ಪುಟ:ಭಾರತ ದರ್ಶನ.djvu/೩೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೬೪

ಭಾರತ ದರ್ಶನ

ಗಾಂಧಿಜಿ ಸ್ವಯಂ ಕಲ್ಪಿತ ಕಲ್ಪನಾ ಪ್ರಪಂಚದಲ್ಲಿ ಜೀವನದಿಂದ ಮತ್ತು ಜೀವನದ ಸಮಸ್ಯೆಗಳಿಂದ ದೂರವಿರುವ ಕನಸುಗಾರರಲ್ಲ. ಕಾಸಿಗೆ ಕಾಸು ಲೆಕ್ಕ ಹಾಕುವ ಕಿಲುಬು ಕೋಮಟಿಗಳತೌರುಮನೆಯಾದ ಗುಜರಾತದಿಂದ ಬಂದವರು. ಭಾರತದ ಹಳ್ಳಿಗಳ ಜ್ಞಾನ, ಮತ್ತು ಅಲ್ಲಿನ ಜೀವನದ ರೀತಿ ಅವರಿಗೆ ತಿಳಿದಂತೆ ಬೇರೆ ಯಾರಿಗೂ ತಿಳಿದಿರಲಿಲ್ಲ. ತಮ್ಮ ವೈಯಕ್ತಿಕ ಅನುಭವದಿಂದ ರಾಟೆ ಮತ್ತು ಗ್ರಾಮ ಕೈಗಾರಿಕೆಯ ಕಾಠ್ಯಕ್ರಮವನ್ನು ಯೋಜಿಸಿದರು. ಅಸಂಖ್ಯಾತ ನಿರುದ್ಯೋಗಿಗಳಿಗೆ ಮತ್ತು ಅತಿ ಉದ್ಯೋಗಿಗಳಿಗೆ ತ್ವರಿತ ಸಹಾಯಮಾಡಬೇಕಾದರೆ, ಭಾರತಾದ್ಯಂತ ಹರಡಿ ಜನ ಜೀವನವನ್ನೇ ನಿಶ್ಚ ತನಗೊಳಿಸುತ್ತಿರುವ ಸೀಡೆ ತೊಲಗಬೇಕಾದರೆ, ಎಷ್ಟೇ ಅಲ್ಪವಾಗಲಿ ಸಾಮೂಹಿಕವಾಗಿ ಗ್ರಾಮಸ್ಥನ ಜೀವನಮಟ್ಟ ಏರಬೇಕಾದರೆ, ಅನಾಥರಂತೆ ಇತರರ ಭಿಕ್ಷೆಗಾಗಿ ನಿಸ್ಸಹಾಯಕತೆಯಿಂದ ಕಾಯುವುದುತಪ್ಪಿ ಆತ್ಮಾವಲಂಬಿಗಳಾಗಬೇಕಾದರೆ, ಹೆಚ್ಚು ಬಂಡವಾಳವಿಲ್ಲದೆ ಇವೆಲ್ಲವನ್ನೂ ಸಾಧಿಸಬೇಕಾದರೆ, ಬೇರೆ ಯಾವ ಉಪಾಯವೂ ಇರಲಿಲ್ಲ. ಪರದಾಸ್ಯ ಮತ್ತು ಅದರ ಸುಲಿಗೆಯಿಂದಾಗುವ ಅನರ್ಥಗಳು, ದೊಡ್ಡ ದೊಡ್ಡ ಸುಧಾರಣಾ ಯೋಜನೆಗಳನ್ನು ಆರಂಭಿಸಿ ಮುಂದುವರಿಸಲು ಸ್ವಾತಂತ್ರ್ಯದ ಅಭಾವ, ಈ ಕೊರತೆಗಳಲ್ಲದೆ ಭಾರತದ ಇನ್ನೊಂದು ದೊಡ್ಡ ಕೊರತೆ ಎಂದರೆ ಬಂಡವಾಳದ ಅಭಾವ, ಅಸಂಖ್ಯಾತ ನಿರುದ್ಯೋಗಿಗಳ ಪ್ರಶ್ನೆ. ಯಾವ ಉಪಯೋಗವೂ ಇಲ್ಲದೆ ವೃಥಾವಯವಾಗುತ್ತಿರುವ ಈ ಜನಬಲವನ್ನು ಉಪಯೋಗಮಾಡಿ ಕೊಳ್ಳುವುದು ಹೇಗೆ ? ದೊಡ್ಡ ಯಂತ್ರ ಸಾವಿರ ಅಥವ ಹತ್ತು ಸಾವಿರ ಜನರ ಕೆಲಸ ಮಾಡಬಹುದು. ಆದರೆ ಆ ಸಾವಿರ ಅಥವ ಹತ್ತು ಸಾವಿರ ಜನ ಕೈ ಕಟ್ಟಿಕೊಂಡು ಕುಳಿತರೆ ಆ ಯಂತ್ರದ ಉಪಯೋಗ ಸಮಾಜಕ್ಕೆ ಲಾಭದಾಯಕವಲ್ಲ. ಸಾಮಾಜಿಕ ಪರಿಸ್ಥಿತಿಯೇ ಬದಲಾಯಿಸಿದಾಗ ಉಪಯುಕ್ತವಾದೀ ತೆಂಬ ದೂರದೃಷ್ಟಿಯಿಂದ ಲಾಭವಾದರೂ ಆಗಬಹುದು. ದೊಡ್ಡ ಕೈಗಾರಿಕೆಗಳೇ ದೇಶದಲ್ಲಿ ಇಲ್ಲದಿರು ವಾಗ ಹೋಲಿಕೆಯಿಂದ ಯಾವ ಪ್ರಯೋಜನವೂ ಇಲ್ಲ. ವ್ಯಕ್ತಿ ಮತ್ತು ರಾಷ್ಟ್ರ ಎರಡರ ದೃಷ್ಟಿಯಿಂದ ಇರುವ ಜನಶಕ್ತಿಯನ್ನು ವಸ್ತು ನಿರ್ಮಾಣಕ್ಕೆ ಉಪಯೋಗಿಸಿಕೊಳ್ಳುವುದು ಒಟ್ಟಿನಲ್ಲಿ ಲಾಭದಾಯಕ. ಆದರೆ ಯಂತ್ರೋಪಕರಣದ ಉಪಯೋಗವಲ್ಲ. ನಿರುದ್ಯೋಗಿಗಳನ್ನು ಹೆಚ್ಚಿಸುವ ಬದಲು, ಹೆಚ್ಚು ನಿರುದ್ಯೋಗಿಗಳಿಗೆ ಕೆಲಸ ಒದಗಿಸುವುದಾದರೆ ದೊಡ್ಡ ಪ್ರಮಾಣದ ಯಂತ್ರಗಳ ಉಪಯೋಗಕ್ಕೂ ಗಾಂಧಿ ತತ್ವಕ್ಕೂ ಯಾವ ಘರ್ಷಣೆಯೂ ಇಲ್ಲ.

