ನಿರಾಕರಣೆಯ ನೋವು ಮತ್ತು ನಿರಾಶೆ ನಮ್ಮನ್ನು ಕವಿದವು. ಅದು ಸಾಲದೆ ದುರಹಂಕಾರದಿಂದ ಬ್ರಿಟಿಷರ ಆಳ್ವಿಕೆ ಮತ್ತು ನೀತಿಯನ್ನೇ ಪ್ರಶಂಸೆಮಾಡಿ, ಸ್ವಾತಂತ್ರ್ಯ ಕೇಳುವ ಮುಂಚೆ ಕೆಲವು ಷರತ್ತುಗಳನ್ನು ನಾವು ಪೂರ್ಣಗೊಳಿಸಬೇಕೆಂದು ದುರ್ಭಾಷೆಯಲ್ಲಿ ನಮಗೆ ಅವಶ್ಯ ಎಚ್ಚರಿಸಿದ್ದರು. ಆ ಷರತ್ತುಗಳನ್ನು ಪೂರೈಸಲು ಸಾಧ್ಯವೇ ಇರಲಿಲ್ಲ. ಇಂಗ್ಲೆಂಡಿನಲ್ಲಿ ನಡೆದ ಪಾರ್ಲಿಮೆಂಟಿನ ಚರ್ಚೆ ಮತ್ತು ಮಾತು ಗಾರಿಕೆಯ ನಾಟಕಗಳಿಂದ ಉದ್ದುದ್ದನೆಯ ಭಾಷಣಗಳಿಂದ ದೊಡ್ಡ ದೊಡ್ಡ ಮಾತುಗಳಿಂದ ಅದೆಲ್ಲ ರಾಜಕೀಯ ನಟನೆ ಎಂದೂ, ಆದಷ್ಟು ಕಾಲ ಭಾರತವನ್ನು ತಮ್ಮ ಅಧೀನ ಇಟ್ಟುಕೊಂಡು ಸಾಮ್ರಾಜ್ಯ ನಡೆಸುವುದೇ ಅವರ ಇಷ್ಟವೆಂದೂ ಸ್ಪಷ್ಟವಾಯಿತು. ಸಾಮ್ರಾಜ್ಯ ಶಕ್ತಿಯ ನಖಗಳು ಭಾರತದ ಹೃದಯದಲ್ಲಿ ಇನ್ನೂ ಆಳ ನೆಟ್ಟು ಸಂಕಟವನ್ನು ಹೆಚ್ಚಿಸಿದವು. ಪ್ರಪಂಚದಲ್ಲಿ ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯ ರಕ್ಷಣೆಯೇ ಅಂತರರಾಷ್ಟ್ರೀಯ ಮೂಲ ತತ್ವ; ಅದಕ್ಕಾಗಿ ಬ್ರಿಟನ್ ಯುದ್ಧಮಾಡುತ್ತಿದೆ ಎಂಬ ಕೂಗೆಲ್ಲ ಇದೇ ಉದ್ದೇಶದಿಂದ !
ನಮಗೆ ಇನ್ನೂ ಒಂದು ಮುಖ್ಯ ಉದಾಹರಣೆ ಇತ್ತು. ಯುದ್ಧ ಮುಗಿದ ನಂತರ ತನಗೆ ಡೊಮಿನಿಯನ್ ಅಧಿಕಾರ ಕೊಡಬೇಕೆಂದು ಬರ್ಮ ಕೇಳಿತ್ತು. ಆಗ ಇನ್ನೂ ಪೆಸಿಫಿಕ್ ಯುದ್ಧ ಆರಂಭವಾಗಿರಲಿಲ್ಲ. ಕೊಟ್ಟಿದ್ದರೆ ಯಾವ ವಿಧವಾದ ಅಪಾಯವೂ ಯುದ್ಧಕ್ಕೆ ಒದಗುವಂತಿರಲಿಲ್ಲ. ಏಕೆಂದರೆ ಯುದ್ಧ ಮುಗಿದ ಮೇಲೆ ಅದು ಅನುಷ್ಟಾನಕ್ಕೆ ಬರಬೇಕಾಗಿತ್ತು. ಪೂರ್ಣ ಸ್ವಾತಂತ್ರ್ಯ ಸಹ ಕೇಳಲಿಲ್ಲ. ಭಾರತಕ್ಕೆ ಹೇಳುತ್ತಿದ್ದಂತೆ ಅಲ್ಲಿಯೂ ಡೊಮಿನಿಯನ್ ಅಧಿಕಾರವೇ ಬ್ರಿಟಿಷ್ ಸರಕಾರದ ಗುರಿ ಎಂದು ಅನೇಕ ಬಾರಿ ಹೇಳಿದ್ದರು. ಭಾರತದಂತೆ ಅಲ್ಲಿ ಬೇರೆ ಬೇರೆ ಜಾತಿ ಪಂಗಡಗಳಿರದೆ ಒಂದೇ ಬುಡಕಟ್ಟಿನ ಜನರು ಇದ್ದರು. ಭಾರತದ ವಿಷಯದಲ್ಲಿ ಸುಳ್ಳೋ ನಿಜವೋ ಹೇಳುತ್ತಿದ್ದ ಅಡ್ಡಿ ಆತಂಕಗಳು ಯಾವುವೂ ಅಲ್ಲಿ ಇರಲಿಲ್ಲ. ಆದರೂ ಬರದ ಒಕ್ಕೊರಲಿನ ಬೇಡಿಕೆಯನ್ನೂ ಈಡೇರಿಸದೆ ಒಂದು ಭರವಸೆ ಸಹ ಕೊಡಲಿಲ್ಲ. ಡೊಮಿನಿಯನ್ ಅಧಿಕಾರ ದೂರದ ಕನಸಿನ ಮಾತೂ ಆಗಿತ್ತು. ನಮ್ಮ ಇಂದಿನ ಪ್ರಪಂಚಕ್ಕೆ ಸೇರದ ಯಾವುದೋ ದೂರದ ಪ್ರಪಂಚದ ತಾತ್ವಿಕಭಾವನೆಯ ಅಸ್ಪಷ್ಟ ನೆರಳಿನಂತೆ ಇತ್ತು. ಚರ್ಚಿಲ್ ಸ್ವತಃ ಹೇಳಿದಂತೆ, ಇಂದಿನ ಅಥವ ನಾಳಿನ ಭವಿಷ್ಯಕ್ಕೆ ಸಂಬಂಧಿಸದ ಹುರುಳಿಲ್ಲದ ಮಾತು ಮಾತ್ರ ಆಗಿತ್ತು. ಭಾರತದ ಸ್ವಾತಂತ್ರ್ಯ ವಿರುದ್ಧ ಹೂಡಿದ ವಾದದಲ್ಲಿ, ಒಡ್ಡಿದ ತೊಂದರೆಗಳಲ್ಲಿ ಯಾವ ಸತ್ಯವೂ ಇರಲಿಲ್ಲ. ಸತ್ಯಾಂಶಗಳೆಂದರೆ ಏನೆ ಬರಲಿ ಭಾರತವನ್ನು ಬಿಡಬಾರದೆಂದು ಬ್ರಿಟಿಷರ ನಿರ್ಧಾರ ಮತ್ತು ಬ್ರಿಟಿಷರ ಬಂಧನದಿಂದ ಮುಕ್ತರಾಗಬೇಕೆಂದು ಭಾರತದ ನಿರ್ಧಾರ. ಉಳಿದುದೆಲ್ಲ ಅರ್ಥಶೂನ್ಯ ಚರ್ಚೆ, ನ್ಯಾಯವಾದಿಯ ವಿತಂಡವಾದ, ರಾಜಕೀಯ ಹಣಾಹಣಿ. ಈ ಎರಡು ವಿರುದ್ಧ ಶಕ್ತಿಗಳ ಮಧ್ಯೆ ಜಯಾಪಜಯಗಳು ಯಾರಿಗೆ ಎನ್ನುವುದನ್ನು ಭವಿಷ್ಯವೇ ನಿರ್ಧರಿಸಬಲ್ಲುದು.
