ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೪೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೪೨೦
ಭಾರತ ದರ್ಶನ

ಏನನ್ನಾದರೂ ವಶಪಡಿಸಿಕೊಳ್ಳಲು ಯತ್ನಮಾಡಿದರೆ ಸಾಯುವವರೆಗೂ ಹೋರಾಡಿ ರಕ್ಷಿಸಬೇಕೆಂದು ತಿಳಿಸಿದೆವು. ಈ ಹೋರಾಟವು ಶಾಂತಿಯುತ ಇರಬೇಕೆಂದೂ, ಶತ್ರುವಿನೊಂದಿಗೆ ಸಂಪೂರ್ಣ ಅಸಹಕಾರದಿಂದ ವರ್ತಿಸಬೇಕೆಂದೂ ಹೇಳಿದೆವು.

ದಂಡೆತ್ತಿ ಮುತ್ತಿಗೆ ಹಾಕಲು ಬಂದ ಶತ್ರುವನ್ನು ಅಹಿಂಸಾತ್ಮಕ ಅಸಹಕಾರದಿಂದ ಎದುರಿಸಲೆತ್ನಿಸುವುದು ಹುಚ್ಚುತನವೆಂದು ಅನೇಕರು ಅಪಹಾಸ್ಯ ಮಾಡಿ ಟೀಕಿಸಿದರು, ಹೇಡಿತನದ ಬದಲು ಜನರಿಗೆ ಇದ್ದ ಧೈರ್ಯಯುತ ಮಾರ್ಗವೆಂದರೆ ಇದು ಒಂದೇ ಎಂದು ನಾವು ಮನಗಂಡಿದ್ದೆವು. ಸೈನ್ಯದ ಯೋಧರಿಗೆ ಯಾವ ಸಲಹೆಯನ್ನೂ ಕೊಡಲಿಲ್ಲ. ಶಸ್ತ್ರಸಜ್ಜಿತ ವಿರೋಧಕ್ಕೆ ಪ್ರತಿಯಾಗಿ ಶಾಂತಿಯುತ ಹೋರಾಟ ನಡೆಸಬೇಕೆಂದೂ ಅವರಿಗೆ ಹೇಳಲಿಲ್ಲ. ಬ್ರಿಟಿಷ್ ಶಸ್ತ್ರಸಜ್ಜಿತ ಸೈನ್ಯಗಳು ಸೋತಾಗ ಅಥವ ಹಿಮ್ಮೆಟ್ಟದಾಗ ಸ್ವಾಭಾವಿಕವಾಗಿ ಶತ್ರುವಿಗೆ ಶರಣು ಹೋಗತಕ್ಕ ನಿಶ್ಯಸ್ತ ಸಾಮಾನ್ಯ ಪ್ರಜೆಗಳಿಗೆ ಮಾತ್ರ ಈ ಬುದ್ಧಿವಾದ ಕೊಟ್ಟೆವು. ಕ್ರಮವಾದ ಶಸ್ತ್ರಸಜ್ಜಿತ ಸೈನ್ಯ ಪಡೆಗಳಿಲ್ಲದೆ ಶತ್ರುವಿಗೆ ಹಿಂಸೆ ಕೊಡಲು ಮುಸುಕಿನ ದಂಡುಗಳನ್ನು ರಚಿಸಲು ಸಾಧ್ಯವಿದೆ. ಆದರೆ ಇದಕ್ಕೆ ಶಿಕ್ಷಣವೂ, ಶಸ್ತ್ರಾಸ್ತ್ರಗಳೂ, ಕ್ರಮವಾದ ಸೈನ್ಯದ ಪೂರ್ಣ ಸಹಕಾರವೂ ಅವಶ್ಯವಿರುವುದರಿಂದ ಇದು ನಮಗೆ ಸಾಧ್ಯವಿರಲಿಲ್ಲ. ಆ ರೀತಿ ಕೆಲವು ಮುಸುಕಿನ ದಂಡುಗಳನ್ನು ಸಿದ್ದ ಪಡಿಸಿದರೂ ಸಾಮಾನ್ಯ ಪ್ರಜೆಗಳು ಕೋಟ್ಯಂತರ ಉಳಿಯುತ್ತಲೇ ಇದ್ದರು. ಸ್ವಾಭಾವಿಕವಾಗಿ ದೇಶದ ಸಾಮಾನ್ಯ ಪ್ರಜೆಗಳು ಜಯಶಾಲಿಯಾದ ಶತ್ರುವಿಗೆ ಶರಣು ಹೋಗುವುದೇ ರೂಢಿ, ಸೈನ್ಯವೂ, ಉನ್ನತ ಅಧಿಕಾರಿಗಳೂ ಹಿಮ್ಮೆಟ್ಟದನಂತರ ಸಣ್ಣ ಸಣ್ಣ ಅಧಿಕಾರಿಗಳೆಲ್ಲರೂ ಶತ್ರುವಿಗೆ ಶರಣಾಗತರಾಗಬೇಕೆಂದು ಬ್ರಿಟಿಷ್ ಅಧಿಕಾರಿಗಳು ಮೊದಲೇ ಸೂಚನೆ ಕೊಟ್ಟಿದ್ದಂತೆ ತಿಳಿಯಿತು.

