ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೭೬
ಭಾರತ ದರ್ಶನ

ವಿಮರ್ಶಾತ್ಮಕ ದೃಷ್ಟಿಯಿಂದ ಪರೀಕ್ಷೆಮಾಡಿ ಅವಶ್ಯಬಿದ್ದರೆ ಮುದ್ರಣ ಮತ್ತು ಅನುವಾದ ಮಾಡಬೇಕಾದ್ದು ನಾವು ನಮ್ಮ ದಾಸ್ಯಶೃ೦ಖಲೆಗಳನ್ನು ಕಿತ್ತೊಗೆದು ಸ್ವತಂತ್ರರಾದೊಡನೆ ಮಾಡಬೇಕಾದ ಅಗತ್ಯ ಕೆಲಸ ಗಳಲ್ಲಿ ಅತಿ ಮುಖ್ಯವಾದದ್ದು. ಅಂತಹ ಅಭ್ಯಾಸದಿಂದ ಭಾರತೀಯ ಇತಿಹಾಸದ ಅನೇಕ ಹೊಸ ವಿಷಯಗಳು ಬೆಳಕಿಗೆ ಬರುತ್ತವೆ ಮತ್ತು ಐತಿಹಾಸಿಕ ಘಟನೆಗಳು ಮತ್ತು ವ್ಯತ್ಯಸ್ಥ ಭಾವನೆಗಳ ಸಾಮಾಜಿಕ ಹಿನ್ನೆಲೆ ಮುಖ್ಯವಾಗಿ ಬೆಳಕಿಗೆ ಬರುತ್ತದೆ. ಯಾವ ವ್ಯವಸ್ಥಿತ ಪ್ರಯತ್ನವೂ ಇಲ್ಲದೆ ಅನೇಕಬಾರಿ ನಾಶವಾಗಿ ನಷ್ಟವಾದಾಗ್ಯೂ ೫೦,೦೦೦ ಕ್ಕೆ ಮೇಲ್ಪಟ್ಟು ಹಸ್ತ ಪ್ರತಿಗಳು ದೊರೆತಿವೆ ಎಂದರೆ ಆ ಪುರಾತನ ಕಾಲದ ಸಾಹಿತ್ಯ, ನಾಟಕ, ದರ್ಶನ ಮತ್ತು ಇತರ ಶಾಸ್ತ್ರಗಳ ಬೆಳವಣಿಗೆ ಎಷ್ಟು ವಿಪುಲವಾಗಿರಬೇಕು ಎಂಬುದು ಸ್ಪಷ್ಟವಾಗುತ್ತದೆ ಅನೇಕ ಹಸ್ತ ಪ್ರತಿಗಳನ್ನು ಇನ್ನೂ ಅಮೂಲಾಗ್ರವಾಗಿ ನೋಡಿ ಸಹ ಇಲ್ಲ.

ಈ ರೀತಿ ಕಳೆದು ಹೋದ ಗ್ರಂಥರಾಶಿಗಳಲ್ಲಿ ಉಪನಿಷತ್ತುಗಳ ಕಾಲಾನಂತರ ಬೆಳೆದ ಚಾರ್ವಾಕ ಮತದ ಗ್ರಂಥಗಳೆಲ್ಲ ನಾಶವಾಗಿವೆ. ಅದಕ್ಕೆ ದೊರೆಯುವ ಉಲ್ಲೇಖನಗಳೆಂದರೆ ಅದರ ವಿಮರ್ಶೆಗಳು ಮತ್ತು ಚಾರ್ವಾಕ ಮತವನ್ನು ಖಂಡಿಸುವ ಅಸಾಧ್ಯ ಪ್ರಯತ್ನಗಳು. ಆದರೆ ಅನೇಕ ಶತಮಾನಗಳ ಪರ್ಯ೦ತ ಚಾರ್ವಾಕ ಮತ ಭಾರತದಲ್ಲಿ ಮನೆಮಾಡಿಕೊಂಡಿತ್ತು, ಅನೇಕರ ಮೇಲೆ ತನ್ನ ಪ್ರಭಾವ ಬೀರಿತ್ತು ಎನ್ನು ವುದಕ್ಕೆ ಲೇಶವೂ ಅನುಮಾನವಿಲ್ಲ. ಕ್ರಿ. ಪೂರ್ವ ನಾಲ್ಕನೆಯ ಶತಮಾನದಲ್ಲಿ ಕೌಟಿಲ್ಯ ರಾಜಕೀಯ ಆರ್ಥಿಕ ವ್ಯವಸ್ಥೆಯ ಮೇಲೆ ಬರೆದ ಅರ್ಥ ಶಾಸ್ತ್ರದಲ್ಲಿ ಭಾರತೀಯ ದಿವ್ಯದರ್ಶನಗಳಲ್ಲಿ ಚಾರ್ವಾಕಮತವೂ ಒಂದು ಎಂದು ಉಲ್ಲೇಖವಿದೆ.

