ಪುಟ:ಭಾರತ ದರ್ಶನ.djvu/೪೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪುನಃ ಅಹಮದ್ ನಗರದ ಕೋಟೆಯಲ್ಲಿ

೪೩೫

ಆತ್ಮರಕ್ಷಣೆಗೆ ಹೋರಾಟ ಅನಿವಾರ್ಯವಾದಾಗ ಯಾವ ವ್ಯವಸ್ಥೆಯಿಂದ ಅಪಯಶಸ್ಸು ಒದಗಿತ್ತೋ ಅದೇ ವ್ಯವಸ್ಥೆಯನ್ನು ಪುನರುಜ್ಜಿವನಗೊಳಿಸಲು ಯತ್ನಪಟ್ಟರು. ಈ ಯುದ್ಧವನ್ನು ಆತ್ಮರಕ್ಷಣೆಯ ಯುದ್ಧವೆಂದು ಸಾರಿ ಪ್ರಚಾರಮಾಡಿದರು. ಒಂದು ರೀತಿ ಅದು ನಿಜವೂ ಇತ್ತು. ಆದರೆ ಈ ಯುದ್ಧಕ್ಕೆ ಸೈನಿಕ ಆದರ್ಶ ಮಾತ್ರವಲ್ಲದೆ ಫ್ಯಾಸಿಸ್ಟ್ ತತ್ತ್ವ ಮತ್ತು ದೃಷ್ಟಿಗಳನ್ನು ಪ್ರಬಲವಾಗಿ ಪ್ರತಿಭಟಿಸಿದ ಒಂದು ನೈತಿಕ ದೃಷ್ಟಿಯೂ ಇತ್ತು. ಏಕೆಂದರೆ ಪ್ರಪಂಚದ ಜನತೆಯ ಅತ್ಮಶೋಧನೆಯೇ ಈ ಯುದ್ಧದ ಧ್ಯೇಯ ಎಂದು ಹೇಳಿದ್ದರು. ಈ ಧ್ಯೇಯದಲ್ಲಿ ಫ್ಯಾಸಿಸ್ಟ್ ರಾಷ್ಟ್ರಗಳು ಮಾತ್ರವಲ್ಲದೆ ಯುಕ್ತ ರಾಷ್ಟ್ರಗಳ ಪರಿವರ್ತನೆಯ ಅಂಕುರವೂ ಇತ್ತು. ಒಂದು ಹೊಸ ಭವಿಷ್ಯದ ರಚನೆಗೆ ಪ್ರಾಧಾನ್ಯತೆ ಕೊಡದೆ ಸ್ವರಕ್ಷಣೆಗೂ ಮತ್ತು ಹಿಂದಿನವೆಲ್ಲ ಅಳಿಯದೆ ಉಳಿಯಲೆಂಬುದಕ್ಕೂ ಪ್ರಾಧಾನ್ಯತೆ ಕೊಟ್ಟು ಪ್ರಚಂಡ ಪ್ರಚಾರದಿಂದ ಯುದ್ದದ ಆ ಸೈನಿಕ ಧ್ಯೇಯವನ್ನು ಸದ್ದಿಲ್ಲದಂತೆ ಅಡಗಿಸಿದ್ದರು. ಪಾಶ್ಚಾತ್ಯ ದೇಶಗಳಲ್ಲಿ ಸಹ ಯುದ್ಧದ ನೈತಿಕ ದೃಷ್ಟಿಯಲ್ಲಿ ದೃಢನಂಬಿಕೆ ಇಟ್ಟು, ಈ ಯುದ್ಧದಲ್ಲಿ ಹೊರಬಿದ್ದ ಮಾನವ ಸಮಾಜದ ನ್ಯೂನತೆಗಳು ಪುನಃ ತಲೆದೋರದಂತೆ ಬೇರೊಂದು ಹೊಸ ಪ್ರಪಂಚ ಸೃಜಿಸಬೇಕೆಂದಿದ್ದ ಆಶಾವಾದಿಗಳು ಅನೇಕರಿದ್ದರು. ಅಸ್ಪಷ್ಟವಿದ್ದರೂ ಈ ಪರಿವರ್ತನೆಯಲ್ಲಿ ಬಲವತ್ತರ ಆಸೆ ಇಟ್ಟು ಕೊಂಡವರನೇಕರು