ಹಡಗುಗಳ ನಿರ್ಮಾಣ, ಎಂಜಿನ್ಗಳ ತಯಾರಿಕೆಗೆ ಪ್ರೋತ್ಸಾಹ ದೊರೆಯದೆ ನಿಂತು ಹೋದುದರ ಜೊತೆಗೆ ಮೋಟಾರು ಕಾರು ತಯಾರಿಕೆಗೆ ಮಾಡಿದ ಪ್ರಯತ್ನಕ್ಕೂ ಅಡ್ಡಿ ಬಂದರು. ಎರಡನೆಯ ಪ್ರಪಂಚ ಯುದ್ದಕ್ಕೆ ಮೊದಲು ಇದಕ್ಕೆ ಎಲ್ಲ ಪ್ರಯತ್ನ ಮಾಡಲಾಗಿತ್ತು. ಅಮೆರಿಕೆಯ ಒಂದು ಪ್ರಸಿದ್ದ ಕಾರು ತಯಾರಿಕೆಯ ಕಾರ್ಖಾನೆಯ ಸಹಾಯ ದೊರೆತು ಎಲ್ಲ ಸಿದ್ಧತೆಯೂ ಆಗಿತ್ತು. ಭಾರತದಲ್ಲಿ ಆಗಲೇ ಕೆಲವು ಜೋಡಣೆ ಕಾರ್ಖಾನೆಗಳು ಕೆಲಸ ಮಾಡುತ್ತಿದ್ದವು. ಈಗ ಭಾರತೀಯ ಬಂಡವಾಳ, ಆಡಳಿತ ಮತ್ತು ಅಧಿಕಾರಿವರ್ಗದ ನೇತೃತ್ವದಲ್ಲಿ ಎಲ್ಲ ಭಾಗಗಳನ್ನೂ ಇಲ್ಲಿಯೇ ತಯಾರಿಸಲು ಪ್ರಯತ್ನ ನಡೆದಿತ್ತು. ಅಮೆರಿಕೆಯ ಕಂಪೆನಿಯವರೊಡನೆ ಆದ ಒಪ್ಪಂದದ ಪ್ರಕಾರ ಅವರ ತಯಾರಿಕಾ ವಿಧಾನ, ಆರಂಭದಲ್ಲಿ ಉದ್ಯೋಗ ಕುಶಲರ ಮೇಲ್ವಿಚಾರಣೆ ದೊರೆತಿದ್ದವು. ಮುಂಬೈ ಸರಕಾರದ ಕಾಂಗ್ರೆಸ್ ಮಂತ್ರಿಮಂಡಲ ಎಲ್ಲ ಬಗೆಯ ಸೌಕಯ್ಯ ಕೊಡಲು ಒಪ್ಪಿತ್ತು. ಈ ಉದ್ಯಮದಲ್ಲಿ ರಾಷ್ಟ್ರೀಯ ಯೋಜನಾ ಸಮಿತಿ ಸಹ ತುಂಬ ಆಸಕ್ತಿ ವಹಿಸಿತ್ತು. ಉಳಿದ ಎಲ್ಲ ಸಿದ್ಧತೆಯೂ ಪೂರ್ಣವಾಗಿ ಯಂತ್ರೋಪಕರಣ ತರಿಸುವುದು ಮಾತ್ರ ಉಳಿದಿತ್ತು. ಇಂಗ್ಲೆಂಡಿನ ಭಾರತ ಶಾಖೆಯ ಕಾವ್ಯದರ್ಶಿ ಈ ಪ್ರಯತ್ನಕ್ಕೆ ನಕಾರ ಹೇಳಿ, ಯಂತ್ರೋಪಕರಣ ತರಿಸಲು ಅವಕಾಶಕೊಡಲಿಲ್ಲ. ಈ ಕಾರ್ಖಾನೆಯ ಸ್ಥಾಪನೆ ಎಂದರೆ ಯುದ್ಧಕ್ಕೆ ಅತ್ಯವಶ್ಯಕವಾದ ಯಂತ್ರೋಪಕರಣಗಳು ಮತ್ತು