ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೩೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಕೊನೆಯ ಅಂಕ ೨
೩೫೩

ಪ್ರತಿಯಾಗಿ ರೂಪುಗೊಂಡ ಹಿಂದೂಮಹಾಸಭೆ, ತತ್ವಶಃ ಭಾರತದ ಸ್ವಾತಂತ್ರ್ಯಕ್ಕೆ ಬೆಂಬಲಕೊಟ್ಟರೂ ಅವುಗಳ ಮುಖ್ಯ ಉದ್ದೇಶ ತಮ್ಮ ಪಂಗಡಕ್ಕೆ ಹೆಚ್ಚು ರಕ್ಷಣೆ ಮತ್ತು ವಿಶೇಷ ಅಧಿಕಾರ ಪಡೆಯುವುದೇ ಆಗಿತ್ತು. ಈ ಆಧಿಕಾರ ಪ್ರಾಪ್ತಿಗೆ ಬ್ರಿಟಿಷ್ ಸರಕಾರದ ಕೃಪಾಕಟಾಕ್ಷ ಅವಶ್ಯವಿದ್ದುದರಿಂದ ಬ್ರಿಟಿಷ್ ಸರಕಾರ ವಿರುದ್ಧ ಯಾವ ಘರ್ಷಣೆಗೂ ಅವು ಸಿದ್ಧವಿರಲಿಲ್ಲ. ಐಕ್ಯಭಾರತದ ಸ್ವಾತಂತ್ರ ಸಾಧನೆಯೊಂದೇ ಕಾಂಗ್ರೆಸ್ಸಿನ ಗುರಿಯಾಗಿತ್ತು. ಉಳಿದೆಲ್ಲ ವಿಷಯಗಳೂ ಈ ಧೈಯದ ನಂತರ; ಆದ್ದರಿಂದ ಬ್ರಿಟಿಷ್ ಆಡಳಿತಶಕ್ತಿಯೊಡನೆ ನಿರಂತರ ಹೋರಾಟವೂ ಘರ್ಷಣೆಯೂ ಅನಿವಾದ್ಯವಾಯಿತು. ಕಾಂಗ್ರೆಸ್ಸಿನಲ್ಲಿ ಪ್ರತಿಬಿಂಬಿತವಾದ ಭಾರತ ರಾಷ್ಟ್ರೀಯ ಭಾವನೆಯೂ ಬ್ರಿಟಿಷ್ ಸಾಮ್ರಾಜ್ಯಭಾವನೆಯನ್ನು ಎದುರಿಸಿ ನಿಂತಿತು. ಕಾಂಗ್ರೆಸ್ಸಿನ ಕಾರ್ಯಕ್ರಮದಲ್ಲಿ ರೈತರ ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳಮೇಲೆ ಒಂದು ನೀತಿಯು ರೂಪುಗೊಂಡಿತ್ತು. ಮುಸ್ಲಿಂ ಲೀಗ್ ಆಗಲಿ ಹಿಂದೂ ಮಹಾ ಸಭೆಯಾಗಲಿ ಅಂಥ ಯಾವ ಕಾರ್ಯಕ್ರಮವನ್ನೂ ಯೋಚಿಸಿ ರೂಪಿಸಿರಲಿಲ್ಲ. ಸಮಾಜವಾದಿಗಳು ಮತ್ತು ಸಮತಾವಾದಿಗಳಿಗೆ ಅಂಥ ವಿಷಯಗಳಲ್ಲಿ ತುಂಬ ಆಸಕ್ತಿ ಏನೋ ಇತ್ತು. ಅವರು ತಮ್ಮ ಕಾರ್ಯಕ್ರಮವನ್ನು ಕಾಂಗ್ರೆಸ್ಸಿನ ಒಳಗೂ ಹೊರಗೂ ರೂಪಿಸಲು ಪ್ರಯತ್ನ ಪಟ್ಟರು.

