ಪುಟ:ಮಿಂಚು.pdf/೨೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

232 ಮಿಂಚು

"ಬ್ಯಾಡ. ಗುಟ್ಟು ಬಹಿರಂಗವಾಗ್ತದೆ. ಆಟೋರಿಕ್ಷಾದಲ್ಲಿ ಹೋಗ್ತೀನಿ. ಒಂದೈದು ರೂಪಾಯಿ ಚಿಲ್ಲರೆ ಕೊಡಿ."

"ಇಲ್ಲಿ ಚಿಲ್ಲರೆ ಒಂದಿಲ್ಲ. ಹೀಗೇ ನಡಕೊಂಡು ಹೋಗಿ, ಹೆಚ್ಚು ದೂರ ಇಲ್ಲ." ಸಂಭಾಷಣೆಯನ್ನು ಆಲಿಸುತ್ತ ನಿಂತಿದ್ದ ಪರಶುರಾಮ ದಂಗಾದ.

"ನೋಡಿದೀಯಪ್ಪ, ಇವರೆಲ್ಲ ನಮ್ಮ ಶಾಸಕರು!"

ಪರಶುರಾಮ ಏನೋ ಹೇಳಲು ಹೊರಟ. ನಾಲಿಗೆ ಹೊರಳಿಸಿದ. ಬಾಯಿ ಆಡಿಸಿದ. ಸುಮ್ಮನಾದ.

....ನಾಲ್ಕೂವರೆ. ದಿಲ್ಲಿಯಿಂದ ಫೋನ್ ಕರೆ ಬಂತು.

"ನಮಸ್ತೆ ಮಾತಾಜಿ. ನಕುಲದೇವ್, ವಿಶ್ವಂಭರ, ಲಕ್ಷ್ಮೀಪತಿ ಹೊರಟಿದ್ದಾರೆ."

"ಥಾಂಕ್ಸ್. ನಿಮಗೆಲ್ಲ ಒಳ್ಳೆಯದಾಗಲಿ."

ಒಂದು ಕ್ಷಣ ತನ್ನ ಎರಡು ಪಾದಗಳೂ ಮರಗಟ್ಟಿದಂತೆ, ಕೈಗಳು ನಿಶ್ಚೇಷ್ಟಿವಾದಂತೆ, ಮಾತು ನಿಂತಂತೆ ಅನಿಸಿತು. ತುಸು ಪ್ರಯಾಸಪಟ್ಟು ಅವಳೆಂದಳು :

"ಒಂದು ಕಪ್ ಬಿಸಿ ಕಾಫಿ ಬೇಕಲ್ಲ, ಪರಶು ?"

"ತರ್ತೇನೆ, ಮಾತಾಜಿ."

....ತುಸು ತುಸುವೆ ಕುಡಿದ ಕಾಫಿ ಅವಳ ದೇಹದಲ್ಲಿ ಶಕ್ತಿ ತುಂಬಿತು. ಆಗಲೆ ಆಗಿರುವ ತೀರ್ಮಾನ ಈಗ ಆಕಾಶ ಮಾರ್ಗವಾಗಿ ಬರುತ್ತಿದೆ. ಗುಪ್ತಚಾರದಳದ ಮುಖ್ಯಸ್ಥನಿಗೇನಾದರೂ ರಾತ್ರೆ ಗೊತ್ತಾದರೆ ಫೋನ್ ಮಾಡಬಹುದು. ಆದರೆ, ಮಾಡದೆಯೂ ಇರಬಹುದು. ತಾನು ಅಧಿಕಾರದಲ್ಲಿರುವುದಾದರೆ, ತನಗೆ ಅನುಕೂಲವಾದ ಸುದ್ದಿಯಾದರೆ ತಿಳಿಸುತ್ತಾನೆ. ಇಲ್ಲವಾದರೆ, ನಿದ್ದೆ ಹೋಗುತ್ತಾನೆ. ಸೋಮವಾರ ತಾನು ಪೀಠದ ಮೇಲಿರುವೆನೊ? ವಿಶ್ವಂಭರನೊ? ಲಕ್ಷ್ಮೀಪತಯ್ಯನನ್ನು ಉಪಮುಖ್ಯಮಂತ್ರಿ ಮಾಡಬಹುದು. ಅರ್ಥವನ್ನೊ ಗೃಹ ಇಲಾಖೆಯನ್ನೊ ಕೊಡಬಹುದು.

ಹಾಗಾಗದೆ ನಕುಲದೇವ್‍ಜಿ ತನ್ನ ಪರವಾಗಿ ದಾಳ ಸರಿಸಿದರೆ? (ಆದರೆಹೋದರೆ, ಅಜ್ಜಿಗೆ ಮೀಸೆ ಬಂದರೆ) ಹಾಗೇನಾದರೂ ಸಂಭವಿಸಿದರೆ ನಾಳೆ ರಾತ್ರೆ 'ನೃಪತುಂಗ'ದಲ್ಲಿ ಊಟ-ಆಟ.

ಇವತ್ತು ನಕುಲದೇವ್‍ಜಿ 'ಅರಿಕೇಸರಿ'ಯಲ್ಲಿರುತ್ತಾನೆ, ಪ್ರಾಯಶಃ.

"ಪರಶು, ಧನಂಜಯ ಸಿಗ್ತಾನೊ ನೋಡು."

ಆತ ಅಂಗಡಿಯಲ್ಲಿದ್ದ,.ವಾರಾಂತ್ಯದ ವ್ಯಾಪಾರ.

"ನಾನು-ಮಾತಾಜಿ."

ಸಾಹುಕಾರ ಎದ್ದು ನಿಂತು, "ನಮಸ್ತೆ, ನಮಸ್ತೆ, ಅಪ್ಪಣೆಯಾಗಲಿ" ಎಂದ. "ನಾಳೆ ಮಧ್ಯಾಹ್ನ ಒಂದು ಅಂಬಾಸಡರ್ ಕಳಿಸಿ ಕೊಡಿ, ಒಂದೆರಡು ದಿನಗಳ ಮಟ್ಟಿಗೆ."