ಸ್ವಲ್ಪ ಚರ್ಚೆಯನಂತರ ಸಂರಕ್ಷಣಾಖಾತೆ ಒಬ್ಬ ಭಾರತೀಯ ಮಂತ್ರಿಯ ಕೈಯಲ್ಲಿ ಇರಬಹುದೆಂದು ಕ್ರಿಪ್ಸ್ ಒಪ್ಪಿದನು; ಆದರೆ ಆ ಇಲಾಖೆಯ ಕೆಲಸ ಸಾರ್ವಜನಿಕ ಸಂಪರ್ಕ, ಪೆಟ್ರೋಲಿಯಂ, ಮಿಲಿಟರಿ ಉಪಾಹಾರ ಮಂದಿರಗಳು, ಲೇಖನ ಸಾಮಗ್ರಿ ಮತ್ತು ಮುದ್ರಣ, ವಿದೇಶಿ ನಿಯೋಗ ಮಂಡಲಿಗಳ ಸತ್ಕಾರ ವ್ಯವಸ್ಥೆ, ಸೈನಿಕರ ಸೌಕಯ್ಯ ವ್ಯವಸ್ಥೆ ಮಾತ್ರ ಎಂದನು. ಈ ವಿಚಿತ್ರ ಅಧಿಕಾರ ಪಟ್ಟಿಯಿಂದ ಭಾರತದ ರಕ್ಷಣಾ ಮಂತ್ರಿಯ ಸ್ಥಾನ ಕೇವಲ ಹಾಸ್ಯಾಸ್ಪದ ಕಂಡಿತು. ಚರ್ಚೆ ಮುಂದುವರಿಸಿದಂತೆ ವಿಷಯ ಪ್ರವೇಶ ಬೇರೆ ಬೇರೆ ಬಣ್ಣ ತಾಳಿತು. ಇಬ್ಬರ ದೃಷ್ಟಿಗೂ ಬಹಳ ಅಂತರವಿದ್ದರೂ ಪರಸ್ಪರ ಸಮೀಪಿಸುತ್ತಿದ್ದಂತೆ ತೋರಿತ್ತು. ಮೊಟ್ಟಮೊದಲಿಗೆ ನಾನೂ, ಇತರರೂ ಒಪ್ಪಂದ ಸಾಧ್ಯವೆಂದು ಭಾವಿಸಿದೆವು. ಯುದ್ಧ ಪರಿಸ್ಥಿತಿ ನಿಮಿಷ ನಿಮಿಷಕ್ಕೂ ವಿಷಮಿಸುತ್ತ ಇದ್ದುದರಿಂದ ಹೇಗಾದರೂ ಒಪ್ಪಂದಕ್ಕೆ ಬರಬೇಕೆಂದು ಎಲ್ಲರಲ್ಲೂ ಕಾತರತೆ ಹುಟ್ಟಿತು.
ಯುದ್ಧ ಮತ್ತು ಮುತ್ತಿಗೆಯ ವಿಪತ್ತು ಅತಿ ಸಮಿಾಪಿಸಿತ್ತು ; ಹೇಗಾದರೂ ಅದನ್ನು ಎದುರಿಸಬೇಕಾಗಿತ್ತು. ಎದುರಿಸಲು ಅನೇಕ ದಾರಿಗಳೇನೋ ಇದ್ದುವು. ಆದರೆ ಇಂದೆಯೂ ಮುಂದೆಯೂ ಯಶಸ್ವಿಯಾಗಿ ಯುದ್ಧ ಎದುರಿಸಬೇಕಾದರೆ ಒಂದೇ ಮಾರ್ಗವಿತ್ತು. ಆದರೆ ಎಣ್ಣೆ ಬಂದಾಗ ಕಣ್ಣು ಮುಚ್ಚಿ ಕುಳಿತರೆ ಸಧ್ಯದ ಪರಂಪರೆ ಹೆಚ್ಚುವುದಲ್ಲದೆ ಮುಂದೆ ಮಹಾ ವಿಪತ್ತು ಒದಗಬಹುದೆಂಬ ಭಯವೂ ನಮಗೆ ಇತ್ತು. ಹಳೆಯ ಶಸ್ತ್ರಾಸ್ತ್ರಗಳಲ್ಲದೆ ಹೊಸ ಶಸ್ತ್ರಾಸ್ತ್ರಗಳು ಬೇಕಿದ್ದವು. ಅವುಗಳ ನವೀನ ರೀತಿಯ ಪ್ರಯೋಗ ಅವಶ್ಯವಿತ್ತು; ಹೊಸ ಉತ್ಸಾಹ, ಹೊಸ ದೃಷ್ಟಿ, ಇದುವರೆಗಿನ ಪರಿಸ್ಥಿತಿಗಿಂತ ತೀರ ಭಿನ್ನವಾದ ಭವಿಷ್ಯದಲ್ಲಿ ಹೊಸ ನಂಬಿಕೆ ಅವಶ್ಯ ಇದ್ದವು. ಆದರೆ ಇಂದಿನ ಪರಿಸ್ಥಿತಿ ಬದಲಾವಣೆಯಾದರೆ ಮಾತ್ರ ಅದೆಲ್ಲ ಸಾಧ್ಯ ವಿತ್ತು. ಪ್ರಾಯಶಃ ನಮ್ಮ ಅಮಿತ ಉತ್ಸಾಹದ ಭರವೇ ನಮ್ಮನ್ನು ಅಷ್ಟು ಆಶಾವಾದಿಗಳನ್ನಾಗಿ ಮಾಡಿತೋ ಏನೋ ; ನಮಗೂ ಬ್ರಿಟಿಷ್ ಆಡಳಿತಗಾರರಿಗೂ ಮಧ್ಯೆ ಹರಡಿದ್ದ ಅಪಾರ ಅಂತರದ ವಿಸ್ತಾರವನ್ನೂ, ಆಳವನ್ನೂ ತಾತ್ಕಾಲಿಕ ಆದರೂ ಮರೆಯುವಂತೆ ಮಾಡಿತೋ ಏನೋ? ಆದರೆ ಪ್ರಳಯಾಂತಕ ವಿಪತ್ತಿನ ಎದುರು ನಿಂತಿದ್ದರೂ ಶತಮಾನಗಳ ವ್ಯಾಜ್ಯ ಬಗೆಹರಿಯುವ ಸಂಭವವಿರಲಿಲ್ಲ. ಬೇರೆ ಮಾರ್ಗ ಇಲ್ಲದೆ ಅನಿರ್ವಾಹ ಸಂದರ್ಭ ಹೊರತು ಯಾವ ಸಾಮ್ರಾಜ್ಯವೂ ಅಧೀನ ರಾಷ್ಟ್ರಗಳ ಮೇಲೆ ತನ್ನ ಹಿಡಿತ ಸಡಿಲಿಸಿಲ್ಲ. ಅಂದಿನ ಪರಿಸ್ಥಿತಿಯಲ್ಲಿ ಆ ಒತ್ತಾಯ, ಆ ಭಾವನೆ ಇದ್ದು ವೇನು? ನಮಗೆ ತಿಳಿಯದು; ಆದರೆ ಇದ್ದು ಎಂದು ಭಾವಿಸಿದೆವು.
