ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಭಾರತ ಸಂಶೋಧನೆ
೬೭

ಜನಾಂಗವೇ ಆಚರಿಸಿ ಕೃತಕೃತ್ಯತೆ ಪಡೆಯಿತು. ಆದರೂ ಜನತೆಯು ಗುಣವಿಶೇಷಕ್ಕೆ ಗೌರವ ಕೊಟ್ಟ ತೇ ಹೊರತು ಅಧಿಕಾರ ಪದವಿಗಲ್ಲ. ಜ್ಞಾನ ಮತ್ತು ಗುಣ ಯಾವ ವ್ಯಕ್ತಿಯಲ್ಲೇ ಇರಲಿ ಆತನಿಗೆ ಗೌರವ ಸಲ್ಲಿಸುವುದು ಸಂಪ್ರದಾಯವಾಯಿತು. ಈ ರೀತಿ ಅನೇಕ ಬ್ರಾಹ್ಮಣೇತರರನ್ನು, ಅಸ್ಪೃಶ್ಯ ರನ್ನು ಗೌರವಿಸಿದ್ದಾರೆ ಮತ್ತು ಅವರಿಗೆ ಗುರು ಪದವಿಯನ್ನೂ ಕೊಟ್ಟಿದ್ದಾರೆ. ಅಧಿಕಾರ ಪದವಿಗೆ ಯೋಧ ಪದವಿಗೆ ಜನ ಭಯಭಕ್ತಿಯನ್ನು ತೋರಿದರೂ, ಈ ವಿಶೇಷ ಗೌರವವನ್ನೆ೦ದಿಗೂ ತೋರಲಿಲ್ಲ.

ಇಂದಿನ ಹಣಯುಗದಲ್ಲಿ ಸಹ ಈ ಸತ್ಸಂಪ್ರದಾಯ ಮಾಸಿಹೋಗಿಲ್ಲ. ಅದರಿಂದಲೇ ಬ್ರಾಹ್ಮಣ ನಲ್ಲದಿದ್ದರೂ, ಯಾವ ಅಧಿಕಾರಸ್ಥಾನದ ಅಥವ ಶ್ರೀಮಂತಿಕೆಯ ದರ್ಪ ಆಥವ ಒತ್ತಾಯವಿಲ್ಲದೆ ಇದ್ದರೂ ಗಾಂಧಿಜಿ ಜನಕೋಟಿಯ ಹೃದಯವನ್ನು ಕಲಕಬಲ್ಲರು ; ಭಾರತದ ಮಹಾ ನಾಯಕನಾಗಿ ರಾಷ್ಟ್ರ ಸೂತ್ರಗಳನ್ನು ನಡೆಸಬಲ್ಲರು. ಒಂದು ರಾಷ್ಟ್ರದ ಸಾಂಸ್ಕೃತಿಕ ಹಿನ್ನೆಲೆಗೆ, ಅದರ ವ್ಯಕ್ತಿ ಅಥವ ಅವ್ಯಕ್ತ ಧೈಯಕ್ಕೆ ಇದು ಒಳ್ಳೆಯ ಒರೆಗಲ್ಲು ; ಇನ್ನೆಂಥ ನಾಯಕನನ್ನು ತಾನೆ ಅದು ಹಿಂಬಾಲಿಸ ಬಲ್ಲುದು. ಇಂಡಿಯದ ನಾಗರಿಕತೆ ಅಥವ ಭಾರತೀಯ ಆರ್ಯರ ಸಂಸ್ಕೃತಿಯ ಜೀವಾಳ - ಧರ್ಮ 'ದಲ್ಲಿ, ಧರ್ಮವು ಜಾತಿ ಅಥವ ಮತಕ್ಕಿಂತ ಉನ್ನತವಾದದ್ದು. ಅದರಲ್ಲಿ ಕರ್ತವ್ಯಭಾವನೆಯಿದೆ. ತನಗಾಗಿ ಮತ್ತು ಇತರರಿಗಾಗಿ ತನ್ನ ಕರ್ತವ್ಯ ಪಾಲನೆ ಮಾಡುವುದೇ ಧರ್ಮ, ಈ ಧರ್ಮ, ವಿಶ್ವದ ಸಕಲ ವಸ್ತುಗಳ ವ್ಯಾಪಾರಗಳನ್ನು ನಿಯಂತ್ರಿಸುವ ಮೂಲನೈತಿಕ ನಿಯಮವಾದ “ ಋತ”ದ ಒಂದು ಅಂಶ ಮಾತ್ರ. ಅಂತಹ ಒಂದು ನಿಯಮವಿದ್ದರೆ ಮನುಷ್ಯ ಅದಕ್ಕೆ ಹೊಂದಿಕೊಂಡು ಅದರೊಂದಿಗೆ ಸಮ ರಸತೆಯಿಂದಿರುವಂತೆ ಜೀವನ ವ್ಯಾಪಾರ ನಡೆಸಬೇಕು. ಮನುಷ್ಯ ತನ್ನ ಕರ್ತವ್ಯ ತಾನು ಮಾಡಿದರೆ, ಆ ಕರ್ತವ್ಯವು ನೈತಿಕ ದೃಷ್ಟಿಯಿಂದ ಸರಿಯಿದ್ದರೆ ಪ್ರತಿಫಲ ತನಗೆ ತಾನೇ ಹಿಂಬಾಲಿಸುತ್ತದೆ. ಅಧಿಕಾರಕ್ಕೆ ಬಹಳ ಬೆಲೆ ದೊರೆಯಲಿಲ್ಲ. ಹಿಂದಿನ ಕಾಲದಲ್ಲಿ ಸಾಮಾನ್ಯವಾಗಿ ಈ ನಿಷ್ಕಾಮ ದೃಷ್ಟಿಯನ್ನು ಎಲ್ಲ ಕಡೆಯಲ್ಲೂ ಕಾಣುತ್ತೇವೆ. ಇಂದಿನ ಕಾಲದ ವ್ಯಕ್ತಿಯ ಅಧಿಕಾರ, ಪಂಗಡಗಳ ಅಧಿಕಾರ, ರಾಷ್ಟ್ರಗಳ ಅಧಿಕಾರದ ಆಶೆಗೆ ಈ ದೃಷ್ಟಿ ತೀರ ವಿರುದ್ಧವಿದೆ.

