ಪುಟ:ಭಾರತ ದರ್ಶನ.djvu/೪೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೧೪

ಭಾರತ ದರ್ಶನ

ಅವಕಾಶ ದೊರೆಯುವಂತೆ ವಿಶ್ವ ಪ್ರಯತ್ನ ಮಾಡಬೇಕೆಂದು ಈ ಸಮಿತಿಯು ಅಭಿಪ್ರಾಯ ಪಡುತ್ತದೆ. ಆ ತತ್ವ ಒಪ್ಪುವುದೆಂದರೆ ಹೊಸ ಸಮಸ್ಯೆಗಳನ್ನು ಎಬ್ಬಿಸುವ ಯಾವ ಬದಲಾವಣೆಗಳನ್ನೂ ಮಾಡಬಾರದು; ಮತ್ತು ಆ ಭಾಗಗಳ ದೊಡ್ಡ ಪಂಗಡಗಳ ಮೇಲೆ ಯಾವ ಒತ್ತಾಯವನ್ನೂ ಮಾಡಬಾರದು. ಶಕ್ತಿಯುತ ರಾಷ್ಟ್ರೀಯ ಕೇಂದ್ರ ಸರಕಾರ ಏರ್ಪಟ್ಟು ಅದರ ಶಕ್ತಿಯನ್ನು ಕುಂದಿಸದಂತೆ ಪ್ರತಿಯೊಂದು ಭಾಗಕ್ಕೂ ಆದಷ್ಟು ಸಂಪೂರ್ಣ ಸ್ವಾತಂತ್ರ್ಯವಿರಬೇಕು. ಬ್ರಿಟನ್ನಿನ ಯುದ್ಧ ಮಂತ್ರಿಮಂಡಲದ ಸಲಹೆಗಳಿಂದ ಒಕ್ಕೂಟದ ಆರಂಭದಲ್ಲಿಯೇ ಭಾರತವನ್ನು ತುಂಡರಿಸುವ ಪ್ರಯತ್ನಕ್ಕೆ ಪ್ರೋತ್ಸಾಹವಿದೆ. ವಿಶೇಷ ಸಹಕಾರವೂ ಸೌಹಾರ್ದವೂ ಅವಶ್ಯವಿರುವಾಗ ಕಚ್ಚಾಟಕ್ಕೆ ಹೆಚ್ಚು ಅವಕಾಶ ದೊರೆಯುತ್ತಿದೆ. ಪ್ರಾಯಶಃ ಒಂದು ಕೋಮಿನ ಬೇಡಿಕೆಯ ತೃಪ್ತಿಗೆಂದು ಈ ಸಲಹೆಮಾಡಿರಬಹುದು. ಆದರೆ ಅದರ ಇತರ ಪರಿಣಾಮಗಳು ಬಹಳ ಅನರ್ಥಕಾರಿ ಇವೆ. ರಾಜಕೀಯದಲ್ಲಿ ವಿವಿಧ ಕೋಮುಗಳಿಗೆ ಪ್ರತಿಗಾಮಿ ಪಕ್ಷಗಳು ಮತ್ತು ವಿರೋಧ ಪಂಗಡಗಳಿಗೆ ಅಡ್ಡ ಬರಲು ಅವಕಾಶಕೊಟ್ಟು ದೇಶದ ಪ್ರಮುಖ ವಿಷಯ ಅಲಕ್ಷಿಸಿ ಅಲ್ಪ ವಿಷಯಗಳಿಗೆ ಪ್ರಾಮುಖ್ಯತೆ ಕೊಡುವ ಪ್ರಯತ್ನ ನಡೆದಿದೆ.”

