ಪುಟ:ಭಾರತ ದರ್ಶನ.djvu/೪೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೦೦

ಭಾರತ ದರ್ಶನ

ಸ್ವಾತಂತ್ರ್ಯದ ಹೋರಾಟ ಮಾತ್ರ ಅಹಿಂಸಾಮಾರ್ಗದಿಂದ ನಡೆಯಬೇಕೆಂದು ಒಪ್ಪಿದ್ದೆವು. ನಮ್ಮ ಬಹುಮಟ್ಟಿನ ಭಾವನೆಗಳು ಅನೇಕ ರೀತಿ ಮಾರ್ಪಾಟಾದುವೆಂಬುದು ನಿಜ. ಪ್ರಪಂಚದಲ್ಲಿ ಶಸ್ತ್ರ ಸಂನ್ಯಾಸ ಅತ್ಯವಶ್ಯವೆಂದೂ, ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ವ್ಯಾಜ್ಯಗಳು ಶಾಂತರೀತಿಯಲ್ಲಿ ಬಗೆಹರಿಯಬೇಕೆಂದೂ ಕಾಂಗ್ರೆಸ್ಸು ಒತ್ತಾಯಮಾಡುತ್ತಿತ್ತು.

ಪ್ರಾಂತ ಕಾಂಗ್ರೆಸ್ ಸರಕಾರಗಳು ಅಧಿಕಾರದಲ್ಲಿದ್ದಾಗ ವಿಶ್ವವಿದ್ಯಾನಿಲಯಗಳಲ್ಲಿ ಮತ್ತು ಕಾಲೇಜುಗಳಲ್ಲಿ ಯಾವುದಾದರೂ ಒಂದು ಬಗೆಯ ಸೈನ್ಯಶಿಕ್ಷಣ ಕೊಡಬೇಕೆಂದು ನಾವು ಕಾತರರಿದ್ದೆವು. ಭಾರತ ಸರಕಾರ ಒಪ್ಪದೆ ಅದಕ್ಕೆ ಅಡ್ಡ ಬಂದಿತ್ತು.

ಈ ಎಲ್ಲ ಪ್ರಯತ್ನಗಳನ್ನು ಗಾಂಧಿಜಿ ಒಪ್ಪದಿದ್ದರೂ ಯಾವುದಕ್ಕೂ ಅವರು ಅಡ್ಡಿಮಾಡಿರಲಿಲ್ಲ. ದಂಗೆ ಅಡಗಿಸಲು ಪೊಲೀಸ್ ಪಡೆ ಉಪಯೋಗಿಸುವುದು ಸಹ ಅವರಿಗೆ ಇಷ್ಟವಿರಲಿಲ್ಲ. ಅನೇಕಬಾರಿ ಅದಕ್ಕಾಗಿ ವ್ಯಥೆಪಟ್ಟಿದ್ದರು. ಕಡಮೆ ಹಾನಿಕರವೆಂದು ಸಹಿಸಿಕೊಂಡಿದ್ದರು. ಕ್ರಮೇಣ ಭಾರತದ ಜನಮನದಲ್ಲಿ ತಮ್ಮ ಅಹಿಂಸಾಭಾವನೆಯೇ ಬೇರೂರುವುದೆಂದು ನಂಬಿದ್ದರು. ಕಾಂಗ್ರೆಸ್ಸಿನ ಏಕೈಕ ನಾಯಕರಾಗಿ ಧರ್ಮ ಗುರುವಿನಂತೆ ಇದ್ದರೂ, ಕಾಂಗ್ರೆಸ್ಸಿನ ಈ ರೀತಿನೀತಿಗಳು ಅವರಿಗೆ ಸರಿಬೀಳದೆ ೧೯೩೦ರ ನಂತರ ಅವರು ಕಾಂಗ್ರೆಸ್ಸಿನ ಸಾಮಾನ್ಯ ಸದಸ್ಯ ಸಹ ಆಗಿರಲಿಲ್ಲ. ನನಗೆ ಇದೆಲ್ಲ ಅಸಮಾಧಾನ ಕರ, ಅಸಂಬದ್ಧ, ಎನಿಸಿತು. ಆದರೆ ಆಗಾಗ ಕಾಂಗ್ರೆಸ್ ತಮ್ಮ ರೀತಿನೀತಿವಿರುದ್ಧ ಮಾಡುತ್ತಿದ್ದ ಅನೇಕ ತೀರ್ಮಾನಗಳಿಗೆ ತಮ್ಮ ವೈಯಕ್ತಿಕ ಜವಾಬ್ದಾರಿ ಇಲ್ಲವೆಂದು ಸಮಾಧಾನ ಪಡೆಯುತ್ತಿದ್ದರೋ ಏನೋ, ಅವರಲ್ಲಿ ಈ ಅಂತರ್ಯುದ್ಧ ಸದಾ ಇದ್ದೇ ಇತ್ತು; ರಾಷ್ಟ್ರ ನಾಯಕ ಗಾಂಧಿಗೂ, ಭಾರತ ಮಾತ್ರವಲ್ಲದೆ ಇಡೀ ಮಾನವಕುಲದ ಮತ್ತು ವಿಶ್ವದ ಧರ್ಮಪ್ರವರ್ತಕ ಗಾಂಧಿಗೂ ತನ್ನ ರಾಷ್ಟ್ರದ ರಾಜಕೀಯದಲ್ಲಿ ಈ ತುಮುಲ ಯುದ್ಧ ಇದ್ದೇ ಇತ್ತು. ಜೀವನದ ಅವಶ್ಯಕತೆ ಮತ್ತು ಸಮಯಾನುಕೂಲತೆಗಳ ಎದುರಿನಲ್ಲಿ ಮುಖ್ಯವಾಗಿ ರಾಜಕೀಯದಲ್ಲಿ ತಾನು ಕಂಡ ಸತ್ಯಕ್ಕೆ ಅಂಟಿಕೊಂಡು ನಡೆಯುವುದು, ಬಹು ಕಷ್ಟ. ಸಾಮಾನ್ಯವಾಗಿ ಜನರು ಈ ವಿಷಯ ಯಾವ ಯೋಚನೆ ಹಚ್ಚಿಕೊಳ್ಳುವುದಿಲ್ಲ. ಸತ್ಯ ಏನಾದರೂ ಇದ್ದರೆ ಅದು ಅವರ ಮನಸ್ಸಿನ ಎಲ್ಲೋ ಯಾವುದೋ ಒಂದು ಮೂಲೆಯಲ್ಲಿ ಪ್ರತ್ಯೇಕ ಅಡಗಿರುತ್ತದೆ ಮತ್ತು ಸಮಯಕ್ಕೆ ತಕ್ಕಂತೆ ತಮ್ಮ ಕಾರ್ಯ ನೀತಿ ಅನುಸರಿಸುತ್ತಾರೆ. ರಾಜಕಾರಣಿಗಳೆಲ್ಲ ದುರದೃಷ್ಟವಶಾತ್ ವಿಶೇಷವಾಗಿ ಸಮಯಾನುವರ್ತಿಗಳಾದುದರಿಂದಲೂ, ವೈಯಕ್ತಿಕ ದೃಷ್ಟಿಯಿಂದ ವರ್ತಿಸಲು ಅವರಿಗೆ ಸಾಧ್ಯವಿಲ್ಲದ್ದರಿಂದಲೂ ರಾಜಕೀಯದಲ್ಲಿ ಸಮಯಾನುಕೂಲವೇ ಸಾಮಾನ್ಯ ನೀತಿಯಾಗಿದೆ. ಇತರರಿಂದ ಅವರಿಗೆ ಕೆಲಸ ಆಗಬೇಕು; ಸತ್ಯನಿಷ್ಠೆ, ತಿಳಿವಳಿಕೆ ಮತ್ತು ಪರಿಮಿತಿಗಳನ್ನು ಅವರು ಗಮನಿಸಬೇಕು. ಆದ್ದರಿಂದ ಸತ್ಯಕ್ಕೆ ಸ್ವಲ್ಪ ಲೋಪವಾದರೂ, ಸುತ್ತಲಿನ ಸನ್ನಿವೇಶಕ್ಕನುಗುಣವಾಗಿ ಅದನ್ನು ಹೊಂದಿಸಿಕೊಳ್ಳಬೇಕು. ಈ ರೀತಿ ಸತ್ಯದ ಬೆಲೆ ಇಳಿಯುವುದು ಅನಿವಾರ್ಯವಾಗುತ್ತದೆ; ಆದರೆ ಅದರಲ್ಲಿ ದೊಡ್ಡ ಅಪಾಯವೂ ಇದೆ. ಸತ್ಯವನ್ನು ಅಲಕ್ಷಿಸಿ ಅದನ್ನು ಕೊಲೆಮಾಡುವ ಮನೋಭಾವ ಬೆಳೆಯುತ್ತದೆ. ಬಿಸಿಲು ಬಂದಂತೆ ಕೊಡೆ ಹಿಡಿಯುವುದೇ ಮುಖ್ಯ ಕಾರ್ಯನೀತಿಯಾಗುತ್ತದೆ.

