ಕಲೆಗಳು 'ಸಿದ್ಧ' ಪ್ರಕಾರಗಳು, ವೇಷ, ನೃತ್ಯ, ಸಂಗೀತಗಳಲ್ಲಿ ಸಾಕಷ್ಟು ಬೆಳೆದು ನಿಂತಿರುವ ಸ್ವತಂತ್ರ ಶೈಲಿ ಈ ಕಲೆಗಳಿಗಿದೆ, ಎಂಬುದೂ ನವೀನ ಪ್ರಯೋಗಗಳ ಸಂದರ್ಭದಲ್ಲಿ ನೆನಪಿಡಬೇಕಾದ ಅಂಶ. ಸಿದ್ಧವಾದ, ಶೈಲೀ
ಕೃತವಾದ ಒಂದು ಪ್ರಕಾರದಲ್ಲಿ ಮುಕ್ತವಾದ ನಾವೀನ್ಯ ಸಾಧ್ಯವಿಲ್ಲ. ಸಾಧುವೂ ಅಲ್ಲ. ಶೈಲಿಯನ್ನು ಗೌರವಿಸದ ನಾವೀನ್ಯ ಸಾಂಸ್ಕೃತಿಕವಾಗಿ ದುರಂತಕ್ಕೆ ಕಾರಣವಾಗುತ್ತದೆ. ಸಾಂಪ್ರದಾಯಿಕ ಕಲೆಯಲ್ಲಿ ಶೈಲಿಯ ಶ್ರೀಮಂತಿಕೆ. ಅನನ್ಯತೆಗಳನ್ನು ಗಮನಿಸದ ಹೊಸ ಸೃಷ್ಟಿ ಉಚಿತವಾಗದು. “ಸಂಪ್ರದಾಯವೆಂಬುದು ಅಜ್ಜ ನೆಟ್ಟ ಆಲದ ಮರ....ಕಲೆಯು ನಿಂತ ನೀರಲ್ಲ....ಅದರಲ್ಲಿ
ಹೊಸತನಬೇಕು” ಎಂಬ ವಾದವಿದೆ ನಿಜ. ಆದರೆ ಇಂತಹ ವಾದವನ್ನು ಮಂಡಿಸುವಾಗ ಯಕ್ಷಗಾನ ಕಲೆಯ ಪರಂಪರೆಯ ವಿಶಿಷ್ಟ ಸಂದರ್ಭ-(ಅದರ 'Form' ರೂಪಕ್ಕೆ ಸಂಬಂಧಿಸಿ) ವನ್ನು ಗಮನಿಸಬೇಕಾಗುತ್ತದೆ. ಪ್ರಯೋಗ
ಸಿದ್ಧರೂಪದ ಚೌಕಟ್ಟಿನಲ್ಲಿ ಸಾರ್ಥಕವಾಗಬೇಕಾಗುತ್ತದೆ. ಯಕ್ಷಗಾನವೆಂಬ ಕಲಾಪ್ರಕಾರದ ಸಮಗ್ರ ಸ್ವರೂಪಕ್ಕೆ ಸಂಗತವಾದ ನಾವೀನ್ಯವು ಮಾತ್ರ ಅಂಗೀಕಾರಾರ್ಹವಾಗುತ್ತದೆ. ಈ ಮರ್ಮವನ್ನು ಮರೆಯದೆ, ನಾವೀನ್ಯವನ್ನು ತರಲೆತ್ನಿಸಿದವನು ಮಾತ್ರ ಯಕ್ಷಗಾನದಂತಹ ಸಾಂಪ್ರದಾಯಿಕ ಕಲೆಯಲ್ಲಿ ಅರ್ಥಪೂರ್ಣ ಸೃಜನಶೀಲತೆ ತುಂಬಲು ಸಾಧ್ಯ. ಇಂತಹ ಸೃಜನಶೀಲತೆ, ಬೇರೆ ಬೇರೆ ಮಟ್ಟದಲ್ಲಿ, ಬೇರೆ ಬೇರೆ ರೂಪಗಳಲ್ಲಿ ಕಾಣಿಸಿಕೊಳ್ಳಬಹುದು.ಕಾರಂತರಂತಹ ಒಬ್ಬ ಕಲಾಭಿಜ್ಞ, ಯಕ್ಷಗಾನದಂತಹ ರಂಗಭೂಮಿಯ ಎಲ್ಲ ಅಂಗಗಳನ್ನು ಒಟ್ಟಾಗಿ ತೆಗೆದುಕೊಂಡು ಪ್ರಯೋಗ ಮಾಡಬಹುದು. ಪ್ರಸಂಗ ಕರ್ತ, ನರ್ತಕ, ಅರ್ಥದಾರಿ_ಇವರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಹೊಸ ಹೊಸ ದಾರಿಗಳನ್ನು ತೆರೆಯಬಹುದು. ಇಂತಹ ಸಮಷ್ಟಿನೆಲೆಯ ಅಥವಾ ವ್ಯಷ್ಟಿಯಾದ ಪ್ರಯೋಗಗಳನ್ನು ನಾವು ಕಾಣುತ್ತೇವೆ.
ದಿ|| ಕುರಿಯ ವಿಠಲಶಾಸ್ತ್ರಿಗಳಂತಹ ಕಲಾವಿದರು ತಮ್ಮ ಕ್ಷೇತ್ರದಲ್ಲಿ, ಅಭಿವ್ಯಕ್ತಿಗೆ ನಾಜೂಕನ್ನೂ, ಸೃಷ್ಟಿಶೀಲ ಆಯಾಮವನ್ನೂ ತಂದಿತ್ತ ಕಲಾವಿದರು : ಯಕ್ಷಗಾನದ ವಿವಿಧ ಅಂಗಗಳನ್ನು ಸೂಕ್ಷ್ಮವಾಗಿ ಪರಿಭಾವಿಸಿ, ತಾವು ಅದಕ್ಕೆ ಏನನ್ನು ತುಂಬಿಸಬಹುದು ಎಂದು ಯೋಚಿಸಿ ಅಳವಡಿಸಿದವರು.