ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
152
ಮಾರುಮಾಲೆ

ಪುತ್ತೂರು). ಇವರ ಮತ್ತು ಇಂತಹ ಅನೇಕರ ಯಶಸ್ಸು, ಹವ್ಯಾಸಿಗಳ ಬಗೆಗೆ ಹೊಸ ಭರವಸೆಯನ್ನು ಮೂಡಿಸುತ್ತದೆ.

ಮಾತ್ರವಲ್ಲ, ಗುಣಮಟ್ಟದ ಕೊರತೆ ಏನೇ ಇರಲಿ, ಹವ್ಯಾಸಿಗಳಲ್ಲಿ ಸಂಪ್ರದಾಯದ ಕ್ರಮಗಳ ಅನುಸರಣೆ, ಅವುಗಳ ಬಗೆಗಿನ ಆಸಕ್ತಿ ಸಾಕಷ್ಟು ಇರುವುದೂ ಕಂಡುಬರುತ್ತಿದೆ. ತೆಂಕುತಿಟ್ಟಿನಲ್ಲಿ, ವ್ಯವಸಾಯ ಮೇಳಗಳ ಸಧ್ಯದ ಸ್ಥಿತಿಗತಿಗಳನ್ನು ಪರಿಶೀಲಿಸಿದರೆ ಕಲೆಯ ಪರಂಪರೆಯ ಉಳಿವಿಗೆ, ಹವ್ಯಾಸಿ ತಂಡಗಳೇ ಆಶಾಸ್ಥಾನವಾಗಿರುವಂತೆ ತೋರುತ್ತದೆ.

ಹವ್ಯಾಸಿಗಳಿಂದ ಕಲಾಪರಂಪರೆ ಮತ್ತು ಕಲಾಮೌಲ್ಯಗಳ ನಿರೀಕ್ಷೆ ಮಾಡಲು ಕಾರಣ, ಅವರಿಗಿರುವ ಕೆಲವು ಸೌಲಭ್ಯಗಳು. ಸ್ವಂತದ ಮತ್ತು ಆತ್ಮೀಯ ಅಭಿಮಾನಿಗಳ ಕೊಡುಗೆಯ ಆರ್ಥಿಕ ಆಧಾರ ಹೊಂದಿರುವ ಹವ್ಯಾಸಿಗಳು, ಗಲ್ಲಾಪೆಟ್ಟಿಗೆ ಆಕರ್ಷಣೆಗಾಗಿ, ಕಮರ್ಷಿಯಲ್ ತಂತ್ರಗಳನ್ನು ಅನುಸರಿಸಬೇಕಾಗಿಲ್ಲ. ಜನಸಂದಣಿ, ಟಿಕೆಟ್ ಕಲೆಕ್ಷನ್ ಮೊದಲಾದ ಚಿಂತೆ, ಹಂಗು ಹವ್ಯಾಸಿಗಳಿಗಿಲ್ಲ. ಬದುಕಿಗಾಗಿ ಕಲಾವ್ಯವಸಾಯ ಅಲ್ಲದಿರುವುದರಿಂದ, ತಾತ್ವಿಕವಾಗಿ ರಾಜಿ ಮಾಡಿಕೊಳ್ಳಬೇಕಾಗಿಲ್ಲ. ಖಚಿತ ಧೋರಣೆ ತಳೆಯ ಬಹುದು.

ಹವ್ಯಾಸಿಗಳಲ್ಲಿ ಬಹುಮಂದಿ ಹೆಚ್ಚಿನ ಸಾಮಾಜಿಕ ಸಂಪರ್ಕ, ಶಿಕ್ಷಣದ ಹಿನ್ನೆಲೆ, ಇರುವವರಾದುದರಿಂದ ಸಾಹಿತ್ಯಾಭ್ಯಾಸಕ್ಕೆ ಅವಕಾಶ ಅನುಕೂಲ ಇರುವವರು. ಮಾತ್ರವಲ್ಲ ಇತರ ಕಲೆಗಳಲ್ಲಿ, ರಂಗಭೂಮಿಯ ಇತರ ಪ್ರಕಾರ ಗಳಲ್ಲಿ ಏನು ನಡೆದಿದೆ, ಹೇಗೆ ಸಾಗುತ್ತಿದೆ, ರಂಗಭೂಮಿಯ ಸಾಧ್ಯತೆಗಳೇನು, ಪರಂಪರೆಯ ರಕ್ಷಣೆ, ಪ್ರಯೋಗಗಳು-ಇವುಗಳ ಅಭಿನಯ. ಸಾಹಿತ್ಯಗಳಲ್ಲಿ ಸೃಜನಶೀಲರು ಏನು ಹೊಸತನ ತಂದಿದ್ದಾರೆ, ನೃತ್ಯ, ಮುಂತಾದುವುಗಳನ್ನು ನೋಡಿ, ಅಭ್ಯಸಿಸಿ ಚಿಂತಿಸುವ ಅವಕಾಶ ಹವ್ಯಾಸಿ ಗಳಿಗಿದೆ, ವ್ಯವಸಾಯಿಗಳಿಗಿಲ್ಲ.