ಗಾಂಧಿಜಿ ಕೆಲವು ಮೂಲ ತತ್ವಗಳಲ್ಲಿ ಕದಲದೆ ಬೆಟ್ಟದಂತೆ ಭದ್ರವಾಗಿದ್ದರು. ಆದರೆ ಅವರು ಇತರರ ಅಭಿಪ್ರಾಯಗಳಿಗೆ ಸಂದರ್ಭೋಚಿತವಾಗಿ ಹೊಂದಿಕೊಳ್ಳುವುದರಲ್ಲೂ, ಇತರರ ಬಲಾಬಲಗಳನ್ನು ಅರಿಯುವುದರಲ್ಲಿ, ಮುಖ್ಯವಾಗಿ ಜನತೆಯ ಶಕ್ತಿ ಸಾಮರ್ಥ್ಯಗಳನ್ನು ಅಳೆಯುವುದರಲ್ಲಿ ಮತ್ತು ತಮ್ಮ ಸತ್ಯದ ಕಲ್ಪನೆಯಲ್ಲಿ ಎಷ್ಟರಮಟ್ಟಿಗೆ ತಮ್ಮೊಂದಿಗೆ ಜನರು ಬರಲು ಸಾಧ್ಯ ಎಂದು ನಿರ್ಧರಿಸುವುದರಲ್ಲಿ ಬಹಳ ಸಮರ್ಥರಿದ್ದರು. ಆದರೆ ತಮ್ಮ ತತ್ವ ಬಿಟ್ಟು ಬಹುದೂರ ಬಂದಿರಬಹುದೇನೋ ಎಂದು ಭಯಗೊಂಡಂತೆ ಆಗಿಂದಾಗ ಎಚ್ಚತ್ತು ಪುನಃ ತಮ್ಮ ದಾರಿಯ ಸಮೀಪ ಸೇರುತ್ತಿದ್ದರು. ಹೋರಾಟದ ಮಧ್ಯೆ ಜನಮನದ ಧಾಟಿಯೊಂದಿಗೆ ತಾವೂ ನಿಂತು, ಅದರ ಶಕ್ತಿಯನ್ನು ಸದುಪಯೋಗ ಮಾಡಿಕೊಂಡು ಅದರ ಓಟದೊಂದಿಗೆ ತಾವೂ ನಡೆಯುತ್ತಿದ್ದರು; ಇತರ ಕಾಲಗಳಲ್ಲಿ ಹೆಚ್ಚು ತಾತ್ವಿಕ ದೃಷ್ಟಿ ತೋರಿ ಜನಾಭಿಪ್ರಾಯದೊಂದಿಗೆ ನಡೆಯಲು ಅವರಿಗೆ ಕಷ್ಟವಾಗುತ್ತಿತ್ತು. ಈ ವ್ಯತ್ಯಾಸ ಅವರ ಎಲ್ಲ ಕಾರ್ಯಗಳಲ್ಲಿ ಮತ್ತು ಬರವಣಿಗೆಯಲ್ಲಿ