ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
70
ಮಾರುಮಾಲೆ

ಹೊಂದಿಕೆಯಾಗಬಹುದು. ಯಕ್ಷಗಾನಕ್ಕೆ ತುಳುತನ ನೀಡಲು ಪ್ರತ್ಯೇಕ ತುಳುತಿಟ್ಟಿನ ರಚನೆಯೇ ಸೂಕ್ತ ಎಂಬ ಅಭಿಪ್ರಾಯವಿದೆ. ಈ ಅಭಿಪ್ರಾಯ ವನ್ನು ಈರ್ವರು ತಜ್ಞರು ಮಂಡಿಸಿದ್ದಾರೆ. ಶ್ರೀ ಅಮೃತ ಸೋಮೇ ಶ್ವರರು ಮತ್ತು ಶ್ರೀ ಕುದ್ಕಾಡಿ ವಿಶ್ವನಾಥ ರೈಗಳು: ಭಾಷಣಗಳಲ್ಲಿ) ಇವರ ಅಭಿಪ್ರಾಯದಲ್ಲಿ ತುಳುನಾಡಿನಲ್ಲಿರುವ ಭೂತಗಳು, ಗರಡಿ ಮನೆ ಗಳ ಬೊಂಬೆಗಳು, ತೌಳವ ಶಿಲ್ಪಶೈಲಿಯನ್ನಾಧರಿಸಿ, ನೃತ್ಯಕ್ಕೂ ಹೊಂದುವಂತಹ ವೇಷಭೂಷಣಗಳ ನಿರ್ಮಾಣ, ಒಂದು ರೀತಿಯಲ್ಲಿ,ತೆಂಕು ವೇಷಗಳ ಪರಿವರ್ತಿತ ಶೈಲಿಯ ರಚನೆ: ಜತೆಗೆ ತುಳುನಾಡಿನ ಪ್ರಾಚೀನ ವಾದ್ಯ ಪರಿಕರಗಳ ಕಲಾತ್ಮಕ ಅನ್ವಯ (ಉದಾ: ತೆಂಬರೆ ಬಡಿತ) ಇವು ಹೊಸ ತಿಟ್ಟಿನ ಕೆಲವು ಹೊಳಹುಗಳು. ಇದು ಶಕ್ಯವೇನೋ ಹೌದು. ದೊಡ್ಡ ಸಿದ್ಧ ತೆಯ, ಪಂಥಾಹ್ವಾನದ ಕೆಲಸ.
ತುಳುನಾಡಿನ ಪ್ರಾಚೀನ ಕಥಾ ಸಂಪ್ರದಾಯ ಸಾಕಷ್ಟು ಶ್ರೀಮಂತ ವಾಗಿದೆ. ಅದರಿಂದ ಕತೆಗಳನ್ನಾಯ್ದು, ಅವಕ್ಕೆ ಪ್ರಸಂಗರೂಪ ನೀಡುವಾಗ, ಸಾಕಷ್ಟು ಪರಿವರ್ತನೆ ಮಾಡಿ ರಚಿಸಬೇಕು. ಜತೆಗೆ ತುಳು ಯಕ್ಷಗಾನವೆಂದರೆ, ತುಳುನಾಡಿನ ವಸ್ತುವೇ ಎಂಬ ನಿಯಮ ಬೇಕಿಲ್ಲ. ಬೇರೆ ಬೇರೆ ಮೂಲದ ಕತೆಗಳನ್ನು ತುಳುವಿನಲ್ಲಿ ಬರೆಯಬಹುದು. ಬೇಕಿದ್ದರೆ ಅದಕ್ಕೆ, ತುಳು ಭಾವವನ್ನು ನೀಡಲೆತ್ನಿಸಬಹುದು. ಇಂತಹ ಪ್ರಯತ್ನ ಆಗಲೇ ನಡೆದಿದೆ.



*ಕಳೆದೆರಡು ವರ್ಷಗಳಲ್ಲಿ ಈ ಪ್ರಯೋಗ ಪುನಃ ಕಾಣಿಸಿಕೊಂಡಿದೆ. ಕರ್ನಾಟಕ ಮೇಳ ಸುರತ್ಕಲ್ ಮೇಳಗಳು ಸಾಂಪ್ರದಾಯಿಕ ವೇಷಗಳಿಂದಲೇ ತುಳು ಯಕ್ಷಗಾನ ಪ್ರದರ್ಶನಗಳನ್ನು ನೀಡಿವೆ.ಈ ಪುನರುಜ್ಜೀವನದ ಆಂಶಿಕ ಪ್ರಯತ್ನದ ಮುನ್ನಡೆಯನ್ನು ಕಾದು ನೋಡಬೇಕಾಗಿದೆ. ಆದರೆ, ಈ ಮೇಳಗಳು ಹಳೆಮಾದರಿ ವೇಷಗಳನ್ನು ಬಳಸಿರುವುದು ನಳದಮಯಂತಿ, ಹರಿಶ್ಚಂದ್ರ, ಕೃಷ್ಣಾರ್ಜುನ ಮುಂತಾದ ಪರಂಪರಾಗತ ಪ್ರಸಂಗ ವಸ್ತುಗಳಿಗೆ ಹೊರತು ತುಳುವಿನದೇ ಕಥಾನಕಗಳಿಗಲ್ಲ. ಇರಲಿ, ಅಂತೂ ಇದೊಂದು ಹೊಸ ತಿರುವು.