ಅಧಿಕಾರಿಗಳ ದೃಷ್ಟಿ ಅಭಿಪ್ರಾಯಗಳೇ ಆತನ ದೃಷ್ಟಿ, ಅಭಿಪ್ರಾಯಗಳು; ರಾಜಕೀಯ ಮತ್ತು ಸಾಮಾಜಿಕ ವಿಷಯಗಳಲ್ಲಿ ಮೂಲ ಕ್ರಾಂತಿಕಾರಕ ಬದಲಾವಣೆಯಾಗಬೇಕೆಂದವರೆಲ್ಲ ಆತನ ನಂಬಿಕೆಗೆ ಅನರ್ಹರಾದರು; ಬ್ರಿಟಿಷ್ ಸಾಮ್ರಾಜ್ಯದ ಉನ್ನತ ಸೇವೆಯಲ್ಲಿ ಮತ್ತು ಭಾರತದಲ್ಲಿನ ಅದರ ಮುಖ್ಯ ಪ್ರತಿನಿಧಿಗಳಲ್ಲಿ ಯೋಗ್ಯ ವಿಶ್ವಾಸ ತೋರಿದವರೆಲ್ಲ ಆತನಿಗೆ ಶತ್ರುಗಳಾದರು.
ಪಶ್ಚಿಮ ಯೂರೋಪಿನ ಜರ್ಮನರ ಕ್ರೂರ ದಂಡಯಾತ್ರೆಯ ಕಾಳದಿನಗಳಲ್ಲಿ ಇಂಗ್ಲೆಂಡಿನಲ್ಲೂ ಬಹಳ ಬದಲಾವಣೆಯಾಗಿತ್ತು. ನೆವಿಲ್ ಚೇಂಬರ್ಲನ್‌ಗೆ ಪದಚ್ಯುತಿಯಾಗಿ ಅನೇಕ ರೀತಿ ಒಳ್ಳೆಯ ಪರಿಣಾಮವಾಗಿತ್ತು. ಶ್ರೀಮಂತಿಕೆಯ ಶಿರೋರತ್ನದಂತೆ ಇದ್ದ ಮಾರ್ಕ್ವೆಸ್ ಆಫ್ ಜೆಟ್ಲೆಂಡ್ ಸಹ ಯಾರೂ ಒಂದು ಹನಿ ಕಣ್ಣೀರು ಸುರಿಸದೆ ಇಂಡಿಯ ಕಚೇರಿಯಿಂದ ಹೊರಬಿದ್ದಿದ್ದ. ಆತನ ಸ್ಥಾನದಲ್ಲಿ ಅಮೆರಿ ಬಂದಿದ್ದ. ಅಮೆರಿಯ ವಿಷಯ ಯಾರಿಗೂ ಏನೂ ತಿಳಿಯದು. ಆದರೆ ಅದೇ ಒಂದು ಅರ್ಹತೆಯಾಗಿತ್ತು. ಕಾಮನ್ಸ್ ಸಭೆಯಲ್ಲಿ ಚೀನದ ಮೇಲೆ ಜಪಾನಿನ ಆಕ್ರಮಣವನ್ನು ಬಲವಾಗಿ ಸಮರ್ಥನೆ ಮಾಡಿದ್ದ, ಚೀನದಲ್ಲಿ ಜಪಾನಿನ ವರ್ತನೆ ಖಂಡಿಸುವುದೆಂದರೆ ಇಂಡಿಯ ಮತ್ತು ಈಜಿಪ್ಟ್ಗಳಲ್ಲಿನ ಇಂಗ್ಲೆಂಡಿನ ವರ್ತನೆ ಖಂಡಿಸಬೇಕಾಗುತ್ತದೆ ಎಂದು ಹೇಳಿದ್ದ. ವಾದವೇನೋ ಒಳ್ಳೆಯದು ನಿಜ; ಆದರೆ ತಿರುಗು ಮುರುಗು ವ್ಯಾಪಾರ.
ನಿಜವಾದ ಗುಣಾಡ್ಯವ್ಯಕ್ತಿ ಎಂದರೆ ನೂತನ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್. ಭಾರತ ಸ್ವಾತಂತ್ರದ ವಿಷಯದಲ್ಲಿ ಚರ್ಚಿಲ್ ತನ್ನ ಅಭಿಪ್ರಾಯಗಳನ್ನು ಸ್ಪಷ್ಟವಾಗಿ, ಮುಚ್ಚುಮರೆಯಿಲ್ಲದೆ ಅನೇಕ ಬಾರಿ ವಿಶದ ಪಡಿಸಿದ್ದ. ಮೊದಲಿನಿಂದಲೂ ಆತನು ಭಾರತ ಸ್ವಾತಂತ್ರ್ಯದ ಪರಮ ಶತ್ರು. ೧೯೩೦ನೆ ಜನವರಿಯಲ್ಲಿ ಗಾಂಧಿಯನ್ನು, ಇಂಡಿಯದ ರಾಷ್ಟ್ರೀಯ ಮಹಾಸಭೆಯನ್ನು ಮತ್ತು ಅದರ ರಚನೆಯ ಎಲ್ಲ ಹುಟ್ಟನ್ನೂ “ಇಂದೋ ನಾಳೆಯೋ ಅಡಗಿಸಲೇ ಬೇಕು” ಎಂದು ಹೇಳಿದ್ದ. ಅದೇ ವರ್ಷ ಡಿಸೆಂಬರ್ ತಿಂಗಳಲ್ಲಿ “ಭಾರತೀಯ ಜೀವನ ಮತ್ತು ಪ್ರಗತಿಯ ಮೇಲಿನ ಹತೋಟ ಬಿಟ್ಟು ಕೊಡಲು ಬ್ರಿಟಿಷ್ ಜನಾಂಗಕ್ಕೆ ಇಷ್ಟ ಏಲ್ಲ.... ನಮ್ಮ ಎಲ್ಲ ಡೊಮಿನಿಯನ್‌ಗಳು ಮತ್ತು ಅಧೀನ ರಾಷ್ಟ್ರಗಳಿಗಿಂತ ಹೆಚ್ಚಾಗಿ ಬ್ರಿಟಿಷ್ ಸಾಮ್ರಾಜ್ಯದ ಹಿರಿಮೆಯೂ, ಪೌರುಷವೂ ಆದ ಮತ್ತು ಬ್ರಿಟಿಷ್ ದೊರೆಯ ರತ್ನ ಖಚಿತ ಕಿರೀಟದ ಅತಿ ಜಾಜ್ವಲ್ಯಯುಕ್ತ, ಶ್ರೇಷ್ಠತಮ ಅಮೂಲ್ಯ ರತ್ನದಂತಿರುವ ಭಾರತವನ್ನು ಬಿಟ್ಟು ಕೊಡುವ ಅಭಿಲಾಷೆ ಸ್ವಲ್ಪವೂ ನಮಗಿಲ್ಲ.” ಎಂದು ಹೇಳಿದ್ದ.
