ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅರ್ಥಗಾರಿಕೆ : ಪರಂಪರೆ ಮತ್ತು ಪ್ರಯೋಗ
129

ಈ ಎರಡೂ ವಿಧಾನಗಳಿಗೆ ಪ್ರತಿಕ್ರಿಯೆಯಾಗಿ ಎಂಬಂತೆ, ದೇರಾಜೆ ಸೀತಾರಾಮಯ್ಯನವರಂತಹ ಅರ್ಥದಾರಿಗಳು, ತೀರ ಚುಟುಕಾಗಿ ಪಾತ್ರದ ಸದ್ಯದ ನಿಲುವನ್ನು ಬಿಂಬಿಸುವ ಪೀಠಿಕೆಗಳನ್ನು ರೂಪಿಸಿದರು.

ಹಿಂದಣ ಅರ್ಥಗಾರಿಕೆಯಲ್ಲಿ ಸಂವಾದದ ಕ್ರಮವು, ಪದ್ಯವನ್ನು ಆಶ್ರಯಿಸಿಯೇ ಇತ್ತು. ಎಂದರೆ, ಒಬ್ಬನು ಒಂದು ಪದ್ಯದ ಅರ್ಥ ಹೇಳಿದ ಮೇಲೆ, ಇನ್ನೊಬ್ಬನು ಅದಕ್ಕೆ ತನ್ನ ಪದ್ಯದ ಅರ್ಥದಲ್ಲಿ ಉತ್ತರ ಹೇಳುವುದು, ಹೀಗಿತ್ತು. ಮಧ್ಯೆ ಮಧ್ಯೆ ತುಂಡು ಸಂಭಾಷಣೆ' ಇರಲಿಲ್ಲ. ಇದ್ದರೂ ಪದ್ಯದ ಕೊನೆಯಲ್ಲಿ ಮುಂದಿನ ಪದ್ಯದ ಆರಂಭಕ್ಕೆ ಸೂಚಕವಾಗಿ ಮಾತ್ರ. ಆದರೆ, ಅರ್ಥಗಾರಿಕೆ ಬೆಳೆದಂತೆ ಒಂದು ಪಾತ್ರವು ಪದ್ಯದ ಅರ್ಥವನ್ನು ಹೇಳುತ್ತಿದ್ದಂತೆ, ಮಧ್ಯೆ ಇದಿರಾಳಿ ಪ್ರಶ್ನೆ ಕೇಳುತ್ತ ಸಾಗುವ ಪದ್ಧತಿ ಬಂದಿತು. ಮತ್ತು ಇದರ ಅತ್ಯಂತ ಸುಂದರವೂ, ವಿಚಿತ್ರವೂ ಆದ ವಿನ್ಯಾಸ ಗಳನ್ನು ನಾವು ಇಂದಿನ ತಾಳಮದ್ದಳೆಗಳಲ್ಲೂ, ಕನ್ನಡ, ತುಳು ಆಟಗಳಲ್ಲಿ ಕಾಣಬಹುದು. ಈ ಕ್ರಮದಲ್ಲಿ, ಕಲಾವಿದರಲ್ಲಿ ಹೊಂದಾಣಿಕೆಯೂ, ಪದ್ಯ ವನ್ನು ಕೊನೆಯವರೆಗೆ ಅನುಸರಿಸಿ ಸಂವಾದಿಸುವ ತಂತ್ರವೂ ಸಿದ್ಧಿಸದಿದ್ದರೆ, ಅವ್ಯವಸ್ಥೆ ಉಂಟಾಗುತ್ತದೆ. ಸಂವಾದವು ಎತ್ತೆತ್ತಲೋ ಸಾಗಿ, ಪುನಃ ಪದ್ಯಕ್ಕೆ ಬಂದು ಮುಂದೆ ಹೋಗುವುದಕ್ಕೆ, ಪದ್ಯದ ಪ್ರಜ್ಞೆ ಇರುವ ಅರ್ಥದಾರಿ ಶ್ರಮಪಟ್ಟು ಹೊಂದಿಸಬೇಕಾಗುತ್ತದೆ. ಯಾವ ಪ್ರಶ್ನೆಯನ್ನು ಯಾವ ಪಾತ್ರ, ಉಳಿದ ಯಾವ ಪಾತ್ರದೊಂದಿಗೆ, ಎಲ್ಲಿ ಕೇಳಬಹುದು ಎಂಬ ನಿಶ್ಚಿತನಾದ ಔಚಿತ್ಯಜ್ಞಾನವು ಇಲ್ಲಿ ಬಹಳ ಮುಖ್ಯವಾದದ್ದು.

ಸಂವಾದದಲ್ಲಿ, ಕಲಾವಿದನ ಪ್ರತಿಭೆಯೆಂಬುದು ಸ್ವತಂತ್ರವಲ್ಲ. ಸಂವಾದಿಸುತ್ತಿರುವ ಕಲಾವಿದರ ವಿದ್ವತ್ತು, ಪ್ರತಿಭೆ, ಧೋರಣೆಗಳು ಅನ್ಯೊ ನ್ಯಾಶ್ರಯ ಸಂಬಂಧವುಳ್ಳವುಗಳು. ಔಚಿತ್ಯದ ಜತೆ, ಈ ಅಂಶಗಳನ್ನು ಕಲಾ ವಿದನು ಗಮನಿಸಿ ಸಂವಾದವನ್ನು ರೂಪಿಸಬೇಕಾಗುತ್ತದೆ. ಹಾಗೆಯೇ ಹಾಸ್ಯ ಪಾತ್ರಗಳ ಜತೆ ಸಂವಾದಿಸುವ ಮುಖ್ಯಪಾತ್ರವು, ಹಾಸ್ಯ ಪಾತ್ರಕ್ಕೆ (ಉದಾ :