ಪುಟ:ಭಾರತ ದರ್ಶನ.djvu/೪೭೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೪೭೦
ಭಾರತ ದರ್ಶನ

ಪರಿವರ್ತನೆಗೂ ಭಾರತೀಯ ಮೂಲತತ್ವಗಳಿಗೂ ಯಾವ ವಿರೋಧವೂ ಬರುವುದಿಲ್ಲ. ಅಂತಹ ಪರಿವರ್ತನೆಗಳು ಭಾರತದ ಮನೋಪ್ರಪಂಚದಲ್ಲಿ ಕೋಲಾಹಲ ಎಬ್ಬಿಸುವುದು ನಿಜ. ಆದರೆ ಅವನ್ನು ವಿರೋಧಿಸಿ ತಿರಸ್ಕರಿಸದೆ ತನ್ನ ಆದರ್ಶಕ್ಕೆ ಹೊಂದಿಸಿ ತನ್ನ ಮಾನಸಿಕ ಚೌಕಟ್ಟಿನೊಳಗೆ ಸೇರಿಸಿ ತನ್ನದನ್ನಾಗಿ ಮಾಡಿಕೊಳ್ಳುತ್ತದೆ. ಈ ಪರಿವರ್ತನ ಕ್ರಮವೆಲ್ಲ ಹಳೆಯ ದೃಷ್ಟಿಯಲ್ಲಿಯೇ ಮಹತ್ಪರಿವರ್ತನೆಗಳಾಗಬಹುದು. ಆದರೆ ಅವು ಹೊರಗಿನವರು ಹೇರಿದ ಪರಕೀಯ ವಿಷಯಗಳಾಗದೆ ಜನತೆಯ ಸಂಸ್ಕೃತಿಯ ಹಿನ್ನೆಲೆಯಿಂದ ಸ್ವಾಭಾವಿಕವಾಗಿ ವಿಕಾಸಗೊಂಡ ವಿಷಯಗಳಾಗುತ್ತವೆ. ಬಹುಕಾಲ ಪ್ರಗತಿಯೇ ಇಲ್ಲದ ಭಾರತದಲ್ಲಿ ಗೌಣವೂ ಮಹತ್ಪರಿಣಾಮಕಾರಿಯೂ ಆದ ಪರಿವರ್ತನೆಗಳು ಅತ್ಯಂತ ಅವಶ್ಯವಿದ್ದರೂ ಈಗ ಅದು ಕಷ್ಟವಾಗಬಹುದು.

ಈ ಮೂಲ ತತ್ವಗಳ ಸುತ್ತಲೂ ಹೆಮ್ಮರವಾಗಿ ಬೆಳೆದುಕೊಂಡು ಇಂದು ನಮ್ಮ ಉಸಿರು ಕಟ್ಟುತ್ತಿರುವ ಮೇಲ್ಕಟ್ಟಡದ ಬಹುಭಾಗವನ್ನು ತೆಗೆಯಲೇಬೇಕು. ಈ ಮೇಲ್ಕಟ್ಟಡ ಯುಗಧರ್ಮಕ್ಕೆ ವಿರೋಧವೂ ಅಸಾಧುವೂ ಇರುವುದರಿಂದ ಅದು ನಾಶವಾಗಲೇ ಬೇಕು. ಅದನ್ನು ಉಳಿಸಿಕೊಳ್ಳಬೇಕೆನ್ನುವವರು ಭಾರತೀಯ ಸಂಸ್ಕೃತಿಯ ಮೂಲ ತತ್ವಗಳಿಗೆ ಬಹಳ ಅನ್ಯಾಯಮಾಡುತ್ತಾರೆ; ಸಾಧುವಾದುದನ್ನೂ ಅಸಾಧುವಾದುದನ್ನೂ ಬೆರಸಿ ಸಾಧುವಾದುದನ್ನೂ ಕುಲಗೆಡಿಸುತ್ತಾರೆ. ಎರಡನ್ನೂ ಪ್ರತ್ಯೇಕಿಸಿ ಮಧ್ಯೆ ಖಚಿತವಾದ ಒಂದು ಗೆರೆ ಕೊಯ್ಯುವುದು ಸುಲಭವಲ್ಲ; ಮತ್ತು ಪ್ರಬಲ ಭಿನ್ನಾಭಿಪ್ರಾಯಗಳೂ ಇವೆ. ಆ ಬಗೆಯ ತರ್ಕಬದ್ಧ, ತತ್ವಪೂರ್ಣ ಗೆರೆ ಎಳೆಯುವುದೂ ಅನವಶ್ಯಕ ಪರಿವರ್ತಿತ ಜೀವನದ ಅವಶ್ಯಕತೆ, ಪ್ರಪಂಚದ ಘಟನೆಗಳ ಓಟವೇ ಕ್ರಮೇಣ ನಮಗೆ ಆ ಗೆರೆ ಎಳೆದುಕೊಡುತ್ತವೆ. ಔದ್ಯೋಗಿಕವಿರಲಿ ದಾರ್ಶನಿಕವಿರಲಿ ಎಲ್ಲ ಬಗೆಯ ಪ್ರಗತಿಗೂ ಜನಜೀವನ ಮತ್ತು ಸಮಾಜದ ಅವಶ್ಯಕತೆಗಳ ಮತ್ತು ಪ್ರಪಂಚದ ಪ್ರಗತಿವಾಹಿನಿಗಳ ಸಂಪರ್ಕ ಅತ್ಯವಶ್ಯಕವಿದೆ. ಆ ಸಂಬಂಧವಿಲ್ಲದಿದ್ದರೆ ಜೀವನ ಕೊಳೆತು ನಾರುತ್ತದೆ, ಮೃತ್ಯುಮುಖವಾಗುತ್ತದೆ. ಆದರೆ ಆ ಸಂಪರ್ಕ ಇಟ್ಟುಕೊಂಡು, ತೆರೆದ ಮನಸ್ಸಿನಿಂದ ಮುಂದುವರಿದರೆ ಯಾವ ಮುಖ್ಯ ಅಮೂಲ್ಯ ವಸ್ತುವನ್ನೂ ಕಳೆದುಕೊಳ್ಳದೆ ಜೀವನಗತಿಯೊಂದಿಗೆ ಹೊಂದಿಕೊಳ್ಳುತ್ತೇವೆ.

ಈ ಹಿಂದೆ ನಮ್ಮ ಜ್ಞಾನ ಪ್ರವೇಶ ಸಂಯೋಗಿಕವಿತ್ತು; ಆದರೆ ಭಾರತದೊಳಗೆ ಮಾತ್ರವಿತ್ತು. ಆ ಮಿತಿ ಮಾತ್ರ ಮುಂದುವರಿದು ಸಂಯೋಗಿಕ ಪ್ರವೇಶವು ಕ್ರಮೇಣ ಹೆಚ್ಚು ವಿಶ್ಲೇಷಣ ಮಾರ್ಗಕ್ಕೆ ಎಡೆಕೊಟ್ಟಿತು. ಪುನಃ ಸಂಯೋಗಿಕ ರೀತಿಗೆ ಪ್ರಾಧಾನ್ಯತೆ ಕೊಟ್ಟು ಇಡೀ ಪ್ರಪಂಚವನ್ನೇ ನಮ್ಮ ಜ್ಞಾನ ಕ್ಷೇತ್ರವನ್ನಾಗಿ ಈಗ ಮಾಡಿಕೊಳ್ಳಬೇಕಾಗಿದೆ. ಇಷ್ಟು ದೀರ್ಘಕಾಲ ಸಂಕುಚಿತ ಭಾವನೆ ಮತ್ತು ಕರ್ಮ ಮಾರ್ಗಗಳಲ್ಲಿ ತೊಳಲಿದ ಜನತೆ ಆ ಜಾಡಿನಿಂದ ಹೊರಬಿದ್ದು ಉನ್ನತ ಮಟ್ಟಕ್ಕೆ ಬೆಳೆಯಬೇಕಾದರೆ ಪ್ರತಿಯೊಬ್ಬ ವ್ಯಕ್ತಿಯೂ, ಪ್ರತಿಯೊಂದು ಜನಾಂಗವೂ ಈ ಸಂಯೋಗಿಕ ಮಾರ್ಗಕ್ಕೆ ಪ್ರಾಶಸ್ತ್ಯ ಕೊಡುವುದು ಅತ್ಯವಶ್ಯಕ. ವಿಜ್ಞಾನದ ಪ್ರಗತಿ ಮತ್ತು ಅದರ ಪ್ರಯೋಗಗಳಿಂದ ಅದು ನಮಗೆ ಸಾಧ್ಯವಿದೆ. ಆದರೆ ಆ ಜ್ಞಾನದ ಅಪಾರ ಹೊರೆಯೇ ಈಗ ಇನ್ನೊಂದು ಕುತ್ತಾಗಿದೆ. ಯಾವುದೋ ಒಂದು ವಿಶೇಷ ವಿಷಯದಲ್ಲಿ ನೈಪುಣ್ಯತೆ ಪಡೆದು ವ್ಯಕ್ತಿ ಜೀವನ ಸಂಕುಚಿತವಾಗುತ್ತದೆ. ಕೈಗಾರಿಕೆಯಲ್ಲಿ ಮಾನವನು ನಿರ್ಮಿಸುವ ವಸ್ತುವಿನ ಯಾವುದೋ ಒಂದು ಅತ್ಯಲ್ಪ ಭಾಗಕ್ಕೆ ಮಾತ್ರ ಅವನ ಶ್ರಮದ ಸಂಬಂಧವಿದೆ. ಜ್ಞಾನದಲ್ಲಿ, ಕೆಲಸದಲ್ಲಿ ವಿಶೇಷ ನೈಪುಣ್ಯತೆ ಬೇಕೇ ಬೇಕು; ಆದರೆ ಯುಗಾಂತರಗಳಿಂದ ನಡೆದ ಮಾನವ ಸಾಹಸದ ಮತ್ತು ಜೀವನದ ಸಂಯೋಗಿಕ ದೃಷ್ಟಿಗೆ ಪ್ರೋತ್ಸಾಹ ಕೊಡುವುದು ಎಂದಿಗಿಂತಲೂ ಇಂದು ಅತ್ಯವಶ್ಯ ತೋರುತ್ತದೆ. ಈ ದೃಷ್ಟಿಯು ಹಿಂದಿನದನ್ನೂ ಇಂದಿನದನ್ನೂ ಗಮನದಲ್ಲಿಡಬೇಕಲ್ಲದೆ ಎಲ್ಲ ದೇಶಗಳನ್ನೂ, ಜನರನ್ನೂ ಒಳಗುಮಾಡಿಕೊಂಡು ವಿಶ್ವವ್ಯಾಪಕವಿರಬೇಕು. ಈ ರೀತಿ ನಮ್ಮ ರಾಷ್ಟ್ರೀಯ ಹಿನ್ನೆಲೆ ಮತ್ತು ಸಂಸ್ಕೃತಿಗಳ ಜೊತೆಗೆ ಇತರ ದೇಶಗಳ ಜನರನ್ನು ಅರ್ಥಮಾಡಿಕೊಳ್ಳುವ ಶಕ್ತಿಯನ್ನೂ ಪ್ರಾಯಶಃ ಅವರ ಮೆಚ್ಚುಗೆಯನ್ನೂ ನಾವು ಪಡೆಯಬಹುದು. ಅಲ್ಲದೆ ಇಂದಿನ ಏಕ ಪಕ್ಷೀಯ ದೃಷ್ಟಿ ಮತ್ತು ವ್ಯಕ್ತಿತ್ವಗಳಿಗೆ ಬದಲಾಗಿ ಸತ್ವ ಸಮದೃಷ್ಟಿ ಮತ್ತು ವ್ಯಕ್ತಿತ್ವಗಳನ್ನು ಬೆಳೆಯಿಸಲು