ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
16
ಮರುಮಾಲೆ


ಅಭಿವ್ಯಕ್ತಿ, ಆರಾಧನಾ ರೂಪದಲ್ಲಿ ಸದಾ ಮಾಡದೆ ಇರುವುದಕ್ಕೆ, ಈ ರೂಪದ ಒಂದು ಪರಿಮಾರ್ಜನೆ. ಸಾಮಾನ್ಯತಃ ಹಗಲಿನ ಜಾನಪದ ಕಲೆ ವಾಸ್ತವಿಕ ರಾತ್ರಿಯದ್ದು ಫ್ಯಾಂಟಸಿಯೆನ್ನಬಹುದು.

ಯಕ್ಷಗಾನವು ಹೀಗೂ ಹೌದು, ಆದರೆ ಅಷ್ಟು ಮಾತ್ರ ಅಲ್ಲ. ಯಕ್ಷ ಗಾನದ ಸಂದರ್ಭ ಅಷ್ಟು ಸರಳವಲ್ಲ. ಯಕ್ಷಗಾನದ ರೂಪ-ವೇಷಗಳು, ತಂತ್ರ, ವಾದ್ಯಗಳು-ಇವೆಲ್ಲ ರಮ್ಯಾದ್ಭುತದ ಫ್ಯಾಂಟಸಿ ನಿಜ. ತನ್ಮೂಲಕ ನಿಜಜೀವನದಲ್ಲಿ ತಾವು ಅನುಭವಿಸದ ಅಥವಾ ಅನುಭವಿಸಿದರೂ ಅಷ್ಟು ತೀವ್ರವಾಗಿ ಅಷ್ಟು ಪ್ರಮಾಣದಲ್ಲಿ ಅನುಭವಿಸದ-ಭಾವಗಳ ಅಭಿವ್ಯಕ್ತಿ, ಉಪ ಶಾಂತಿ, ಕಲಾಕಾರರಿಗೂ, ಸಾಮಾಜಿಕರಿಗೂ ದೊರಕುವುದೂ ನಿಜ.

ಆದರೆ, ಯಕ್ಷಗಾನ ಪ್ರಸಂಗದಲ್ಲಿ ಪ್ರಕಟವಾಗುವ ಭಾವಗಳು, ಅವಸ್ಥಾಂತರಗಳು, ಸಮಸ್ಯೆಗಳು ಕೇವಲ ಫ್ಯಾಂಟಸಿ ಅಲ್ಲ. ನಿಜ ಜೀವನದವುಗಳು ಇವೆ. ವಾಸ್ತವ ಸವಾಲುಗಳು ಅಲ್ಲಿದೆ. ನಳನ ಪ್ರಣಯ, ಸತ್ಯನಿಷ್ಠೆ, ಸೋಲುಗಳು ನಮ್ಮ ಜೀವನದಲ್ಲಿ ಒದಗುವಂತಹವು. ರಾಮನ, ಕೃಷ್ಣನ, ಹರಿಶ್ಚಂದ್ರನ, ರಾವಣನ, ಸಮಸ್ಯೆಗಳು, ಕ್ರಿಯೆಗಳು, ನಮ್ಮವು ಕೂಡ ಹೌದು. ಹಾಗಾಗಿ, ಇಲ್ಲಿ ರಾತ್ರಿ-ಹಗಲಿನ ವೈರುದ್ಧ ತತ್ವ-(antagonistic or reversal principle) ವನ್ನು ರಾತ್ರಿಯಲ್ಲಿ ಮೀರಲೆಳಸುತ್ತದೆ ಯಕ್ಷ ಗಾನ. “ಯಾನಿಶಾ ಸರ್ವಭೂತಾನಾಂ ತಸ್ಯಾಂ ಜಾಗರ್ತಿ ಸಂಯಮಿ” ಎಂಬ ಗೀತೆಯ ಮಾತು, ಬೇರೊಂದೇ ಆದ ಅರ್ಥದಲ್ಲಿ ಇಲ್ಲಿ ಇಂತಹ ಕಲೆಗಳಲ್ಲಿ, ಅನ್ವಯಿಸುವುದಲ್ಲವೆ ?


ಭಾರತದ ಅತ್ಯಂತ ಪ್ರಾಚೀನ ದರ್ಶನ ಸಾಂಖ್ಯವು, ಪ್ರಕೃತಿಯನ್ನು “ಪ್ರಧಾನ' ತತ್ವ ಎಂದು ಅಂಗೀಕರಿಸಿದೆ. ಇದು ತುಂಬ ಅರ್ಥಪೂರ್ಣವಾದ