ಪುಟ:ಭಾರತ ದರ್ಶನ.djvu/೫೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



ಪುನಃ ಅಹಮದ್ ನಗರದ ಕೋಟೆಯಲ್ಲಿ

೫೧೩

ಭಾರತದಲ್ಲಿ ನಾವು ಹಿಂದಿನದನ್ನಾಗಲಿ, ದೂರದ ವಸ್ತುವನ್ನಾಗಲಿ ಅರಸಿಕೊಂಡು ಹೋಗಬೇಕಾದ್ದಿಲ್ಲ. ನಮ್ಮ ಕಣ್ಣೆದುರಿಗೇನೆ ಅಪಾರ ರಾಶಿ ಇದೆ. ನಾವು ಹೊರಗೆ ಹೋಗಿ ಅರಸುವುದಿದ್ದರೆ ಆಧುನಿಕತೆ ಅರಸಬೇಕು. ಆ ಅನ್ವೇಷಣೆ ಅತ್ಯವಶ್ಯಕ, ಏಕೆಂದರೆ ಏಕಾಂತ ಭಾವನೆ ಎಂದರೆ ಪರಾಙ್ಮುಖತೆ ಮತ್ತು ವಿನಾಶ. ಎಮರ್ಸನ್ ಕಾಲದ ಪ್ರಪಂಚ ಇಂದು ಬದಲಾಯಿಸಿದೆ; ಅಡ್ಡ ಗೋಡೆಗಳು ಕುಸಿದು ಬೀಳುತ್ತಿವೆ; ಜೀವನ ಹೆಚ್ಚು ಹೆಚ್ಚು ಅಂತರ ರಾಷ್ಟ್ರೀಯವಾಗುತ್ತಿದೆ. ಈ ಅಂತರ ರಾಷ್ಟ್ರೀಯ ರಂಗದಲ್ಲಿ ನಾವು ನಮ್ಮ ಪಾತ್ರ ವಹಿಸಬೇಕು; ಅದಕ್ಕಾಗಿ ಪ್ರವಾಸಮಾಡಿ, ಇತರರನ್ನು ಕಂಡು ಅವರಿಂದ ಕಲಿತು, ಅರ್ಥಮಾಡಿಕೊಳ್ಳಬೇಕು, ಆದರೆ ನಿಜವಾದ ಅಂತರ ರಾಷ್ಟ್ರೀಯತ್ವ ಬೇರು ಅಥವ ಲಂಗರಿಲ್ಲದ ಆಕಾಶ ಕುಸುಮವಲ್ಲ, ರಾಷ್ಟ್ರ ಸಂಸ್ಕೃತಿಗಳಿಂದ ಅದು ಬೆಳೆಯಬೇಕು; ಸ್ವಾತಂತ್ರ್ಯ, ಸಮಾನತೆ ಮತ್ತು ನಿಜವಾದ ಅಂತರ ರಾಷ್ಟ್ರೀಯತ್ವದ ಆಧಾರದಿಂದ ಮಾತ್ರ ಇಂದು ಅದು ಬೆಳೆಯಲು ಸಾಧ್ಯ. ಆದರೂ ಎಮರ್ಸನ್ನ ಎಚ್ಚರಿಕೆ ಅಂದು ಹೇಗೋ ಹಾಗೆ ಇಂದೂ ಸತ್ಯ. ಆತನು ತಿಳಿಸಿರುವ ದೃಷ್ಟಿಯಿಂದ ಮಾತ್ರ ನಮ್ಮ ಅನ್ವೇಷಣೆ ಫಲದಾಯಕವಾದೀತು; ಆಗಂತುಕರಾಗಿ ಹೋಗಲು ಸಾಧ್ಯವಿಲ್ಲ; ಆದರೆ ಸಾಮಾನ್ಯ ಅನ್ವೇಷಣೆಯಲ್ಲಿ ಸಮಾನರಾಗಿ, ಸಹೋದ್ಯೋಗಿಗಳೆಂದು ಸ್ವಾಗತವಿದ್ದರೆ ಮಾತ್ರ ಸಾಧ್ಯ. ಕೆಲವು ದೇಶಗಳಲ್ಲಿ ಮುಖ್ಯವಾಗಿ ಬ್ರಿಟಿಷ್‌ ಡೊಮಿನಿಯನ್‌ಗಳಲ್ಲಿ ನಮ್ಮ ಜನರಿಗೆ ಅಪಮಾನಗೊಳಿಸುವ ಯತ್ನ ನಡೆದಿದೆ. ನಮಗೆ ಆ ಡೊಮಿನಿಯನ್ ಜನ ಬೇಕಿಲ್ಲ, ಈಗ ನಾವು ಪರದಾಸ್ಯದಲ್ಲಿ ನರಳುತ್ತಿರಬಹುದು ; ಅದರ ಎಲ್ಲ ಗೋಳಿನ ಹೊರೆಯಿಂದ ಕುಗ್ಗಿರಬಹುದು, ಆದರೆ ಬಿಡುಗಡೆಯ ದಿನ ಬಹಳ ದೂರಿಲ್ಲ, ಯಾವ ದೇಶಕ್ಕೂ ಕಡಮೆ ಇಲ್ಲದ ದೇಶದ ನಾಗರಿಕರು ನಾವು; ನಮ್ಮ ಜನ್ಮಭೂಮಿ, ನಮ್ಮ ಜನ, ನಮ್ಮ ಸಂಸ್ಕೃತಿ ಮತ್ತು ನಮ್ಮ ಸಂಪ್ರದಾಯಗಳಲ್ಲಿ ಉಜ್ವಲ ಅಭಿಮಾನವಿದೆ, ಆದರೆ ಆ ಅಭಿಮಾನ ಭಾವಾವೇಶದ ಜೀರ್ಣವಸ್ತುವಾಗಬಾರದು ಮತ್ತು ಅದಕ್ಕೆ ಅಂಟಿಕೊಂಡು ಕುಳ್ಳಿರಬಾರದು. ಅದರಲ್ಲಿ ಏಕಾಂತ ಭಾವನೆಯಾಗಲಿ, ನಮಗಿಂತ ಭಿನ್ನ ರೀತಿಯದನ್ನು ಹೀಯಾಳಿಸುವ ಮನೋಬುದ್ದಿ ಯಾಗಲಿ ಇರಬಾರದು ನಮ್ಮ ಅನೇಕ ದೌರ್ಬಲ್ಯಗಳನ್ನೂ, ದೋಷಗಳನ್ನೂ ಮತ್ತು ಅವುಗಳ ನಿವಾರಣಾಸಕ್ತಿಯನ್ನೂ ಎಂದೂ ಮರೆಯಬಾರದು. ಮಾನವ ನಾಗರಿಕತೆ ಮತ್ತು ಪ್ರಗತಿಯಲ್ಲಿ ಇತರರೊಂದಿಗೆ ನಮ್ಮ ಸರಿಯಾದ ಸ್ಥಾನ ಪಡೆಯಬೇಕಾದರೆ ನಾವು ಬಹು ದೂರ ಮತ್ತು ಬಹಳ ಮುಂದೆ ಹೋಗಬೇಕು, ನಮಗಿರುವ ಕಾಲಅತ್ಯಲ್ಪ, ವಿಳಂಬಿಸುವಂತಿಲ್ಲ ; ಓಡಬೇಕು ; ಪ್ರಪಂಚದ ಗತಿಯೂ ನಾಗಾಲೋಟದಿಂದ ಸಾಗುತ್ತಿದೆ. ಇತರ ಸಂಸ್ಕೃತಿಗಳನ್ನು ಸ್ವಾಗತಿಸಿ ಜೀರ್ಣಿಸಿಕೊಳ್ಳುವುದು ಭಾರತದ ನೀತಿಯಾಗಿತ್ತು. ರಾಷ್ಟ್ರ ಸಂಸ್ಕೃತಿಗಳು ಮಾನವಕುಲದ ಅಂತರರಾಷ್ಟ್ರೀಯ ಸಂಸ್ಕೃತಿಯೊಂದಿಗೆ ಬೆರೆತು ನಾಳಿನ “ಒಂದು ಪ್ರಪಂಚ”ದ ಕಡೆ ನಾವು ಹೋಗುತ್ತಿರುವುದರಿಂದ ಆಗುಣದ ಅವಶ್ಯಕತೆ ಇಂದು ಇನ್ನೂ ಹೆಚ್ಚು ಇದೆ. ಆದ್ದರಿಂದ ವಿದ್ಯೆ, ಜ್ಞಾನ, ಸ್ನೇಹ ಮತ್ತು ಸಹಕಾರ ಎಲ್ಲೆಲ್ಲಿ ದೊರೆಯುತ್ತದೆಯೋ ಅಲ್ಲೆಲ್ಲಿ ಸೇರಿ ಸಾಮಾನ್ಯ ಕೆಲಸಗಳಲ್ಲಿ ಸಹಕರಿಸೋಣ ; ಆದರ ಯಾರ ಭಿಕ್ಷೆಯೂ, ಔದಾರ್ಯವೂ ನಮಗೆ ಬೇಕಿಲ್ಲ. ಈ ರೀತಿ ನಿಜವಾದ ಭಾರತೀಯರಾಗಿ, ಏಷ್ಯನರಾಗಿ ಜೊತೆಗೆ ಉತ್ತಮ ಅಂತರ ರಾಷ್ಟ್ರೀಯವಾದಿಗಳೂ ಪ್ರಪಂಚದ ನಾಗರಿಕರೂ ಆಗೋಣ.

ಭಾರತದಲ್ಲಿ ಮತ್ತು ಪ್ರಪಂಚದಲ್ಲಿ ನಮ್ಮ ತಲೆಮಾರಿನ ಕಥೆ ಎಂದರೆ ಗೋಳಿನ ಕಥೆ, ಇನ್ನೂ ಸ್ವಲ್ಪ ಕಾಲ ತಳ್ಳೇವು, ಆದರೆ ನಮ್ಮ ದಿನವೂ ಮುಗಿಯುತ್ತದೆ ; ಇತರರಿಗೆ ದಾರಿಕೊಡುತ್ತೇವೆ, ಅವರು ತಮ್ಮ ಬಾಳು ಬಾಳಿ ಮುಂದಿನ ಘಟ್ಟಕ್ಕೆ ತಮ್ಮ ಹೊರೆ ಸಾಗಿಸುತ್ತಾರೆ. ಕೊನೆಗೊಳ್ಳುತ್ತಿರುವ ಈ ಸಣ್ಣ ಅಂಕದಲ್ಲಿ ನಮ್ಮ ಪಾತ್ರ ನಾವು ಯಾವ ರೀತಿ ಅಭಿನಯಿಸಿದ್ದೇವೆ? ನಾನರಿಯೆ, ಅದನ್ನು ಬೇರೊಂದು ಯುಗದವರು ನಿರ್ಣಯಿಸುತ್ತಾರೆ. ಜಯಾಪಜಯ ಅಳೆಯಲು ನಮಗೆ ಇರುವ ಮಾಪನ ಯಾವುದು ? ಅದೂ ನಾನರಿಯೆ. ಜೀವನವು ನಮ್ಮನ್ನು ಕಠಿಣ ಕಂಡಿದೆ ಎಂದು ನಾವು ದೂರುವಂತಿಲ್ಲ ; ಏಕೆಂದರೆ ನಮ್ಮ ಆತ್ಮನಿರ್ಣಯದ ದಾರಿಯೇ ಅದು. ಪ್ರಾಯಶಃ ನಮ್ಮ ಮೇಲೆ ಅಷ್ಟು ಕೌರವನ್ನೂ ತೋರಿಸಿಲ್ಲ. ಸಾವಿಗೆ ಅಂಜಿ ಜೀವನ ನಡೆಸದೆ, ಸಾವಿನ ಅಂಚಿನಲ್ಲಿ ಇರುವವರು ಮಾತ್ರ ಜೀವನದ ಸವಿ ಬಲ್ಲರು, ನಮ್ಮ ತಪ್ಪುಗಳು ಏನೇ ಇರಲಿ ಅಲ್ಪ ಮನಸ್ಸು, ನಾಚಿಕೆ ಮತ್ತು ಹೇಡಿತನ ತೋರಿಸಿಲ್ಲ. ವ್ಯಕ್ತಿಶಃ ನಮಗೆ