ಪುಟ:ಭಾರತ ದರ್ಶನ.djvu/೩೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೫೨

ಭಾರತ ದರ್ಶನ

ದೊಡ್ಡ ಗೋಡೆಯೇ ಬಂದಿತು, ಮುಸ್ಲಿಂ ಲೀಗಿನ ಪ್ರಾಮುಖ್ಯತೆ ನಮಗೆ ತಿಳಿದಿತ್ತು. ಆದ್ದರಿಂದಲೇ ಅದರೊಡನೆ ಒಪ್ಪಂದಕ್ಕೆ ಬರಲು ಯತ್ನಿಸಿದೆವು. ಆದರೆ ದೇಶದಲ್ಲಿನ ಇತರ ಮುಸ್ಲಿಂ ಸಂಸ್ಥೆಗಳನ್ನು, ನಮ್ಮೊಂದಿಗೆ ಸಹಕರಿಸಿ ಹೋರಾಡಿದವರನ್ನು ನಾವು ಮರೆಯುವದೆಂತು ? ಕಾಂಗ್ರೆಸ್ಸಿನಲ್ಲೇ ಮುಸ್ಲಿಮರ ಸಂಖ್ಯೆ ಬೇಕಾದಷ್ಟು ಇತ್ತು; ನಮ್ಮ ಕಾರ್ಯಕಾರಿ ಸಮಿತಿಯಲ್ಲಿ ಸಹ ಇದ್ದರು. ಜಿನ್ನಾ ಬೇಡಿಕೆಯನ್ನು ಒಪ್ಪುವದೆಂದರೆ ನಮ್ಮ ಹಳೆಯ ಕಾಂಗ್ರೆಸ್ ಮುಸ್ಲಿಂ ಸಹೋದ್ಯೋಗಿಗಳನ್ನು ಕಾಂಗ್ರೆಸ್ಸಿನಿಂದ ಹೊರದೂಡಿದಂತೆ; ಕಾಂಗ್ರೆಸ್ಸಿನಲ್ಲಿ ಅವರಿಗೆ ಸ್ಥಾನವಿಲ್ಲ ಎಂದಂತೆ. ಕಾಂಗ್ರೆಸ್ಸಿನ ಮೂಲನೀತಿಯನ್ನೇ ಕೈಬಿಟ್ಟು ಎಲ್ಲರಿಗೂ ತೆರೆದ ರಾಷ್ಟ್ರೀಯ ಸಂಸ್ಥೆಯನ್ನು ಕೋಮುವಾರು ಸಂಸ್ಥೆಯನ್ನಾಗಿ ಮಾಡಿದಂತೆ. ಅದು ಊಹಿಸಲು ಸಹ ನಮ್ಮಿಂದ ಸಾಧ್ಯವಿರಲಿಲ್ಲ. ಕಾಂಗ್ರೆಸ್‌ ಮೊದಲೇ ಇರದಿದ್ದರೆ ಎಲ್ಲ ಭಾರತೀಯರಿಗೂ ಪ್ರವೇಶ ಅವಕಾಶವಿರುವ ಬೇರೊಂದು ರಾಷ್ಟ್ರೀಯ ಸಂಸ್ಥೆಯನ್ನು ನಾವು ಕಟ್ಟಬೇಕಾಗಿತ್ತು.

ಜಿನ್ನಾ ಅದೊಂದೇ ಹಟಹಿಡಿದು ಬೇರೆ ಎಲ್ಲ ವಿಷಯ ಚರ್ಚಿಸಲು ನಿರಾಕರಿಸಿದ್ದನ್ನೂ ಕಂಡು ನಮಗೆ ಅರ್ಥವಾಗಲಿಲ್ಲ. ಯಾವ ಒಪ್ಪಂದವೂ ಆತನಿಗೆ ಬೇಕಿಲ್ಲವೆಂದೂ, ಯಾವ ಖಚಿತ ಅಭಿಪ್ರಾಯವನ್ನೂ ಕೊಡಲು ಸಿದ್ಧನಿಲ್ಲವೆಂದೂ ತೀರ್ಮಾನಕ್ಕೆ ಬಂದೆವು. ಪರಿಸ್ಥಿತಿಯನ್ನು ಹೀಗೆ ಹದಗೆಡಲು ಬಿಟ್ಟೆ ಆತ ತೃಪ್ತಿ ಪಡೆದ. ಪ್ರಾಯಶಃ ಈ ರೀತಿ ಮಾಡುವುದರಿಂದ ಬ್ರಿಟಿಷ್ ಸರಕಾರದಿಂದ ಹೆಚ್ಚು ಸೌಲಭ್ಯ ಪಡೆಯಬಹುದೆಂದು ಯೋಚಿಸಿದ್ದಿರಬಹುದು.

ಜಿನ್ನಾನ ಈ ಬೇಡಿಕೆಗೆ ಭಾರತದಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಬೇರೆ ಬೇರೆ ಎರಡು ಜನಾಂಗಗಳೆಂಬ ಹೊಸ ತತ್ವವೇ ಆಧಾರವಾಯಿತು. ಎರಡೇ ಏಕೋ ನನಗೆ ಅರ್ಥವಾಗಲಿಲ್ಲ. ಜನಾಂಗವೂ ಧರ್ಮವೂ ಒಂದೇ ಆದರೆ ಭಾರತದಲ್ಲಿ ಅನೇಕ ಜನಾಂಗಗಳಿರಬೇಕು. ಇಬ್ಬರೂ ಸಹೋದರರಲ್ಲಿ ಒಬ್ಬನು ಹಿಂದೂ ಇರಬಹುದು, ಇನ್ನೊಬ್ಬನು ಮುಸಲ್ಮಾನನಿರಬಹುದು ; ಆದ ಮಾತ್ರಕ್ಕೆ ಇಬ್ಬರು ಬೇರೆ ಜನಾಂಗದವರು ! ಭಾರತದ ಅಸಂಖ್ಯಾತ ಹಳ್ಳಿಗಳಲ್ಲಿ ಬೇರೆ ಬೇರೆ ಪ್ರಮಾಣದಲ್ಲಿ ಈ ಎರಡು ಜನಾಂಗಗಳೂ ಇದ್ದುವು. ಈ ಜನಾಂಗಗಳಿಗೆ ಗಡಿಯೇ ಇರಲಿಲ್ಲ. ಇದ್ದರೂ ಒಂದರ ಮೇಲೊಂದು. ಬಂಗಾಲದ ಮುಸ್ಲಿಂ ಮತ್ತು ಹಿಂದೂ ಒಂದೇ ಭಾಷೆಯನ್ನು ಮಾತನಾಡುತ್ತ, ಒಂದೇ ಸಂಪ್ರದಾಯ ಮತ್ತು ಪದ್ದತಿ ಯಲ್ಲಿ ಒಟ್ಟಿಗೆ ಜೀವಿಸುತ್ತಿದ್ದರೂ ಎರಡು ಜನಾಂಗದವರು ! ಇವೆಲ್ಲ ಸುಲಭವಾಗಿ ಅರ್ಥವಾಗಲಿಲ್ಲ. ಯಾವುದೋ ಒಂದು ಮಧ್ಯ ಯುಗಕ್ಕೆ ಹೋದಂತೆ ಕಂಡಿತು. ಜನಾಂಗವೆಂದರೆ ಏನೆಂದು ವಿವರಿಸುವುದು ಸುಲಭವಲ್ಲ. ಪ್ರಾಯಶಃ ರಾಷ್ಟ್ರೀಯ ಭಾವನೆಯ ಮುಖ್ಯಗುಣ ಏಕೀಭಾವನೆ ಮತ್ತು ಉಳಿದ ಮಾನವ ಜನಾಂಗಗಳನ್ನು ಅದೇ ಒಂದೇ ದೃಷ್ಟಿಯಿಂದ ನೋಡುವುದು. ಭಾರತದಲ್ಲಿ ಆ ದೃಷ್ಟಿ ಎಷ್ಟಿದೆ ಎನ್ನುವುದು ಚರ್ಚಾಸ್ಪದವಿರಬಹುದು. ಪ್ರಾಯಶಃ ಹಿಂದೆ ಭಾರತದಲ್ಲಿ ಉಪರಾಷ್ಟ್ರ ಭಾವನೆಯು ಇದ್ದು ಕ್ರಮೇಣ ಒಂದು ರಾಷ್ಟ್ರೀಯ ಭಾವನೆಯು ಬೆಳೆದಿರಬಹುದು. ಈ ತಾತ್ವಿಕ ಚರ್ಚೆ ಈಗ ಅನವಶ್ಯಕ. ಪ್ರಪಂಚದ ಇಂದಿನ ಅತ್ಯಂತ ಬಲಿಷ್ಟ ರಾಷ್ಟ್ರಗಳಾದ ಸಂಯುಕ್ತ ಅಮೆರಿಕ ಸಂಸ್ಥಾನಗಳು ಮತ್ತು ಸೋವಿಯಟ್ ರಷ್ಯ ಅನೇಕ ಜನಾಂಗಗಳ ರಾಜ್ಯಗಳಾದರೂ ಒಂದು ಉನ್ನತ ರಾಷ್ಟ್ರೀಯ ಭಾವನೆಯನ್ನು ಬೆಳೆಸಿವೆ.

