ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ix

ನಿಸರ್ಗ ಮತ್ತು ಸಂಸ್ಕೃತಿ ಇವುಗಳ ಸಂಬಂಧಗಳು ಮನುಷ್ಯನ ಬದುಕಿನ ಬೇರೆ ಬೇರೆ ವಿನ್ಯಾಸಗಳನ್ನು ರೂಪಿಸಿದುದನ್ನು ಜಾನಪದದಲ್ಲಿ ರಾಚನಿಕ ವಿಮರ್ಶಕರು ಚರ್ಚಿಸಿದ್ದಾರೆ. ನಿಸರ್ಗವನ್ನು ಮತ್ತು ಸಹಜತೆಯನ್ನು ಸಮೀಕರಣ ಮಾಡಿ ದಾಗ ಅದು ಸಾಮಗ್ರಿಗಳ ರೂಪದಲ್ಲಿ ಕ್ರಿಯೆಗಳ ರೂಪದಲ್ಲಿ ಕಾಣಿಸಿಕೊಳ್ಳ ಬಹುದು. ಯಕ್ಷಗಾನದ ವೇಷಭೂಷಣಗಳ ಸಾಮಗ್ರಿಗಳು, ಕುಣಿತ ಮತ್ತು ಮಾತುಗಾರಿಕೆಯ ನಡೆ-ಇವು ಹೇಗೆ ಪ್ರಕೃತಿಪ್ರೇರಿತ ಎನ್ನುವುದನ್ನು ವಿಶಿಷ್ಟ ಒಳನೋಟಗಳ ಮೂಲಕ ಇಲ್ಲಿ ಚರ್ಚಿಸಲಾಗಿದೆ. ಯಕ್ಷಗಾನ ಪ್ರಸಂಗದಲ್ಲಿ ಪ್ರಕಟವಾಗುವ ಭಾವಗಳು, ಕ್ರಿಯೆಗಳು ಹೇಗೆ ನಿಜ ಜೀವನದವು ಎನ್ನುವುದರ ಸೂಚನೆಯೂ ಇಲ್ಲಿ ಇದೆ. ವಾಸ್ತವಿಕತೆ ಮತ್ತು ಫ್ಯಾಂಟಸಿಗಳ ವೈರುಧ್ಯ ವನ್ನು ಯಕ್ಷಗಾನದ ರಚನೆಯ ಒಳಗಡೆ ವಿವರಿಸುವ ಯತ್ನವನ್ನು ಇಲ್ಲಿ ಮಾಡ ಲಾಗಿದೆ. ಕಾಲದ ವಿಭಜನೆಯು ಯಕ್ಷಗಾನದ ಆಕೃತಿಯನ್ನು ರೂಪಿಸಿದ ಕ್ರಮವನ್ನೂ ಇಲ್ಲಿ ವಿಶ್ಲೇಷಿಸಲಾಗಿದೆ. ಈ ದೃಷ್ಟಿಯಿಂದ, ನಮಗೆ ಗೊತ್ತಿರುವ ಸಂಗತಿಗಳನ್ನೇ ನಿರ್ದಿಷ್ಟ ರಚನೆಗಳ ರೂಪದಲ್ಲಿ ಬೇರ್ಪಡಿಸಿ ಯಕ್ಷಗಾನವನ್ನು ಅಧ್ಯಯನ ಮಾಡಿರುವ ಈ ಕ್ರಮವು ಪರಿಚಿತ ಅಂಶಗಳ ಅಪರಿಚಿತ ಮುಖಗಳ ಮೇಲೆ ಬೆಳಕು ಚೆಲ್ಲುತ್ತದೆ. ಇಂತಹ ರಾಚನಿಕ ಅಧ್ಯಯನವು ನಿಸರ್ಗ ಮತ್ತು ಸಂಸ್ಕೃತಿ (Nature and Culture) ಗಳ ಸಂಬಂಧದಲ್ಲಿ ಮೊದಲನೆಯದರಿಂದ ಎರಡನೆಯದು ಪ್ರೇರಿತ ಎಂದು ಮಾತ್ರ ನೋಡುತ್ತದೆ. ಹೀಗಾಗಿ 'ಅನುಕರಣ ತತ್ತ್ವ' (Theory of memesis)ದ ಮಿತಿಯು ಈ ರೀತಿಯ ಅಧ್ಯಯನ ವಿಧಾನಕ್ಕೂ ಇದೆ.

ತಾಳಮದ್ದಳೆಯ ಹಿಮ್ಮೇಳವನ್ನು ಕುರಿತ ಲೇಖನವು ಈಗಾಗಲೇ ಜೋಶಿ ಅವರು ಬರೆದಿರುವ, ತಾಳಮದ್ದಳೆಯ ಮಾತುಗಾರಿಕೆ, ತಾಳಮದ್ದಳೆ, ಅರ್ಥಗಾರಿಕೆ ಇಂತಹ ಲೇಖನಗಳ ಜತೆ ಓದಬೇಕಾದ ಪ್ರಬಂಧ, ಸಾಮಾನ್ಯ ವಾಗಿ ತಾಳಮದ್ದಳೆ ಕುರಿತ ಚರ್ಚೆಗಳಲ್ಲಿ ಮಾತುಗಾರಿಕೆಯನ್ನು ಮಾತ್ರ ಒಂದು ಪ್ರತ್ಯೇಕಿತ ಚಟುವಟಿಕೆಯಾಗಿ ಹೆಚ್ಚಿನವರು ಪರಿಗಣಿಸಿದ್ದಾರೆ. ಆದರೆ, ತಾಳ ಮದ್ದಳೆಯನ್ನು ಒಂದು ರಂಗಭೂಮಿ ಅನ್ನುವ ಸಮಗ್ರ ದೃಷ್ಟಿಕೋನದಿಂದ ಅಧ್ಯಯನ ಮಾಡಿದ ಈ ಲೇಖನವು ಜಾನಪದದ ಪ್ರದರ್ಶನ ಸಿದ್ಧಾಂತದ