ಪುಟ:ಮಿಂಚು.pdf/೨೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

208 ಮಿಂಚು

....ನಾಯಕ್ ಮಲಗುವ ಸಿದ್ಧತೆಯಲ್ಲಿದ್ದರು. ಹೊರಗೆ ಬಂದವರನ್ನು ಹಿಂದಿನ
ಸೀಟಿಗೆ ಕರೆದುಕೊಂಡಳು.
“ಇವತ್ತು ನನ್ನನ್ನು ದಟ್ಟೋಕೆ ಅಂಗರಕ್ಷಕರಿಲ್ಲವ ?”
“ದಬ್ಬೋ ಕೆಲಸ ತಬ್ಬೋ ಕೆಲಸ ನೀವೇ ಮಾಡಿ.”
“ಅವತ್ತು ನಾನು ಬಂದಾಗ ಈ ಬುದ್ಧಿ ಎಲ್ಲಿ ಹೋಗಿತ್ತು ?”
“ತಪ್ಪು ಮಾಡ್ಡೆ. ಈಗ ಯಾಚಕಿಯಾಗಿ ಬಂದಿದ್ದೇನೆ.”
“ನನ್ನ ಗುಂಡಿಗೆ ಬಗೆದು ಕೊಡಲೊ ?”
ಸೌದಾಮಿನಿ ನಾಯಕರ ತೊಡೆಯ ಮೇಲೆ ತನ್ನ ಅಂಗೈ ಇಟ್ಟಳು. ಒಲಿಸುವ
ಓಲೈಸುವ ಧ್ವನಿಯಲ್ಲಿ ಅವಳೆಂದಳು :
“ರಾಷ್ಟ್ರಪಕ್ಷಕ್ಕೆ ವಾಪಸು ಬನ್ನಿ.”
“ಐದು ಜನ. ಆಮೇಲೆ ಅಪ್ಪಚ್ಚಿ ಮಾಡೋಣ ಅಂತಲೋ ?”
“ಅಷ್ಟು ಸಂದೇಹವಿದ್ದರೆ ರಾಷ್ಟ್ರಪಕ್ಷ-ಪ್ರಜಾಪಕ್ಷ ಸಂಯುಕ್ತರಂಗ ಮಾಡೋಣ.”
"ಏನು ಕೊಡ್ತೀಯಾ ?”
“ನನ್ನನ್ನೇ.”
“ಅದು ವೈಯಕ್ತಿಕ ವಿಷಯ. ಈಗ ಬೇಡ.”
“ಹೊಸ ಸರ್ಕಾರದ ರಚನೆ ಅಗತ್ಯ, ಅನಿವಾರ್ಯ, ಲಕ್ಷ್ಮೀಪತಿ ಅತ್ತ ಹೋದ
ನಲ್ಲ. ಈಗ ನೀವೇ ಹಿರಿಯ ಮುತ್ಸುದ್ದಿ, ಸ್ಪೀಕರ್ ಆಗಿ.”
“ಸ್ಪೀಕರ್ ? ಅಲ್ಲಿ ಆಕಳಿಸ್ತಾ ಕೂತ್ಕಳ್ಳಾ ? ಮುಖ್ಯಮಂತ್ರಿ ಸ್ಥಾನ
ಬಿಟ್ಕೊಡ್ತೀಯಾ ಹೇಳು.”
“ಬೇರೆ ಏನಾದರೂ ಕೇಳಿ.”
“ಒಳ್ಳೇ ವರಮಹಾಲಕ್ಷ್ಮಿ ನೀನು.”
“ಅವಸರದ ತೀರ್ಮಾನ ಬೇಡ,ಇದು ನಿಮ್ಮ ರಾಜಕೀಯ ಭವಿಷ್ಯತ್ತಿನ
ಪ್ರಶ್ನೆ, ರಾತ್ರಿ ಚೆನ್ನಾಗಿ ಯೋಚಿಸಿ, ಬೆಳಗ್ಗೆ ಫೋನ್ ಮಾಡಿ.”
“ಹಾಗಾದರೆ ಈಗ ಹೊರಟ್ಟೋಗಿಯ ಅನ್ನು.”
“ವೈಯಕ್ತಿಕ ವಿಷಯ ಈಗ ಬೇಡ ಅಂದಿರಲ್ಲ ?”
“ಹೌದು, ಮಹಾತಾಯಿ. ನೀನು ದೊಡ್ಡವಳು, ಕರಗಿರೋ ಮಂಜು
ಬೆಟ್ಟದ ಮೇಲೆ ಕೂತಿದೀಯಾ ! ನಾನಿರೋದು ಐದು ದಿಂಡುಕಲ್ಲುಗಳ ಮೇಲೆ,”
“ಪ್ರಜಾಪಕ್ಷದ ಐವರ ಬೆಂಬಲ ಸೌದಾಮಿನಿ ಸಂಪುಟಕ್ಕೆ ಇದೆ ಅಂತ ರಾಜ್ಯ
ಪಾಲರಿಗೆ ಬರಕೊಡಿ, ಸಾಕು.”
“ನಿನ್ನ ವಿಷಯದಲ್ಲಿ ನನಗೆ ಕನಿಕರ, ಪುಟ್ಟವ್ವ.”
“ಸೌದಾಮಿನಿ ಮೇಲೆ ನಿಮಗೆ ಸಿಟ್ಟು, ಪುಟ್ಟನಿಗೋಸ್ಕರವಾದರೂ ಮತ್ತ
ಗಾಗಿ, ನಾಳೆ ಬೆಳಗ್ಗೆ ತಿಳಿಸಿ.”