ಕೂಲಿಗಾರರನ್ನು ಬೇರೆ ಕಡೆಗೆ ತಿರುಗಿಸಿದಂತೆ” ಎಂದು ಆತನ ಅಭಿಪ್ರಾಯ. ಇದು ನಡೆದದು ಯುದ್ಧಾರಂಭದ ಬ್ರಿಟಿಷ್ ಬಡಾಯಿದಿನಗಳಲ್ಲಿ ಬೇಕಾದಷ್ಟು ಜನ ಕೂಲಿಗಾರರೂ, ಕುಶಲ ಕರ್ಮಿಗಳೂ ಕೆಲಸವಿಲ್ಲದೆ ಕಾಲಹರಣಮಾಡುತ್ತಿದ್ದಾರೆಂದು ತೋರಿಸಲಾಯಿತು. ಯುದ್ಧದ ಅವಶ್ಯಕತೆಯೇ ಒಂದು ಬಲವಾದ ಸಮರ್ಥನೆಯಾಯಿತು; ಏಕೆಂದರೆ ಮೋಟಾರ್ ಸಾರಿಗೆ ಹೆಚ್ಚಿತು. ಆದರೆ ಲಂಡನ್‌ನಲ್ಲಿ ಕುಳಿತಿದ್ದ ಈ ಭಾರತಲಾಖೆಯ ಕಾರ್ಯದರ್ಶಿ ಮಾತ್ರ ಕದಲಲಿಲ್ಲ. ಅಮೆರಿಕೆಯ ಇನ್ನೊಂದು ಪ್ರಬಲ ಎದುರಾಳಿ ಸಂಸ್ಥೆ ಸಹ ಭಾರತದಲ್ಲಿ ಬೇರೆಯವರ ಅಧೀನದಲ್ಲಿ ಮೋಟಾರು ಕೈಗಾರಿಕೆ ಸ್ಥಾಪಿಸಲು ಒಪ್ಪಲಿಲ್ಲವೆಂದೂ ತಿಳಿಯಿತು.
ಭಾರತದಲ್ಲಿ ಯುದ್ಧ ಕಾಲದಲ್ಲಿ ಸಾರಿಗೆಯು ಒಂದು ದೊಡ್ಡ ಪ್ರಶ್ನೆಯಾಯಿತು. ಮೋಟಾರ್ ಗಾಡಿಗಳು, ಪೆಟ್ರೋಲ್, ರೈಲ್ವೆ ಎಂಜಿನ್ ಗಳು, ರೈಲ್ವೆ ವ್ಯಾಗನ್‌ಗಳು, ಕೊನೆಗೆ ಕಲ್ಲಿದ್ದಲು ಎಲ್ಲಕ್ಕೂ ಅಭಾವವಾಯಿತು. ಭಾರತದ ಪರವಾಗಿ ಯುದ್ಧಕ್ಕೆ ಮುಂಚೆಯೇ ತಯಾರಿಸಿದ ಉದ್ಯಮಗಳನ್ನು ಸರಕಾರವು ಪ್ರೋತ್ಸಾಹಿಸಿದ್ದರೆ ಇದಕ್ಕೆ ಯಾವ ಕೊರತೆಯೂ ಉಂಟಾಗುತ್ತಿರಲಿಲ್ಲ. ರೈಲ್ವೆ ಎಂಜಿನ್‌ಗಳು, ಗಾಡಿಗಳು, ಮೋಟಾರ್ ಗಾಡಿಗಳು, ಸಶಸ್ತ್ರ ಮೋಟಾರ್ ಗಾಡಿಗಳನ್ನು ಸಹ ಇಲ್ಲಿಯೇ ತಯಾರಿಸಬಹುದಿತ್ತು. ಪವರ್ ಆಲೊಹಾಲ್ ತಯಾರಿಸಿದ್ದರೆ ಪೆಟ್ರೋಲಿನ ಅಭಾವ ಕಡಮೆಮಾಡಬಹುದಿತ್ತು. ಕಲ್ಲಿದ್ದಲಿಗೆ ಭಾರತದಲ್ಲಿ ಕೊರತೆ ಇರಲಿಲ್ಲ; ಆದರೆ ಅದನ್ನು ತೆಗೆಯುತ್ತಿದ್ದುದೇ ಸ್ವಲ್ಪ, ಕಲ್ಲಿದ್ದಲಿಗೆ ಬೇಕಾದಷ್ಟು ಗಿರಾಕಿ ಇದ್ದರೂ ಯುದ್ಧ ಕಾಲದಲ್ಲಿ ಗಣಿಯಿಂದ ತೆಗೆಯುವುದೇ ಕಡಮೆಯಾಗಿತ್ತು. ಗಣಿಗಳಲ್ಲಿ ಕೂಲಿಗಾರರ ಕೂಲಿ ಮತ್ತು ಜೀವನರೀತಿ ಬಹಳ ಕಠಿನವಿದ್ದುದರಿಂದ ಕೂಲಿಗಾರರು ಬರುತ್ತಿರಲಿಲ್ಲ. ಹೆಂಗಸರು ಹೊಟ್ಟೆಗಿಲ್ಲದೆ ಕಡಿಮೆ ಕೂಲಿಗೆ ಬರುತ್ತಿದ್ದುದರಿಂದ ಹೆಂಗಸರ ಮೇಲಿದ್ದ ನಿರ್ಬಂಧ ತೆಗೆದರು. ಕಲ್ಲಿದ್ದಲು ಕೈಗಾರಿಕೆಯನ್ನು ಉತ್ತಮಪಡಿಸುವುದಕ್ಕೆ ಆಗಲಿ, ಕೂಲಿಗಾರರ ಕೂಲಿ ಮತ್ತು ಜೀವನ ಸೌಕಯ್ಯ ಹೆಚ್ಚಿಸಿ ಕೂಲಿ ಗಾರರನ್ನು ಆಕರ್ಷಿಸುವುದಕ್ಕೆ ಆಗಲಿ ಯಾವ ಪ್ರಯತ್ನವೂ ನಡೆಯಲಿಲ್ಲ. ಕಲ್ಲಿದ್ದಲಿನ ಅಭಾವದಿಂದ ಕೈಗಾರಿಗಕೆಗಳ ಬೆಳವಣಿಗೆಗೆ ಅಡ್ಡಿಯಾಯಿತಲ್ಲದೆ ಇದ್ದ ಕೈಗಾರಿಕೆಗಳೂ ಕೆಲಸ ನಿಲ್ಲಿಸಬೇಕಾಯಿತು.
ನೂರುಗಟ್ಟಲೆ ರೈಲ್ವೆ ಎಂಜಿನ್‌ಗಳನ್ನು ರೈಲುಗಾಡಿಗಳನ್ನು ಮಧ್ಯ ಪ್ರಾಚ್ಯಕ್ಕೆ ಕಳುಹಿಸಿ ಪ್ರಯಾಣದ ತೊಂದರೆ ಹೆಚ್ಚಿಸಿದರು. ಕೆಲವು ಕಡೆ ರೈಲುಕಂಬಿಗಳನ್ನೂ ಕಿತ್ತು ಬೇರೆ ಕಡೆಗೆ ಸಾಗಿಸಿದರು. ಮುಂದಿನ ಪರಿಣಾಮಗಳೊಂದನ್ನೂ ಲೆಕ್ಕಿಸದೆ ಮನಬಂದಂತೆ ಈ ರೀತಿ ವರ್ತಿಸಿದ್ದು ಆಶ್ಚರ್ಯ. ಯೋಜನೆ ಅಥವ ಮುಂದಾಲೋಚನೆ ಸ್ವಲ್ಪವೂ ಇರಲಿಲ್ಲ. ಒಂದು ಸಮಸ್ಯೆ ಸ್ವಲ್ಪ ನಿವಾರಣೆ ಆಗವುದರಲ್ಲಿ ಇತರ ಕಷ್ಟತನ ಸಮಸ್ಯೆಗಳು ಏಳುತ್ತಿದ್ದವು.