ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೪೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಕೊನೆಯ ಅಂಕ ೩
೩೯೫

ಊಹಿಸಲಸಾಧ್ಯ. ಇನ್ನೇನು ಸಿಕ್ಕಿತು ಎಂದಿದ್ದ ಡೊಮಿನಿಯನ್ ಆಡಳಿತ ಭಾರತದ ಮಟ್ಟಿಗೆ ಸ್ವಾತಂತ್ರ್ಯ ಮತ್ತು ಅಧಿಕಾರವಿಲ್ಲದ ಬಹು ದೂರದ ಉಪಚಾರದ ಮಾತು; ಕನ್ನಡಿಯೊಳಗಿನ ಗಂಟು ಎನ್ನುವುದು ಸ್ಪಷ್ಟವಾಗಿತ್ತು. ಈಗ ಡೊಮಿನಿಯನ್ ಅಧಿಕಾರ ನಾವು ನಿರಾಕರಿಸಿ ಪೂರ್ಣ ಸ್ವಾತಂತ್ರ್ಯವನ್ನೇ ಕೇಳಿದ್ದೆವು. ಚರ್ಚಿಲ್‌ಗೂ ನಮಗೂ ಇದ್ದ ಅಂತರ ಅಪಾರವಿತ್ತು.

ಆತನ ಮಾತುಗಳೆಲ್ಲ ನಮ್ಮ ಸ್ಮೃತಿಪಥದಲ್ಲಿದ್ದವು; ಆತನು ಕಠಿಣ ಹೃದಯನೆಂದೂ, ರಾಜಿಯ ಮಾತಿನವನಲ್ಲವೆಂದೂ ತಿಳಿದೆವು. ಆತನ ನಾಯಕತ್ವದಲ್ಲಿ ಇಂಗ್ಲೆಂಡಿನಿಂದ ನಮಗೆ ಸಾಮಾನ್ಯ ಸೌಜನ್ಯತೆ ಸಹ ದೊರೆಯುವಂತೆ ಇರಲಿಲ್ಲ. ಅದ್ಭುತ ಧೈರ್ಯ ಮತ್ತು ಮಹಾನಾಯಕನಿಗೆ ಇರಬೇಕಾದ ಅಪಾರ ಸದ್ಗುಣ ಆತನಲ್ಲಿದ್ದರೂ ಆತನು ಇನ್ನೂ ಹತ್ತೊಂಭತ್ತನೆಯ ಶತಮಾನದ ಬಂಡವಾಳಗಾರಿಕೆಯ ಸಾಮ್ರಾಜ್ಯವಾದಿ ಇಂಗ್ಲೆಂಡಿನ ಪ್ರತಿನಿಧಿಯಾಗಿದ್ದ. ಹೊಸ ಪ್ರಪಂಚದ ಜಟಿಲ ಸಮಸ್ಯೆಗಳನ್ನೂ ಪ್ರಚಂಡ ಶಕ್ತಿಗಳನ್ನೂ ಅರ್ಥಮಾಡಿಕೊಳ್ಳಲು ಅಸಮರ್ಥನಿದ್ದ; ತಾನಾಗಿಯೇ ರೂಪುಗೊಳ್ಳುತ್ತಿದ್ದ ಭವಿಷ್ಯದ ರೂಪುರೇಖೆ ಊಹಿಸುವುದಂತೂ ಆತನಿಗೆ ಸಾಧ್ಯವೇ ಇರಲಿಲ್ಲ. ಆದರೂ ಒಂದು ದೊಡ್ಡ ಹೆಜ್ಜೆ ಇಡಲು ದೊಡ್ಡ ವ್ಯಕ್ತಿ ಮಾತ್ರ ಸಾಧ್ಯ. ಘೋರ ವಿಪತ್ತಿನ ಎದುರಿನಲ್ಲಿ ಮಾಡಿದ ಸಲಹೆಯಾದರೂ ಇಂಗ್ಲೆಂಡ್ ಫ್ರಾನ್ಸಿನೊಡನೆ ಸಂಯುಕ್ತ ಆಡಳಿತಕ್ಕೆ ಸಿದ್ಧವಿದೆ ಎಂದು ಆತನ ಸಲಹೆಯಲ್ಲಿ ದೂರದೃಷ್ಟಿಯೂ ಸಂದರ್ಭೋಚಿತ ಸಮೀಕರಣ(adaptation)ವೂ ಇತ್ತು. ಆ ಸಲಹೆಯು ಭಾರತದ ಮೇಲೆ ಒಳ್ಳೆಯ ಪರಿಣಾಮ ಮಾಡಿತು. ಪ್ರಾಯಶಃ ಆತನ ಹೊಸ ಪದವಿಯ ದೊಡ್ಡ ಜವಾಬ್ದಾರಿಗಳಿಂದ ಆತನ ದೃಷ್ಟಿ ವಿಶಾಲಗೊಂಡಿರಬಹುದು; ಮೊದಲಿನ ದುರಭಿಪ್ರಾಯಗಳು, ಸಂಕುಚಿತ ಭಾವನೆಗಳು ಅಳಿಸಿರಬಹುದು ಯುದ್ಧದ ಅವಶ್ಯಕತೆಯ ದೃಷ್ಟಿಯಿಂದಲೇ ಭಾರತದ ಸ್ವಾತಂತ್ರ್ಯ ಅನಿವಾರ್ಯ ಮತ್ತು ಅಗತ್ಯ ಎಂದು ಆತನಿಗೆ ಮನವರಿಕೆಯಾಗಬಹುದು; ಎಂದು ಊಹಿಸಿದೆವು. ೧೯೩೯ನೆ ಆಗಸ್ಟ್ ತಿಂಗಳಲ್ಲಿ ನಾನು ಚೀನಾಕ್ಕೆ ಹೊರಟಾಗ ಉಭಯರ ಸ್ನೇಹಿತನೊಬ್ಬನ ಮೂಲಕ ಆ ಯುದ್ಧ ತಪ್ತ ದೇಶದಲ್ಲಿ ನನ್ನ ಪ್ರವಾಸ ಸುಖಮಯವಾಗಲೆಂದು ನನಗೆ ಸಂದೇಶ ಕಳುಹಿಸಿದ್ದ.