ಇಂಡಿಯಾ ದೇಶವನ್ನು ಕೈಗಾರಿಕಾ ಪ್ರಗತಿಯಲ್ಲಿ ಮುಂದುವರಿದ ಪಾಶ್ಚಿಮಾತ್ಯದ ಸಣ್ಣ ದೇಶಗಳೊಂದಿಗೆ ಆಗಲಿ ಅಥವ ಬಹಳ ಕಡಮೆ ಜನಸಂಖ್ಯೆ ಇರುವ ವಿಶಾಲ ರಾಷ್ಟ್ರಗಳಾದ ಸಂಯುಕ್ತ ಸಂಸ್ಥಾನಗಳು ಅಥವ ಸೋವಿಯಟ್ ರಷ್ಯ ಇವುಗಳೊಂದಿಗೆ ಆಗಲಿ ಹೋಲಿಸುವುದು ಸರಿಯಲ್ಲ. ಪಶ್ಚಿಮ ಯೂರೋಪಿನಲ್ಲಿ ಕಳೆದ ಒಂದು ಶತಮಾನದಿಂದ ಕೈಗಾರಿಕಾ ಪ್ರಗತಿ ಮುಂದುವರಿದಿದೆ; ಜನತೆಯು ಕ್ರಮೇಣ ಅದಕ್ಕೆ ಹೊಂದಿಕೊಂಡಿದೆ. ಜನಸಂಖ್ಯೆ ಬೇಗ ಬೆಳೆದಿದೆ ; ಅನಂತರ ಸ್ತಿಮಿತಕ್ಕೆ ಬಂದು ಈಗ ಕಡಮೆ ಯಾಗುತ್ತಿದೆ. ಸಂಯುಕ್ತ ಸಂಸ್ಥಾನಗಳು ಮತ್ತು ಸೋವಿಯಟ್ ರಷ್ಯದಲ್ಲಿ ವಿಶಾಲ ಪ್ರದೇಶಗಳಲ್ಲಿ ಜನ ಸಂಖ್ಯೆಯೇ ತೀರ ಕಡಮೆ. ವ್ಯವಸಾಯದ ಭೂಮಿಯ ಉಳುಮೆಗೆ ಟ್ರಾಕ್ಟರ್ ಅವಶ್ಯಕ. ಎಲ್ಲಿಯವರೆಗೆ ಅಸಂಖ್ಯಾತ ಜನರ ಜೀವನಕ್ಕೆ ವ್ಯವಸಾಯವೇ ಆಧಾರವಾಗಿರುತ್ತದೆಯೋ ಅಲ್ಲಿಯವರೆಗೆ ವಿಶೇಷ ದಟ್ಟ ಜನಸಂಖ್ಯೆಯ ಗಂಗಾನದಿ ಕಣಿವೆಯ ಜನರಿಗೆ ಟ್ರಾಕ್ಟರ್‌ನ ಅವಶ್ಯಕತೆ ಇಲ್ಲ. ಅಮೆರಿಕಾದಲ್ಲಿ ಎದ್ದಂತೆ ಇತರ ಪ್ರಶ್ನೆಗಳು ಇಲ್ಲಿಯೂ ಏಳುತ್ತವೆ. ಇಂಡಿಯಾದೇಶದಲ್ಲಿ ಸಾವಿರಾರು ವರ್ಷಗಳ ವ್ಯವಸಾಯದಿಂದ ಭೂಮಿಯ ಸಾರ ಕಡಮೆಯಾಗಿದೆ. ಟ್ರಾಕ್ಟರುಗಳಿಂದ ಈ ಭೂಮಿಯನ್ನು ಆಳವಾಗಿ ಉತ್ತು ಕೆಳಗು ಮೇಲುಮಾಡಿದರೆ ಭೂಮಿಯ ಸಾರ ಇನ್ನೂ ಕಡಿಮೆಯಾಗುವುದಲ್ಲದೆ ಭೂಮಿ ಕೊರಕಲುಬೀಳಲು ಸಹಾಯವಾಗುತ್ತದೆಯೆ? ಇಂಡಿಯಾದೇಶದಲ್ಲಿ ರೈಲುದಾರಿಗಳಿಗೆಂದು ದೊಡ್ಡ ದೊಡ್ಡ ಏರಿಗಳನ್ನು ಹಾಕಿದಾಗ ಭೂಮಿಯ ನೀರುದಾರಿಗೆ ಯಾವ ಗಮನವನ್ನೂ ಕೊಡಲಿಲ್ಲ. ಈ ಏರಿಗಳು ನೀರುದಾರಿಗಳಿಗೆ ಅಡ್ಡಬಂದ ಪರಿಣಾಮವಾಗಿ ಮೇಲಿಂದಮೇಲೆ ಪ್ರವಾಹದ ಅನಾಹುತಗಳೂ, ಭೂಮಿ ಕೊರಕಲು ಬೀಳುವುದೂ, ಮಲೇರಿಯಾ ರೋಗವೂ ಹೆಚ್ಚಿದವು.