ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
26
ಮಾರುಮಾಲೆ

ವಾದಕರಲ್ಲಿ ಅಂತಹ ಪ್ರಜ್ಞೆ ಕೆಲಸ ಮಾಡುತ್ತಿರಬೇಕು.15 ಅಂತೆಯೇ ಪದ್ಯದ ರಚನಾಸ್ವರೂಪ, ಅದಕ್ಕಿರುವ ಸಹಜವಾದ ಗತಿ, ಅದರ ಖಂಡಗಳ ಅಳತೆ ಗಳನ್ನೂ ಲಯಕ್ಕೆ ಅಚ್ಚುಕಟ್ಟಾಗಿ ಹೊಂದಿಸಿ ಹಾಡುವುದು ಭಾಗವತನ ಧರ್ಮ.16 ಈ ಪ್ರಜ್ಞೆ ಇಲ್ಲದೆ ಹಾಡುವ ಭಾತವತನು ಎಷ್ಟೊಂದು ಸುಶ್ರಾವ್ಯ ವಾಗಿ ಹಾಡಿದರೂ, ಅದು ಪ್ರಸಂಗದ ಪರಿಚಯವುಳ್ಳ ಶ್ರೋತೃವಿಗೆ ಏನೋ ಕಳಕೊಂಡ ಅನುಭವವನ್ನೇ ನೀಡುತ್ತದೆ.

ಯಕ್ಷಗಾನದ ರಂಗಕ್ಕೆ ವಿಶಿಷ್ಟವಾದ ತಂತ್ರ (technique) ಇದೆ. ಅದು ಒಂದು ರಂಗಭಾಷೆ. ಪಾತ್ರಗಳ ಪ್ರವೇಶ, ಯುದ್ಧ, ನಿಷ್ಕ್ರ ಮಣ, ಬೇಟೆ, ಇಂತಹ ಸ್ಕೂಲವಾದ ವಿಷಯಗಳು ಮಾತ್ರವಲ್ಲ, ಪಾತ್ರಗಳ ಏಳು ಬೀಳುಗಳು, ಚಲನಗಳು ಮಾತಿನ ಮಧ್ಯೆ ಬರುವ ಪರಿವರ್ತನೆಗಳು, ಕೆಲವೊಂದು ವಿಶಿಷ್ಟ ಪಾತ್ರಗಳ, ದೃಶ್ಯಗಳಲ್ಲಿ ಬರುವ ಅಭಿವ್ಯಕ್ತಿಗಳು- ಇವಕ್ಕೆಲ್ಲ ಯಕ್ಷಗಾನ ದಲ್ಲಿ ಒಂದು ತಾಂತ್ರಿಕ ಭಾಷೆ ಇದೆ. ಮಾತು, ಅಭಿನಯಗಳಿಗೆ ಅಲ್ಲಲ್ಲಿ 'ಗತ್ತು'ಗಳನ್ನು ಸೇರಿಸುವ ಕೆಲಸವೂ ಇದರಲ್ಲಿ ಬರುತ್ತದೆ. ಇಲ್ಲಿ ಪೂರ್ವ ಸಂಪ್ರದಾಯಗಳಿವೆ, ಸ್ವಂತ ಮನೋಧರ್ಮಕ್ಕೂ ಅವಕಾಶವಿದೆ. ಈ ತಂತ್ರ ನಿರ್ವಹಣದ ಕೆಲಸ ಹಿಮ್ಮೇಳದ ಇನ್ನೊಂದು ಮುಖ್ಯವಾದ ಹೊಣೆ.

ಇವಿಷ್ಟು ಅಂಶಗಳು ಆಟದ ಸಂದರ್ಭದಲ್ಲಿ ಒಂದು ಬಗೆಯವಾದರೆ, ತಾಳ ಮದ್ದಳೆಯಲ್ಲಿ ಬೇರೊಂದು ರೀತಿಯಲ್ಲಿ ಸಫಲವಾಗಬೇಕಾದುವುಗಳು, ಆಟದಲ್ಲಿರುವ ನೃತ್ಯ, ವೇಷಗಳಾಗಲಿ, ಹೆಚ್ಚು ವಿವರವಾಗಿ ಸಾಗುವ ಕಥೆ, ಒತ್ತೊತ್ತಾಗಿ ಬರುವ ದೃಶ್ಯಗಳ (ಘಟನೆಗಳ) ಸರಣಿ ಇವು ತಾಳಮದ್ದಳೆಯಲ್ಲಿ ಇಲ್ಲದಿರುವುದರಿಂದ, ಹಿಮ್ಮೇಳಕ್ಕೆ ಹೊಣೆ ಕಡಿಮೆ ಎನಿಸಬಹುದಾದರೂ ತಾಳಮದ್ದಳೆಯ ಪ್ರಕಾರಕ್ಕೆ ವಿಶಿಷ್ಟವಾದ ಹೊಣೆ ಹಿಮ್ಮೇಳಕ್ಕೆ ಇದೆ. ತಾಳಮದ್ದಳೆ ಎಂಬುದು ಒಂದು ವಿಭಿನ್ನ ರಂಗಭೂಮಿ. ಇದಕ್ಕೂ, ಆಟಕ್ಕೂ ಇರುವ ವ್ಯತ್ಯಾಸವು ಬರಿಯ ವೇಷ, ನೃತ್ಯಗಳದ್ದಲ್ಲ.17 ತಾಳಮದ್ದಳೆಯನ್ನು ಹಿರಿಯ ವಿಮರ್ಶಕ ಸೇಡಿಯಾಪು ಅವರು ಲುಪ್ತನಾಟ್ಯವೆಂದು18 ಕರೆದಿದ್ದಾರೆ.