ಜನಾಬ್ ಜಿನ್ನಾನ ಎರಡು ಜನಾಂಗಗಳ ತತ್ವವೇ ಭಾರತದ ವಿಭಜನೆಗೆ ಪಾಕಿಸ್ತಾನದ ಯೋಜನೆಗೆ ಮೂಲ. ಎರಡು ಜನಾಂಗಗಳ ಪ್ರಶ್ನೆಯನ್ನು ಅದೂ ಬಗೆಹರಿಸಲಿಲ್ಲ; ಏಕೆಂದರೆ ಎಲ್ಲ ಕಡೆಯೂ ಆ ಪ್ರಶ್ನೆ ಇದ್ದೇ ಇತ್ತು. ಆದರೆ ಅದರಿಂದ ಒಂದು ತಾತ್ವಿಕಕಲ್ಪನೆಗೆ ರೂಪಕೊಟ್ಟಂತಾಯಿತು. ಭಾರತದ ಐಕ್ಯತೆ ಒಡೆಯಲು ಅವಕಾಶಕೊಡಬಾರದೆಂದು ಅನೇಕರಲ್ಲಿ ಒಂದು ವಿರೋಧಭಾವನೆಗೆ, ಒಂದು ಭಾವೋದ್ರೇಕಕ್ಕೆ ಅವಕಾಶವಾಯಿತು. ಸಾಮಾನ್ಯವಾಗಿ ಭಾರತದ ಐಕ್ಯತೆಯು ಎಲ್ಲರಿಗೂ ಸಮ್ಮತವಿತ್ತು, ಆದರೆ ಆದಕ್ಕೆ ವಿರೋಧ ಬಂದಾಗ, ಪೆಟ್ಟು ಬಿದ್ದಾಗ, ಅದನ್ನು ಸಡಿಲಿಸಲು ಯತ್ನ ಮಾಡಿದಾಗ ಆ ಐಕ್ಯತೆಯ ಮಹತ್ವ ತಿಳಿಯುತ್ತದೆ. ಮತ್ತು ಅದನ್ನು ಏನೇಬರಲಿ ಕಾಪಾಡಬೇಕೆಂಬ ಹಟ ಹುಟ್ಟುತ್ತದೆ.

ಕಾಂಗ್ರೆಸ್ಸಿನ ದೃಷ್ಟಿಕೋನಕ್ಕೂ ಮತ್ತು ಇತರ ಕೋಮುವಾರು ಸಂಸ್ಥೆಗಳ ದೃಷ್ಟಿಕೋನಕ್ಕೂ ಮೂಲದಲ್ಲೇ ವ್ಯತ್ಯಾಸವಿತ್ತು, ಮುಖ್ಯ ಕೋಮುವಾರು ಸಂಸ್ಥೆಗಳಿಂದ ಮುಸ್ಲಿಂಲೀಗ್ ಮತ್ತು ಅದರ