ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸೃಜನಶೀಲತೆಯ ಸಂದರ್ಭ


ಕಲಾವಿದರನ್ನು ಸಾಮಾನ್ಯವಾಗಿ ನಾವು ಮೂರು ವಿಧಗಳಾಗಿ ವಿಂಗಡಿಸಬಹುದು-ಅನುಸರಣಶೀಲರು, ಅನುಕರಣಶೀಲರು ಮತ್ತು ಸೃಜನಶೀಲರು ಎಂದು. ಅನುಕರಣಶೀಲ ಕಲಾವಿದನು ತಾನು ಮೆಚ್ಚಿದ ಒಬ್ಬಿಬ್ಬರು ಕಲಾವಿದರನ್ನೂ, ಕೆಲವು ಮಾದರಿಗಳನ್ನೂ ಯಥಾವತ್ತಾಗಿ 'ಪ್ರತಿ' ತೆಗೆಯುತ್ತಾನೆ. ಯಾರನ್ನು ಅಥವಾ ಯಾವುದನ್ನು ಅವನು_ ಅನುಕರಿಸುತ್ತಾನೋ, ಆ “ಮೂಲ'ಕ್ಕೆ ಇಂತಹ ಅನುಕರಣೆ ಎಂಬುದು ದೊಡ್ಡ ಪ್ರಶಸ್ತಿ ಮತ್ತು ಧನ್ಯತೆ ಕೂಡ. 'ಅನುಕರಣವು ಪ್ರಶಂಸೆಯ ಪರಾಕಾಷ್ಠೆ' (Imitation is the best form of appreciation) ಎಂಬ ಇಂಗ್ಲೀಷ್ ಗಾದೆಯೊಂದಿದೆ. ಇಂತಹ ಅನುಕರಣೆ ಮಾಡಲೂ ಕೂಡ ಪ್ರತಿಭೆ ಬೇಕು. 'ಮಿಮಿಕ್ರಿ', ಮೃಗ ಪಕ್ಷಿಗಳ ಸ್ವರಾನುಕರಣೆ, ಭಾಷಣ ಇತ್ಯಾದಿಗಳ ಅನುಕರಣೆ_ಇವುಗಳಲ್ಲಿ ಅಸಾಧಾರಣ ಪ್ರತಿಭೆಯನ್ನು ಹೊಂದಿದ ವ್ಯಕ್ತಿಗಳನ್ನು ನಾವು ನೋಡುತ್ತೇವೆ. ಇದು ಅನುಕರಣ ಪ್ರತಿಭೆ (Imitative talent) ಕುಶಲ ಕಲೆಗಾರಿಕೆ (Craftman-ship) ಯಂತಹ ಕ್ಷೇತ್ರಗಳಲ್ಲಿ ಸಹ ಇಂತಹ ಪ್ರತಿಭೆ ಬಹುಮುಖ್ಯ.

ಇದು ಒಂದು ಮಟ್ಟದಲ್ಲಿ ಕಲೆಯೆಂಬುದು ಅನುಕರಣವೇ (ಇನ್ನೊಂದು ಅರ್ಥದಲ್ಲಿ ಹಾಗಲ್ಲ) ಆದುದರಿಂದ ಕಲೆಯ ಉಳಿವಿನಲ್ಲಿ ಅನುಕರಣ ಮಹತ್ವದ ಪಾತ್ರ ವಹಿಸುತ್ತದೆ. ಯಕ್ಷಗಾನದಂತಹ ಸಾಂಪ್ರದಾಯಿಕ ರಂಗಭೂಮಿಯ ಸಂದರ್ಭದಲ್ಲಿ, ಈ ಕಲೆಯಲ್ಲಿ ಬೆಳೆದು ನಿಂತಿರುವ ಗಾನ, ಚಿತ್ರ, ನರ್ತನಾದಿ ಶೈಲಿಗಳು, ತಲೆಮಾರಿಂದ ತಲೆಮಾರಿಗೆ ಹರಿದು ಉಳಿಯಲು ಅನುಕರಣಶೀಲ ಕಲಾವಿದನೂ


ದಿ॥ ಕುರಿಯ ವಿಠಲ ಶಾಸ್ತ್ರಿ ಸ್ಮರಣ ಸಂಚಿಕೆ 'ಯಕ್ಷರಾಜ'ಕ್ಕಾಗಿ ಬರೆದದ್ದು : 1985, ಪ್ರಕಟಣೆ : ಜುಲೈ 1989.