ಹೆಚ್ಚು ಆಶೆ ಇಟ್ಟುಕೊಳ್ಳದೆ, ತೀರ ನಿರಾಶರಾಗದೆ ನಮ್ಮ ಬೇಡಿಕೆಯನ್ನು ಸರಕಾರದ ಮುಂದಿಟ್ಟೆವು. ಬ್ರಿಟಿಷ್ ಸರಕಾರದ ಉತ್ತರ ಹಿಂದೆಯೇ ಬಂದಿತು. ಎಲ್ಲಕ್ಕೂ ಪೂರ್ಣ ನಕಾರ. ಅದು ಸಾಲದೆ ಅವರು ಉಪಯೋಗಿಸಿದ ಭಾಷೆಯಿಂದ ಭಾರತದಲ್ಲಿ ಬ್ರಿಟಿಷರಿಗೆ ತಮ್ಮ ಅಧಿಕಾರ ಬಿಟ್ಟುಕೊಡುವ ಯೋಚನೆ ಇಲ್ಲ ವೆಂದೇ ಸ್ಪಷ್ಟವಾಯಿತು. ದೇಶದಲ್ಲಿ ಅನೈಕ್ಯತೆಗೆ ಪ್ರೋತ್ಸಾಹಕೊಟ್ಟು ಪ್ರತಿಯೊಂದು ಹಳೆಯ ಕಂದಾಚಾರದ ಪ್ರತಿಗಾಮಿ ಶಕ್ತಿಗೂ ಬೆಂಬಲಕೊಟ್ಟರು. ಸಾಮ್ರಾಜ್ಯ ಶೃಂಖಲೆಗಳನ್ನು ಸಡಿಲಿಸುವ ಬದಲು ನಾಡಿನ ಒಳಗೆ ದಂಗೆ ಮತ್ತು ಭಾರತದ ನಾಶವೇ ಅವರಿಗೆ ಉತ್ತಮವೆಂದು ತೋರಿದಂತೆ ಕಂಡಿತು.

ಈ ಬಗೆಯ ವ್ಯವಹಾರ ನಮಗೆ ಹೊಸದಾಗಿರಲಿಲ್ಲ. ಆದರೂ ಈ ಸಮಯದಲ್ಲಿ ಈ ನಡತೆ ಬಹಳ ಆಶ್ಚರ್ಯವೆನಿಸಿತು. ನಮ್ಮ ನಿರಾಶಾಭಾವನೆ ಮೇರೆ ಮೀರಿತು. “ಬೇರೆ ಬೇರೆ ದಾರಿ” ಎಂಬ ಲೇಖನ ಒಂದನ್ನು ನಾನು ಆಗ ಬರೆದುದು ಜ್ಞಾಪಕವಿದೆ. ಪೂರ್ಣ ಸ್ವಾತಂತ್ರ್ಯವಿಲ್ಲದೆ ನಮಗೆ ಪ್ರಗತಿ ಇಲ್ಲವೆಂದೂ, ಜನರು ಮುಂದುವರಿಯಲಸಾಧ್ಯವೆಂದೂ, ಇಂಗ್ಲೆಂಡಿನೊಡನೆ ಸ್ನೇಹ ಮತ್ತು ಸಹಕಾರದಿಂದ ನಡೆಯಲು ಅದೊಂದೇ ಮಾರ್ಗವೆಂದೂ ಅರಿತು ಬಹುಕಾಲದಿಂದ ಸ್ವಾತಂತ್ರ್ಯಕ್ಕಾಗಿ ದುಡಿದಿದ್ದೆ. ಆದರೂ ಸ್ನೇಹಪರ ನಡತೆ ದೊರೆಯಬಹುದೆಂದು ಇದ್ದೆ. ಇಂಗ್ಲೆಂಡ್ ಸಂಪೂರ್ಣ ಪರಿವರ್ತನೆ ಆಗುವವರೆಗೆ ನಮಗೂ ಅವರಿಗೂ ಒಂದು ದಾರಿ ಅಸಾಧ್ಯವೆಂದು ಈಗ ಏಕಾ ಏಕಿ ಅರ್ಥವಾಯಿತು. ನಮ್ಮ ದಾರಿ ನಮಗೆ ಅವರ ದಾರಿ ಅವರಿಗೆ.

೫. ವೈಯಕ್ತಿಕ ಶಾಸನ ಭಂಗ

ಸ್ವಾತಂತ್ರ್ಯ ಸಾಧನೆಯ ಆಸೆ ಮತ್ತು ಉತ್ಸಾಹದಿಂದ ತುಂಬಿ ನಮ್ಮ ಸರ್ವಶಕ್ತಿ ವಿನಿಯೋಗಿಸಿ ರಾಷ್ಟ್ರೀಯ ಭಾವನಾ ಪರವಶತೆಯಿಂದ ಪ್ರಪಂಚ ಯುದ್ಧದಲ್ಲಿ ಧುಮ್ಮಿಕ್ಕುವ ಬದಲು ಈ ರೀತಿ ಸ್ವಾತಂತ್ರ್ಯ