"ಇಂದಿನ ವಿಷಮ ಪರಿಸ್ಥಿತಿಯಲ್ಲಿ ಪ್ರಸ್ತುತ ಪ್ರಶ್ನೆಯೇ ಮುಖ್ಯವಾದುದು; ಮುಂದಿನ ಸಲಹೆಗಳು ಸಹ ಪ್ರಸಕ್ತ ಪರಿಸ್ಥಿತಿಯ ಮೇಲೆ ಎಷ್ಟರಮಟ್ಟಿಗೆ ಏನು ಪರಿಣಾಮ ಮಾಡುತ್ತವೆ ಎಂಬುದನ್ನೇ ಅವಲಂಬಿಸಿವೆ.” ಎಂದು ಸಹ ಅಭಿಪ್ರಾಯ ಪಟ್ಟಿತು. ಭವಿಷ್ಯಕ್ಕಾಗಿ ಮಾಡಿದ ಸಲಹೆ ಒಪ್ಪಲು ಕಾಂಗ್ರೆಸ್ಸಿಗೆ ಸಾಧ್ಯವಿಲ್ಲದೆ ಹೋದರೂ ಭಾರತವು ಯೋಗ್ಯ ರೀತಿಯಲ್ಲಿ ದೇಶದ ರಕ್ಷಣೆಯ ಕಾರದ ಹೊರೆ ನಿರ್ವಹಿಸಲು ಸಾಧ್ಯವಾದ ಯಾವ ಗೌರವಯುತ ಒಪ್ಪಂದಕ್ಕಾದರೂ ಸಿದ್ಧವಿರುವುದಾಗಿ ಸಹ ತಿಳಿಸಿತು. ಇದರಲ್ಲಿ ಅಹಿಂಸೆಯ ಪ್ರಶ್ನೆಯೇ ಏಳಲಿಲ್ಲ, ಯಾವ ಸಮಯದಲ್ಲೂ ಅದರ ಪ್ರಸ್ತಾಪ ಸಹ ಬರಲಿಲ್ಲ. ಅದಕ್ಕೆ ಪ್ರತಿಯಾಗಿ ರಕ್ಷಣಾ ಮಂತ್ರಿ ಒಬ್ಬ ಭಾರತೀಯನಿರಬೇಕೆಂದು ಚರ್ಚೆಸಹ ಮಾಡಲಾಯಿತು.

ಭಾರತಕ್ಕೆ ಒದಗಿದ ಯುದ್ಧ ವಿಪತ್ತಿನ ದೃಷ್ಟಿಯಿಂದ ಭವಿಷ್ಯದ ಪ್ರಶ್ನೆ ಯನ್ನೆಲ್ಲ ಬದಿಗಿಟ್ಟು, ಯುದ್ಧ ಸನ್ನದ್ಧತೆಯಲ್ಲಿ ಪೂರ್ಣ ಸಹಕರಿಸ ಬಲ್ಲ ಒಂದು ಸ್ವಸಮರ್ಥ ರಾಷ್ಟ್ರೀಯ ಸರಕಾರ ಸ್ಥಾಪನೆಯೇ ಕಾಂಗ್ರೆಸ್ಸಿನ ಅಂದಿನ ನಿಲುವಾಗಿತ್ತು. ವಿನಾಶಕಾರಕ ನಿರ್ಬಂಧಗಳೇ ಹೆಚ್ಚು ಇದ್ದ ಕಾರಣ ಭಾರತದ ಭವಿಷ್ಯ ಕುರಿತು ಬ್ರಿಟಿಷ್ ಸರಕಾರ ಮಾಡಿದ ಸಲಹೆ ಒಪ್ಪಲು ಕಾಂಗ್ರೆಸ್ಸಿಗೆ ಸಾಧ್ಯವಿರಲಿಲ್ಲ. ಬೇಕಾದರೆ ಆ ಸಲಹೆ ಹಿಂದಕ್ಕೆ ತೆಗೆದುಕೊಳ್ಳಲಿ ಅಥವ ಹಾಗೇ ಬಿಡಲಿ. ಆದರೆ ಕಾಂಗ್ರೆಸ್ ಮಾತ್ರ ಅದನ್ನು ಒಪ್ಪಿಲ್ಲ ವೆಂದು ಸ್ಪಷ್ಟ ತಿಳಿದುಕೊಳ್ಳಲಿ; ಮತ್ತು ಪ್ರಸ್ತುತ ಪರಿಸ್ಥಿತಿಯ ಗಂಡಾಂತರ ಎದುರಿಸಲು ನಾವು ಒಂದು ಉಪಾಯ ಕಂಡು ಹಿಡಿಯಲು