ಪುಟ:ಭಾರತ ದರ್ಶನ.djvu/೪೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೫೨

ಭಾರತ ದರ್ಶನ



೭. ಭಾರತದ ಕಾರ್ಯೋನ್ಮುಖ ಶಕ್ತಿ

ಈ ರೀತಿ ಕ್ಷಾಮ ಮತ್ತು ಯುದ್ಧ ಮುಂತಾದ ನೈಸರ್ಗಿಕ ವಿಪರೀತಗಳು ಅನೇಕ ಒದಗಿದರೂ, ಆ ವೈಪರೀತ್ಯಗಳು ಮತ್ತು ಅವುಗಳ ಬೆನ್ನು ಹಿಂದೆ ಬರುವ ನಾಶದಲ್ಲಿಯೇ ಇರುವ ಚೈತನ್ಯದ ಅಂಕುರದಿಂದ ಜೀವನವಾಹಿನಿ ವೃದ್ಧಿಗೊಂಡು ಪ್ರವಹಿಸುತ್ತಲೇ ಇದೆ. ನೆನ್ನೆಯ ರಣರಂಗ ಪ್ರಕೃತಿಮಾತೆಯ ಕರುಣೆಯಿಂದ ಇಂದಿನ ಹಸುರುಡುಗೆಯ ಹೂದೋಟ, ಶೋಣಿತ ತರ್ಪಣದಿಂದಲೇ ಭೂದೇವಿಯು ತಣಿದು ಹೊಸಬಾಳಿಗೆ ಶಕ್ತಿ ಕೊಟ್ಟು ಜೀವನದಾಯಕಳಾಗುತ್ತಾಳೆ. ಮಾನವನು ತನ್ನ ಸ್ಮರಣ ಶಕ್ತಿಯ ಪ್ರಭಾವಕ್ಕೆ ಕಟ್ಟುಬಿದ್ದೆ ಹಿಂದಿನ ಹಳೆಯ ನೆನಪುಗಳ ಮಟ್ಟದಲ್ಲಿಯೇ ತೊಳಲುತ್ತ ನಿತ್ಯ ನೂತನ ಜೀವನದ ಗತಿಯೊಂದಿಗೆ ನಡೆಯಲು ಅಸಮರ್ಥನಾಗುತ್ತಾನೆ. ಅವನು ಅರಿಯುವ ಮುಂಚೆಯೇ ಇಂದು ನಿನ್ನೆಯಾಗುತ್ತದೆ. ನಿನ್ನೆ ಶಿಶು ಇಂದು ತನ್ನ ನಾಳಿನ ಮಗುವಿಗೆ ದಾರಿಬಿಡುತ್ತದೆ. ಇಂದಿನ ಜಯಕ್ಕೆ ನಾಳೆಯ ರಕ್ತ ಪಂಕದಲ್ಲಿ ಅಂತ್ಯ ಅಪಜಯದ ಘೋರ ಕುಲುಮೆಯಿಂದಲೇ ನವಚೈತನ್ಯದ, ವಿಶಾಲದೃಷ್ಟಿಯ ಹೊಸಬಾಳಿನ ಹುಟ್ಟು, ಜಳ್ಳು ಉದುರಿ ತೂರಿಹೋಗುತ್ತದೆ. ಸತ್ಯ ಶೂರರು ದೀವಿಗೆ ಹಿಡಿದು ಮುಂದೆ ಸಾಗಿ ನಾಳಿನ ಬಾಳಿನ ಹರಿಕಾರರಾಗುತ್ತಾರೆ.

