ಟು ಕೊಂಡು, ದಾರಿಗೆ ಪ್ರಾಶಸ್ತ್ರಕೊಡದ ಈ ಪ್ರಪಂಚದಲ್ಲಿ ದಾರಿಕೊಡುವ ಪ್ರಾಮುಖ್ಯತೆ ವಿಚಿತ್ರವಾಗಿ, ಅಸಾಮಾನ್ಯವಾಗಿ, ಕಾಣಬಹುದು. ಇಂಡಿಯದಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ ನಾನು ಹೇಳಲಾರೆ. ಆದರೆ ಅನೇಕರ ಮನಸ್ಸಿನ ಮೇಲೆ ಗಾಢವಾದ ಶಾಶ್ವತವಾದ ಪ್ರತಿಭೆಯನ್ನು ಬೀರಿದೆ ಎಂಬುದರಲ್ಲಿ ಸಂಶಯವಿಲ್ಲ.

ಮಾರ್ಕ್ಸ್ ಮತ್ತು ಲೆನಿನ್‌ನ್ನು ಕುರಿತ ಅಭ್ಯಾಸ ನನ್ನ ಮನಸ್ಸಿನ ಮೇಲೆ ಬಹಳ ದೊಡ್ಡ ಪರಿಣಾಮವನ್ನುಂಟುಮಾಡಿತು: ಇತಿಹಾಸವನ್ನೂ ಪ್ರಚಲಿತ ವಿಷಯಗಳನ್ನೂ ಹೊಸ ಬೆಳಕಿನಲ್ಲಿ ನೋಡುವ ದೃಷ್ಟಿಯನ್ನು ಕೊಟ್ಟಿತು. ಇತಿಹಾಸ ಮತ್ತು ಸಮಾಜ ವಿಕಾಸನದ ಸನಾತನ ಪರಂಪರೆಯಲ್ಲಿ ಒಂದು ಅರ್ಥ ಮತ್ತು ಕ್ರಮವಿದೆ ಎಂದು ಅರ್ಥವಾಯಿತು, ಭವಿಷ್ಯದ ಮುಸುಕೂ ಸ್ವಲ್ಪ ತಿಳಿಯಲಾಯಿತು. ಸೋವಿಯೆಟ್ ಸಂಯೋಜನೆಯ ಪ್ರತ್ಯಕ್ಷ ಸಾಧನೆಗಳೂ ಅಸಾಧ್ಯ ಪರಿಣಾಮವನ್ನುಂಟುಮಾಡಿತು. ಅನೇಕವೇಳೆ ಅಲ್ಲಿನ ಒಂದೊಂದು ಘಟನೆ ಅರ್ಥವಾಗುತ್ತಿರಲಿಲ್ಲ ಅಥವ ನನ್ನ ಮನಸ್ಸಿಗೆ ಬರುತ್ತಿರಲಿಲ್ಲ. ದೈನಂದಿನದ ಅಧಿಕಾರದ ರಾಜಕೀಯಕ್ಕೆ ಅಥವ ತಾತ್ಕಾಲಿಕ ಪ್ರಯೋ ಜನಕ್ಕೆ ಸಂಬಂಧಿಸಿದ್ದು ಎಂದು ತೋರುತ್ತಿತ್ತು. ಮಾನವ ಸೌಖ್ಯಾಭಿವೃದ್ಧಿಯ ಉದ್ವೇಗದಲ್ಲಿ ಈ ಎಲ್ಲ ಘಟನೆಗಳಲ್ಲ, ಸ್ವಲ್ಪ ವಕ್ರತೆಯೂ ಕಂಡುಬಂದರೂ ಸೋವಿಯಟ್ ಕ್ರಾಂತಿಯಿಂದ ಮಾನವ ಸಮಾಜ ದೊಡ್ಡ ಹೆಜ್ಜೆಯಿಂದ ಮುಂದುವರಿದಿದೆ, ಅದು ಅಳಿಸಲಾಗದ ನಿತ್ಯ ಜಾಜ್ವಲ್ಯಮಾನವಾದ ನಂದಾ ದೀವಿಗೆಯೊಂದನ್ನು ಹೊತ್ತಿಸಿದೆ; ಇಡೀ ವಿಶ್ವವೇ ಬಯಸುವ ಹೊಸ ನಾಗರಿಕತೆಯ ತಳಪಾಯವನ್ನು ಹಾಕಿದೆ ಎನ್ನುವದರಲ್ಲಿ ನನಗೆ ಯಾವ ಸಂಶಯವೂ ಇರಲಿಲ್ಲ, ನಾನೊಬ್ಬ ತೀಕ್ಷ್ಯ ವ್ಯಕ್ತಿ ಸ್ವಾತಂತ್ರ ವಾದಿ, ಆದ್ದರಿಂದ ಸಮಾಜದಲ್ಲೆಲ್ಲ ತೀರ ಅತಿಯಾದ ಸೈನಿಕ ಶಿಸ್ತನ್ನು ಒಪ್ಪಲಾರೆ, ಆದರೂ ಒಂದು ಜಟಿಲವಾದ ಸಮಾಜರಚನೆಯಲ್ಲಿ ವ್ಯಕ್ತಿ ಸ್ವಾತಂತ್ರಕ್ಕೆ ಒಂದು ಮಿತಿ ಇರಬೇಕು ಎಂಬುದು ನನಗೆ ಸ್ಪಷ್ಟವಾಗಿದೆ. ಪ್ರಾಯಶಃ ನಿಜವಾದ ವ್ಯಕ್ತಿ ಸ್ವಾತಂತ್ರ್ಯಕ್ಕೆ ಒಂದೇದಾರಿ ಅದು ಸಾಮಾಜಿಕ ಜೀವನದ ಅಂಥ ಯಾವುದಾದರೂ ಒಂದು ಮಿತಿಯಿಂದಲೇ ಇರಬೇಕು. ರಾಷ್ಟ್ರದ ಮಹಾ ಸ್ವಾತಂತ್ರದ ಹಿತದಿಂದ ಕಿರಿದಾದ ವ್ಯಕ್ತಿ ಸ್ವಾತಂತ್ರಕ್ಕೆ ಆಗಾಗ್ಗೆ ಮಿತಿಯನ್ನು ಕಲ್ಪಿಸಬೇಕಾಗಿ ಬರಬಹುದು.

