ಪುಟ:ಭಾರತ ದರ್ಶನ.djvu/೩೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೪೬

ಭಾರತ ದರ್ಶನ

ಜೈವಿಧ್ಯವನ್ನೂ ನಾಶಮಾಡಿ ಒಂದೇ ಮಾದರಿಯಲ್ಲಿ ಮಾರ್ಪಡಿಸುವ ಆವಶ್ಯಕತೆ ಕಾಣಲಿಲ್ಲ. ಆದ್ದರಿಂದ ಪ್ರಾಂತದಲ್ಲಿ ಆದಷ್ಟು ಆಡಳಿತ ಸ್ವಾತಂತ್ರ್ಯವಿರಬೇಕೆಂದೂ, ಸಂಸ್ಕೃತಿಯ ಬೆಳೆವಣಿಗೆಗೆ, ವ್ಯಕ್ತಿ ಮತ್ತು ಪಂಗಡದ ಸ್ವಾತಂತ್ರಕ್ಕೆ ಅವಕಾಶವಿರಬೇಕೆಂದೂ ಒಪ್ಪಿದೆವು.

ಆದರೆ ರಾಷ್ಟ್ರದ ಒಗ್ಗಟ್ಟು ಮತ್ತು ಪ್ರಜಾಪ್ರಭುತ್ವ ಈ ಎರಡು ವಿಷಯಗಳಲ್ಲಿ ಮಾತ್ರ ಕೂದಲೆಳೆಯಷ್ಟೂ ಕದಲಲು ಕಾಂಗ್ರೆಸ್ಸಿಗೆ ಸಾಧ್ಯವಿರಲಿಲ್ಲ. ಅದೇ ಕಾಂಗ್ರೆಸ್ಸಿನ ತಳಹದಿಯೂ, ಕಳೆದ ಐವತ್ತು ವರ್ಷಗಳಿಂದ ಕಾಂಗ್ರೆಸ್ಸಿನ ಪ್ರಮುಖ ಧೈಯಗಳೂ ಆಗಿದ್ದವು. ನನಗೆ ತಿಳಿದಂತೆ ಪ್ರಪಂಚದ ಸಂಸ್ಥೆಗಳಲ್ಲೆಲ್ಲ, ತತ್ತ್ವದಲ್ಲಿ ಮತ್ತು ಅನುಷ್ಠಾನದಲ್ಲಿ ಸಹ ಭಾರತದ ಕಾಂಗ್ರೆಸ್ ಒಂದು ದೊಡ್ಡ ಪ್ರಜಾಸತ್ತಾತ್ಮಕ ಸಂಸ್ಥೆ, ದೇಶಾದ್ಯಂತ ದಶ ಸಹಸ್ರ ಗಟ್ಟಲೆ ಹರಡಿರುವ ಸಮಿತಿಗಳ ಮೂಲಕ ಜನರಲ್ಲಿ ಪ್ರಜಾಪ್ರಭುತ್ವದ ರೀತಿ ನೀತಿಗಳನ್ನು ಹರಡಿ ಅದ್ಭುತ ಯಶಸ್ಸು ಪಡೆದಿತ್ತು. ಉನ್ನತ ಲೋಕಪ್ರಿಯ ವ್ಯಕ್ತಿ ಗಾಂಧೀಜಿಯ ಅದ್ಭುತ ಪ್ರಭಾವಕ್ಕೆ ಒಳಗಾಗಿದ್ದರೂ ಕಾಂಗ್ರೆಸ್ಸಿನ ಪ್ರಜಾಸತ್ತಾತ್ಮಕ ನೀತಿಗೆ ಧಕ್ಕೆ ಬರಲಿಲ್ಲ. ಕಷ್ಟ ಸಮಯದಲ್ಲಿ ಹೋರಾಟ ಕಾಲದಲ್ಲಿ ಇತರ ಎಲ್ಲ ದೇಶಗಳಂತೆ ಏಕೈಕ ನಾಯಕನ ಮಾರ್ಗದರ್ಶಿತ್ವದಲ್ಲಿ ನಡೆಯುವುದು ಅಗತ್ಯವಿತ್ತು. ಕಾಂಗ್ರೆಸ್ಸು ಸರ್ವಾಧಿಕಾರ ಸಂಸ್ಥೆ ಎಂದು ದೂರುವುದು ಮೂಢತನ. ಆದರೆ ಸಾಮಾನ್ಯವಾಗಿ ಆರೋಪಣೆ ಮಾಡಿದ ಬ್ರಿಟಿಷರು ಭಾರತದಲ್ಲಿ ಸರ್ವಾಧಿಕಾರ ಮತ್ತು ನಿರಂಕುಶ ಪ್ರವರ್ತನೆಗೆ ತೌರುಮನೆಯಂತಿದ್ದರು.