ಬ್ರಿಟಿಷರ ನೀತಿಯ ಪರಿಣಾಮ ಏನೆಂದು ಅತ್ಯಲ್ಪ ಕಾಲದಲ್ಲಿಯೇ ಬರ್ಮದ ಘಟನೆಗಳಿಂದ ನಮಗೆ ಗೊತ್ತಾಯಿತು. ಆ ಕಾಲಕ್ರಮೇಣ ಭಾರತದಲ್ಲಿಯೂ ಭವಿಷ್ಯದ ಉದಯ ಆರಂಭವಾಗಿ ಹೋರಾಟ, ಕಹಿ ಮನಸ್ಸು, ಸಂಕಟ ಒಂದರ ಹಿಂದೆ ಒಂದು ಪ್ರಾಪ್ತವಾದವು.
ಬ್ರಿಟಿಷರ ಈ ಕೊನೆಯ ಮೂದಲಿಕೆಯ ಪೆಟ್ಟಿನ ನೋವು ಸಹಿಸಿ ಭಾರತದ ಸಂಕಟ ಪರಿಸ್ಥಿತಿಯನ್ನು ನೋಡುತ್ತ ಕೈಕಟ್ಟಿ ಕುಳಿತುಕೊಳ್ಳುವುದು ಅಸಾಧ್ಯವಾಯಿತು. ಪ್ರಪಂಚದಲ್ಲೆಲ್ಲ ಸ್ವಾತಂತ್ರ್ಯ ರಕ್ಷಣೆಗೆ ಕೋಟ್ಯನುಕೋಟಿ ಜನರು ಅಪಾರ ತ್ಯಾಗಮಾಡುತ್ತಿರುವಾಗ, ಘೋರ ಯುದ್ಧದ ಮಧ್ಯದಲ್ಲೇ ಬ್ರಿಟಿಷ್ ಸರಕಾರದ ನೀತಿಯು ಈ ರೀತಿ ಆದರೆ ಸಂಕಟದಿಂದ ಪಾರಾದ ಮೇಲೆ, ಜನತೆಯ ಒತ್ತಡ ಕಡಮೆಯಾದ ಮೇಲೆ ಅವರ ನೀತಿ ಏನಾಗಬಹುದು? ಈ ಮಧ್ಯೆ ಭಾರತಾದ್ಯಂತ ನಮ್ಮಲ್ಲಿ ಅನೇಕರನ್ನು ಬಂಧಿಸಿ ಸೆರೆ ಮನೆಗೆ ಕಳುಹಿಸಿದರು. ನಮ್ಮ ನಿತ್ಯದ ಕಾರಗಳಿಗೆ ಅಡ್ಡಿ ಬಂದು, ಇದ್ದ ಸ್ವಾತಂತ್ರ್ಯ ಕಸಿದುಕೊಂಡರು. ಭಾರತದಲ್ಲಿ ಬ್ರಿಟಿಷ್ ಸರಕಾರವು ರಾಷ್ಟ್ರೀಯ ಚಳವಳಿ ಮತ್ತು ಕೂಲಿಗಾರರ ಚಳವಳಿಯ ವಿರುದ್ಧ ಯಾವಾಗಲೂ ಹೋರಾಡುತ್ತಿದೆ. ಅದನ್ನು ಹತ್ತಿಕ್ಕಲು ಶಾಸನ ಭಂಗ ಚಳವಳಿ ಬೇಕಿಲ್ಲ. ಈ ಹೋರಾಟ ಕೆಲವು