ಆಮೇಲೆ, ನಮ್ಮ ಮುಂದೆ ಪದೇ ಪದೇ ಹೇಳಿ “ಡೊಮಿನಿಯನ್ ಅಧಿಕಾರಕ್ಕೆ” ಭಾರತದ ವಿಷಯದಲ್ಲಿ ಯಾವ ಅರ್ಥ ಎಂಬುದನ್ನೂ ವಿವರಿಸಿದ್ದ. ೧೯೩೧ನೆಯ ಜನವರಿಯಲ್ಲಿ “ಡೊಮಿನಿಯನ್ ಅಧಿಕಾರ ನಮ್ಮ ಅಂತಿಮಗುರಿ ಎಂದು ಯೋಚಿಸಿರುವುದೇನೋ ನಿಜ. ಆದರೆ ಯುದ್ಧ ಕಾಲದಲ್ಲಿ ಭಾರತದ ಪ್ರತಿನಿಧಿಗಳು ಕೆಲವು ಸಭೆಗಳಿಗೆ ಬಂದುದು ಅಲಂಕಾರ ದೃಷ್ಟಿಯಿಂದ ವಿನಾ ಭಾರತದ ವಿಷಯದಲ್ಲಿ ಈ ತತ್ವವನ್ನು ಯಾವಾಗ ಕಾರ್ಯರೂಪಕ್ಕೆ ತರಲು ಸಾಧ್ಯ ಎಂದು ಯಾರೂ ಯೋಚಿಸಿಲ್ಲ; ಯೋಚಿಸಲು ಸಾಧ್ಯವೂ ಇಲ್ಲ” ಎಂದು ಹೇಳಿದ್ದ. ಪುನಃ ೧೯೩೧ನೆ ಡಿಸೆಂಬರ್ ನಲ್ಲಿ “ನಮ್ಮ ಸಾರ್ವಜನಿಕ ಪ್ರಮುಖರಲ್ಲಿ ಅನೇಕರು-ಅವರಲ್ಲಿ ನಾನೂ ಒಬ್ಬ-ಡೊಮಿನಿಯನ್ ಅಧಿಕಾರದ ವಿಷಯ ಭಾಷಣಮಾಡಿದೆವು; ನಾನೂ ಮಾಡಿದೆ. ಆದರೆ ಕೆನಡದಲ್ಲಿ ಇರುವ ರಾಜ್ಯ ಪದ್ಧತಿ ಮತ್ತು ಅಧಿಕಾರ ಆಚರಣೆಗೆ ಬರುವುದು ಇಂಡಿಯಾದಲ್ಲಿ ಯಾವಾಗ ಸಾಧ್ಯ ಎಂದು ನಾನು ಮಾತ್ರ ಊಹಿಸಲಾರೆ............ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯ ನಾಶವಾದರೆ ಅಂದಿನಿಂದಲೇ ಬ್ರಿಟನ್ ಮಹಾರಾಷ್ಟ್ರಗಳ ಪಂಕ್ತಿಯಿಂದ ಕೆಳಗಿಳಿಯಬೇಕಾಗುತ್ತದೆ” ಎಂದಿದ್ದ.
ಮುಖ್ಯ ತಿರುಳೇ ಅದು; ಬ್ರಿಟಿಷ್ ಸಾಮ್ರಾಜ್ಯವೆಂದರೆ ಇಂಡಿಯ, ಭಾರತದ ಪರಾಧೀನತೆ ಮತ್ತು ಸುಲಿಗೆಯಿಂದಲೇ ಇಂಗ್ಲೆಂಡಿನ ಕೀರ್ತಿ ಮತ್ತು ಶಕ್ತಿ. ಆದರಿಂದಲೇ ಇಂಗ್ಲೆಂಡ್ ಪ್ರಪಂಚದ ಒಂದು ಪ್ರಬಲರಾಷ್ಟ್ರವಾಗಿದೆ. ವಿಶಾಲ ಸಾಮ್ರಾಜ್ಯದ ಒಡೆತನ ಮತ್ತು ನಾಯಕತ್ವವಿಲ್ಲದೆ ಹೋದರೆ ಇಂಗ್ಲೆಂಡಿನ ಅಸ್ತಿತ್ವಕ್ಕೇ ಸಂಚಕಾರವೆಂದು ಚರ್ಚಿಲ್ ಮತ. ಆದ್ದರಿಂದ ಭಾರತ ಸ್ವಾತಂತ್ರ್ಯ ಎಂಬುದು ಆತನಿಗೆ