೮. ಭಾರತೀಯ ಸಂಸ್ಕೃತಿಯ ಅವಿಚ್ಛಿನ್ನತೆ

ಈ ರೀತಿ ಆರಂಭವಾದ ಸಂಸ್ಕೃತಿಯು ಮುಂದಿನ ಯುಗಗಳಲ್ಲಿ ಸಂಪಸ್ಸಮೃದ್ಧವಾಗಿ ಸರ್ವಾ೦ಗ ಸುಂದರವಾಗಿ ಪ್ರಫುಲ್ಲಿತವಾಯಿತು. ಮತ್ತು ಕ್ರಮೇಣ ಅನೇಕ ವ್ಯತ್ಯಾಸಗಳಾದರೂ ಆ ನಾಗರಿಕತೆ ಇಂದಿಗೂ ಅಮೃತವಾಹಿನಿಯಾಗಿ ಮುಂದುವರಿಯುತ್ತಿದೆ. ಮೂಲಧೈಯಗಳು, ವಿಧಿನಿಯಮಗಳು ರೂಪುಗೊಂಡವು. ಸಾಹಿತ್ಯ, ತತ್ವಶಾಸ್ತ್ರ, ಕಲೆ, ನಾಟಕ ಮತ್ತು ಜೀವನದ ಎಲ್ಲ ಕಾವ್ಯಗಳಲ್ಲಿ ಈ ಧೈಯಗಳ ಮತ್ತು ವಿಶ್ವದೃಷ್ಟಿ ಯ ಮೂಲಾಧಾರವನ್ನು ಕಾಣಬಹುದು. ಇಲ್ಲಿಯೇ, ಮುಂದೆ, ಶಾಖೋಪಶಾಖೆಗಳಾಗಿ ಬೃಹದಾಕಾರವಾಗಿ ಬೆಳೆದು ಸರ್ವಸ್ವವನ್ನೂ ತನ್ನ ವಜ್ರಮುಷ್ಟಿಯಲ್ಲಿ ಬಿಗಿ ಹಿಡಿದುಕೊಂಡು ಸಮಾಜ ವಿಭಜನೆಯ ಮತ್ತು ಮಡಿವಂತಿಕೆಯ ಇಂದಿನ ಜಾತಿ ಪದ್ಧತಿಯ ಬೀಜ ವನ್ನೂ ಕಾಣಬಹುದು, ಯಾವುದೋ ಒಂದು ಕಾಲದ ಅವಶ್ಯಕತೆಗಾಗಿ, ಅಂದಿನ ಸಮಾಜರಚನೆಯ ಭದ್ರತೆಗಾಗಿ, ಅಂತಃಶಕ್ತಿ ಮತ್ತು ಸಮತೂಕಕ್ಕಾಗಿ ರಚಿತವಾದ ಜಾತಿ ಪದ್ಧತಿ ಆ ಸಮಾಜ ರಚನೆಗೇನೆ ಮಾನವ ಮನಸ್ಸಿಗೇನೆ ಒ೦ದು ಸೆರೆಮನೆಯಾಯಿತು.

ಆದರೂ ಓಟ ಬಹುದೊಡ್ಡದು ; ಅದರ ಚೌಕಟ್ಟಿನಲ್ಲೇ ನಾನಾಮುಖವಾಗಿ ವಿಕಾಸಹೊಂದಲು ಇದ್ದ ಮೂಲ ಜೀವಶಕ್ತಿಯಿಂದ ಇಂಡಿಯದಲ್ಲಿ ಈ ಪದ್ದತಿಯು ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೆ ಮಾತ್ರವಲ್ಲದೆ ಪೂರ್ವ ಸಮುದ್ರಗಳಾಚೆ ಸಹ ಹರಡಿತು ಮತ್ತು ಮೇಲಿಂದ ಮೇಲೆ ಆಘಾತಗಳು, ದಂಡಯಾತ್ರೆಗಳು ಒದಗಿದರೂ ಉಳಿದು, ಚೇತರಿಸಿಕೊಂಡು ತನ್ನ ಅಸ್ತಿತ್ವವನ್ನು ಕಾದುಕೊಂಡಿದೆ.