ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮುನ್ನುಡಿ

ಮಿತ್ರ ಶ್ರೀ ಪ್ರಭಾಕರ ಜೋಶಿ ಅವರು ಕನ್ನಡದ ಇಂದಿನ ಯಕ್ಷಗಾನ ವಿಮರ್ಶಕರಲ್ಲಿ ಅಗ್ರಗಣ್ಯರು. ತಮ್ಮ 'ಜಾಗರ' ಮತ್ತು 'ಕೇದಗೆ' ಎಂಬ ಎರಡು ಗ್ರಂಥಗಳ ವಲಕ ಕರಾವಳಿಯ ಯಕ್ಷಗಾನವನ್ನು ಕುರಿತು ಅವರು ಮಹತ್ವದ ಅನೇಕ ಹೊಸ ಮಾತುಗಳನ್ನು ಹೇಳಿದ್ದಾರೆ. ಯಕ್ಷಗಾನ ತಾಳ ಮದ್ದಳೆಯ ಶ್ರೇಷ್ಠ ಮತ್ತು ಪ್ರಸಿದ್ಧ ಅರ್ಥಧಾರಿಯಾಗಿರುವ ಜೋಶಿ ಅವರು ಯಕ್ಷಗಾನದ ಗಂಭೀರ ವಿಮರ್ಶಕರೂ ಆಗಿರುವುದು ಒಂದು ಅಪೂರ್ವ ಸಂಗತಿ. ಯಕ್ಷಗಾನದಂತಹ ಜನಪ್ರಿಯ ರಂಗಭೂಮಿಯ ಕಲಾವಿದರೊಬ್ಬರು ತಮ್ಮ ಕಲೆಯ ಬಗ್ಗೆ ಸಹಜವಾಗಿಯೇ ಅತಿ ಮಮತೆಯನ್ನೂ ಉತ್ಸಾಹವನ್ನೂ ಅಭಿಮಾನವನ್ನೂ ಹೊಂದಿರುತ್ತಾರೆ. ಆ ಕಲೆಯ ಹೊರಗೆ ನಿಂತುಕೊಂಡು ಅದರ ಸಾಧ್ಯತೆ ಹಾಗೂ ಮಿತಿಗಳನ್ನು ಗುರುತಿಸುವುದು, ಅದರ ಬದಲಾವಣೆಗಳ ಒಳಿತು ಕೆಡುಕುಗಳನ್ನು ಮೌಲ್ಯಮಾಪನ ಮಾಡುವುದು ಸಾಮಾನ್ಯವಾಗಿ ಅವರಿಗೆ ಸಾಧ್ಯವಾಗುವುದಿಲ್ಲ. ಆದರೆ ಜೋಶಿಯವರು ಕಲಾವಿದ ಮತ್ತು ವಿಮರ್ಶಕ ಎರಡೂ ಆಗಿರುವುದರಿಂದ ಅವರ ಅರ್ಥಗಾರಿಕೆಗೆ ವಿಮರ್ಶನದ ಮೂಲಕ ಹೊಸತನ ಪ್ರಾಪ್ತವಾಗಿ, ಅದು ಪ್ರದರ್ಶನದಿಂದ ಪ್ರದರ್ಶನಕ್ಕೆ ಸಾಧ್ಯತೆಗಳನ್ನು ಶೋಧಿಸುತ್ತಾ ಹೋಗುತ್ತದೆ ; ಅವರ ವಿಮರ್ಶೆಯು ರಂಗದ ಅನುಭವಗಳ ಆಧಾರ ಸಾಮಗ್ರಿಗಳ ಬಲದಿಂದ ವಾಖ್ಯಾನ ಮತ್ತು ವಿವರಣೆಗಳ ಶಿಸ್ತನ್ನು ರೂಢಿಸಿಕೊಳ್ಳುತ್ತದೆ. ಈ ದೃಷ್ಟಿಯಿಂದ ಜೋಶಿಯವರ ಅರ್ಥ ಗಾರಿಕೆಯ ಬೆಳವಣಿಗೆಗೂ ಅವರ ಯಕ್ಷಗಾನ ವಿಮರ್ಶೆಯ ಬೆಳವಣಿಗೆಗೂ ಸಾವಯವ ಸಂಬಂಧವನ್ನು ಗುರುತಿಸಬಹುದು. ಪ್ರಸ್ತುತ ಕೃತಿ ಮಾರು ಮಾಲೆ'ಯಲ್ಲಿ ಜೋಶಿಯವರು ಚರ್ಚಿಸುವ ಅನೇಕ ಸಂಗತಿಗಳು ಅವರ 'ಜಾಗರ' ಮತ್ತು 'ಕೇದಗೆ' ಗ್ರಂಥಗಳಲ್ಲೂ ವಿಮರ್ಶೆಗೆ ಒಳಗಾಗಿವೆ. ಆದರೆ ಅದು ಆ ಲೇಖನಗಳ ಪುನರಾವರ್ತನೆಯಾಗದೆ, ಸಂಶೋಧನೆಯ ಮುಖ್ಯ ಲಕ್ಷಣವಾದ ಬೆಳವಣಿಗೆಯ ರೂಪದ್ದಾಗಿವೆ ಎಂಬುದು ಮಹತ್ವದ ಅಂಶ. ಈ