ಶಾಂತಿಯುತ ಅಸಹಕಾರದಿಂದ ಶತ್ರು ಪಡೆಯ ಮುನ್ನೋಟ ತಡೆಯಲು ಸಾಧ್ಯವಿಲ್ಲವೆಂದು ನಮಗೆ ತಿಳಿದಿತ್ತು. ಎಷ್ಟೇ ಇಷ್ಟವಾದರೂ ಸಾಮಾನ್ಯ ಪ್ರಜೆಗಳನೇಕರಿಗೆ ಈ ಅಹಿಂಸಾತ್ಮಕ ಹೋರಾಟ ಬಹು ಕಷ್ಟವೆಂದೂ ಅರಿತಿದ್ದೆವು. ಆದರೂ ಶತ್ರು ವಶವಾದ ನಗರಗಳಲ್ಲಿ ಮತ್ತು ಹಳ್ಳಿಗಳಲ್ಲಿ ಕೆಲವು ಪ್ರಮುಖ ವ್ಯಕ್ತಿಗಳಾದರೂ ಅಹಿಂಸಾ ರೀತಿಯಲ್ಲಿ ಶತ್ರುವಿಗೆ ತಲೆಬಾಗಲು ಒಪ್ಪದಿರಬಹುದೆಂದೂ, ಅವರ ಆಜ್ಞೆ ಗಳನ್ನು ತೃಣೀಕರಿಸಬಹುದೆಂದೂ, ಆಹಾರ ಸರಬರಾಜು ಮುಂತಾದ ಕೆಲಸಗಳಲ್ಲಿ ಸಹಾಯ ನಿರಾಕರಿಸ ಬಹುದೆಂದೂ ಆಶಿಸಿದ್ದೆವು. ಪ್ರಾಯಶಃ ಅದಕ್ಕೆ ಉಗ್ರ ಶಿಕ್ಷೆಯೂ, ಸಾವು ನೋವುಗಳೂ ಕಾದಿದ್ದವು. ಆದರೆ ಅತ್ಯಲ್ಪ ಜನರಾದರೂ ಕೆಲವರು ಆರೀತಿ ಸಾವನ್ನು ಅಪ್ಪಿ ವಿರೋಧ ವ್ಯಕ್ತ ಪಡಿಸಿದರೆ ಯುದ್ಧರಂಗ ಪ್ರದೇಶದಲ್ಲಿ ಮಾತ್ರವಲ್ಲದೆ ಭಾರತದ ಉಳಿದ ಕಡೆಗಳಲ್ಲಿ ಸಹ ಸಾಮಾನ್ಯ ಜನರ ಮೇಲೆ ಅದ್ಭುತ ನೈತಿಕ ಪರಿಣಾಮ ಆಗುವುದೆಂದು ನಂಬಿದ್ದೆವು. ಈ ರೀತಿ ಇಡೀ ರಾಷ್ಟ್ರದಲ್ಲೆಲ್ಲ ಒಂದು ಅಹಿಂಸಾತ್ಮಕ ಹೋರಾಟ ನಡೆಸಬೇಕೆಂಬ ದೃಢ ಸಂಕಲ್ಪದ ಭಾವನೆ ಬೆಳೆಯಬೇಕೆಂದು ಯೋಚಿಸಿದೆವು.