ಭಾರತದ ಕ್ಷಾಮದಿಂದ ಪ್ರಪಂಚಕ್ಕೆ ಭಾರತದ ಸಮಸ್ಯೆಗಳ ಭೀಕರ ಪರಿಸ್ಥಿತಿಯು ಮತ್ತು ಭಾರತಕ್ಕೆ ಒದಗಿದ್ದ ವಿಪತ್ತಿನ ಅರಿವು ಸ್ವಲ್ಪ ಉಂಟಾಯಿತು. ಇಂಗ್ಲೆಂಡಿನ ಜನ ಏನು ಭಾವಿಸಿದರೋ ತಿಳಿಯದು; ಆದರೆ ಅವರಲ್ಲಿ ಕೆಲವರು ಭಾರತ ಮತ್ತು ಭಾರತದ ಜನರ ಮೇಲೆಯೇ ತಪ್ಪು ಹೊರಿಸಿದರು. ಆಹಾರವಿರಲಿಲ್ಲ; ವೈದ್ಯರುಗಳಿರಲಿಲ್ಲ; ಆರೋಗ್ಯ ರಕ್ಷಣೆಯ ಏರ್ಪಾಟು ಮತ್ತು ವೈದ್ಯಕೀಯ ಸಲಕರಣೆಗಳು ಇರಲಿಲ್ಲ. ಸಾರಿಗೆಯ ಸೌಕರ್ಯವಿರಲಿಲ್ಲ; ಆದರೆ ಜನಬಾಹುಳ್ಯ ಮಾತ್ರ ಇತ್ತು. ಏಕೆಂದರೆ, ಜನಸಂಖ್ಯೆ ಹೆಚ್ಚಿ, ಬೆಳೆಯುತ್ತಲೇ ಇತ್ತು. ಮುಂದಾಲೋಚನೆ ಇಲ್ಲದ ಜನಾಂಗವು ಮಿತಿಮೀರಿ ಸರಕಾರಕ್ಕೆ ಯಾವ ತಿಳಿವಳಿಕೆ ಅಥವ ಎಚ್ಚರ ಕೊಡದೆ ಪ್ರಜಾಸಂಖ್ಯೆ ಹೆಚ್ಚಿಸಿ ಸರಕಾರದ ಸದ್ಭಾವನೆಯ ಎಲ್ಲ ಯೋಜನೆ ಅಥವ ಯೋಜನೆಯ ಅಭಾವವನ್ನೂ ತಲೆಕೆಳಗೆ ಮಾಡಿ ಈ ಘೋರ ಕ್ಷಾಮಕ್ಕೆ ಕಾರಣ ಎಂದರು. ಈಗ ಏಕಾ ಏಕಿ ಈ ಆಥಿ೯ಕ ಸಮಸ್ಯೆಗೆ ಒ೦ದು ಹೊಸ ಪ್ರಾಮುಖ್ಯತೆ ಕೊಟ್ಟರು. ಆಗಾಗ ಒದಗುವ ದೊಡ್ಡ ಸಮಸ್ಯೆಗಳನ್ನು ಬಿಡಿಸಲಾಗದ ರಾಜಕೀಯಕ್ಕೆ ಬಹಳ ಬೆಲೆ ಇರುವಂತೆ ಸಧ್ಯಕ್ಕೆ ಎಲ್ಲ ರಾಜಕೀಯವನ್ನೂ, ರಾಜಕೀಯ ಪ್ರಶ್ನೆಗಳನ್ನೂ ಬದಿಗಿಡಲು ನಮಗೆ ಬುದ್ದಿ ಹೇಳಿದರು. ಪ್ರಪಂಚದಲ್ಲಿ "ಸ್ವೇಚ್ಛಾವೃತ್ತಿ ವ್ಯಾಪಾರ” ಪರ ಇರುವ ಇಂದಿನ ಅತ್ಯಲ್ಪ ಸರಕಾರಗಳಲ್ಲಿ ಒಂದಾದ ಇಂಡಿಯಾ ಸರಕಾರ ಯೋಜನೆ ವಿಷಯ ಮಾತನಾಡತೊಡಗಿತು. ಆದರೆ ಸುಸಂಘಟಿತ ಯೋಜನೆಯ ಕಲ್ಪನೆಯೇ ಅದಕ್ಕೆ ಇರಲಿಲ್ಲ. ಅದಕ್ಕೆ ಬೇಕಾದುದು ಇರುವಂತೆ ತನ್ನ ಉಳಿವು, ತನ್ನ ಮತ್ತು ತನ್ನನ್ನು ಅವಲಂಬಿಸಿದವರ ಸಂರಕ್ಷಣೆ ಅಷ್ಟುಮಾತ್ರ.

ಭಾರತದ ಸಂರಕ್ಷಣಾಶಾಸನ ಮತ್ತು ಅದರ ನಿಯಮ ನಿರ್ಬಂಧಗಳ ಹಿಡಿತದಲ್ಲಿ ಉಸಿರಾಡಲು ಅವಕಾಶವಿಲ್ಲದಿದ್ದರೂ ಭಾರತೀಯರ ಮೇಲೆ ಬಹಳ ಆಳವಾದ, ಪ್ರಬಲವಾದ ಪ್ರತಿಕ್ರಿಯೆ ಆಯಿತು. ಬಂಗಾಲದ ಆರ್ಥಿಕ ರಚನೆಯೇ ಕುಸಿದು ಬಿದ್ದಿತ್ತು. ಲಕ್ಷಾಂತರ ಜನ ದಿಕ್ಕುಗೆಟ್ಟಿದ್ದರು. ಅಷ್ಟು ಉಲ್ಬಣಿಸಿರದಿದ್ದರೂ ಬಂಗಾಲದ ಪರಿಸ್ಥಿತಿಯಂತೆ ಭಾರತದ ಇತರ ಕಡೆಗಳಲ್ಲೂ ಇತ್ತು. ಪುನಃ ಮೊದಲಿನ ಆರ್ಥಿಕ ಜೀವನವನ್ನೇ ನಡೆಸುವುದಂತೂ ಸಾಧ್ಯವೇ ಇರಲಿಲ್ಲ. ಯುದ್ಧ ದೆಸೆಯಿಂದ ಅಧಿಕ ಲಾಭ ಸಂಪಾದನೆ ಮಾಡಿದ್ದ ಕೈಗಾರಿಕೋದ್ಯಮಿಗಳು ಸಹ ಚಕಿತರಾಗಿ ಎಚ್ಚತ್ತು ತಮ್ಮ ಸಂಕುಚಿತ ದೃಷ್ಟಿ ಬಿಟ್ಟು ದೂರದೃಷ್ಟಿ ತೋರಲಾರಂಭಿಸಿದರು. ರಾಜಕೀಯ ತತ್ವಗಳಿಗೆ ಹೆದರಿ ಸಾಮಾನ್ಯವಾಗಿ ಕಾಸಿಗೆ ಕಾಸು ಲೆಕ್ಕಾಚಾರ ಮಾಡುವವರಾದರೂ ಆ ಲೆಕ್ಕಾಚಾರವೇ ಒಂದು ದೂರದೃಷ್ಟಿಯ ತೀರ್ಮಾನಕ್ಕೆ ಬರಲು ಅವರನ್ನು ಪ್ರೇರಿಸಿತು. ಮುಖ್ಯವಾಗಿ ತಾತಾ ಕೈಗಾರಿಕೆಗಳಿಗೆ ಸೇರಿದ ಕೆಲವು ಪ್ರಮುಖ ಮುಂಬೈ ಕೈಗಾರಿಕೋದ್ಯಮಿಗಳು ಭಾರತದ ಪ್ರಗತಿಗಾಗಿ ಹದಿನೈದು ವರ್ಷದ ಒಂದು ಯೋಜನೆ ಸಿದ್ಧಗೊಳಿಸಿದರು.