ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಸೃಜನಶೀಲತೆಯ ಸಂದರ್ಭ
163

ಇಂತಹ ಕಲಾವಿದರಿಗೆ ಕಲೆಯ ಬಗೆಗೆ, ವಿಶಿಷ್ಟವಾದ ಪಾತ್ರಗಳ, ಸಂದರ್ಭಗಳ ಬಗೆಗೆ ತನ್ನದಾದ ಖಚಿತ ಧೋರಣೆ ಇರುತ್ತದೆ. ಅದನ್ನು ಕಲೆಯ ಚೌಕಟ್ಟಿನಲ್ಲಿ ಸಾರ್ಥಕವಾಗಿ ಮಂಡಿಸಲು ಅವರು ಹೆಣಗುತ್ತಾರೆ.

ವಿಠಲಶಾಸ್ತ್ರಿಗಳಿಗೆ ಶಾಸ್ತ್ರೀಯ ನೃತ್ಯದಲ್ಲಿ ಒಳ್ಳೆಯ ಪರಿಶ್ರಮವಿತ್ತು. ಹಾಗೆಯೇ 'ಯಕ್ಷಗಾನ ನಾಟಕ' ರೂಪದಲ್ಲಿ ಆಟಗಳನ್ನು ನಾಟಕವಾಗಿ ಆಡಿದ ಪ್ರಯೋಗಗಳ ಹಿನ್ನೆಲೆ ಇತ್ತು. ಸಾಹಿತ್ಯ, ಸೂಕ್ಷ್ಮ ಪ್ರಜ್ಞೆ, ಪ್ರಸಂಗ ಪಾತ್ರಗಳ ಬಗೆಗೆ ತನ್ನದಾದ ದೃಷ್ಟಿ ಇತ್ತು. ಇವನ್ನೆಲ್ಲ ಸಮನ್ವಯ ಮಾಡಿ, ಸಾಂಪ್ರದಾಯಿಕ ಯಕ್ಷಗಾನ ಸ್ವರೂಪಕ್ಕೆ ಅವನ್ನು ಪಾಕವಿಳಿಸುವ ಕೆಲಸವನ್ನು ಅವರು ಕೈಗೊಂಡರು. ಮಾತು, ನೃತ್ಯ, ಸನ್ನಿವೇಶ ನಿರ್ಮಾಣಭಾವ ಪ್ರಕಟಣೆ- ಇವೆಲ್ಲದರಲ್ಲಿ ಅವರ ಪ್ರಯೋಗಗಳಿಗೆ ದೊಡ್ಡ ಯಶಸ್ಸು ದೊರೆಯಿತು. ಶಿಕ್ಷಕನಾಗಿ, ತನ್ನ ಶಿಷ್ಯರಿಗೆ ಅವರು ನೀಡಿದ ಕಲಾಶಿಕ್ಷಣದಲ್ಲ, ಅವರಿಗೆ ಈ ದೃಷ್ಟಿ ಮುಖ್ಯವಾಗಿತ್ತು. ಅದನ್ನು ತನ್ನ ಶಿಷ್ಯರಲ್ಲಿ, ಸಹಕಲಾವಿದರಲ್ಲಿ ಪ್ರಚೋದಿಸುವಲ್ಲಿ ಅವರು ಯಶಸ್ವಿಯಾದರು.

ನೃತ್ಯದಲ್ಲಿ, ಅಭಿನಯದಲ್ಲಿ, ಭಾವದ ಅಭಿವ್ಯಕ್ತಿಯಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುವ ಭಾರದಲ್ಲಿ ಅವರು ವೇಷಭೂಷಣಗಳ ಬಗೆಗೆ ಬಹಳ ಗಮನ ಹರಿಸಲಿಲ್ಲವೆಂದು ತೋರುತ್ತದೆ. ಹಾಗಾಗಿ, ಅವರ ಒಲವು 'ನಾಟಕೀಯ' ವೇಷಭೂಷಣಗಳ ಹೆಚ್ಚು ಇತ್ತು. ಆದರೆ, ತನ್ನ ಪ್ರಯೋಗಗಳ ಸಮಗ್ರ ಸಾರ್ಥಕತೆ, ಯಕ್ಷಗಾನ ವೇಷ ಭೂಷಣಗಳಿಂದ ಕೂಡಿಯೇ ಆಗಬೇಕು ಎಂಬ ಪ್ರಜ್ಞೆ ಅವರಿಗಿತ್ತು. ಹಾಗಾಗಿ ಅವರಿಗೆ ಅವರ ಕಲಾ ವ್ಯವಸಾಯದ ಉತ್ತರಾರ್ಧದಲ್ಲಿ ಈ ಬಗೆಗೆ ನಡೆದ ವಿಮರ್ಶೆಯ ನೆಲೆಯಲ್ಲಿ, ಸಾಂಪ್ರದಾಯಿಕ ವೇಷಗಳ ಬಗೆಗೆನ ಒಲವು ಹೆಚ್ಚಿಗೆ ಇತ್ತು ಎಂದು ಕೇಳುತ್ತೇವೆ.