ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

viii

ಸಂಕಲನದಲ್ಲಿನ 'ತಾಳಮದ್ದಳೆಯ ಹಿಮ್ಮೇಳ', 'ತುಳು ಯಕ್ಷಗಾನ, ನಿನ್ನೆ- ಇಂದು ನಾಳೆ', 'ಅರ್ಥಗಾರಿಕೆ : ಪರಂಪರೆ ಮತ್ತು ಪ್ರಯೋಗ', 'ಪರಂಪರೆ ವತ್ತು ಪ್ರಯೋಗ', 'ಸೃಜನಶೀಲತೆಯ ಸಂದರ್ಭ'-ಈ ಲೇಖನಗಳನ್ನು ಈ ದೃಷ್ಟಿಯಿಂದ ವಿಶೇಷವಾಗಿ ಗಮನಿಸಬಹುದು.

ಜೋಶಿಯವರ ಯಕ್ಷಗಾನ ವಿಮರ್ಶೆಯ ಲೇಖನಗಳಲ್ಲಿ ಅವರನ್ನು ಬಹಳವಾಗಿ ಕಾಡಿದ ಸಮಸ್ಯೆ ಎಂದರೆ ಪರಂಪರೆ ಮತ್ತು ಪ್ರಯೋಗಗಳ ಸಂಬಂಧದ ಸ್ವರೂಪ ಹೇಗಿರಬೇಕು ಎಂಬುದು. ಅವರ ಹೆಚ್ಚಿನ ಲೇಖನಗಳಲ್ಲಿ ಈ ಪ್ರಶ್ನೆಯು ಬೇರೆ ಬೇರೆ ರೂಪಗಳಲ್ಲಿ ಮತ್ತು ನೆಲೆಗಳಲ್ಲಿ ಕಾಣಿಸಿಕೊಂಡಿದೆ. ಇದನ್ನು ಜೋಶಿಯವರ ವಿಮರ್ಶೆಯ ಬಹಳ ಮುಖ್ಯವಾದ ತಾತ್ವಿಕ ತಳಹದಿ ಎಂದು ನಾನು ಭಾವಿಸುತ್ತೇನೆ. ಯಕ್ಷಗಾನದಂತಹ ರಂಗಭೂಮಿಯ ಕಲೆಯನ್ನು ಸರಿಯಾದ ದಿಕ್ಕಿನಲ್ಲಿ ಮುಂದುವರಿಸಬೇಕು ಮತ್ತು ಅದಕ್ಕಾಗಿ ಈ ಕಲೆಗೆ ಸಂಬಂಧಪಟ್ಟ ಎಲ್ಲ ಕ್ಷೇತ್ರಗಳವರು ತಮ್ಮ ತಮ್ಮ ಹೊಣೆಗಾರಿಕೆಯನ್ನು ನಿರ್ವಹಿಸಬೇಕು ಎನ್ನುವ ಕಾಳಜಿಯು ಒಂದು ಜೀವಂತ ರಂಗಭೂಮಿಯ ಬೆಳವಣಿಗೆಯಲ್ಲಿ ಬಹಳ ಮಹತ್ವದ ಅಂಶ. ಆದ್ದರಿಂದಲೇ ಇಲ್ಲಿನ ವಿಮರ್ಶಾ ಲೇಖನಗಳು ಕೇವಲ ಸೈದ್ಧಾಂತಿಕ ಸ್ವರೂಪದವು ಅಲ್ಲ; ಅವು ನಿರ್ದಿಷ್ಟ ತಾತ್ವಿಕ ತಳಹದಿಯುಳ್ಳ ಪ್ರಾಯೋಗಿಕ ಮೌಲ್ಯ ಹೊಂದಿರುವವು. ಹೀಗೆ ರಂಗದಿಂದ ಆಧಾರ ಸಾಮಗ್ರಿಗಳನ್ನು ಎತ್ತಿಕೊಂಡು ಅವನ್ನು ಪರಿಶೀಲಿಸಿ ಪರಿಷ್ಕರಿಸಿ ಮತ್ತೆ ರಂಗಕ್ಕೆ ಕೊಟ್ಟು ಅದನ್ನು ಪೋಷಿಸುವ ಪರಿಷ್ಕರಿಸುವ ಒಂದು ವರ್ತುಲದ ಮಾದರಿಯಲ್ಲಿ ಇಲ್ಲಿನ ಲೇಖನಗಳ ರಚನೆ ಇದೆ. ಯಕ್ಷಗಾನ ರಂಗಭೂಮಿಯಲ್ಲಿ ಭಾಗವತರು ಸ್ಕೂಲವಾಗಿ ಮಾಡುವ ಕೆಲಸವನ್ನು, ಯಕ್ಷ ಗಾನ ವಿಮರ್ಶೆಯಲ್ಲಿ ಹೆಚ್ಚು ಸೂಕ್ಷ್ಮವಾಗಿ ಜೋಶಿಯವರು ಮಾಡಿದ್ದಾರೆ. ಹೀಗಾಗಿ ಜೋಶಿಯವರು ಒಬ್ಬ “ವಿಮರ್ಶಕ-ಭಾಗವತ'.

“ಕರಾವಳಿ ಯಕ್ಷಗಾನ-ನೈಸರ್ಗಿಕ ಹಿನ್ನೆಲೆ' ಲೇಖನವು ರಾಚನಿಕ ಅಧ್ಯಯನದ ಮಾದರಿಯನ್ನು ಉಳ್ಳದ್ದು. ಆದ್ದರಿಂದ ಆ ಅಧ್ಯಯನ ಕ್ರಮದ ವಿಶಿಷ್ಟ ಒಳನೋಟಗಳೂ ಕೆಲವು ಮಿತಿಗಳೂ ಈ ಲೇಖನಕ್ಕೂ ಇವೆ.