ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೪೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೪೪೬
ಭಾರತ ದರ್ಶನ

ಒಲಿಸಿಕೊಳ್ಳಲೆತ್ನಿಸುವುದು ಸರಕಾರಕ್ಕೆ ಅವಶ್ಯವಾಗುತ್ತದೆ. ಲಂಚ, ದುರ್ವತ್ರನೆ, ಅಕ್ಷಮ್ಯ ಅಲಕ್ಷೆ, ಮತ್ತು ಸಾರ್ವಜನಿಕ ಹಿತದ ಕೊಲೆ ಹೆಚ್ಚಿ ದೇಶದ ವಾತಾವರಣವೇ ವಿಷಪೂರಿತವಾಗುತ್ತದೆ.*

ಸರಕಾರದ ಆಚರಣೆಯಿಂದ ಬೇಕಾದಷ್ಟು ಅಸಮಾಧಾನವಾಗಿದ್ದರೂ, ರಾಜನಿಗಿಂತ ರಾಜನಿಷ್ಟರೆಂದು ತೋರಿಸಿಕೊಳ್ಳುವ ಭಾರತೀಯ ಹಿಮ್ಮೇಳದವರು ಜನರ ಅಸಮಾಧಾನಕ್ಕೆ ಇನ್ನೂ ಹೆಚ್ಚು ಕಾರಣರಾಗಿದ್ದಾರೆ. ಇವರನ್ನು ನೋಡಿ ಸಾಮಾನ್ಯ ಭಾರತೀಯನ ರಕ್ತವು ಕುದಿಯುತ್ತದೆ, ಕರುಳು ಕಿವಿಚುವಂತಾಗುತ್ತದೆ. ಜರ್ಮನ್‌ ಅಥವ ಜಪಾನರು ಏರ್ಪಡಿಸಿರುವ ಕೈಗೊಂಬೆ ಸರಕಾರಗಳಿಗೆ, ವೀಚಿಯ ಮಹಾನುಭಾವರಿಗೂ ಅವರನ್ನು ಹೋಲಿಸುತ್ತಾರೆ. ಈ ಭಾವನೆಯ ಕಾಂಗ್ರೆಸ್‌ನವರಲ್ಲಿ ಮಾತ್ರವಲ್ಲದೆ ಮುಸ್ಲಿಂ ಲೀಗ್ ಮತ್ತು ಇತರ ಸಂಸ್ಥೆಗಳ ಸದಸ್ಯರಲ್ಲಿ ಮತ್ತು ನಮ್ಮ ರಾಜಕಾರಣಿಗಳಲ್ಲಿ ಕೇವಲ ಮಂದ ಪಕ್ಷದವರು ಎನ್ನುವವರಲ್ಲಿ ಸಹ ಬೆಳೆದಿದೆ.

ಸರಕಾರದ ಕ್ರೂರ ರಾಷ್ಟ್ರಘಾತಕ ಕಾರಗಳಿಗೆ ಯುದ್ಧವು ಒಂದು ನೆಪವೂ, ಮರೆಯೂ ಆಯಿತು. ವಿಚಿತ್ರ ಬಗೆಯ ಪ್ರಚಾರ ಕಾರ್ಯ ಕೈಗೊಂಡರು. ಶ್ರಮಜೀವಿಗಳ ನೀತಿಯ ಮಟ್ಟ ಹೆಚ್ಚಿಸುವ ನೆಪದಿಂದ ನಾಯಿಕೊಡೆಗಳಂತೆ ಕಾಮಗಾರ ಸಂಘಗಳನ್ನು ಏರ್ಪಡಿಸಿದರು. ಗಾಂಧಿ ಮತ್ತು ಕಾಂಗ್ರೆಸ್ಸನ್ನು ದೂಷಿಸಲು, ಕಾಗದದ ಮುಗ್ಗಟ್ಟು ಎಷ್ಟೇ ಇದ್ದರೂ, ಕಾಗದ ಒದಗಿಸಿ, ದುಡ್ಡು ಕೊಟ್ಟು, ಹೊಸ ವರ್ತಮಾನ ಪತ್ರಿಕೆಗಳನ್ನು ಸ್ಥಾಪಿಸಿದರು. ಯುದ್ಧ ಪ್ರಯತ್ನ ಮುಂದುವರಿಸುವುದಕ್ಕೆಂದು ಸರಕಾರದ ಪರವಾಗಿ ಸತತ ಪ್ರಚಾರ ನಡೆಸಲು ವಿದೇಶಗಳಲ್ಲಿ ವಾರ್ತಾ ಕೇಂದ್ರಗಳನ್ನು ಸ್ಥಾಪಿಸಿದರು. ಅನಾಮಧೇಯ ವ್ಯಕ್ತಿಗಳ ನೇಕರನ್ನು ತಂಡ ತಂಡವಾಗಿ ಸರಕಾರದ ನಿಯೋಗ ಮಂಡಲಿಗಳಲ್ಲಿ ಸೇರಿಸಿ, ಕೇಂದ್ರ ಶಾಸನ ಸಭೆಯ ಪ್ರತಿಭಟನೆ ಸಹ ಅಲಕ್ಷಿಸಿ ಮುಖ್ಯವಾಗಿ ಅಮೆರಿಕೆಯ ಸಂಯುಕ್ತ ಸಂಸ್ಥಾನಗಳಿಗೆ ಬ್ರಿಟಿಷ್ ಸರಕಾರದ ಪರ ಪ್ರಚಾರ ಮಾಡಲು ಹೊಗಳು ಭಟ್ಟರನ್ನು ಕಳುಹಿಸಿದರು. ಸ್ವತಂತ್ರ ಅಭಿಪ್ರಾಯದ ಅಥವ ಸರಕಾರವನ್ನು ಟೀಕೆ ಮಾಡುವ ಯಾರಿಗೂ ಈ ವಿದೇಶ ಸಂಚಾರಕ್ಕೆ ಅವಕಾಶವಿರಲಿಲ್ಲ. ಅಂಥವರ ಪ್ರಯಾಣಕ್ಕೆ ರಹದಾರಿಯಾಗಲಿ ಪ್ರಯಾಣ ಸೌಕರ್ಯ ಆಗಲಿ ದೊರೆಯುತ್ತಿರಲಿಲ್ಲ.
——————
* ಸರ್ ಆರ್ಕಿಬಾಲ್ಸ್ ‌ರೌಲೆಂಡ್ಸ್‌ ಅಧ್ಯಕ್ಷತೆಯಲ್ಲಿ ಸೇರಿದ ಬಂಗಾಲ ಆಡಳಿತವಿಚಾರಣಾ ಸಮಿತಿಯು ೧೯೪೫ನೇ ಮೇ ತಿಂಗಳಲ್ಲಿ ಪ್ರಕಟಿಸಿದ ತಮ್ಮ ವರದಿಯಲ್ಲಿ “ಲಂಚಕೋರತನವೂ, ಆದರ ನಿರ್ಮೂಲ ಅಸಾಧ್ಯವೆಂಬ ನಿಸ್ಸಹಾಯಕ ಮನೋಭಾವವೂ ಅತಿಯಾಗಿ ಹಬ್ಬಿ ಬೆಳೆದಿದೆ. ಸಾರ್ವಜನಿಕರ ಆಡಳಿತವರ್ಗವನ್ನೂ ಮತ್ತು ಅವರ ನೀತಿಮಟ್ಟವನ್ನೂ ಅಧೋಗತಿಗೆ ತಳ್ಳಿರುವ ಈ ಹೆಮ್ಮಾರಿಯನ್ನು ನಿರ್ಮೂಲಮಾಡಲು ಅತ್ಯಂತ ಕ್ರೂರ ಕಾರ್ಯಕ್ರಮ ತೆಗೆದುಕೊಳ್ಳ ಬೇಕು. ಸಾರ್ವಜನಿಕರ ವಿಷಯದಲ್ಲಿ ಕೆಲವು ಅಧಿಕಾರಿಗಳ ವರ್ತನೆಯು ಅಕ್ಷಮ್ಯವಾಗಿದೆಯೆಂದು ಸಮಿತಿಯ ಮುಂದೆ ಸಾಕ್ಷ್ಯ ಬಂದಿರುವುದು ಸಮಿತಿಗೆ ಆಶ್ಚರ್ಯವನ್ನೂ, ಖೇದವನ್ನೂ ಉಂಟುಮಾಡಿದೆ. ತಮ್ಮ ಹಿತಕ್ಕಿಂತ ನಿರ್ಜಿವ ಆಡಳಿತಯಂತ್ರ ನಡೆಸುವುದರಲ್ಲಿ ಹೆಚ್ಚು ಆಸಕ್ತಿ ತೋರಿಸುತ್ತಾರೆಂದೂ, ಜನರ ಸೇವಕರೆಂದು ಭಾವಿಸುವುದರ ಬದಲು ಅವರಮೇಲೆ ಅಧಿಕಾರ ನಡೆಸುವವರೆಂಬ ಭಾವನೆಯುಳ್ಳವರಾಗಿದ್ದಾರೆಂದೂ ಸಾಶ ದೊರೆತಿದೆ” ಎಂದು ಹೇಳಿದ್ದಾರೆ.