ಯುದ್ಧದಲ್ಲಿ ಹೋರಾಡಿ ಮಡಿದವರಲ್ಲಿ ಸಹ ಎಲ್ಲ ಕಡೆಯೂ ಇದ್ದರು. ಯೂರೋಪ್ ಮತ್ತು ಅಮೆರಿಕೆಯಲ್ಲಿ, ಹೆಚ್ಚಾಗಿ ಏಷ್ಯ ಮತ್ತು ಆಫ್ರಿಕೆಗಳಲ್ಲಿ ಕೋಟ್ಯಂತರ ಜನರು ಪರತಂತ್ರರಾಗಿ ದಾಸ್ಯಜೀವನ ನಡೆಸುತ್ತ, ಪರರಾಷ್ಟ್ರಗಳ ಸುಲಿಗೆಗೂ ಜನಾಂಗ ಭೇದಕ್ಕೂ ಬಲಿಯಾಗಿದ್ದರು. ಹಿಂದಿನ ಕಹಿ ನೆನಪುಗಳಿಂದ, ಇಂದಿನ ಸಂಕಟಗಳಿಂದ ಈ ಯುದ್ಧವನ್ನು ಬೇರ್ಪಡಿಸಲು ಅವರಿಗೆ ಅಸಾಧ್ಯವಾಯಿತು. ಯಾವ ಆಧಾರವೂ ಇಲ್ಲದಿದ್ದರೂ ತಮ್ಮನ್ನು ಅಧೋಗತಿಗೆ ತಳ್ಳುತ್ತಿದ್ದ ದಾಸ್ಯದ ಹೊರೆಯು ಹೇಗಾದರೂ ಈ ಯುದ್ಧದಿಂದ ಇಳಿಯಬಹುದೆಂದು ಅವರು ಆಸೆ ಇಟ್ಟುಕೊಂಡಿದ್ದರು.

ಆದರೆ ಯುಕ್ತ ರಾಷ್ಟ್ರಗಳ ನಾಯಕರ ದೃಷ್ಟಿ ಎಲ್ಲ ಬೇರೊಂದೆಡೆ ಇತ್ತು. ಹಿಮ್ಮುಖವಿತ್ತೇ ಹೊರತು ಪ್ರಗತಿಪರ ಇರಲಿಲ್ಲ. ತಮ್ಮ ಜನರ ಸಂಶಯ ನಿವಾರಿಸಲು ಭವಿಷ್ಯದ ವಿಷಯ ಕೆಲವುವೇಳೆ ಬಹುದೊಡ್ಡ ಮಾತುಗಳನ್ನಾಡುತ್ತಿದ್ದರು. ಆದರೆ ಆ ಸವಿಮಾತುಗಳಿಗೂ ಅವರ ಕಾರ್ಯನೀತಿಗೂ ಬಹಳ ಅಂತರವಿತ್ತು. ವಿನ್‌ಸ್ಟನ್ ಚರ್ಚಿಲ್‌ಗೆ ಜೀರ್ಣೋದ್ಧಾರವೇ ಯುದ್ಧದ ಗುರಿ ; ಕೆಲವು ಅಲ್ಪ ಮಾರ್ಪಾಟುಗಳೊಡನೆ ಇಂಗ್ಲೆಂಡಿನ ಸಾಮಾಜಿಕ ರಚನೆ ಮತ್ತು ಬ್ರಿಟಿಷ್ ಚಕ್ರಾಧಿಪತ್ಯದ ರಚನೆ ಮುಂದುವರಿದರೆ ಸಾಕಿತ್ತು. ಅಧ್ಯಕ್ಷ ರೂಸ್‌ವೆಲ್ಟ್ನ ಮಾತುಗಳು ಹೆಚ್ಚು ಆಶಾದಾಯಕವಿದ್ದರೂ ಕಾರ್ಯನೀತಿಯಲ್ಲಿ ಮಹತ್ವದ ಬದಲಾವಣೆ ಯಾವುದೂ ಕಾಣಲಿಲ್ಲ. ಆದರೂ ಪ್ರಪಂಚದ ನಾನಾ ಭಾಗಗಳ ಅನೇಕ ಜನರು ಆತನನ್ನು ದೂರ ದೃಷ್ಟಿಯುಳ್ಳ ಬಹು ದೊಡ್ಡ ಉನ್ನತ ರಾಜನೀತಿಜ್ಞನೆಂದು ನಂಬಿ ಆಸೆಯಿಂದ ಆತನ ಕಡೆಗೆ ನೋಡುತ್ತಿದ್ದರು.

