ವಿಷಯಕ್ಕೆ ಹೋಗು

ಪುಟ:ಮಾಲತಿ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೪
ಮಾಲತೀ

ಶೋಭನೆಯ ಮುಖದಲ್ಲಿ ಸ್ವಲ್ಪ ಮುಗುಳ್ನಗೆಯು ಕಂಡಿತು. ನೋಡುತ್ತಿದ್ದಹಾಗೆ ಆ ನಗುವು ಅಳಿಸಿಹೋಗಿ ವಿಷಾದದಿಂದ ಗಂಭೀರಭಾವವು ಹುಟ್ಟಿ ಶೋಭನೆಯು, ‘ನಗುಬೇಡಿರಿ, ಅದೆಲ್ಲಾ ಪ್ರಣಯವಲ್ಲವೆಂದೂ ನೀವು ನನ್ನವರೇ ಹೊರ್ತು ಇತರರಲ್ಲಿ ಆಸಕ್ತರಲ್ಲವೆಂದು ನಾನು ನಂಬಿರಬಹುದೆಂದೂ ತೋರಿಕೊಟ್ಟರೆ ನನಗೆ ಮತ್ತೆ ಬೇರೆ ಬೇಕಾಗುವುದೇನು ಉಳಿಯಿತು? ಹಾಗಿದ್ದರೆ ಈ ಪ್ರಾಪಂಚದಲ್ಲಿ ನನ್ನಂತೆ ಸುಖಿಗಳು ಉಂಟೆ? ನನ್ನ ಹೊಟ್ಟೆಯಲ್ಲಿ ಉರಿಯುತ್ತಿರುವ ಜ್ವಾಲೆಯನ್ನು ನೀವು ಹೇಗೆ ನೋಡಿ ತಿಳಿಯಬಲ್ಲಿರಿ? ನಾನು ಅನೇಕ ಯುಕ್ತಿಗಳನ್ನು ಬಲ್ಲೆನು. ಆ ಯೋಚನೆ ಯಾವಾಗಲೂ ಜಪತಸ ಧಾನಗಳಾಗಿವೆ. ರಾತ್ರಿ ಹಗಲು ನನಗೆ ಅದೇ ಯೋಚನೆಯಾಗಿದೆ. ಒಂದೊಂದು ವೇಳೆ ಸ್ವಾಮಿಯಲ್ಲಿ ಅನ್ಯಾಯವಾಗಿ ಅನುಮಾನ ಪಡುತ್ತೇನೆಂಬ ದಾರುಣವಾದ ಯಾತನೆಗೆ ಗುರಿಯಾಗುತ್ತೇನೆ. ಹೀಗೆಲ್ಲಾ ವಿಧವಿಧವಾದ ಭಾವನೆಗಳಿ೦ದ ಕಾಲವಂ ಕಳಯುವುದಾಗಿದೆ. ಇಷ್ಟು ದುರ್ಭಾವನೆಗಳಿಗೆ ಗುರಿಯಾಗಿದ್ದರೂ ನನಗೆ ಹುಚ್ಚು ಹಿಡಿಯದಿರುವುದು ಹೆಚ್ಚು ಆಶ್ಚರ್ಯವಾಗಿದೆ’ ಎಂದಳು.

ಯುವಕ — ಶೋಭನೆ! ಇನ್ನು ನಾನು ಹೆಚ್ಚು ಕೇಳಲಾರೆನು. ಆರನ್ನು ಎಷ್ಟು ನೋಡಿದರೂ ನನ್ನ ಆಶೆಯು ಪೂರೈಸದೋ, ಆರನ್ನು ಎಷ್ಟು ಪ್ರೀತಿಸಿದರೂ ತೃಪ್ತನಾಗೆನೊ ಆರ ಮೂರ್ತಿಯು ಸರ್ವದಾ ನನ್ನ ಹೃದಯದಲ್ಲಿ ತುಂಬಿದೆಯೋ ಅಂತಹವಳಿಂದ ಇಂತಹ ಅಪನಂಬಿಗೆಯ ಮಾತುಗಳನ್ನು ಕೇಳುವುದಕಿಂತ ಸಿಡಿಲು ಹೊಡೆದು ಹೋಗುವುದು ನನ್ನ ಪಕ್ಷಕ್ಕೆ ಮೇಲಾಗಿದೆ.

ಆ ಮಾತುಗಳು ಮಿಂಚಿನ ವೇಗದಿಂದ ಹೋಗಿ ಶೋಭನೆಯ ಮನನ್ಸಿಗೆ ತಟ್ಟಿದುವು. ಅವಳು ಸ್ವಾಮಿಯ ಪಾದಗಳನ್ನು ಕಟ್ಟಿಕೊಂಡು, ‘ನಾಥ! ನನ್ನ ಪಾಪಕ್ಕೆ ಪ್ರಾಯಶ್ಚಿತ್ತವುಂಟೆ? ನಾನಿದ್ದು ನಿಮಗೆ ಸುಖವಿಲ್ಲ, ಈ ಕೆಟ್ಟ ಮನವುಳ್ಳವಳಾರನ್ನೂ ಸುಖಪಡಿಸಲಾರಳೆಂದು ಚೆನ್ನಾಗಿ ತಿಳಿದು ಕೊಂಡಿದ್ದೇನೆ. ನನ್ನ ಪ್ರಾಣಗಳಿಗೆ ಕೊನೆಗಾಣಿಸಿದರೆ ಅದರಿಂದ ನನ್ನ ಪಾಪಕ್ಕೆ ತಕ್ಕ ಪ್ರಾಯಶ್ಚಿತವಾದಂತಾಗುವುದು’ ಎಂದಳು.