ಪುಟ:ಭಾರತ ದರ್ಶನ.djvu/೫೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೩೩
ಅನ್ವೇಷಣೆ

ಪಾಶ್ಚಿಮಾತ್ಯರೀತಿಯದಾಗಿತ್ತು. ಎಲ್ಲವನ್ನೂ ಪಾಶ್ಚಿಮಾತ್ಯ ಸ್ನೇಹಿತನೊಬ್ಬ ನೋಡುವಂತೆ ನಾನೂ ನೋಡಹೊರಟೆ, ಭಾರತದ ದೃಷ್ಟಿ ಮತ್ತು ಸ್ವರೂಪವನ್ನು ಬದಲಾಯಿಸಿ ಆಧುನಿಕ ರೂಪ ಕೊಡ ಬೇಕೆಂದು ಕುತೂಹಲನಾದೆ. ಆದರೂ ನನ್ನಲ್ಲಿ ಸಂಶಯ ತರಂಗಗಳು ಎದ್ದವು. ಗತಕಾಲದ ಆಸ್ತಿಯ ಬಹುಭಾಗವನ್ನು ಕಿತ್ತೊಗೆಯಬೇಕೆನ್ನುವ ನಾನು ಭಾರತವನ್ನು ಅರಿತಿದ್ದೇನೆಯೆ ? ಕಿತ್ತು ಹಾಕುವುದು ಎಷ್ಟೋ ಇದೆ ; ಕಿತ್ತು ಹಾಕಲೇ ಬೇಕು. ಆದರೆ ಭಾರತಕ್ಕೆ ಸತ್ವಪೂರ್ಣವೂ ಶಾಶ್ವತವೂ ಆದ ಒಂದು ಶಕ್ತಿ ಇಲ್ಲದಿದ್ದರೆ ಭಾರತ ಹಿಂದೆ ಯಾವ ಅತ್ಯುನ್ನತ ಸ್ಥಿತಿಯಲ್ಲಿತ್ತೋ ಆ ಸ್ಥಿತಿಯನ್ನು ಮುಟ್ಟಲೂ ಸಾಧ್ಯವಿರಲಿಲ್ಲ ಮತ್ತು ಸಹಸ್ರಾರು ಶತಮಾನಗಳಿಂದ ಸುಸಂಸ್ಕೃತ ಜೀವನದಲ್ಲಿ ಬಾಳಲೂ ಸಾಧ್ಯವಾಗುತ್ತ ಇರಲಿಲ್ಲ. ಹಾಗಾದರೆ ಆ ಶಕ್ತಿ ಯಾವುದು?

ವಾಯವ್ಯ ಇಂಡಿಯದ ಸಿಂಧು ಕಣಿವೆಯ ಮೊಹೆಂಜೋದಾರೊ ದಿಣ್ಣೆಯ ಮೇಲೆ ನಿಂತು ನೋಡಿದೆ. ಸುತ್ತಲೂ ಐದು ಸಾವಿರ ವರ್ಷಗಳ ಹಿಂದೆ ಇದ್ದ ಪುರಾತನ ನಗರದ ಮನೆಗಳು ಮತ್ತು ಬೀದಿ ಸಾಲುಗಳು. ಆಗಲೇ ಅದು ಪುರಾತನವೂ ಪೂರ್ಣ ವಿಕಸಿತವೂ ಆದ ನಾಗರಿಕತೆಯಾಗಿತ್ತು. ಪ್ರೊಫೆಸರ್ ಚೈಲ್ಡ್ ಹೇಳುವಂತೆ “ಸಿಂಧು ಕಣಿವೆಯ ನಾಗರಿಕತೆಯಲ್ಲಿ ಜನಜೀವನಕ್ಕೂ ಸುತ್ತಲಿನ ನಿರ್ದಿಷ್ಟ ಸನ್ನಿವೇಶಗಳಿಗೂ ಇರುವ ಅನುಪಮ ಜೋಡಣೆಯನ್ನು ನೋಡಿದರೆ ಅದು ಅನೇಕ ವರ್ಷಗಳ ಸ್ಥಿರಸೈರಣೆಯ ಪ್ರಯತ್ನದ ಫಲವಾಗಿರಬೇಕು. ಅದು ಜೀವಂತವಾಗಿದೆ. ಇಂದಿನ ಭಾರತೀಯ ಸಂಸ್ಕೃತಿಗೆ ಅದು ತಳಪಾಯವಾಗಿದೆ ” ಎಂದಿದ್ದಾರೆ. ಐದು ಆರು ಸಾವಿರ ವರ್ಷಗಳಿ೦ದ ಅವ್ಯಾಹತ ವಾಹಿನಿಯಾಗಿ ಹರಿದು ಬಂದ ಸಂಸ್ಕೃತಿ ಅಥವ ನಾಗರಿಕತೆ ಇಂದೂ ಜೀವಂತವಿದೆ ಎನ್ನುವದು ಅದ್ಭುತ ಕಲ್ಪನೆ. ಅಚಲ ಅಥವ ಪ್ರಗತಿರಹಿತ ಎಂದಲ್ಲ ; ಏಕೆಂದರೆ ಭಾರತ ಸದಾ ವ್ಯತ್ಯಾಸ ಹೊಂದು ತಿದೆ, ಪ್ರಗತಿ ಮಾರ್ಗದಲ್ಲಿ ನಡೆಯುತ್ತಿದೆ. ಪಾರಸಿಕರು, ಐಗುಪ್ತರು, ಗ್ರೀಕರು, ಚೀನೀಯರು, ಅರಬರು, ಮಧ್ಯ ಏಷ್ಯ ಮತ್ತು ಮೆಡಿಟರೇನಿರ್ಯ ಸಮುದ್ರದ ಜನಗಳ ಸಂಪರ್ಕ ಭಾರತದೊಂದಿಗೆ ಇದ್ದೇ ಇದೆ. ಅವುಗಳ ಮೇಲೆ ಭಾರತ ತನ್ನ ಪ್ರಭಾವ ಬೀರಿದರೂ, ಮತ್ತು ಅವುಗಳ ಪ್ರಭಾವ ತನ್ನ ಮೇಲೆ ಬಿದ್ದರೂ, ಭಾರತದ ಸಾಂಸ್ಕೃತಿಕ ತಳಪಾಯ ಭದ್ರವಾಗಿಯೇ ಉಳಿದಿದೆ. ಈ ಶಕ್ತಿಯ ಗುಟ್ಟು ಏನು ? ಅದು ಎಲ್ಲಿಂದ ಬಂದಿತು ?

ಭಾರತದ ಇತಿಹಾಸವನ್ನೂ ಮತ್ತು ವಿಪುಲ ಪುರಾತನ ಗ್ರಂಥಗಳನ್ನೂ ಓದಿದೆ. ಅವುಗಳ ಹಿಂದಿನ ಭಾವನಾ ಶಕ್ತಿ, ಭಾಷಾ ಸ್ಪಷ್ಟತೆ, ಮನಸ್ಸಿನ ಪರಿಪೂರ್ಣತೆಯಿ೦ದ ಬಹಳ ಚಕಿತನಾದೆ. ಶತಮಾನ ಗಳ ಹಿಂದೆ ಚೀನ, ಪಶ್ಚಿಮ ಮತ್ತು ಮಧ್ಯ ಏಷ್ಯದಿಂದ ಬಂದು ತಮ್ಮ ಯಾತ್ರೆಗಳ ಇತಿಹಾಸವನ್ನು ಬರೆದಿಟ್ಟಿರುವ ಮಹಾ ಯಾತ್ರಿಕರೊಂದಿಗೆ ಇಂಡಿಯಾ ದೇಶವನ್ನೆಲ್ಲ ಸುತ್ತಿದೆ. ಪೂರ್ವ ಏಷ್ಯ, ಆ೦ಗ್ ಕೋರ, ಬೋರೋ ಬುದೂರ್‌, ಮತ್ತು ಇತರ ಸ್ಥಳಗಳಲ್ಲಿ ಇಂಡಿಯದ ಮಹತ್ಸಾಧನೆಗಳ ವಿಚಾರ ಯೋಚಿಸಿದೆ. ಹಳೆಯ ಪುರಾಣ ಇತಿಹಾಸಗಳೊಡನೆ ನಿಕಟ ಬಾಂಧವ್ಯದಿಂದ ನಮ್ಮ ಸಾಹಿತ್ಯ ಮತ್ತು ಆಲೋಚನೆಗಳಮೇಲೆ ಹೆಚ್ಚು ಪ್ರಭಾವ ಬೀರಿರುವ ಹಿಮಾಲಯ ಪರ್ವತಗಳಲ್ಲಿ ತಿರುಗಾಡಿದೆ. ನನ್ನ ಪರ್ವತ ಪ್ರೇಮ, ಮತ್ತು ಕಾಶ್ಮೀರದ ಬಾಂಧವ್ಯ ಕಾಶ್ಮೀರದ ಬೆಟ್ಟದ ಸಾಲುಗಳಿಗೆ ನನ್ನನ್ನು ಸೆಳೆ ದೊಯ್ದ ವು. ಅಲ್ಲಿ ಇಂದಿನ ಜೀವನ, ಓಜಸ್ಸು ಮತ್ತು ಸೌಂದರ್ಯವನ್ನು ಮಾತ್ರವಲ್ಲ ಗತಕಾಲದ ಹಿಂದಿನ ವೈಭವದ ಸೊಬಗನ್ನೂ ಕಂಡೆ. ಈ ಮಹಾ ಪರ್ವತ ಶ್ರೇಣಿಯಿಂದ ಭಾರತದ ಫಲವತ್ತಾದ ಮೈದಾನಗಳಿಗೆ ಹರಿಯುವ ಮಹಾನದಿಗಳಿ೦ದ ಮುಗ್ಧನಾದೆ ; ಅವು ನಮ್ಮ ಇತಿಹಾಸದ ಅನಂತ ಮುಖಗಳನ್ನು ಜ್ಞಾಪಕಕ್ಕೆ ತಂದವು. ಸಾವಿರಾರು ವರ್ಷಗಳಿಂದ ಬೇರೆ ಬೇರೆ ಜನಾಂಗಗಳು, ಪಂಗಡ ಗಳು, ಒಂಟೆಗಳ ಸಾಲು, ಸೈನ್ಯಗಳ ತಂಡಗಳು ಬಂದಿರುವ ಈ ನಮ್ಮ ದೇಶಕ್ಕೆ ಇ೦ಡಿಯ ಅಥವ ಹಿಂದುಸ್ಥಾನ್ ಎಂದು ಹೆಸರು ತಂದಿರುವ ಆ ಇಂಡಸ್ ಅಥವ ಸಿಂಧು ; ಇತಿಹಾಸದಲ್ಲಿ ಹೆಚ್ಚು ಪ್ರಮುಖ ಪಾತ್ರವಹಿಸದಿದ್ದರೂ ಹಿಂದಿನ ಕಥೆಗಳಲ್ಲಿ ಅತಿ ಮುಖ್ಯವೆನಿಸಿ, ಇ೦ಡಿಯದ ಈಶಾನ್ಯ ಮೂಲೆಯ ಪರ್ವತಶ್ರೇಣಿಯ ಹೃದಯವನ್ನು ಭೇದಿಸಿಕೊಂಡು ಆಳವಾದ ಕಣಿವೆಗಳ

3