1. ಇತರರನ್ನು ತನ್ನ ಆಧೀನ ಮಾಡಿಕೊಳ್ಳುವದರಲ್ಲಿ ಅದ್ವಿತೀಯನಾದ ಹಿಟ್ಲರ್ ತನ್ನ "ಮೈನ್ ಕ್ಯಾಂಫ್" ಎಂಬ ಗ್ರಂಥದಲ್ಲಿ "ದಾಸ್ಯಕೂಪದಲ್ಲಿನ ಈ ಅನೀತಿಯ ಅಪರಾವತಾರಗಳಿಗೆ ಇದ್ದಕ್ಕಿದ್ದಂತೆ ಪಶ್ಚಾತ್ತಾಪ ಬರಬಹುದೆಂದು ನಾವು ಭಯಪಡಬೇಕಾಗಿಲ್ಲ. ಮಾನವನ ಎಲ್ಲ ಅನುಭವವನ್ನೂ ಮತ್ತು ಈ ಪತಿತರ ಬುದ್ಧಿ ಶಕ್ತಿಯನ್ನೂ ಗಮನಿಸಿದರೆ ಬೇರೆ ಮಾರ್ಗ ಹಿಡಿಯಲು ಅವರಿಗೆ ಸಾಧ್ಯವೇ ಇಲ್ಲ. ಅದಕ್ಕೆ ಪ್ರತಿಯಾಗಿ ಅಂತಹ ಎಲ್ಲ ಅವಕಾಶದಿಂದ ತಾವೇ ದೂರವಿರುತ್ತಾರೆ. ಅದು ಎಲ್ಲಿಯವರೆಗೆ ಎಂದರೆ ಇಡೀ ರಾಷ್ಟ್ರವೇ ದಾಸ್ಯದ ಹೊರೆಯನ್ನು ಒಪ್ಪಿಕೊಳ್ಳುವವರೆಗೆ ಅಥವ ಬೇರೆ ಉತ್ತಮ ಜನರು ಬಂದು ಇವರನ್ನು ಓಡಿಸುವವರೆಗೆ. ಮೊದಲನೆಯದಾದರೆ ಇವರು ಸುಖವಾಗಿಯೇ ಇರುತ್ತಾರೆ. ಏಕೆಂದರೆ ಗುಲಾಮರ ಮೇಲ್ವಿಚಾರಣೆ ಎಲ್ಲ ಇವರ ಕೈಯಲ್ಲಿ ಶತ್ರುವ ನೇಮಿಸುವ ಅಧಿಕಾರಿಗಿಂತ ಈ ಕೆಲಸದಲ್ಲಿ ಈ ನೀತಿ ಬಾಹಿರು ಹೆಚ್ಚು ಕಠಿಣ ಹೃದಯರಾಗಿ ತಮ್ಮ ರಾಷ್ಟ್ರದ ಮೇಲೆ ಹೆಚ್ಚಿನ ದರ್ಪದಿಂದ ಆಳುತ್ತಾರೆ.” ಎಂದು ಹೇಳಿದ್ದಾನೆ.