ಕಾಂಗ್ರೆಸ್ಸಿನ ಕಾರ್ಯನೀತಿಗೂ ಮತ್ತು ಈ ಕೋಮುವಾರು ಸಂಸ್ಥೆಗಳಿಗೂ ಇನ್ನೊಂದು ಮುಖ್ಯ ವ್ಯತ್ಯಾಸವಿತ್ತು. ಹೋರಾಟ ಮತ್ತೆ ಶಾಸನ ಸಭಾಕಾರ್ಯವಲ್ಲದೆ ಕಾಂಗ್ರೆಸ್ ಜನತೆಯ ಮಧ್ಯೆ ಮಾಡ ಬೇಕಾದ ಕೆಲವು ರಚನಾತ್ಮಕ ಕಾರ್ಯಗಳಿಗೆ ಮಹತ್ವ ಕೊಟ್ಟಿತ್ತು. ಗ್ರಾಮ ಕೈಗಾರಿಕೆಯನ್ನು ಪುನರುಜ್ಜಿವನಗೊಳಿಸಿ ಬೆಳೆಸುವುದು, ಅಸ್ಪೃಶ್ಯರ ಜೀವನಮಟ್ಟ ಉನ್ನತಿಗೊಳಿಸುವುದು, ಮೂಲಶಿಕ್ಷಣ ಆಚರಣೆಗೆ ತರು ವುದು, ಗ್ರಾಮಸೇವೆಯಲ್ಲಿ ಗ್ರಾಮ ಪಾಕೀಜೂ, ವೈದ್ಯಸಹಾಯ ಮುಂತಾದ ಅನೇಕ ಕಾರ್ಯಕ್ರಮ ಗಳಿದ್ದವು. ಈ ಕಾರ್ಯಗಳಿಗೂ ಕಾಂಗ್ರೆಸ್ ಪ್ರತ್ಯೇಕ ಸಂಸ್ಥೆಗಳನ್ನು ಸ್ಥಾಪಿಸಿತ್ತು. ಅವುಗಳೆಲ್ಲ ರಾಜಕೀಯದಲ್ಲಿ ಪ್ರವೇಶಮಾಡದೆ ಕೆಲಸಮಾಡುತ್ತ ಸಹಸ್ರಾರು ಜನ ಪೂರ್ತಕಾಲದ ಕೆಲಸಗಾರರಿಗೂ ಅದಕ್ಕೂ ಹೆಚ್ಚಿನ ಅಲ್ಪವೇಳೆಯ ಕೆಲಸಗಾರರಿಗೂ ಜೀವನಕ್ಕೆ ಅವಕಾಶಕಲ್ಪಿಸಿತ್ತು. ರಾಜಕೀಯ ಚಟುವಟಿಕೆಯೂ ಒಮ್ಮೆಟ್ಟದ ಕಾಲದಲ್ಲಿ ಸಹ ರಾಜಕೀಯದಿಂದ ದೂರವಿದ್ದ ನಿರಾಡಂಬರದ ರಚನಾತ್ಮಕ ಕಾರ್ಯ ನಡೆಯುತ್ತಲೇ ಇತ್ತು. ಆದರೆ ಕಾಂಗ್ರೆಸ್ಸಿಗೂ ಸರಕಾರಕ್ಕೂ ಘರ್ಷಣೆ ಎದ್ದಾಗ ಸರಕಾರವು ಈ ರಚನಾತ್ಮಕ ಕೆಲಸಕ್ಕೂ ಅವಕಾಶಕೊಡುತ್ತಿರಲಿಲ್ಲ. ಈ ಕಾರ್ಯಕ್ರಮದ ಆರ್ಥಿಕ ಬೆಲೆಯನ್ನು ಕೆಲವರು ಪ್ರಶ್ನಿಸಿದರು ; ಆದರೆ ಅದರ ಸಾಮಾಜಿಕ ಪ್ರಾಮುಖ್ಯತೆಯನ್ನು ಯಾರೂ ಅಲ್ಲಗಳೆಯುವಂತೆ ಇರಲಿಲ್ಲ. ಜನತೆಯೊಂದಿಗೆ ಸಮೀಪ ಸಂಪರ್ಕವಿಟ್ಟುಕೊಂಡಿದ್ದ ಪೂರ್ಣಕಾಲದ ಸುಶಿಕ್ಷಿತ ಕೆಲಸಗಾರರ ದೊಡ್ಡದೊಂದು ಪಡೆ ಸಿದ್ಧವಾಯಿತು. ಜನರಲ್ಲಿ ಆತ್ಮಾವಲಂಬನೆ ಮತ್ತು ಸ್ವಸಾಮರ್ಥ್ಯದ ಭಾವನೆ ಬೇರೂರಿತು. ಕಾಂಗ್ರೆಸ್ ಸದಸ್ಯರು-ಹೆಂಗಸರು, ಗಂಡಸರು-ರೈತರ ಮತ್ತು ಶ್ರಮಜೀವಿಗಳ ಸಂಸ್ಥೆಗಳನ್ನು ಕಟ್ಟುವುದರಲ್ಲಿ ಪ್ರಮುಖ ಭಾಗವಹಿಸಿದರು. ಭಾರತದ ಅತ್ಯಂತ ದೊಡ್ಡ ಸುವ್ಯವಸ್ಥಿತ ಅಹಮದಾಬಾದ್ ಗಿರಣಿ ಕಾಮಗಾರ ಸಂಘ ಸ್ಥಾಪನೆಯಾದುದು ಕಾಂಗ್ರೆಸ್ ಜನರಿಂದ ಕಾಂಗ್ರೆಸ್ಸಿನೊಂದಿಗೆ ಪೂರ್ಣಸಹಕರಿಸಿಯೇ ಅದು ಕೆಲಸಮಾಡಿತು. ಈ ಎಲ್ಲ ಕಾರ್ಯಕ್ರಮಗಳಿಂದ ಕಾಂಗ್ರೆಸ್ಸಿಗೆ ದೊರೆತ ಭದ್ರವಾದ ಹಿನ್ನೆಲೆ ಉಳಿದ ಕೋಮುವಾರು ಸಂಸ್ಥೆ ಯಾವುದಕ್ಕೂ ದೊರೆಯಲಿಲ್ಲ. ಅವುಗಳೆಲ್ಲ ಹುಚ್ಚು ಎದ್ದಾಗ ಅಥವ ಚುನಾವಣೆಗಳ ಸಮಯಬಂದಾಗ ಸ್ವಲ್ಪ ಚಟವಟಿಕೆ ತೋರಿಸಿ ಕೆಲಸ ಮಾಡುತ್ತಿದ್ದವು. ಸರಕಾರದಿಂದ ಸದಾ ಕಾಂಗ್ರೆಸ್ ಜನರಿಗಿದ್ದ ಬಂಧನದ ಭಯವಾಗಲಿ, ವೈಯಕ್ತಿಕ ತೊಂದರೆಯ ಭೀತಿಯಾಗಲಿ ಅವರಿಗೆ ಯಾವುದೂ ಇರಲಿಲ್ಲ. ಆದ್ದರಿಂದ ಅಧಿಕಾರದ ಆಶೆ ಇರುವವರಿಗೆ ಮತ್ತು ಅವಕಾಶಕ್ಕೆ ಹೊಂಚುಹಾಕುವವರಿಗೆ ಈ ಸಂಸ್ಥೆಗಳಲ್ಲಿ ಒಳ್ಳೆಯ ಅವಕಾಶವಿತ್ತು. ಆದರೆ ಅಹರಾರ್ ಮತ್ತು ಜಮಾಯತ್ ಉಲೇಮಾ ಸಂಸ್ಥೆಗಳು ಕಾಂಗ್ರೆಸ್ಸಿನ ರಾಜಕೀಯ ನೀತಿಯನ್ನೇ ಅನುಸರಿಸಿದ್ದರಿಂದ ಅವು ಸಹ ಸರಕಾರದ ಕೋಪಕ್ಕೆ ಈಡಾಗಿ ತುಂಬ ನಷ್ಟ ಅನುಭವಿಸಬೇಕಾಯಿತು.

25

24