ಪುಟ:ಮಿಂಚು.pdf/೨೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಿಂಚು 231

ಪರಶುರಾಮ ಹೆಂಡಿರೊಡನೆ ಜಗಳವಾಡುತ್ತ ಕುಳಿತನೊ ? ಅವನಾದರೂ ಬಂದಿದ್ದರೆ ಮುರಬದ ನಿಗೂಢ ವ್ಯಕ್ತಿಗೆ ಫೋನ್ ಮಾಡಬಹುದಿತ್ತು.

ಹೊರಗೆ ನಡೆದಾಡಿದ ಸದ್ದು. ಪರಶುರಾಮನ ಸ್ವರ : "ಕೂತ್ಕೊಳ್ಳಿ, ಒಂದ್ನಿಮಿಷ."

ಮುರಬದ ಶಾಸಕ ಬಂದೇ ಬಿಟ್ಟಿದ್ದಾನೆ. ರಸ್ತೆಯಲ್ಲಿ ಆಟೊ ನಿಲ್ಲಿಸಿ ಬಾಗಿಲ ವರೆಗೆ ನಡೆದು ಬoದಿರಬೇಕು.

"ಮಾತಾಜಿ, ಮುರಬದ ಶಾಸಕರು-"

"ಕರಿ. ಬನ್ನಿ, ನಮಸ್ಕಾರ." ತಾನೆ ಮೊದಲು ವಂದಿಸಿದೆ, ತಪ್ಪೇನು? ವಿನಯ ಇರಬೇಕು-ವಿನಯ.

"ನಮಸ್ಕಾರ, ಮಾತಾಜಿ, ಒಂದು ಗುಟ್ಟಿನ ವಿಷಯ (ಹತ್ತಿರ ಬಂದು). ಅವರ ತಂಡದಿಂದ ಹತ್ತು ಜನ ತಮ್ಮಲ್ಲಿ ಬರೋದಕ್ಕೆ-"

"ತಾವೂ ಸೇರಿ ?"

"ಹೌದು, ಸಿದ್ಧ. ಇನ್ನರ್ಧ ಗಂಟೆಯೊಳಗೆ ವ್ಯವಹಾರ ಮುಗೀಬೇಕು. ಒಬ್ಬರಿಗೆ ಒಂದೊಂದು ಲಕ್ಷ."

"ಈಗೆಲ್ಲಿಂದ ತರಲಿ ? ಪುನರಾಯ್ಕೆಯಾಗಿ ಮಂತ್ರಿಮಂಡಲದ ರಚಿಸಿದ ಮೇಲೆ ಕೊಟ್ಟೇನು. ಅದೂ ಅರ್ಧಅರ್ಧ ಲಕ್ಷ.... ಇಷ್ಟಕ್ಕೆ ಒಪ್ಪಬೇಕಪ್ಪ, ಸಂಪಾದಿಸಿದ ಮೇಲೆ ಕೊಡಬೇಕಲ್ಲವ ನಾನು? ಈಗ ಹಣದ ಮಾರ್ಕೆಟು ಎಷ್ಟು ಟೈಟ್ ಅನ್ನೋದು ತಮಗೆ ಗೊತ್ತೇ ಇದೆ."

"ತಮ್ಮನ್ನು ಕಂಡರೆ ಮರಬದವರಿಗೆ ಇಷ್ಟ. ನಿಮ್ಮ ಪಕ್ಕದಲ್ಲೇ ಇರಬೇಕೂಂತ ನನ್ನ ಆಸೆ." "ನಮ್ಮಿಬ್ಬರ ಪಕ್ಷವೂ ಒಂದೇ ಅಲ್ಲವ?" "ಅದು ಹ್ಯಾಗೆ? ಮನಸ್ಸು ಒಡೀತು ಅಂದ್ಮೇಲೆ ಏನು ಉಳೀತು? ತಾವು ಹೇಳಿದ ಹಾಗೆ ಅರ್ಧ ಅರ್ಧ ಲಕ್ಷ ಮುಂದೆ ಕೊಡೋದಾದರೆ, ಈಗ ಐವತ್ತೈವತ್ತು ಸಾವಿರವಾದರೂ ಕೊಡಿ."

"ಹತ್ತು ಹತ್ತು ಸಾವಿರ ಕೊಡ್ತೇನೆ. ಒಂದು ಶರತ, ವಿಶ್ವಂಭರರನ್ನೂ ನಮ್ಮ ಕಡೆಗೆ ಕರಕೊಂಡು ಬರಬೇಕು."

"ಅವರನ್ನು ಕಟ್ಟೊಂಡು ಏನು ಮಾಡ್ತೀರಿ? ಒಟ್ಟು ಹತ್ತು ತಲೆ ತರ್ತೆನಪ್ಪ. ಒಬ್ಬೊಬ್ಬರಿಗೆ ಹತ್ತು ಹತ್ತು ಸಾವಿರ."

"ನಾಳೆ ಸಭೆಯಲ್ಲಿ ಓಟು ಹಾಕಿ, ಇಲ್ಲವೆ ಕೈಯೆತ್ತಿ, ಆಮೇಲೆ ಸಾಯಂಕಾಲ ಇಲ್ಲಿಗೆ ಬಂದು ಹತ್ತು ಹತ್ತು ತಗೊಂಡು ರೈಲು ಹತ್ತಿ-ನಿಮ್ಮ ನಿಮ್ಮ ಊರಿಗೆ," ಮುಂದುವರಿಸುತ್ತ ಆಕೆ ಅಲ್ಲಿ ಕುಳಿತಿದ್ದ-ಶಾಸಕನನ್ನು ಕೇಳಿದಳು :

"ಕಾರಿನಲ್ಲಿ ಬಿಟ್ಟ ಬರಬೇಕಾ ನಿಮ್ಮನ್ನು ?"