ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ತುಳು ಯಕ್ಷಗಾನ : ನಿನ್ನೆ-ಇಂದು-ನಾಳೆ
49

ಜತೆಗೆ ಒಂದು ಖಚಿತ ಶೈಲಿ ಮತ್ತು ಸಂಪ್ರದಾಯದ ರೂಪ (Form) ಹೊಂದಿದ ಕಲೆಯೊಂದರಲ್ಲಿ ಹೊಸ ಸಮಸ್ಯೆಗಳನ್ನು ಸೃಷ್ಟಿಸಿದುದೂ ನಿಜ.
ಸದ್ಯದ ತಿಳಿವಳಿಕೆಯಂತೆ, ತುಳುಯಕ್ಷಗಾನದ ಇತಿಹಾಸ ನೂರು ವರ್ಷ ಗಳಷ್ಟು. 1887ರಲ್ಲಿ ಬಾಯಾರು ಪೆರ್ವಡಿ ಸಂಕಯ್ಯ ಭಾಗವತರು ಬರೆದ ಪಂಚವಟಿ ವಾಲಿಸುಗ್ರೀವರ ಕಾಳಗ (ಪಾರ್ತಿಸುಬ್ಬನ ಪ್ರಸಂಗದ ಅನುವಾದ) ತುಳುವಿನ ಮೊದಲ ಯಕ್ಷಗಾನ ಪ್ರಸಂಗ. ವಿಟ್ಲದ ಅರಮನೆಯ ಸ್ತ್ರೀಯರಿಗಾಗಿ, ಅಲ್ಲಿ ಅದನ್ನು ತುಳುವಿನಲ್ಲೇ ಆಡಿದರೆಂದು ಪ್ರತೀತಿ. ಇಷ್ಟು ಹಿಂದಕ್ಕೆ ತುಳುವಿನಲ್ಲಿ ಯಕ್ಷಗಾನ ರಚನೆ ಆಗಿದ್ದರೂ, 1950ರವರೆಗೆ ಬಂದ ತುಳು ಪ್ರಸಂಗ ರಚನೆ ಬೆರಳೆಣಿಕೆಯದೇ. ಇಪ್ಪತ್ತರ ದಶಕದಲ್ಲಿ ಬಡಕಬೈಲು ಪರಮೇಶ್ವರಯ್ಯನವರು ಬರೆದ 'ತುಳು ಕಿಟ್ಣರಾಜಿ ಪರ್ಸಂಗೊ' (ಕೃಷ್ಣ ಕಿಟ್ಟರಾ ಸಂಧಾನ ಪ್ರಸಂಗ), ದೇರಂಬರ ತ್ಯಾಂಪಣ್ಣ ಶೆಟ್ಟರ 'ಪಂಚವಟಿ' (1932) ಪಂದಬೆಟ್ಟು ವೆಂಕಟರಾಯರ ಕೋಟಿಚನ್ನಯ (1939) ಇವು ಆವರೆಗಿನ ಪ್ರಮುಖ ರಚನೆಗಳು, (ಇಲ್ಲಿನ ಮಾಹಿತಿಗಳು : ಅಮೃತ ಸೋಮೇಶ್ವರರ ಲೇಖನ : ಯಕ್ಷಕರ್ದಮ : ಪದವೀಧರ ಯಕ್ಷಗಾನ ಸಮಿತಿ, ಮುಂಬಯಿ 1984)
ಪ್ರಸಂಗ ರಚನೆ ತುಳುವಿನಲ್ಲಿ ಹಿಂದೆಯೇ ಆರಂಭವಾದರೂ, ತುಳು ಭಾಷೆಯಲ್ಲಿ ರಂಗಪ್ರಯೋಗಗಳು ಬೆಳೆದು ಬಂದದ್ದು 1950ರ ಬಳಿಕವೇ. ತುಳು ಯಕ್ಷಗಾನ ಚರಿತ್ರೆಯ ಅತ್ಯಂತ ಮಹತ್ವದ ಪ್ರಸಂಗ 'ಕೋಟಿ ಚನ್ನಯ' ಕನ್ನಡ ಭಾಷೆಯಲ್ಲಿದ್ದು, ಆರಂಭದಲ್ಲಿ ರಂಗಪ್ರಯೋಗವೂ ಕನ್ನಡದಲ್ಲಿ ಇರುತ್ತಿತ್ತು.

ರಚನೆ ಮತ್ತು ರಂಗ ಪ್ರಯೋಗ ದೃಷ್ಟಿಗಳಿಂದ ವಿಶ್ಲೇಷಿಸಿದಾಗ, ವ್ಯಾಪಕವಾಗಿ ನಾವು 'ತುಳು ಯಕ್ಷಗಾನ ಪ್ರದರ್ಶನ'ಗಳೆನ್ನುವಂತಹವುಗಳಲ್ಲಿ ಈ ವಿಧಗಳಿವೆ :