ಭಾರತದ ಐಕ್ಯತೆ ಮತ್ತು ಪ್ರಜಾಪ್ರಭುತ್ವವೇ ತನ್ನ ಧೈಯವೆಂದು ಬ್ರಿಟಿಷ್ ಸರ್ಕಾರ ಮೊದಲಿನಿಂದಲೂ ತತ್ವಶಃ ಒಪ್ಪಿದೆ. ಭಾರತದ ರಾಜಕೀಯ ಐಕ್ಯತೆ ಸಾಧಿಸಿರುವುದಾಗಿ ಬ್ರಿಟಿಷರು ಬಡಾಯಿ ಕೊಚ್ಚಿಕೊಳ್ಳುತ್ತಿದ್ದರು. ದೇಶಾದ್ಯಂತ ದಾಸ್ಯ ಒಂದೇ ಆ ಐಕ್ಯತೆಯಾಗಿತ್ತು. ಪ್ರಜಾಪ್ರಭುತ್ವದ ರೀತಿ ನೀತಿಗಳನ್ನು ತಮಗೆ ಕಲಿಸುತ್ತಿರುವುದಾಗಿಯೂ ಹೇಳುತ್ತಿದ್ದರು. ಆದರೆ ಅವರ ಕಾರ್ಯನೀತಿ ಮಾತ್ರ ಆ ಐಕ್ಯತೆ ಮತ್ತು ಪ್ರಜಾಪ್ರಭುತ್ವ ನಾಶಮಾಡುವುದೇ ಆಯಿತು. ೧೯೪೦ ನೆ ಆಗಸ್ಟ್ ತಿಂಗಳಲ್ಲಿ ಸೇರಿದ ಕಾಂಗ್ರೆಸ್ ಕಾರ್ಯಸಮಿತಿಯು ಬ್ರಿಟಿಷ್ ಸರಕಾರದ ನೀತಿಯು ಭಾರತದಲ್ಲಿ ಜನರಲ್ಲಿ ದಂಗೆ ಮತ್ತು ಕಲಹವನ್ನು ಪ್ರೇರಿಸಿ ಪ್ರೋತ್ಸಾಹಿಸುತ್ತಿದೆ” ಎಂದು ಸಾರಿತು. ಬ್ರಿಟಿಷ್ ಸರ್ಕಾರದ ರಾಜಕಾರಣ ಪ್ರಮುಖರು ಭಾರತದಲ್ಲಿ ಪ್ರಜಾಪ್ರಭುತ್ವ ಸಾಧ್ಯವಿಲ್ಲವೆಂದೂ, ಭಾರತದ ಐಕ್ಯತೆಯ ಬದಲು ಬೇರೆ ಯಾವು ದಾದರೂ ಹೊಸ ಏರ್ಪಾಟಗೆ ಒಪ್ಪುವುದು ಒಳ್ಳೆಯದೆಂದೂ ಹೇಳತೊಡಗಿದರು. ಭಾರತದ ಸ್ವಾತಂತ್ರ ಮತ್ತು ಪ್ರಜಾಪ್ರಭುತ್ವದ ಬೇಡಿಕೆಗೆ ಇವೇ ಅವರ ಉತ್ತರವಾಯಿತು. ತಮ್ಮ ಮುಖ್ಯ ಎರಡು ಧೈಯ ಸಾಧನೆಯಲ್ಲೂ ಬ್ರಿಟಿಷರು ವಿಮುಖರಾದರೆಂಬುದಕ್ಕೆ ಈ ಉತ್ತರ ಒಂದೇ ಸಾಕು. ಆದರೆ ಅದನ್ನು ಮನಗಾಣಲು ಒಂದೂವರೆ ಶತಮಾನ ಹಿಡಿಯಿತು.