ಈರೀತಿ ತುಂಬ ಆಶಾವಾದಿಯಾಗಿದ್ದಾಗ ಏನೇನೋ ವಿಚಿತ್ರ ಘಟನೆಗಳು ಆದವು. ಅಮೆರಿಕದ ಸಂಯುಕ್ತ ಸಂಸ್ಥಾನದಲ್ಲಿ ಎಲ್ಲಿಯೋ ಒಂದು ಕಡೆ ಮಾತನಾಡುತ್ತ ಲಾರ್ಡ್ ಹ್ಯಾಲಿಫ್ಯಾಕ್ಸ್ ಕಾಂಗ್ರೆಸ್ಸಿನ ಮೇಲೆ ಕುತ್ಸಿತ ಟೀಕೆ ಮಾಡಿದನು. ದೂರದ ಅಮೆರಿಕೆಯಲ್ಲಿ ಇದೇ ಸಮಯ ಈ ರೀತಿ ಏಕೆ ಮಾಡಬೇಕಾಗಿತ್ತೊ ಅರ್ಥವಾಗಲಿಲ್ಲ. ಬ್ರಿಟಿಷ್ ಸರಕಾರದ ಅಭಿಪ್ರಾಯ ಮತ್ತು ನೀತಿಯನ್ನೇ ಆತ ಪ್ರತಿಬಿಂಬಿಸದಿದ್ದರೆ ಕಾಂಗ್ರೆಸ್‌ನೊಂದಿಗೆ ಭಾರತದಲ್ಲಿ ಸಂಧಾನ ನಡೆಯುವಾಗಲೇ ಆತನ ಈ ವರ್ತನೆಯ ಔಚಿತ್ಯವೇನು? ದೆಹಲಿಯಲ್ಲಿ ವೈಸರಾಯ್ ಲಾರ್ಡ್ ಲಿನ್ ಲಿತ್ ಗೌ ಮತ್ತು ಸಿವಿಲ್‌ಸರ್ವಿಸಿನ ಉನ್ನತ ಅಧಿಕಾರಿಗಳಿಗೆ ಯಾವ ಒಪ್ಪಂದವೂ ಬೇಕಿರಲಿಲ್ಲವೆಂದೂ, ತಮ್ಮ ಅಧಿಕಾರ ಕಡಮೆಮಾಡಿಕೊಳ್ಳಲು ಸಿದ್ಧರಿರಲಿಲ್ಲವೆಂದೂ ಜನಜನಿತವಾಗಿತ್ತು. ತೆರೆಮರೆಯಲ್ಲಿ ನಡೆದುದೆಲ್ಲ ಗಾಳಿಯ ವರ್ತಮಾನವಾಗಿ ಹೇಗೋ ಹೊರಗೆ ಬೀಳುತ್ತಿತ್ತು.
ಸಂರಕ್ಷಣಾ ಮಂತ್ರಿಯು ಅಧಿಕಾರ ವಿಷಯದಲ್ಲಿ ಹೊಸ ಸಲಹೆ ಚರ್ಚಿಸಲು ನಾವು ಕ್ರಿಪ್ಸನನ್ನು ನೋಡಿದಾಗ ನಮ್ಮ ಹಿಂದಿನ ಸಂಭಾಷಣೆ ಎಲ್ಲ ನಿರರ್ಥಕವೆಂದೂ, ನಿಜವಾದ ಅಧಿಕಾರವಿರುವ ಮಂತ್ರಿಗಳಿಗೆ ಅವ ಕಾಶವಿಲ್ಲವೆಂದೂ ಸ್ಪಷ್ಟವಾಯಿತು. ಈಗಿರುವ ವೈಸರಾಯ್ ಕಾರ್ಯಕಾರಿ ಮಂಡಲವೇ ಇರಬೇಕೆಂದೂ ಆ ಮಂತ್ರಿಮಂಡಲಕ್ಕೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಕೆಲವರನ್ನು ಹೊಸ ಸದಸ್ಯರನ್ನಾಗಿ ನೇಮಿಸಬಹುದೆಂದೂ ಸಲಹೆ ಮಾಡಿದನು. ಈ ಮಂತ್ರಿಮಂಡಲಕ್ಕೂ ಕ್ಯಾಬಿನೆಟ್ ಬಗೆಯ ಮಂತ್ರಿ ಸಂಪುಟಕ್ಕೂ ಯಾವ ಸಂಬಂಧವೂ ಇರಲಿಲ್ಲ. ಈಗಿನ ಸಲಹಾ ಮಂಡಲವು ಇಲಾಖೆಯ ಅಧಿಕಾರಿಗಳ ಅಥವ