ಮಾರ್ಕ್ಸನ ದರ್ಶನ ದೃಷ್ಟಿಯಲ್ಲಿ ಬಹು ಭಾಗವನ್ನು ನಾನು ಸುಲಭವಾಗಿ ಒಪ್ಪಿದೆ: ಅದರ ಏಕತ್ವವಾದ, ಮತ್ತು ವಸ್ತು ಮನಸ್ಸುಗಳ ಅದೈತಭಾವ, ವಸ್ತುವಿನ ಕ್ರಿಯಾಶಕ್ತಿ, ವಿಕಾಸ ಮತ್ತು ಆತಿಕ್ರಮಣ ಕ್ರಿಯೆ ಮತ್ತು ಪ್ರಕ್ರಿಯೆ, ಕಾರ್ಯ ಮತ್ತು ಕಾರಣ, ಪ್ರಮೇಯ, ವಿರೋಧಪ್ರಮೇಯ, ಸಂಕೀರ್ಣ ಪ್ರಮೇಯಗಳಿಂದ ಉದ್ಭವಿಸುವ ನಿರಂತರ ಪರಿವರ್ತನೆಯ ಜಿಜ್ಞಾಸ ನನಗೆ ಒಪ್ಪಿಗೆಯಾಗಿದೆ. ಅದರಿಂದ ನನಗೆ ಪೂರ್ಣ ತೃಪ್ತಿಯಾಯಿತೆಂದಲ್ಲ. ನನ್ನ ಮನಸ್ಸಿನ ಎಲ್ಲ ಸಂಶಯಗಳೂ ಅದರಿ೦ದ ನಿವಾರಣೆಯಾಗಲಿಲ್ಲ. ಎಂತೊ ಏನೊ ತಿಳಿದೂ ತಿಳಿಯದಂತೆ ವೇದಾಂತ ದೃಷ್ಟಿ ಯಂತಿರುವ ಒಂದು ಭಾವನೆ ನನ್ನಲ್ಲಿ ಸುಳಿಯಲು ಆರಂಭಿಸಿತು; ಅದು ಮನಸ್ಸು ಮತ್ತು ವಸ್ತುವಿನ ಮಧ್ಯದ ಅಂತರವಲ್ಲ, ಮನಸ್ಸಿಗೂ ಮಾರಿದ ಯಾವುದೋ ವಿಷಯ. ಅಲ್ಲದೆ ಅದಕ್ಕೆ ನೈತಿಕ ಹಿನ್ನೆಲೆಯೂ ಇತ್ತು. ನಮ್ಮ ಮನಸ್ಸು ಬೆಳೆದಂತೆ, ನಾಗರಿಕತೆ ಮುಂದುವರಿದಂತೆ ನೈತಿಕ ದೃಷ್ಟಿಯೂ ವ್ಯತ್ಯಾಸ ಹೊಂದುತ್ತದೆ ಎಂದು ಅರಿತುಕೊಂಡೆ. ಆಯಾ ಯುಗದ ಮಾನಸಿಕ ಹವಾಮಾನದಂತೆ ಯುಗದ ನೈತಿಕ ದೃಷ್ಟಿ, ಆದರೂ ಆ ನೈತಿಕ ದೃಷ್ಟಿಗೆ ಯಾಗಪ್ರವೃತ್ತಿಗಿಂತ(ಯುಗಪ್ರವೃತ್ತಿಗಿಂತ?) ಇನ್ನೂ ಹೆಚ್ಚು ನಿತ್ಯತೆಯುಳ್ಳ ಕೆಲವು ಮೂಲ ಪ್ರವೃತ್ತಿಗಳು ಇವೆ. ಕಮ್ಯೂನಿಸಂ ಮತ್ತು ಇತರ ಪಂಗಡಗಳಲ್ಲಿ ಅನೇಕವೇಳೆ ಮೂಲ ಪ್ರವೃತ್ತಿ ಅಥವ ತತ್ವಗಳಿಗೂ ಕ್ರಿಯೆಗೂ ಕಂಡುಬಂದ ವಿಚ್ಛೇದವೂ ನನಗೆ ಸರಿದೋರಲಿಲ್ಲ.