ಆದ್ದರಿಂದ ಬ್ರಿಟಿಷ್ ಆಡಳಿತಗಾರರ ಇಚ್ಛೆಯಂತೆ ಭಾರತದ ಮತ್ತು ಪ್ರಪಂಚದ ಇತರ ಭಾಗಗಳ ಭವಿಷ್ಯವು ಅಂದಿನಂತೆಯೇ ಇರಬೇಕು; ಇಂದಿನ ವ್ಯವಸ್ಥೆಯು ಸಹ ಅದಕ್ಕನುಗುಣವಾಗಿಯೇ ಇರಬೇಕೆಂದಿತ್ತು. ಇಂದಿನ ಪರಿಸ್ಥಿತಿಯಲ್ಲಿಯೇ ಭವಿಷ್ಯದ ವಿಷಬೀಜಗಳನ್ನೂ ಬಿತ್ತುತ್ತಿದ್ದರು. ಕ್ರಿಪ್ಸ್ ಸಲಹೆಗಳು ಪ್ರಗತಿಪರ ಕಂಡರೂ ನಮ್ಮ ಸ್ವಾತಂತ್ರ್ಯಸಾಧನೆಗೆ ಅಡ್ಡಗೋಡೆಗಳಂತಿದ್ದ ಹೊಸ ಅಪಾರ ವಿಪತ್ಕಾರಕ ಪ್ರಶ್ನೆಗಳನ್ನು ತಂದೊಡ್ಡಿದ್ದವು. ಅವುಗಳ ಪರಿಣಾಮ ಆಗಲೇ ಸ್ವಲ್ಪಮಟ್ಟಿಗೆ ನಮ್ಮ ಅನುಭವಕ್ಕೆ ಬಂದಿದೆ. ಭಾರತದಲ್ಲಿ ಬ್ರಿಟಿಷ್ ಸರಕಾರದ ನಿರಂಕುಶ ಸರ್ವಾಧಿಕಾರದಿಂದ ಯುದ್ಧ ಕಾಲದಲ್ಲಿ ಮತ್ತು ಯುದ್ಧದ ನೆಪದಲ್ಲಿ ಸಾಮಾನ್ಯ ನಾಗರಿಕ ಹಕ್ಕುಗಳೂ ಮತ್ತು ಸ್ವಾತಂತ್ರವೂ ಮಾಯವಾಗಿ ದೇಶಾದ್ಯಂತ ದಬ್ಬಾಳಿಕೆಯು ಪರಮಾವಧಿ ಮುಟ್ಟಿ ಸಮಗ್ರ ರಾಷ್ಟ್ರಜೀವನದ ಹಾಸುಹೊಕ್ಕುಗಳನ್ನು ಆವರಿಸಿ ನಮ್ಮ ಪೀಳಿಗೆಯಲ್ಲಿ ಯಾರಿಗೂ ಈ ಬಗೆಯ ಅನುಭವ ಆಗಿರಲಿಲ್ಲ. ನಮ್ಮ ದಾಸ್ಯ ಜೀವನವೂ ಮತ್ತು ಶಾಶ್ವತ ಅಪಮಾನವೂ ಸದಾ ನಮ್ಮ ಸ್ಮೃತಿಗೆ ಬರುತ್ತಿದ್ದವು. ಅವು ಮುಂಬರುವ ವಿಷದ ಮುಂಚೂಣಿಯೂ ಆಗಿದ್ದವು; ಏಕೆಂದರೆ ಇಂದಿನ ಗರ್ಭದಲ್ಲಿ ಭವಿಷ್ಯದ ಬಾಳು. ಈ ಅಪಮಾನಕ್ಕೆ ತಲೆತಗ್ಗಿಸುವುದಕ್ಕಿಂತ ಬೇರೆ ಏನಾದರೂ ಉತ್ತಮವೆಂದು ಕಂಡಿತು.