ಪುಟ:ಮಿಂಚು.pdf/೨೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಿಂಚು 229

"ನಾಳೆ ಏನಾಗುತ್ತೆ ? ಈ ಆಜ್ಞಾಪತ್ರ ಅದಕ್ಕೆ ಸಿದ್ಧತೆ ಅಂದ್ಕೊಂಡೆ."

"ಗೊತ್ತಿಲ್ಲ."

"ಗೊತ್ತಿದೆ ಅಂತ ನೀವು ಯಾವತ್ತಾದರೂ ಹೇಳಿದೀರಾ ? ಅದೇ ನಿಮ್ಮ ಯಶಸ್ಸಿನ ಗುಟ್ಟು !"

"ಇಡ್ತೀನಿ"

"ಮಾತಾಜಿ ಅಲ್ಲೇ ಇದಾರೆ ಅಲ್ವಾ ?"

ಮುಖ್ಯಮಂತ್ರಿ ಕೇಳಿದಳು :

"ಯಾರು ? ನಿನ್ನ ಇಲಾಖಾ ನಿರ್ದೇಶಕನಾ ?"

"ಹೌದು, ಮಾತಾಜಿ."

"ನಾಳೆ ಏನಾಗುತ್ತೆ ಅಂತ ತಿಳಿಯುವ ತವಕ ಎಲ್ಲರಿಗೂ-ಅಲ್ಲವಾ?"

"ಹೊಂ."

"ಜಂಟಿ ನಿರ್ದೆಶಕ ಮಾಡ್ದೆ, ಕೃತಜ್ಞತೆ ಸಲ್ಲಿಸೋದಿಲ್ಲವ?"

ಪರಶುರಾಮ ಮುಖ್ಯಮಂತ್ರಿಯ ಬಳಿಸಾರಿ ಪಾದ ಮುಟ್ಟಿದ.

"ಏಳು, ಮರುಳ!"

ಸೌದಾಮಿನಿ ಪರಶುರಾಮನ ಎರಡೂ ಭುಜಗಳನ್ನು ಹಿಡಿದು ಮೇಲಕ್ಕೆ ಎತ್ತಿದಳು. ಧಾರೆಗಟ್ಟಿ ಹರಿಯುತ್ತಿದ್ದ ತನ್ನ ಕಂಬನಿಯನ್ನು ಅವನು ಕರವಸ್ತ್ರದಿಂದ ಒರೆಸಿದ.

ತಕ್ಷಣವೆ ಮೊದಲಿನಂತಾಗಿ, "ಲಂಚ್ ರೆಡಿ ಮಾಡೋದಕ್ಕೆ ಹೇಳ್ಲಾ?" ಎಂದು ಕೇಳಿದ.

"ಹೇಳು."

ಪುಟ್ಟ ಲಂಚ್. ಹಸಿವಿಲ್ಲ. ನಾಲಗೆ ರುಚಿ ಇಲ್ಲ....

....ಊಟದ ಕ್ರಿಯೆ ಮುಗಿಸಿ ಹೊರ ಬಂದೊಡನೆ ಅವಳೆಂದಳು :

"ನೀನು ಮನೆಗೆ ಹೋಗಿ ಬಾ. ಫೋನ್ ನಾನೇ ಎತ್ತುತೀನಿ."

ಪರಶುರಾಮ ಹೊರಗೆ ಕಾಲಿಡುತ್ತಿದ್ದಂತೆ ಫೋನ್ ಬಂತು. ಪರವಾಗಿಲ್ಲ, ಹೋಗು-ಎಂದು ಸೌದಾಮಿನಿ ಸನ್ನೆ ಮಾಡಿದಳು: ಸ್ವತಃ ತಾನು ಫೋನ್ ಎತ್ತಿದಳು.

"ಚೀಫ್ ಮಿನಿಸ್ಟರ ನಿವಾಸ."

"ಕಾಕಿನಾಡದಿಂದ ಬಂದಿದ್ದೇವೆ.ಸ್ವಲ್ಪ ಅವರನ್ನು ಅರ್ಜೆಂಟಾಗಿ ಕಾಣ್ಬೇಕಾಗಿತ್ತು."

"ಯಾವ ಸಂಬಂಧವಾಗಿ ?"

"ಕಿಷ್ಕಿಂಧೆಯಲ್ಲಿ ಒಂದು ಪೆಪ್ಪರ್‍ಮಿಂಟ್ ಫ್ಯಾಕ್ಟರಿ ಆರಂಭಿಸಬೇಕೂಂತ ಅಪೇಕ್ಷೆ."