ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅಹಮದ್ ನಗರದ ಕೋಟೆ
೧೯

ಆದರೂ ನಾನು ಬರೆಯಲಿಲ್ಲ. ಯಾವ ಒಂದು ವಿಶಿಷ್ಟ ಅರ್ಥವಿಲ್ಲದ ಗ್ರಂಥವನ್ನು ಸುಮ್ಮನೆ ಬರೆದೊಗೆಯಲು ಮನಸ್ಸು ಒಪ್ಪಲಿಲ್ಲ, ಬರೆಯುವುದೇನೋ ಸುಲಭವಿತ್ತು, ಆದರೆ ಏನಾದರೂ ಅರ್ಥಗರ್ಭಿತ ಪರಿಣಾಮಕಾರಿಯಾದ ಬರೆವಣಿಗೆ ಮತ್ತು ನಾನು ಸೆರೆಮನೆಯಲ್ಲಿ ಹಸ್ತಪ್ರತಿಯನ್ನಿಟ್ಟು ಕೊಂಡು ಕೊಳೆಯುತ್ತ ಕುಳಿತು ಪ್ರಪಂಚವೇ ಬದಲಾಯಿಸುತ್ತ ಹೋದರೂ ಹಳೆತಾಗದ ಬರೆವಣಿಗೆ ಬೇರೆ ವಿಷಯ. ನಾನು ಬರೆಯುವುದು ಇಂದು ನಾಳೆಗಳಿಗಲ್ಲ, ಪ್ರಾಯಶಃ ಬಹುದೂರದ ಅವ್ಯಕ್ತ ಭವಿಷ್ಯತ್ತಿಗೆ, ಹಾಗಾದರೆ ಯಾರಿಗೆ ಬರೆಯುವುದು ಮತ್ತು ಯಾವ ಕಾಲಕ್ಕಾಗಿ ? ಪ್ರಾಯಶಃ ನಾನು ಬರೆಯುವುದು ಬೆಳಕನ್ನೇ ಕಾಣದಿರಬಹುದು. ಏಕೆಂದರೆ ಮುಗಿದ ಯುದ್ಧದ ವರ್ಷಗಳಿಗಿಂತ ನಾನು ಸೆರೆಮನೆಯಲ್ಲಿ ಕಳೆಯುವ ವರ್ಷಗಳಲ್ಲಿ ಇನ್ನೂ ಮಹದ್ವಿಪ್ಲವಗಳನ್ನು ಕಾಣಬಹುದು. ಇಂಡಿಯಾ ದೇಶವೇ ಒ೦ದು ರಂಗಭೂಮಿಯಾಗಬಹುದು ಮತ್ತು ದೇಶದಲ್ಲಿ ಅಂತಃಕಲಹಗಳು ಹುಟ್ಟ ಬಹುದು.

ಈ ಎಲ್ಲ ಸನ್ನಿವೇಶಗಳಿಂದ ನಾವು ಪಾರಾದರೂ, ಇಂದಿನ ಸಮಸ್ಯೆಗಳು ಸತ್ತು ಮಣ್ಣು ಗೂಡಿ ಹೊಸ ಸಮಸ್ಯೆಗಳೆದ್ದ ಒಂದು ಭವಿಷ್ಯ ಕಾಲಕ್ಕೆ ಬರೆಯುವದಂತೂ ಅತಿ ಸಾಹಸದ ಕೆಲಸ. ಈ ಪ್ರಪಂಚ ಯುದ್ಧವನ್ನು ಒಂದು ದೊಡ್ಡ, ಮಹತ್ಸಮಾಣದ ಯುದ್ಧ ಎಂದು ಮಾತ್ರ ಭಾವಿಸಲಾರೆ, ಅದು ಆರಂಭ ವಾದಂದಿನಿಂದ ಅಥವಾ ಅದಕ್ಕೂ ಮುಂಚೆಯೆ, ಅಸಾಧ್ಯವಾದ ಕ್ರಾಂತಿಕಾರಕ ಬದಲಾವಣೆಗಳಾಗುತ್ತವೆ, ಒಳ್ಳೆಯದಕ್ಕೂ ಕೆಟ್ಟದ ಒಂದು ನೂತನ ಪ್ರಪಂಚ ಸೃಷ್ಟಿಯಾಗುತ್ತದೆ ಎಂಬ ಮು೦ಬರಿವು ನನಗಿತ್ತು. ಹಾಗಾದರೆ ಕಣ್ಮರೆಯಾದ ಗತಕಾಲದ ವಿಷಯದ ನನ್ನ ಅಲ್ಪ ಬರೆವಣಿಗೆಗೆ ಏನು ಬೆಲೆ ?

ಈ ಎಲ್ಲ ಯೋಚನೆಗಳು ನನ್ನ ನ್ನು ಬಾಧಿಸಿ ಹಿಡಿಯುತ್ತಿದ್ದವು. ಆದರೆ ಅವುಗಳ ಹಿಂದೆ ನನ್ನ ಮನಸ್ಸಿನ ಅಂತರಾಳದಲ್ಲಿದ್ದ ಗಾಢ ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯುವುದೂ ಕಷ್ಟವಿತ್ತು,

ಆರು ವರ್ಷಗಳಿಗೆ ಮುಂಚೆ ನನ್ನ ಆತ್ಮಕಥೆಯನ್ನು ಬರೆದ ಡೆಹ್ರರ್ಡೂ ಸೆರೆಮನೆಯಲ್ಲಿ ನನ್ನ ಹಳೆಯ ಕೊಠಡಿಯಲ್ಲಿ ೧೯೪೦ ನೇ ಅಕ್ಟೋಬರ್ ನಿಂದ ೧೯೪೧ನೇ ಡಿಸೆಂಬರ್‌ವರೆಗೆ ನನ್ನ ಹಿಂದಿನ ಸೆರೆಮನೆ ವಾಸ ಅನುಭವಿಸಿದಾಗಲೂ ಇದೇ ತೊಂದರೆ, ಯೋಚನೆಗಳು ತೋರಿದ್ದವು. ಹತ್ತು ತಿಂಗಳ ಕಾಲ ಬರೆಯಬೇಕೆಂಬ ಉತ್ಸಾಹವೇ ಬರಲಿಲ್ಲ, ನೆಲವನ್ನಗೆದು ಹೂತೋಟ ಬೆಳೆಸುವುದರಲ್ಲಿ, ಆಗಾಗ ಓದುವುದರಲ್ಲಿ ಕಾಲಕಳೆದೆ. ಕೊನೆಯಲ್ಲಿ ಬರೆದೂ ಬರೆದೆ. ನನ್ನ ಆತ್ಮಕಥೆಯ ಅನುಬಂಧವಾಗಿರಬೇಕಂದು ಬರೆದೆ. ಕೆಲವು ದಿನ ಎಡೆಬಿಡದೆ ಬಹುವೇಗದಿಂದ ಬರೆದೆ, ಆದರೆ ಅದು ಮುಗಿಯುವುದರ ಒಳಗೆ ನನ್ನ ನಾಲ್ಕು ವರ್ಷಗಳ ಶಿಕ್ಷೆ ಮುಗಿಯುವ ಅತಿಪೂರ್ವದಲ್ಲಿಯೇ ನನ್ನ ಬಿಡುಗಡೆಯಾಯಿತು.

ನಾನು ಅದನ್ನು ಮುಗಿಸದಿದ್ದುದೇ ಒಳ್ಳೆಯದಾಯಿತು. ಇಲ್ಲದಿದ್ದರೆ ಯಾರಿಗಾದರೂ ಪ್ರಕಟನಕಾರನಿಗೆ ಕಳುಹಿಸಬೇಕಿತ್ತು. ಈಗ ನೋಡಿದರೆ ಅದರ ಅಲ್ಪ ಬೆಲೆ ಗೊತ್ತಾಗುತ್ತದೆ; ಎಷ್ಟು ಸ್ವಾರಸ್ಯವಿಲ್ಲದ್ದು, ಹಳಸಿದ್ದು ಎಂದು ಗೊತ್ತಾಗುತ್ತದೆ. ಅದರಲ್ಲಿ ಬರೆದ ಘಟನೆಗಳಿಗೆ ಈಗ ಎಲ್ಲ ಬೆಲೆಯೂ ಹೋಗಿದೆ. ಜ್ವಾಲಾಮುಖಿಯ ಸ್ಫೋಟನದಿಂದ ಉದ್ಭವಿಸಿದ ಅಗ್ನಿ ಪ್ರವಾಹದಿಂದ ಹೂತುಹೋದ ಮರೆತ ಪಳೆಯುಳಿಕೆಗಳಾಗಿವೆ. ಈಗ ನನಗೆ ಅವುಗಳಲ್ಲಿ ಯಾವ ಆಸಕ್ತಿಯೂ ಇಲ್ಲ. ಈಗ ನನ್ನ ಮನಸ್ಸಿನಲ್ಲಿ ಉಳಿದಿರುವುದು ನನ್ನ ಮೇಲೆ ಪರಿಣಾಮಮಾಡಿದ ವೈಯಕ್ತಿಕ ಅನುಭವಗಳು, ಕೆಲವು ವ್ಯಕ್ತಿಗಳ ಮತ್ತು ಘಟನೆಗಳ ಸಂಬಂಧಗಳು, ಅಪಾರ ವೈವಿಧ್ಯವಿದ್ದರೂ ಆಶ್ಚರ್ಯಕರವಾದ ಏಕತೆಯುಳ್ಳ ಇಂಡಿಯದ ಜನಕೋಟಿಯ ಜನಸಮುದಾಯಗಳ ಬಾಂಧವ್ಯ, ಕೆಲವು ಮನೋಸಾಹಸಗಳು, ಅವುಗಳಲ್ಲಿ ಜಯ ದೊರೆತಾಗ ಅಲೆಅಲೆಯಾಗಿ ಬಂದ ದುಃಖ, ಸಮಾಧಾನ, ಸಂತೋಷಗಳು, ಕಾರ್ಯ ಸಮಯದ ಒಂದು ಉಲ್ಲಾಸ, ಇವುಗಳ ವಿಷಯ ಎಷ್ಟಾದರೂ ಬರೆಯಬಹುದು. ನಮ್ಮ ಆಂತರಿಕ ಜೀವನ, ಭಾವನೆಗಳು, ಯೋಚನೆಗಳ ವಿಷಯದಲ್ಲಿ ಇತರರಿಗೆ ತಿಳಿಸಲಾಗದ ಅಥವ ತಿಳಿಸಬಾರದ ಒಂದು ಆತ್ಮೀಯತೆ ಇದೆ. ಆದರೂ ವೈಯಕ್ತಿಕ ಅಥವ ವ್ಯಕ್ತಿರಹಿತ ಅನುಭವಗಳು ಅತಿ ಮುಖ್ಯ. ವ್ಯಕ್ತಿಯಮೇಲೆ ಅಗಾಧ ಪರಿಣಾಮಮಾಡಿ, ತಿದ್ದುವುದಲ್ಲದೆ ತನ್ನ ಜೀವನ, ದೇಶ, ಮತ್ತು ಇತರ ಜನಾಂಗಗಳಿಗೆ ಆತನ ಪ್ರತಿಕ್ರಿಯೆಯನ್ನೇ ಬದಲಾಯಿಸುತ್ತದೆ.