ಆದ್ದರಿಂದ ಈ ದರ್ಶನದ ಮಿಮರ್ಶಕರನ್ನು, ಅದನ್ನು ಹಳಿಯುವವರನ್ನೇ ನಾವು ಅವಲಂಬಿಸ ಬೇಕಾಗಿದೆ. ಅವರೆಲ್ಲ ಅದನ್ನು ಅಪಹಾಸ್ಯಕ್ಕೀಡು ಮಾಡಿ, ಅದರ ನ್ಯೂನತೆಯನ್ನೆ ತೋರಿಸತಕ್ಕ ವರು, ಅದರ ಸ್ವರೂಪ ಹೇಗೆ ಇತ್ತು ಎಂದು ಕಂಡುಹಿಡಿಯಲು ಇದೊಂದು ತೊಡಕು. ಆದರೂ ಅವರು ಹಳಿಯುವದರಲ್ಲಿ ತೋರುವ ಉತ್ಸಾಹವನ್ನು ನೋಡಿದರೇನೆ ಅವರ ದೃಷ್ಟಿಗೆ ಅದು ಎಷ್ಟು ಮುಖ್ಯ ವೆನಿಸಿರಬೇಕೆನ್ನುವುದು ಸ್ಪಷ್ಟವಾಗುತ್ತದೆ. ಪ್ರಾಯಶಃ ಚಾರ್ವಾಕಮತದ ಸಾಹಿತ್ಯದ ಬಹುಭಾಗ ವನ್ನು ಸನಾತನ ಧರ್ಮಾನುವರ್ತಿಗಳು ಮತ್ತು ಪುರೋಹಿತರು ನಾಶಮಾಡಿರಬೇಕು.

ಚಾರ್ವಾಕರು ಅಧಿಕಾರವರ್ಗದ ಮೇಲೆ ದಂಗೆ ಎದ್ದರು. ಜ್ಞಾನ, ಮತ ಮತ್ತು ಮತಧರ್ಮ ದಲ್ಲಿ ಎಲ್ಲ ಸ್ವಾರ್ಥವನ್ನೂ ವಿರೋಧಿಸಿದರು. ವೇದಗಳು, ಪುರೋಹಿತವರ್ಗ ಮತ್ತು ಶಿಷ್ಟಾಚಾರಗ ಳನ್ನು ಅಲ್ಲಗಳೆದರು; ಭಾವನೆ ಸ್ವತಂತ್ರವಿರಬೇಕು ; ಊಹಾಪ್ರತಿಜ್ಞೆಗಳನ್ನು ಅಥವ ಪೂರ್ವಾಚಾರದ ಅಧಿಕಾರವನ್ನು ಅವಲಂಬಿಸಿರಬಾರದು ಎಂದು ಸಾರಿದರು. ಎಲ್ಲ ತಂತ್ರಗಳನ್ನೂ ಅಂಧಶ್ರದ್ದೆ ಯನ್ನೂ ನಿಂದಿಸಿದರು. ಸಾಧಾರಣವಾಗಿ ಅವರ ದೃಷ್ಟಿಯನ್ನು ಅನೇಕ ವಿಧದಲ್ಲಿ ಇಂದಿನ ಭೌತಿಕ ದೃಷ್ಟಿಗೆ ಹೋಲಿಸಬಹುದು. ಪ್ರಾಚೀನತೆಯ ಶೃ೦ಖಲೆಗಳಿಂದ, ಅದರ ಹೊರೆಯಿಂದ, ಅಗೋಚರವಸ್ತು ವಿಷಯಗಳ ಚಿಂತನೆಯಿಂದ, ಕಾಲ್ಪನಿಕದೇವರುಗಳ ಪೂಜೆಯಿಂದ ಬಿಡುಗಡೆ ಹೊಂದಲು ಯತ್ನ ಮಾಡಿತು. ಯಾವುದು ದೃಷ್ಟಿಗೆ ಗೋಚರವೋ ಅದಕ್ಕೆ ಮಾತ್ರ ಅಸ್ತಿತ್ವ ಕೊಡಬಹುದು ; ಉಳಿದೆಲ್ಲ ಊಹೆ ಅಥವ ಭಾವನೆ, ನಿಜವಿರಲು ಎಷ್ಟು ಸಾಧ್ಯವೋ ಇಲ್ಲದಿರಲು ಸಹ ಅಷ್ಟೇ ಸಾಧ್ಯ. ಆದ್ದರಿಂದ ವಿವಿಧ ವಸ್ತುಗಳ ವಾಸ್ತವರೂಪ ಮತ್ತು ಈ ಪ್ರಪಂಚ ಅಷ್ಟು ಮಾತ್ರ ನಿಜ ಎಂದು ಭಾವಿಸಬಹುದು. ಬೇರೆ, ಕಾಣದ ಯಾವ ಲೋಕವೂ ಇಲ್ಲ. ಸ್ವರ್ಗವೂ ಇಲ್ಲ, ನರಕವೂ ಇಲ್ಲ, ದೇಹದಿಂದ ಹೊರತಾಗಿ ಬೇರೆ ಆತ್ಮವೂ ಇಲ್ಲ. ಮನಸ್ಸು, ಬುದ್ಧಿ ಮತ್ತು ಇತರ ಎಲ್ಲವೂ ಮೂಲಭೂತ ವಸ್ತುಗಳಿಂದ ಹುಟ್ಟಿದೆ. ಪ್ರಾಕೃತಿಕ ಘಟನೆಗಳು ಮಾನವೀಯತೆಯ ಮೌಲ್ಯಕ್ಕೆ ಯಾವ ಪ್ರಾಧಾನ್ಯವನ್ನೂ ಕೊಡುವುದಿಲ್ಲ. ನಾವು ಒಳ್ಳೆಯದೆನ್ನಲಿ, ಕೆಟ್ಟು ಬೆನ್ನಲಿ ಎರಡೂ ಒಂದೇ, ನೀತಿಧರ್ಮ ಎನ್ನುವುದು ಮಾನವಕಲ್ಪಿತ ರೂಢಿಮಾತ್ರ: