ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೪೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೪೪೦
ಭಾರತ ದರ್ಶನ

ಪ್ರೇರಣೆಯಿಂದ ಮನಬಂದಂತೆ ವರ್ತಿಸಿದರು. ೧೯೪೨ರ ಚಳುವಳಿಯಲ್ಲಿ ದೇಶಾದ್ಯಂತ ಯುವಕರು, ಮುಖ್ಯವಾಗಿ ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು-ಹಿಂಸಾತ್ಮಕ ಮತ್ತು ಅಹಿಂಸಾತ್ಮಕ ಕಾರ್ಯಕ್ರಮಗಳಲ್ಲಿ ಪ್ರಮುಖ ಪಾತ್ರವಹಿಸಿದರು. ಅನೇಕ ವಿಶ್ವವಿದ್ಯಾನಿಲಯಗಳು ಹಾಕಿದ ಬಾಗಿಲನ್ನು ತೆರೆಯಲಿಲ್ಲ. ಕೆಲವು ಸ್ಥಳೀಯ ನಾಯಕರು ಅಹಿಂಸಾತ್ಮಕ ಮಾರ್ಗದಲ್ಲಿ ಅಸಹಕಾರ ಹೂಡಲು ಯತ್ನಿಸಿದರು; ಆದರೆ ದೇಶದ ಅಂದಿನ ಪರಿಸ್ಥಿತಿಯಲ್ಲಿ ಅದು ಸಾಧ್ಯವಿರಲಿಲ್ಲ. ಕಳೆದ ಇಪ್ಪತ್ತೈದು ವರ್ಷಗಳಿಂದ ಗಾಂಧಿಜಿ ಬೋಧಿಸಿದ ಅಹಿಂಸೆಯ ಪಾಠವನ್ನು ಮರೆತರು; ಹಿಂಸಾತ್ಮಕ ಚಳವಳಿಗೆ ಮಾನಸಿಕ ಅಥವ ಬೇರೆ ವಿಧ ವಾದ ಯಾವ ಶಿಕ್ಷಣ ಅಥವ ಸಿದ್ಧತೆಯೂ ಅವರಿಗೆ ಇರಲಿಲ್ಲ. ಅಲ್ಲದೆ ಅಹಿಂಸಾ ಮಾರ್ಗದ ಪಾಠವೇ ಅವರಲ್ಲಿ ಸಂಶಯ ಮತ್ತು ಅನಿಶ್ಚಿತ ಭಾವನೆಗಳನ್ನು ಉಂಟುಮಾಡಿ ಹಿಂಸಾತ್ಮಕ ಕಾರ್ಯಕ್ರಮಕ್ಕೆ ಅಡ್ಡ ಬಂದಿತು. ಅಹಿಂಸೆಯ ಮಾರ್ಗ ಬಿಟ್ಟು ಹಿಂಸಾತ್ಮಕ ಕಾರ್ಯಕ್ರಮ ತೆಗೆದುಕೊಳ್ಳಿ ಎಂದು ಜನರಿಗೆ ಕಾಂಗ್ರೆಸ್‌ ತಿಳಿಸಿದ್ದರೆ ಅವರ ಹಿಂಸಾತ್ಮಕ ಕಾರ್ಯಬಾಹುಳ್ಯ ಇನ್ನೂ ನೂರು ಪಾಲು ಹೆಚ್ಚಾಗುತ್ತಿತ್ತು.

ಆದರೆ ಆ ರೀತಿ ಯಾವ ಸೂಚನೆಯನ್ನೂ ಕೊಟ್ಟಿರಲಿಲ್ಲ; ಕಾಂಗ್ರೆಸ್ಸಿನ ಕೊನೆಯ ಸಂದೇಶದಲ್ಲಿ ಅಹಿಂಸಾಕಾರ್ಯಕ್ರಮಕ್ಕೆ ಪ್ರಾಮುಖ್ಯತೆ ಕೊಟ್ಟು ಅದೇ ಮಾರ್ಗ ಹಿಡಿಯಬೇಕೆಂದು ಒತ್ತಾಯಪಡಿಸಲಾಗಿತ್ತು. ಆದರೆ ಒಂದು ವಿಷಯ ಮಾತ್ರ ಜನರ ಮನಸ್ಸಿನಮೇಲೆ ಸ್ವಲ್ಪ ಪರಿಣಾಮಮಾಡಿರಬೇಕು. ಹೊರಗಿನ ಶತ್ರುಧಾಳಿ ಎದುರಿಸಲು ಶಸ್ತ್ರಸಜ್ಜಿತ ಸಂರಕ್ಷಣಾಮಾರ್ಗ ನ್ಯಾಯವೂ, ಅಪೇಕ್ಷಣೀಯವೂ ಆದರೆ ಒಳಗಿನ ಶತ್ರುವನ್ನು ಎದುರಿಸಲು ಅದೇ ನೀತಿ ಏಕೆ ಅನುಸರಿಸಬಾರದೆಂದು ಹಿಂಸಾತ್ಮಕಧಾಳಿ ಮತ್ತು ಸಂರಕ್ಷಣೆಗಳಮೇಲಿನ ನಿರ್ಬಂಧ ಹೋದಮೇಲೆ ಅವುಗಳ ದುಷ್ಪರಿಣಾಮವೂ ಅನಿವಾರ್ಯ ಆಯಿತು. ಸೂಕ್ಷಧರ್ಮ ಜಿಜ್ಞಾಸೆ ಜನತೆಗೆ ಸುಲಭ ಸಾಧ್ಯವೂ ಇರಲಿಲ್ಲ. ಪ್ರಪಂಚದಲ್ಲಿ ಎಲ್ಲಿ ನೋಡಿದರೂ ಹಿಂಸೆಯು ಪರಮಾವಧಿಮೇರೆ ಮುಟ್ಟಿತ್ತು; ಪ್ರಚಂಡ ಪ್ರಚಾರದ ಪ್ರಬಲ ಪ್ರೋತ್ಸಾಹ ಅದಕ್ಕೆ ದೊರೆತಿತ್ತು. ತಾತ್ಕಾಲಿಕ ಸಾಧ್ಯಾಸಾಧ್ಯತೆ ಮತ್ತು ಮನಸ್ಸಿನ ಉನ್ಮಾದ ಸ್ಥಿತಿ ಎರಡೇ ಮುಖ್ಯ ನಿರ್ಧಾರಕಗಳಾದವು. ಕಾಂಗ್ರೆಸ್ಸಿನ ಹೊರಗೆ ಅಹಿಂಸೆಯಲ್ಲಿ ಯಾವ ವಿಶ್ವಾಸವನ್ನೂ ಇಡದ ಅನೇಕರು ಇದ್ದರು. ಹಿಂಸಾತ್ಮಕ ಮಾರ್ಗಾನುಸರಣೆಯಲ್ಲಿ ಅವರಿಗೆ ಯಾವ ಧರ್ಮಸಂಕಟವೂ ಇರಲಿಲ್ಲ.

ತಾತ್ಕಾಲಿಕ ಆವೇಶದಲ್ಲಿ ಯಾರಿಗೂ ಯಾವ ವಿವೇಚನೆಯೂ ಇರುವುದಿಲ್ಲ. ಅದುಮಿದ್ದ ಶಕ್ತಿಗಳೆಲ್ಲ ಹೊರಹೊಮ್ಮಿ ಹುಚ್ಚು ಹೊಳೆಯಾಗಿ ಹರಿಯುತ್ತವೆ. ೧೮೫೭ರ ನಂತರ ಭಾರತದಲ್ಲಿ ಅಸಂಖ್ಯಾತ ಜನರು ಬ್ರಿಟಿಷರ ಆಡಳಿತದ ಬೇರುಗಳನ್ನು ಕೀಳಲು ಹಿಂಸಾತ್ಮಕಮಾರ್ಗದಲ್ಲಿ ದಂಗೆ ಎದ್ದದು ಇದೇ ಮೊಟ್ಟಮೊದಲು. ಇತಿಹಾಸದಲ್ಲಿ ಬೇರೆ ಯಾವ ಕಾಲದಲ್ಲೂ ಇಲ್ಲದಷ್ಟು ಶಸ್ತ್ರಬಲವೂ ಸುಸಜ್ಜಿತ ಸೇನೆಯೂ ಬ್ರಿಟಿಷರ ಬಳಿ ಇದ್ದಾಗ ಅದನ್ನು ಎದುರಿಸಲು ಧೈರ್ಯಮಾಡುವುದು ಹುಚ್ಚುತನವೇ ಸರಿ; ಅಲ್ಲದೆ ಸಮಯವೂ ಅನುಕೂಲ ಇರಲಿಲ್ಲ. ಜನರ ಗುಂಪು ಎಷ್ಟೇ ದೊಡ್ಡದಿರಲಿ ಸುಶಿಕ್ಷಿತವೂ ಶಸ್ತ್ರಸಜ್ಜಿತವೂ ಆದ ಸಣ್ಣ ಸೈನ್ಯವನ್ನು ಎದುರಿಸಲು ಸಹ ಅದಕ್ಕೆ ಸಾಧ್ಯವಿಲ್ಲ, ಸೈನ್ಯಗಳು ಸರಕಾರದ ಎದುರುಬಿದ್ದರೆ ಹೊರತು ದಂಗೆಯು ಅಡಗಲೇ ಬೇಕು. ಅಲ್ಲದೆ ಜನತೆಯು ಆ ಹೋರಾಟಕ್ಕೆ ಯಾವ ಸಿದ್ಧತೆಯನ್ನೂ ಪಡೆದಿರಲಿಲ್ಲ; ಅಲ್ಲದೆ ಸರಿಯಾದ ಸಮಯವನ್ನೂ ಆರಿಸಿರಲಿಲ್ಲ. ಆಕಸ್ಮಿಕವಾಗಿ ಅದು ಜನರಮೇಲೆ ಒದಗಿತು; ಇದ್ದಕ್ಕಿದ್ದಂತೆ ಜನರು ಉದ್ರೇಕಗೊಂಡು, ಹಿಂದೆ ಮುಂದೆ ನೋಡದೆ ಯಾವ ನಾಯಕತ್ವವೂ ಇಲ್ಲದೆ ತಮ್ಮ ಭಾರತ ಸ್ವಾತಂತ್ರ್ಯ ಪ್ರೇಮವನ್ನೂ, ಪರಕೀಯ ಆಡಳಿತದ್ವೇಷವನ್ನೂ ವ್ಯಕ್ತಗೊಳಿಸಿದರು.

ತಾತ್ಕಾಲಿಕವಾಗಿ ಅಹಿಂಸಾಮಾರ್ಗ ಕೈಬಿಟ್ಟರೂ ದೀರ್ಘಕಾಲದ ಶಿಕ್ಷಣದ ಪರಿಣಾಮವಾಗಿ ಜನತೆಯ ನಡತೆಯಲ್ಲಿ ಒಂದು ದೊಡ್ಡ ವ್ಯತ್ಯಾಸ ಕಂಡಿತು. ಜನರು ಎಷ್ಟೇ ಉದ್ರೇಕಗೊಂಡರೂ ಅವರಲ್ಲಿ ಜನಾಂಗ ದ್ವೇಷವಿರಲಿಲ್ಲ; ಮತ್ತು ಉದ್ದೇಶಪಟ್ಟು ಶತ್ರುಗಳಿಗೆ ಪ್ರಾಣಾಪಾಯಮಾಡಲು ಯತ್ನಿಸಲಿಲ್ಲ. ವಾಹನ ಸಂಚಾರಮಾರ್ಗಗಳನ್ನೂ, ಸರಕಾರದ ಆಸ್ತಿಯನ್ನೂ ನಾಶಮಾಡಿದರು. ಅದರಲ್ಲೂ ಯಾರಿಗೂ ಪ್ರಾಣಾಪಾಯವಾಗದಂತೆ ಎಚ್ಚರ ತೆಗೆದುಕೊಂಡರು. ಆದರೆ ಇದು ಎಲ್ಲ ಸಂದರ್ಭಗಳಲ್ಲಿ ಮುಖ್ಯವಾಗಿ ಪೋಲೀಸರೊಂದಿಗೆ ಮತ್ತು ಸೈನಿಕರೊಂದಿಗೆ ಹೋರಾಡುತ್ತಿದ್ದಾಗ ಸಾಧ್ಯವಿರಲಿಲ್ಲ. ಸರಕಾರದ