ಎಲ್ಲರಿಗೂ ಒಪ್ಪಿಗೆಯಾದ ಕೋಮುವಾರು ಸಮಸ್ಯಾ ಪರಿಹಾರ ಕಂಡು ಹಿಡಿಯಲು ನಮಗೆ ಸಾಧ್ಯವಾಗಲಿಲ್ಲ. ಈ ಸೋಲಿನ ಪರಿಣಾಮ ನಾವೇ ಅನುಭವಿಸಬೇಕಾದ್ದರಿಂದ ಆ ಸೋಲಿನ ಹೊಣೆಗೂ ನಾವೇ ಜವಾಬ್ದಾರರು. ಆದರೆ ಯಾವುದಾದರೊಂದು ಮುಖ್ಯ ಪ್ರಶ್ನೆಗೆ ಅಥವ ಬದಲಾವಣೆಗೆ ಪ್ರತಿಯೊಬ್ಬನನ್ನೂ ಒಪ್ಪಿಸುವುದು ಯಾರಿಗೆ ತಾನೆ ಸಾಧ್ಯ. ಪಾಳೆಯಗಾರಿಕೆಯ ಶ್ರೀಮಂತರಿಗೆ ಮತ್ತು ಪ್ರತಿಗಾಮಿಗಳಿಗೆ ಯಾವ ಬದಲಾವಣೆಯೂ ಬೇಕಿರಲಿಲ್ಲ. ಇನ್ನು ಕೆಲವರಿಗೆ ರಾಜಕೀಯ, ಆರ್ಥಿಕ, ಸಾಮಾಜಿಕ ಎಲ್ಲ ವಿಷಯಗಳೂ ಪರಿವರ್ತನೆಯಾಗಬೇಕು. ಈ ಎರಡು ಪಂಗಡದ ಮಧ್ಯೆ ನಾನಾ ಬಗೆಯ ಅಭಿಪ್ರಾಯದವರು. ಯಾವುದಾದರೂ ಒಂದು ಸಣ್ಣ ಪಂಗಡ ಬದಲಾವಣೆ ಅವಶ್ಯವಿಲ್ಲವೆಂದರೆ ಯಾವ ಬದಲಾವಣೆಯೂ ಸಾಧ್ಯವಿಲ್ಲ. ಅಂತಹ ಪಂಗಡಗಳನ್ನು ಎತ್ತಿ ಕಟ್ಟಿ ಪ್ರೋತ್ಸಾ ಹಿಸುವುದೇ ಸರಕಾರದ ನೀತಿಯಾದಾಗ ಜನತೆಯಲ್ಲಿ ಆ ಪಂಗಡಕ್ಕೆ ಯಾವ ಬೆಲೆಯೂ ಇಲ್ಲದಿದ್ದರೂ ಇದು ಪ್ರಗತಿಗೆ ಮಾತ್ರ ಅಡ್ಡಿ ಬರಬಹುದು, ಮತ್ತು ಅಂತಹ ಸಂದರ್ಭದಲ್ಲಿ ಕ್ರಾಂತಿಯಿಂದ ಮಾತ್ರ ಪ್ರಗತಿಯು ಸಾಧ್ಯ. ಕೆಲವರು ಇಲ್ಲಿಯೇ ಹುಟ್ಟಿ ಬೆಳೆದವರು, ಇನ್ನು ಕೆಲವರು ಬ್ರಿಟಿಷರ ಪ್ರೋತ್ಸಾಹದಿಂದ