ಅಧಿಕಾರಿಗಳ ವಿರೋಧವಿದ್ದರೂ ಅದನ್ನು ಅಲಕ್ಷಿಸಿ ಕೆಲವು ತಿಂಗಳಿಂದ ನಗರ ಮತ್ತು ಹಳ್ಳಿಗಳಲ್ಲಿ ಆಹಾರ ಸಮಿತಿಗಳನ್ನೂ, ಆತ್ಮರಕ್ಷಣಾ ಪಡೆಗಳನ್ನೂ ರಚಿಸಲು ಆರಂಭಿಸಿದ್ದೆವು. ಆಹಾರ ಸಮಸ್ಯೆ ಆಗಲೇ ವಿಷಮ ಪರಿಸ್ಥಿತಿ ಮುಟ್ಟಿತ್ತು. ಯುದ್ಧದೆಸೆಯಿಂದ ಆಹಾರ ಸಾಗಾಟ ಮತ್ತು ಸರಬರಾಜಿಗೆ ತೊಂದರೆ ಹೆಚ್ಚಿ ಸರಬರಾಜು ವ್ಯವಸ್ಥೆಯೇ ಎಂದಾದರೂ ಕುಸಿದು ಬೀಳಬಹುದೆಂದು ಭಯಗೊಂಡೆವು. ಈ ವಿಷಯದಲ್ಲಿ ಸರಕಾರವು ಏನನ್ನೂ ಮಾಡಲಿಲ್ಲ. ಗ್ರಾಮಾಂತರಗಳಲ್ಲಿ ಸ್ವಸಂಪೂರ್ಣ ಪಡೆಗಳನ್ನು ಏರ್ಪಡಿಸಿ ಆಧುನಿಕ ಸಂಚಾರ ಸೌಕಯ್ಯ ಕುಸಿದು ಬಿದ್ದರೆ ಹಿಂದಿನ ಕಾಲದಂತೆ ಎತ್ತಿನಗಾಡಿಗಳ ಸಾರಿಗೆಗೆ ಪ್ರೋತ್ಸಾಹಕೊಡಿರೆಂದು ತಿಳಿಸಿದೆವು. ಪೂರ್ವದಿಂದ ಮುತ್ತಿಗೆಯು ಆರಂಭವಾದರೆ ಚೀನಾದಲ್ಲಿ ಆದಂತೆ ಅನೇಕ ನಿರಾಶ್ರಿತರೂ ದೇಶಾಂತರ ಬಂದವರೂ ಪಶ್ಚಿಮದ ಕಡೆ ಹೊರಳುವ ಸಂಭವವಿತ್ತು. ಅವರನ್ನು ಸ್ವಾಗತಿಸಿ ಅವರಿಗೆ ಸೌಲಭ್ಯ ಕಲ್ಪಿಸಲು ಸಿದ್ಧರಾದೆವು. ಸರಕಾರದ ಸಹಾಯವಿಲ್ಲದೆ ಇದೆಲ್ಲ ಸಿದ್ದತೆ ಬಹಳ ಕಷ್ಟವಿತ್ತು; ಸಾಧ್ಯವೇ ಇರಲಿಲ್ಲ; ಆದರೂ ಸಾಧ್ಯವಾವ ಎಲ್ಲ ಪ್ರಯತ್ನವನ್ನೂ ಮಾಡಿದೆವು. ಸ್ವಯಂ ರಕ್ಷಣಾ ಪಡೆಗಳ ಕರ್ತವ್ಯವು ಈ ಎಲ್ಲ ಕೆಲಸಗಳಲ್ಲಿ ಸಹಾಯಮಾಡಿ, ಜನರು ಭಯಗ್ರಸ್ತರಾಗದಂತೆ ಧೈರ್ಯ ಕೊಟ್ಟು, ಆಯಾ ಸ್ಥಳಗಳಲ್ಲಿ ಕ್ರಮ ಜೀವನವು ನಿರಾತಂಕ ನಡೆಯುವಂತೆ