ಅದು ಅಡ್ಡ ಬರದಿರಲಿ ಎಂದು ಇಷ್ಟ ಪಟ್ಟಿತು. ಸಧ್ಯ ಪರಿಸ್ಥಿತಿ ವಿಷಯದಲ್ಲಿ ಬ್ರಿಟಿಷ್ ಯುದ್ಧ ಮಂತ್ರಿ ಸಂಪುಟದ ಸಲಹೆ ಅಸ್ಪಷ್ಟವೂ ಅಪೂರ್ಣವೂ ಇತ್ತು. ಭಾರತದ ರಕ್ಷಣೆ ಮಾತ್ರ ಬ್ರಿಟಿಷ್ ಸರಕಾರದ ಏಕಾಧಿಪತ್ಯದಲ್ಲಿ ಇರಬೇಕೆಂದು ಸ್ಪಷ್ಟ ಪಡಿಸಲಾಗಿತ್ತು. ಸರ್ ಸ್ಟಾಫರ್ ಕ್ರಿಪ್ಸ್ ಮೇಲಿಂದ ಮೇಲೆ ಕೊಟ್ಟ ಹೇಳಿಕೆಗಳಿಂದ ಸಂರಕ್ಷಣ ಖಾತೆ ಒಂದುಳಿದು ಎಲ್ಲ ವಿಷಯಗಳೂ ಪೂರ್ಣ ಭಾರತೀಯ ಆಡಳಿತಕ್ಕೆ ಬರುವುವೆಂದು ಸ್ಪಷ್ಟವಾಯಿತು. ಇಂಗ್ಲೆಂಡಿನ ದೊರೆಯಂತೆ ಮಂತ್ರಿ ಮಂಡಲದ ಸಲಹೆ ಪಡೆದು ವೈಸರಾಯ್ ಅಧಿಕಾರ ನಡೆಸಬಹುದೆಂದು ಸಹ ಹೇಳಿದ್ದನು. ಇದರಿಂದ ಉಳಿದ ಪ್ರಶ್ನೆ ಎಂದರೆ ಸಂರಕ್ಷಣಾ ಖಾತೆಯ ವಿಚಾರ ಮಾತ್ರ ಎಂದು ನಾವು ಭಾವಿಸಿದೆವು. ಆದರೆ ರಕ್ಷಣೆಯ ನೆಪದಲ್ಲಿ ರಾಷ್ಟ್ರದ ಎಲ್ಲ ಚಟುವಟಿಕೆ ಮತ್ತು ಕಾವ್ಯಗಳನ್ನೂ ಆಕ್ರಮಿಸಬಹುದೆಂದು ನಮ್ಮ ಭಯ ಇತ್ತು, ಯುದ್ಧ ಕಾಲದಲ್ಲಿ ಆರೀತಿ ಆಗುವುದು ಸಹಜವೂ ಇತ್ತು. ಸಂರಕ್ಷಣ ಖಾತೆ ರಾಷ್ಟ್ರೀಯ ಸರಕಾರದ ಅಧಿಕಾರದಿಂದ ಪೂರ್ಣ ಬೇರೆ ಆದರೆ ರಾಷ್ಟ್ರೀಯ ಸರಕಾರಕ್ಕೆ ಯುದ್ಧ ಕಾಲದಲ್ಲಿ ಬೇರೆ ಯಾವ ಕೆಲಸವೂ ಇರುತ್ತಿರಲಿಲ್ಲ. ಸೈನ್ಯ ಪಡೆಗಳ ಮೇಲೆ ಮತ್ತು ಯುದ್ಧಾಚರಣೆಯಲ್ಲಿ ಬ್ರಿಟಿಷ್ ಸೈನ್ಯಾಧಿಪತಿಯು ಪೂರ್ಣ ಅಧಿಕಾರ ನಡೆಸಬಹುದೆಂದು ನಾವು ಒಪ್ಪಿದೆವು. ಯುದ್ಧದ ಸಾಮಾನ್ಯ ರೀತಿ ನೀತಿ ಎಲ್ಲ ಸಾಮ್ರಾಜ್ಯ ರಕ್ಷಣಾ ಮಂಡಲಿಯ ಆಡಳಿತದಲ್ಲಿ ಇರಬಹುದೆಂದೂ ಒಪ್ಪಿದೆವು. ಆದರೆ ರಾಷ್ಟ್ರೀಯ ಸರಕಾರದಲ್ಲಿ ಒಬ್ಬ ರಕ್ಷಣಾಮಂತ್ರಿ ಇರಬೇಕೆಂದು ಮಾತ್ರ ಕೇಳಿದೆವು.