೧೯೪೧ನೆ ಜೂನ್ ತಿಂಗಳಲ್ಲಿ ಏಕಾಏಕಿ ಹಿಟ್ಲರ್ ರಷ್ಯದ ಮೇಲೆ ಮುತ್ತಿಗೆ ಹಾಕಿದನೆಂದು ತಿಳಿದು ತುಂಬ ಕಳವಳಗೊಂಡೆವು. ದಿನದಿನವೂ ಹೊಸ ಸ್ವರೂಪ ತಾಳುತ್ತಿದ್ದ ಯುದ್ಧರಂಗದ ಈ ನಾಟಕ ಚಿತ್ರ ಪರಿವರ್ತನೆಗಳಲ್ಲಿ ನಮ್ಮ ಕುತೂಹಲ ಮತ್ತು ಆಸಕ್ತಿಗಳು ಹೆಚ್ಚಿದವು.
೧೯೪೧ನೆ ಡಿಸೆಂಬರ್‌ನಲ್ಲಿ ನಮ್ಮಲ್ಲಿ ಅನೇಕರ ಬಿಡುಗಡೆ ಆಯಿತು. ಅಲ್ಲಿಂದ ಮೂರು ದಿನಗಳಲ್ಲಿ ಪರ್ಲ್ ಹಾರ್ಬರ್ ಮುತ್ತಿಗೆಯಾಗಿ ಪೆಸಿಫಿಕ್ ಯುದ್ಧ ಆರಂಭವಾಯಿತು.
ಪರ್ಲ್ ಹಾರ್ಬರ್ ನಂತರ : ಗಾಂಧಿ ಮತ್ತು ಅಹಿಂಸೆ
ನಾವು ಸೆರೆಮನೆಯಿಂದ ಹೊರಗೆ ಬಂದಾಗ ರಾಷ್ಟ್ರೀಯ ಭಾವನೆಯ ನಿಲುವು, ಬ್ರಿಟನ್ ಮತ್ತು ಭಾರತಗಳ ಮಧ್ಯೆ ಇದ್ದ ಬಿಕ್ಕಟ್ಟು :ಸ್ವಲ್ಪವೂ ವ್ಯತ್ಯಾಸವಾಗಿರಲಿಲ್ಲ. ಸೆರೆಮನೆಯ ವಾಸ ಅನೇಕರ ಮೇಲೆ ಅನೇಕ ಪರಿಣಾಮಮಾಡುತ್ತದೆ. ಕೆಲವರು ಕಷ್ಟ ಸಹಿಸಲಾರದೆ ಸೋಲುತ್ತಾರೆ; ಇನ್ನು ಕೆಲವರು ಪುಟಕ್ಕೆ ಹಾಕಿದ ಚಿನ್ನದಂತೆ ಚೊಕ್ಕನಾಗುತ್ತಾರೆ. ಈ ಚೊಕ್ಕ ಜನರ ಅಭಿಪ್ರಾಯಕ್ಕೆ ಜನತೆಯ ಹೆಚ್ಚಿನ ಮನ್ನಣೆ ದೊರೆಯುತ್ತದೆ. ಆದರೆ ರಾಷ್ಟ್ರೀಯ ದೃಷ್ಟಿಯಿಂದ ನಾವು ಮುಂದೆ ಒಂದು ಹೆಜ್ಜೆ ಹೋಗದೆ ಇದ್ದರೂ ಪರ್ಲ್ ಹಾರ್ಬರ್ ಮತ್ತು ಅನಂತರದ ಘಟನೆಗಳು ಇದ್ದಕ್ಕಿದಂತೆ ಒಂದು ಹೊಸ ಸನ್ನಿವೇಶ ಉಂಟುಮಾಡಿ ಅಂದಿನ ಪರಿಸ್ಥಿತಿಗೆ ಒಂದು ಹೊಸ ಸ್ವರೂಪ ಕೊಟ್ಟವು. ತತ್ ಕ್ಷಣವೇ ಕಾಂಗ್ರೆಸ್ ಕಾರ್ಯ ಸಮಿತಿಯು ಸಭೆ ಸೇರಿತು. ಜಪಾನರು ಇನ್ನೂ ಯಾವ ದೊಡ್ಡ ಆಕ್ರಮಣ ಆರಂಭಿಸದಿದ್ದರೂ ತತ್ತರಿಸಿಕೊಳ್ಳುವ ಕೆಲವು ಬಲವಾದ ಪೆಟ್ಟು ಕೊಟ್ಟಿದ್ದರು. ಯುದ್ಧ ಈಗ ದೂರದ ದೃಶ್ಯವಾಗದೆ ನಮ್ಮ ಸಮೀಪವೇ ಬಂದಿತ್ತು. ಈ ವಿಷಮ ಪರಿಸ್ಥಿತಿಯಲ್ಲಿ ಸೆರೆಮನೆಗೆ ಹೋಗುವುದರಿಂದ ಯಾವ ಪುರುಷಾರ್ಥವೂ ಇಲ್ಲವೆಂದೂ, ದೇಶದ ರಕ್ಷಣೆಯಲ್ಲಿ ನಾವು ನಮ್ಮ ಯೋಗ್ಯ ಪಾತ್ರವಹಿಸಬೇಕೆಂದೂ ಅನೇಕ ಕಾಂಗ್ರೆಸ್ ನಾಯಕರು ಯೋಚಿಸತೊಡಗಿದರು. ಆದರೆ ಗೌರವಯುತ ಸಹಕಾರಕ್ಕೆ ಅವಕಾಶವಿಲ್ಲದಂತೆ ಎಲ್ಲ ಬಾಗಿಲನ್ನೂ ಮುಚ್ಚಿದ್ದರಿಂದ ಏನುಮಾಡಲು ಸಾಧ್ಯ? ಜನರಲ್ಲಿ ನಿಜವಾದ ಕಾರ್ಯೋತ್ಸಾಹ ತುಂಬಿ ಅವರನ್ನು ಹುರಿದುಂಬಿಸುವುದೆಂತು? ಗಂಡಾಂತರದ ಎದುರಿನಲ್ಲಿ ಅಸಹಾಯಕರೆಂದು ಭಯಗ್ರಸ್ತರಾಗಿ ಹಿಂದೆ ಸರಿದು ಏನೂ ಪ್ರಯೋಜನವಿರಲಿಲ್ಲ. ದೇಶದ ಇತರ ಪಕ್ಷಗಳೊಡನೆ ಸಹಕರಿಸಿ ಕೆಲಸ ಮಾಡಲು ಅನುಕೂಲವಾಗುವಂತೆ ರಾಷ್ಟ್ರೀಯ ಸರಕಾರ ರಚಿಸಿ, ಅದರಿಂದ ಜನರ ಮನಸ್ಸಿನ ಮೇಲೆ ಇದೊಂದು ನಿಜವಾದ ರಾಷ್ಟ್ರೀಯ ಪ್ರಯತ್ನ, ಪರಕೀಯರ ಒತ್ತಾಯ ಇಲ್ಲ ಎಂಬ ಭಾವನೆ ಉಂಟು ಮಾಡಲು ಅವಕಾಶ ಕೊಟ್ಟಿದ್ದರೆ ಯುದ್ಧ ಸಿದ್ಧತೆಯಲ್ಲಿ, ಮುಖ್ಯವಾಗಿ ಭಾರತದ ರಕ್ಷಣೆಯಲ್ಲಿ ಪೂರ್ಣ ಸಹಕರಿಸಲು ನಾವು ಕಾತರರಿದ್ದೆವು. ಕಾಂಗ್ರೆಸ್ಸಿನವರಲ್ಲಾಗಲಿ ಇತರರಲ್ಲಾಗಲಿ ಸಾಮಾನ್ಯವಾಗಿ ಈ ವಿಷಯದಲ್ಲಿ ಯಾವ ಭಿನ್ನಾಭಿಪ್ರಾಯವೂ ಇರಲಿಲ್ಲ. ಆದರೆ ಮೂಲ ತತ್ವದಲ್ಲಿ ಬೇರೊಂದು ಕಡೆ ಅನಿರೀ ಕಿತ ವಿರೋಧ ಒದಗಿತು. ಹೊರಗಿನ ಯುದ್ಧ ವಿಷಯದಲ್ಲಿ ಸಹ ಗಾಂಧಿಜಿ ತಮ್ಮ ಮೂಲ ಅಹಿಂಸಾ ತತ್ವ ಕೈ ಬಿಡಲು ಒಪ್ಪಲಿಲ್ಲ. ಆ ಯುದ್ಧದ ಸಾಮೀಪ್ಯವೇ ಅವರ ತತ್ವದ ಸತ್ವ ಪರೀಕ್ಷೆಗೆ ಒಂದು ಒರೆಗಲ್ಲಾಯಿತು. ಈ ವಿಷಮ ಪರೀಕ್ಷೆಯಲ್ಲಿ ಹಿಂಜರಿಯುವುದೆಂದರೆ ತಮ್ಮ ಅಹಿಂಸಾ ತತ್ತ್ವವು ಎಲ್ಲ ವಿಷಮ ಪರಿಸ್ಥಿತಿಗೆ ಪರಮೌಷಧ ಎಂಬ ವಿಶ್ವಾಸ ಬಿಡಬೇಕು. ಮತ್ತು ತಮ್ಮ ತತ್ತ್ವ ಬಿಟ್ಟು ಅಥವ ಮಧ್ಯಮಾರ್ಗ ಹಿಡಿದು ತಪ್ಪು ದಾರಿ ನಡೆಯಬೇಕು. ತಮ್ಮ ಜೀವಿತದ ಪ್ರತಿಯೊಂದು ಕಾರ್ಯ ನೀತಿಗೂ ತಳಹದಿಯಾದ ಆ ತತ್ವ ಬಿಟ್ಟು ಕೊಡಲು ಗಾಂಧಿಜಿ ಸಿದ್ಧವಿರಲಿಲ್ಲ ಮತ್ತು ಆ ಅಹಿಂಸಾ ಮಾರ್ಗದ ಅನುಸರಣೆಯಿಂದ ಒದಗುವ ಎಲ್ಲ ಪರಿಣಾಮಗಳನ್ನೂ, ಪರಿಸ್ಥಿತಿಯನ್ನೂ ಎದುರಿಸಲು ಸಿದ್ಧರಿದ್ದರು.
೧೯೩೮ರಲ್ಲಿ ಮ್ಯೂನಿಚ್ ಘಟನೆ ನಡೆದು ಯುದ್ಧ ಒದಗಿದಾಗ ಸಹ ಅವರಿಗೆ ಇದೇ ಧರ್ಮ ಸಂಕಟ ಒದಗಿತ್ತು. ಆಗ ನಾನು ಯೂರೋಪಿನಲ್ಲಿದ್ದುದರಿಂದ ಆ ಚರ್ಚೆಯಲ್ಲಿ ಭಾಗವಹಿಸಿರಲಿಲ್ಲ. ಆದರೆ ಯುದ್ಧದ ಭೀತಿ ತೊಲಗಿ ಪರಿಸ್ಥಿತಿ ತಿಳಿಯಾದ ಒಡನೆ ಈ ಧರ್ಮ ಸಂಕಟವೂ ಮಾಯವಾಗಿತ್ತು.